ಬೆಂಗಳೂರು: ಪಾಸ್‌ಪೋರ್ಟ್ (Passport) ಎಂಬುದು ನಿಮ್ಮ ಗುರುತು ಮತ್ತು ರಾಷ್ಟ್ರೀಯತೆಯನ್ನು ದೃಢೀಕರಿಸುವ ಅಗತ್ಯ ದಾಖಲೆಯಾಗಿದ್ದು, ಇದು ಪ್ರವಾಸ, ವ್ಯವಹಾರ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ವಿದೇಶಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರ ಅವಧಿ ವಯಸ್ಕರಿಗೆ ನೀಡಿದ ದಿನಾಂಕದಿಂದ ಹತ್ತು ವರ್ಷಗಳವರೆಗೆ. ಅಪ್ರಾಪ್ತ ವಯಸ್ಕರಿಗೆ ಐದು ವರ್ಷಗಳವರೆಗೆ ಅಥವಾ ಅವರಿಗೆ 18 ವರ್ಷ ತುಂಬುವವರೆಗೆ ಚಾಲ್ತಿಯಲ್ಲಿರುತ್ತದೆ. ಅದಾದ ಬಳಿಕ ನವೀಕರಣಗೊಳಿಸಬೇಕಾಗುತ್ತದೆ (Passport Renewal). ನಿಮ್ಮ ಉದ್ದೇಶಿತ ಪ್ರಯಾಣದ ಮೇಲೆ ಪರಿಣಾಮ ಬೀರದಿರಲು ಅವಧಿ ಮುಗಿಯುವ ಕನಿಷ್ಠ ಒಂಬತ್ತು ತಿಂಗಳ ಮೊದಲು ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಜ್ಞರು ಸಲಹೆ ನೀಡುತ್ತಾರೆ. ಪಾಸ್‌ಪೋರ್ಟ್ ಅನ್ನು ಆನ್‌ಲೈನ್‌ನಲ್ಲಿಯೇ ನವೀಕರಿಸುವುದು ಹೇಗೆ ಎನ್ನುವ ಮಾಹಿತಿ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ನವೀಕರಿಸುವ ವಿಧಾನ
- ಪಾಸ್‌ಪೋರ್ಟ್ ಸೇವಾ ವೆಬ್ಸೈಟ್ https://passportindia.gov.in/ಗೆ ಭೇಟಿ ನೀಡಿ.
- ಹೊಸಬರಾಗಿದ್ದರೆ ಹೆಸರು ನೋಂದಾಯಿಸಿ. ಮೊದಲೇ ಹೆಸರು ನೋಂದಾಯಿಸಿದ್ದರೆ ಲಾಗಿನ್ ಆಗಿ.
- ‘Apply for Fresh Passport/Re-issue of Passportʼ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ‘Click here to fill the application formʼ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ನಿಮ್ಮ ಹೆಸರು, ವಿಳಾಸ, ವೈಯಕ್ತಿಕ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಫೋನ್ ನಂಬರ್ ಮತ್ತು ಹಿಂದಿನ ಪಾಸ್ಪೋರ್ಟ್ನ ಮಾಹಿತಿ ನಮೂದಿಸಿ.
- Self-declarationಗೆ ಒಪ್ಪಿಗೆ ಸೂಚಿಸಿ ಮತ್ತು Submit ಬಟನ್ ಕ್ಲಿಕ್ ಮಾಡಿ.
- ಫಾರಂ ಸಲ್ಲಿಸಿದ ನಂತರ ಪಾಸ್‌ಪೋರ್ಟ್ ನವೀಕರಣ ಶುಲ್ಕವನ್ನು ಪಾವತಿಸಿ ಮತ್ತು ಅಪಾಯಿಂಟ್‌ಮೆಂಟ್ ದಿನಾಂಕ ನಿಗದಿಪಡಿಸಿ.
ಅಪಾಯಿಂಟ್‌ಮೆಂಟ್ ನಿಗದಿಪಡಿಸುವುದು ಹೇಗೆ?
- ಪಾಸ್‌ಪೋರ್ಟ್ ಸೇವಾ ವೆಬ್ಸೈಟ್ https://passportindia.gov.in/ಗೆ ಭೇಟಿ ನೀಡಿ ಲಾಗಿನ್ ಆಗಿ.
