ಬೆಂಗಳೂರು: ವಾಹನಗಳಿಗೆ ಫಾಸ್ಟ್‌ಟ್ಯಾಗ್ (FASTag) ಅಳವಡಿಸುವುದರಿಂದ ಟೋಲ್ ಪ್ಲಾಜಾಗಳಲ್ಲಿ ಎದುರಾಗುವ ದಂಡದಿಂದ ಪಾರಾಗಬಹುದು ಎನ್ನುವುದು ಬಹುತೇಕರ ನಂಬಿಕೆ. ಹಾಗಂತ ಸರ್ಕಾರವೇ ತಿಳಿಸಿದೆ. ಆದರೆ ಫಾಸ್ಟ್‌ಟ್ಯಾಗ್ ಅಳವಡಿಸಿದ ನಂತರವೂ ಕೆಲವರಿಗೆ ದಂಡ ಬೀಳುತ್ತದೆ. ಈ ಬಗ್ಗೆ ಹಲವು ದೂರು ನೀಡಿದ್ದಾರೆ. ನಿರಂತರ ಸಮಸ್ಯೆ ವರದಿಯಾದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India-NHAI) ಈ ಬಗ್ಗೆ ತನಿಖೆ ನಡೆಸಿದಾಗ ಇದಕ್ಕಿರುವ ಕಾರಣ ತಿಳಿದು ಬಂದಿದೆ. ಹಾಗಾದರೆ ಫಾಸ್ಟ್‌ಟ್ಯಾಗ್ ಅಳವಡಿಸಿಯೂ ಫೈನ್ ಯಾಕೆ ಕಟ್ಟಬೇಕು? ಎನ್ಎಚ್ಎಐ ವಾಹನ ಚಾಲಕರಿಗೆ ನೀಡಿದ ಸಲಹೆ ಏನು? ಮುಂತಾದ ಪ್ರಶ್ನೆಗೆ ಇಂದಿನ ಮನಿಗೈಡ್ (Money Guide)ನಲ್ಲಿದೆ ಉತ್ತರ.
ದಂಡ ಯಾಕೆ ಬೀಳುತ್ತದೆ?
2021ರ ಫೆಬ್ರವರಿಯಿಂದ ದೇಶದಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2014ರಲ್ಲಿ ಫಾಸ್ಟ್‌ಟ್ಯಾಗ್ ಪರಿಚಯಿಸಿತ್ತು. ಇದನ್ನು ಕಡ್ಡಾಯಗೊಳಿಸಿದ ಬಳಿಕ ಇದೀಗ ಪ್ರತಿ ವಾಹನಕ್ಕೆ ಈಗ ಶೋರೂಂನಿಂದಲೇ ಫಾಸ್ಟ್‌ಟ್ಯಾಗ್ ಅಳವಡಿಸಲಾಗುತ್ತಿದೆ. 2016ರ ಡಿಸೆಂಬರ್‌ನಲ್ಲಿ ಫಾಸ್ಟ್‌ಟ್ಯಾಗ್‌ನಿಂದ ವಹಿವಾಟು ಆರಂಭವಾಗಿತ್ತು. ಒಂದು ವೇಳೆ ನೀವು ಅದಕ್ಕಿಂತ ಮೊದಲು ವಾಹನವನ್ನು ಖರೀದಿಸಿದ್ದರೆ ಆಗ ಅಳವಡಿಸಿದ ಫಾಸ್ಟ್‌ಟ್ಯಾಗ್ ಟೋಲ್ ಪ್ಲಾಜಾಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಅದನ್ನು ಬದಲಾಯಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಅಂತಹ ಚಾಲಕರು ಹಳೆಯ ಫಾಸ್ಟ್‌ಟ್ಯಾಗ್ ತೆಗೆದುಹಾಕಿ ಹೊಸದನ್ನು ಪಡೆಯಬೇಕು. ಹಳೆಯ ಫಾಸ್ಟ್‌ಟ್ಯಾಗ್‌ನಲ್ಲಿ ಉಳಿದ ಹಣವನ್ನು ಹೊಸದಕ್ಕೆ ವರ್ಗಾಯಿಸಬಹುದು.
