ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದ ಯೋಜನೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi). ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಈ ಯೋಜನೆಯ 15ನೇ ಕಂತು ಇಂದು (ನವೆಂಬರ್ 15) ಜಮೆ ಮಾಡಲಾಗುತ್ತದೆ. ದೇಶದ ಸುಮಾರು 8 ಕೋಟಿಗೂ ಅಧಿಕ ರೈತರಿಗೆ ಈ ಯೋಜನೆ ನೆರವಾಗುತ್ತದೆ. ಹಾಗಾದರೆ ಕಂತು ಪಾವತಿ ಬಗ್ಗೆ ಪರಿಶೀಲನೆ ನಡೆಸುವುದು ಹೇಗೆ? ಎನ್ನುವ ನಿಮ್ಮ ಪ್ರಶ್ನೆಗೆ ಮನಿಗೈಡ್(Money Guide)ನಲ್ಲಿದೆ ಉತ್ತರ.
ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಜಮೆ ಕುರಿತು ಮಾಹಿತಿ ನೀಡಿದ್ದಾರೆ. ʼʼಪಿಎಂ ಕಿಸಾನ್ ಸಮ್ಮಾನ್ ನಿಧಿಯ 15ನೇ ಕಂತನ್ನು 2023ರ ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಿದ್ದಾರೆʼʼ ಎಂದು ಅವರು ಬರೆದುಕೊಂಡಿದ್ದಾರೆ.
पीएम किसान सम्मान निधि की 15वीं क़िस्त, 15 नवंबर 2023 को प्रधानमंत्री श्री @narendramodi जी द्वारा देश के पात्र किसानों के बैंक खातों में DBT के माध्यम से की जाएगी हस्तांतरित…#PMKisan15thInstallment https://t.co/yTOKLI6KyV
— Narendra Singh Tomar (@nstomar) November 11, 2023
ಏನಿದು ಯೋಜನೆ?
ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. 14ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಿದ್ದರು. ಅಂದು ಸುಮಾರು 8.5 ಕೋಟಿ ರೈತರ ಖಾತೆಗಳಿಗೆ ಸುಮಾರು 17,000 ಕೋಟಿ ರೂ. ಪಾವತಿಸಲಾಗಿತ್ತು.
ಹೀಗೆ ಚೆಕ್ ಮಾಡಿ
ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
- ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
- ಆಗ ಓಪನ್ ಆಗುವ ಪೇಜ್ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ರಿಜಿಸ್ಟ್ರೇಷನ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
- ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್ ಮೇಲೆ ಮೂಡುತ್ತದೆ.
ಇದನ್ನೂ ಓದಿ: Money Guide: ಹೋಮ್‌ಲೋನ್ ಪಡೆಯಲು ಬೇಕಾದ ಅರ್ಹತೆಗಳೇನು? ಇಲ್ಲಿದೆ ವಿವರ
ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ www.pmkisan.gov.inಗೆ ಭೇಟಿ ನೀಡಿ
- ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
- ‘Get report’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಹೀಗೆ ಹೆಸರು ನೋಂದಾಯಿಸಿ
- ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
- ‘New Farmer Registration’ ಆಯ್ಕೆ ಮೇಲೆ ಕಲಿಕ್ ಮಾಡಿ ಮತ್ತು ಆಧಾರ್ ಕಾರ್ಡ್ ನಂಬರ್ ನಮೂದಿಸಿ ಕ್ಯಾಪ್ಚ ಕೋಡ್ ಭರ್ತಿ ಮಾಡಿ
- ಅಗತ್ಯ ಮಾಹಿತಿ ತುಂಬಿ ‘Yes’ ಬಟನ್ ಕ್ಲಿಕ್ ಮಾಡಿ
- ಅರ್ಜಿ ಫಾರಂ ತುಂಬಿ, ಸೇವ್ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್ ಔಟ್ ತೆಗೆದಿಡಿ
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್ ನಂಬರ್ 155261 ಮತ್ತು 011-24300606 ಅನ್ನು ಸಂಪರ್ಕಿಸಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