- ‘View Saved and Submitted Application’ ಬಟನ್ ಸೆಲೆಕ್ಟ್ ಮಾಡಿ ‘Pay and Schedule Appointmentʼ ಆಪ್ಶನ್ ಆಯ್ಕೆ ಮಾಡಿ
- ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಿಸಿ.
- ಕ್ಯಾಪ್ಚಾ ಕೋಡ್ ನಮೂದಿಸಿ ನಿಮ್ಮ ಸೇವಾಕೇಂದ್ರವನ್ನು ದೃಢಪಡಿಸಿ.
- ಲಭ್ಯವಿರುವ ದಿನಾಂಕಗಳಿಂದ ಅನುಕೂಲಕರ ಸ್ಲಾಟ್ ಆಯ್ಕೆ ಮಾಡಿ ಮತ್ತು ‘Pay and Book the Appointmentʼ ಆಪ್ಶನ್ ಸೆಲೆಕ್ಟ್ ಮಾಡಿ.
ನವೀಕರಣ ಶುಲ್ಕ ಎಷ್ಟು?
ನವೀಕರಣ ಶುಲ್ಕಗಳು ವಯಸ್ಸು, ಪುಸ್ತಕದ ಪುಟ ಮತ್ತು ಆಯ್ಕೆ ಮಾಡಿದ ಪಾಸ್‌ಪೋರ್ಟ್ (ಸಾಮಾನ್ಯ ಅಥವಾ ತತ್ಕಾಲ್) ಆಧಾರದ ಮೇಲೆ ಬದಲಾಗುತ್ತವೆ. ತತ್ಕಾಲ್ ಪಾಸ್‌ಪೋರ್ಟ್‌ಗೆ 2.000 ರೂ.ಗಳ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಅಗತ್ಯ ದಾಖಲೆಗಳು
ನವೀಕರಣಕ್ಕೆ ಮೂಲ ಪಾಸ್‌ಪೋರ್ಟ್, ಅರ್ಜಿ ಸ್ವೀಕೃತಿ, ಸಂಬಂಧಿತ ಪುಟಗಳ ಸ್ವಯಂ-ದೃಢೀಕರಿಸಿದ ಪ್ರತಿಗಳು, ವಿಳಾಸದ ಪುರಾವೆ ಮತ್ತು ಇತರ ನಿರ್ದಿಷ್ಟ ದಾಖಲೆಗಳು ಅಗತ್ಯ. ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಿರ್ದಿಷ್ಟ ದಿನಾಂಕದಂದು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಪಾಸ್‌ಪೋರ್ಟ್ ನವೀಕರಣವನ್ನು ಪರೀಶೀಲಿಸುವ ವಿಧಾನ
- ಪಾಸ್‌ಪೋರ್ಟ್ ಸೇವಾ ವೆಬ್ಸೈಟ್ https://passportindia.gov.in/ಗೆ ಭೇಟಿ ನೀಡಿ ಲಾಗಿನ್ ಆಗಿ.
- ‘Track application statusʼ ಆಪ್ಶನ್ ಆಯ್ಕೆ ಮಾಡಿ.
- ಅಪ್ಲಿಕೇಷನ್ ಮಾದರಿ, ಫೈಲ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ನಮೂದಿಸಿ.
- ‘Track Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಎಷ್ಟು ಸಮಯ ಬೇಕು?
ನವೀಕರಣ ಪ್ರಕ್ರಿಯೆಯ ಸಮಯವು ಆಯ್ಕೆ ಮಾಡಿದ ಪಾಸ್‌ಪೋರ್ಟ್ ಮಾದರಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ 30-60 ದಿನಗಳನ್ನು ತೆಗೆದುಕೊಂಡರೆ, ತತ್ಕಾಲ್ ಪಾಸ್‌ಪೋರ್ಟ್ 3-7 ದಿನಗಳಲ್ಲಿ ತ್ವರಿತವಾಗಿ ನವೀಕರಣಗೊಳ್ಳುತ್ತದೆ.
ಇದನ್ನೂ ಓದಿ: Money Guide: ಆನ್‌ಲೈನ್ ಸಾಲ ಎಂಬ ಚಕ್ರವ್ಯೂಹಕ್ಕೆ ಸಿಲುಕದಿರಲು ಹೀಗೆ ಮಾಡಿ…