ಪ್ರಸ್ತುತ ಫಾಸ್ಟ್‌ಟ್ಯಾಗ್ ಸೌಲಭ್ಯವು ದೇಶಾದ್ಯಂತ 2,000 ಟೋಲ್ ಪ್ಲಾಜಾಗಳಲ್ಲಿ ಲಭ್ಯ. ಕೆಲವು ಕಡೆಗಳಲ್ಲಿ ಪಾರ್ಕಿಂಗ್ ಮಾಡಲು ಸಹ ಫಾಸ್ಟ್‌ಟ್ಯಾಗ್ ವಿತರಿಸಲಾಗುತ್ತಿದೆ. ಸದ್ಯ ದೇಶದಲ್ಲಿ 6.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್ ವಿತರಿಸಲಾಗಿದೆ.
ಶುಲ್ಕ ಸಂಗ್ರಹದ ಅಂಕಿ-ಅಂಶ
2022ರಲ್ಲಿ ಒಟ್ಟು ಫಾಸ್ಟ್‌ಟ್ಯಾಗ್ ಶುಲ್ಕ ಸಂಗ್ರಹವು 50,855 ಕೋಟಿ ರೂ.ಗಳಾಗಿದ್ದು, 2021ರ ಸಂಗ್ರಹವಾದ 34,778 ಕೋಟಿ ರೂ.ಗಿಂತ ಶೇ. 46.20ರಷ್ಟು ಹೆಚ್ಚಳ ದಾಖಲಿಸಿದೆ. ಇದಲ್ಲದೆ 2022ರಲ್ಲಿ 324 ಕೋಟಿ ವಹಿವಾಟುಗಳು ನಡೆದಿತ್ತು. 2021ರಲ್ಲಿ ಇದರ ಸಂಖ್ಯೆ 219 ಕೋಟಿ ಇತ್ತು.
ಫಾಸ್ಟ್‌ಟ್ಯಾಗ್ ಎಂದರೇನು?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಸೌಲಭ್ಯ ಜಾರಿಗೆ ತಂದಿದೆ. ಇದು ಪ್ರಿಪೇಯ್ಡ್ ಸೌಲಭ್ಯವಾಗಿದ್ದು, ಈ ಟ್ಯಾಗ್ ಅನ್ನು ವಾಹನದ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದ ಟೋಲ್ ಶುಲ್ಕವನ್ನು ನಗದು ರಹಿತವಾಗಿ ಹಾಗೂ ತ್ವರಿತವಾಗಿ ಪಾವತಿಸಬಹುದು. ಟೋಲ್‌ನಲ್ಲಿ ಹಣ ಪಾವತಿಸಲು ಹೆಚ್ಚು ಕಾಲ ನಿಲ್ಲಬೇಕೆಂದೇನಿಲ್ಲ. ಗಾಜಿಗೆ ಅಂಟಿಸಿರುವ ಟ್ಯಾಗ್‌ನಲ್ಲಿ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‍ಐಡಿ) ಇರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಿ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣ ಇರಬೇಕಾದುದು ಅಗತ್ಯ. ಟ್ಯಾಗ್ ರೀಡ್ ಆಗುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ದೇಶದಲ್ಲಿ 2014ರಲ್ಲಿಯೇ ಫಾಸ್ಟ್‌ಟ್ಯಾಗ್ ಬಳಕೆಗೆ ಬಂದಿತ್ತು. ಆದರೆ ಆಗ ಅಷ್ಟು ಜನಪ್ರಿಯವಾಗಿರಲಿಲ್ಲ ಮತ್ತು ಕಡ್ಡಾಯವಾಗಿರಲಿಲ್ಲ.
ಇದನ್ನೂ ಓದಿ: Money Guide: ಹಣ ಹೂಡಿಕೆ ಮಾಡುವ ಯೋಚನೆಯಲ್ಲಿದ್ದೀರಾ?; ಇಲ್ಲಿದೆ ಅತ್ಯುತ್ತಮ ಆಯ್ಕೆಗಳ ಪಟ್ಟಿ