Site icon Vistara News

Money Guide: ಪಿಪಿಎಫ್‌, ಎಸ್‌ಸಿಎಸ್‌ಎಸ್‌, ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ ನಿಯಮದಲ್ಲಿ ಬದಲಾವಣೆ

savings new

savings new

ಬೆಂಗಳೂರು: ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆಯು ತೆರಿಗೆ ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತವೆ. ಆದ್ದರಿಂದಲೇ ಹಲವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೀಗ ಸರ್ಕಾರ ಕೆಲವೊಂದು ಸಣ್ಣ ಉಳಿತಾಯ ಖಾತೆಗಳ ನಿಯಮಗಳಲ್ಲಿ ಬದಲಾವಣೆ ತಂದಿದೆ. ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ (PPF), ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌ (SCSS) ಮತ್ತು ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ (Post Office Savings Account)ನಲ್ಲಿ ಈ ಬದಲಾವಣೆ ತರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮನಿಗೈಡ್‌ (Money Guide)ನಲ್ಲಿದೆ.

ಸಣ್ಣ ಉಳಿತಾಯ ಖಾತೆಗಳನ್ನು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಡಿಪಾರ್ಟ್‌ಮೆಂಟ್‌ ಆಫ್‌ ಎಕಾನಿಮಿಕ್‌ ಅಫೈರ್ಸ್‌ (DEA) ಮೇಲ್ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಸರ್ಕಾರ ಒಂಬತ್ತು ರೀತಿಯ ಸಣ್ಣ ಉಳಿತಾಯ ಖಾತೆಗಳನ್ನು ಒದಗಿಸುತ್ತಿದೆ. ರಿಕರಿಂಗ್‌ ಡೆಪಾಸಿಟ್‌ (RD), ಪಿಪಿಎಫ್‌, ಸುಕನ್ಯಾ ಸಮೃದ್ಧಿ ಯೋಜನೆ (SSY), ಮಹಿಳಾ ಸಮ್ಮಾನ್‌ ಸೇವಿಂಗ್‌ ಸರ್ಟಿಫಿಕೆಟ್‌ (MSSC), ಕಿಸಾನ್‌ ವಿಕಾಸ್‌ ಪತ್ರ (KVP), ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೆಟ್‌ (NSC) ಮತ್ತು ಎಸ್‌ಸಿಎಸ್‌ಎಸ್‌ ಯೋಜನೆಗಳನ್ನು ಜಾರಿಗೊಳಿಸಿದೆ.

ಬದಲಾವಣೆಗಳೇನು?

ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದೆ. ಅವುಗಳೇನು ಎನ್ನುವುದರ ವಿವರ ಇಲ್ಲಿದೆ.

ಹೊಸ ನಿಯಮದ ಪ್ರಕಾರ ಖಾತೆಯನ್ನು ತೆರೆಯಲು ಪ್ರಸ್ತುತ ಒಂದು ತಿಂಗಳ ಸಮಯದ ಬದಲು ಮೂರು ತಿಂಗಳ ಅವಕಾಶವನ್ನು ಒದಗಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಹಿಂದೆ ನಿವೃತ್ತಿ ಹೊಂದಿದ ಬಳಿಕ ಆ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಒಂದು ತಿಂಗಳೊಳಗೆ ಹೂಡಿಕೆ ಮಾಡಬೇಕಿತ್ತು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಹೂಡಿಕೆಯ ಒಂದು ವರ್ಷದ ಮುಕ್ತಾಯದ ಮೊದಲು ಖಾತೆಯನ್ನು ಮುಚ್ಚಿದರೆ ಠೇವಣಿಯ ಒಂದು ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.

ಪಿಪಿಎಫ್‌ ಯೋಜನೆಯಲ್ಲಿನ ಬದಲಾವಣೆ

ಪಿಪಿಎಫ್‌ ಖಾತೆಗಳನ್ನು ಅಕಾಲಿಕವಾಗಿ ಮುಚ್ಚುವಾಗ ಇರುವ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಇದು ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಯೋಜನೆಯಡಿ ಅಕಾಲಿಕ ಹಿಂಪಡೆಯುವಿಕೆಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ತಿಳಿಸುತ್ತದೆ. ಪಿಪಿಎಫ್ ಮೆಚ್ಯೂರಿಟಿ ಅವಧಿಗೆ ಮುನ್ನ ಒಬ್ಬ ಖಾತೆದಾರ ಮೂರು ಕಾರಣಗಳಿಗೆ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ. ಖಾತೆದಾರ ಅಥವಾ ಅವಲಂಬಿತರಿಗೆ ಮಾರಕ ಕಾಯಿಲೆ ಬಂದಿದ್ದರೆ, ಉನ್ನತ ಶಿಕ್ಷಣ ಪಡೆಯಬೇಕಿದ್ದರೆ ಅಥವಾ ಹೊರದೇಶಕ್ಕೆ ವಲಸೆ ಹೋಗುತ್ತಿದ್ದರೆ ಪಿಪಿಎಫ್ ಹಣವನ್ನು ಮೆಚ್ಯೂರಿಟಿಗೆ ಮುನ್ನ ವಿತ್​ಡ್ರಾ ಮಾಡಿಕೊಳ್ಳಬಹುದು.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದೀರಾ? ಈ ತಂತ್ರ ಅನುಸರಿಸಿ

ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌

ಐದು ವರ್ಷದ ಅವಧಿಯ ಪೋಸ್ಟ್‌ ಆಫೀಸ್‌ ಠೇವಣಿಯನ್ನು ನಾಲ್ಕು ವರ್ಷದ ಬಳಿಕ ಹಿಂಪಡೆದರೆ ಹೊಸ ನಿಯಮದ ಪ್ರಕಾರ ಐದು ವರ್ಷದ ಸ್ಕೀಮ್​ಗೆ ಇರುವ ಬಡ್ಡಿಯೇ ಈ ಪ್ರೀಮೆಚ್ಯೂರ್ ವಿತ್​ಡ್ರಾಯಲ್ ಮೊತ್ತಕ್ಕೂ ಅನ್ವಯವಾಗುತ್ತದೆ. ಹಿಂದಿನ ನಿಯಮದ ಪ್ರಕಾರ ಮೂರು ವರ್ಷದ ಸ್ಕೀಮ್​ನಲ್ಲಿರುವಷ್ಟು ಬಡ್ಡಿ ಮಾತ್ರವೇ ಅನ್ವಯ ಆಗುತ್ತಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version