ಬೆಂಗಳೂರು: ಮಕ್ಕಳ ಜೀವನ, ಭವಿಷ್ಯ ಉತ್ತಮವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು. ಈ ಕನಸು ನನಸಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪ್ರಸ್ತುತ ಹೆಚ್ಚುತ್ತಿರುವ ಜೀವನ ವೆಚ್ಚ, ದುಬಾರಿಯಾಗುತ್ತಿರುವ ಶಿಕ್ಷಣ ಮುಂತಾದ ಕಾರಣಗಳಿಂದ ಇದಕ್ಕಾಗಿ ಈಗಲೇ ಒಂದಷ್ಟು ಯೋಜನೆ ರೂಪಿಸಬೇಕಾಗುತ್ತದೆ. ಜತೆಗೆ ಅವರ ನಿವೃತ್ತಿ ಜೀವನದ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ನಿರ್ಧಾರ ಎನಿಸಿಕೊಳ್ಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದೀಗ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಹೂಡಿಕೆ ಮಾಡಬಹುದಾದ ಆಯ್ಕೆ ಲಭ್ಯ. ಅವರ ಉನ್ನತ ಶಿಕ್ಷಣಕ್ಕೆ ಇದು ನೆರವಾಗುತ್ತದೆ. ಹಾಗಾದರೆ ಹೂಡಿಕೆಗೆ ಉತ್ತಮ ಆಯ್ಕೆ ಎನಿಸಿಕೊಂಡಿರುವ ಪಿಪಿಎಫ್ ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಪೈಕಿ ಯಾವುದು ಉತ್ತಮ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).
ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (National Pension Scheme Vatsalya) ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ನೋಡೋಣ.
ಪಿಪಿಎಫ್
ಸಾರ್ವಜನಿಕ ಭವಿಷ್ಯ ನಿಧಿ-ಇದು ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಮಕ್ಕಳಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಸರ್ಕಾರ ಪಿಪಿಎಫ್ ಮೈನರ್ (PPF minor) ಖಾತೆಯನ್ನೂ ಜಾರಿಗೆ ತಂದಿದೆ. ಪಾಲಕರು ತಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಆಕರ್ಷಕ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಪಿಪಿಎಫ್ ಖಾತೆಯು ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ ಹೂಡಿಕೆ ಆಯ್ಕೆಗಳಲ್ಲಿ ಒಂದು. ಅಪ್ರಾಪ್ತ ಮಗುವಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ. ಬಳಿಕ ಆತ / ಅವಳು ತನ್ನ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.
ಪಿಪಿಎಫ್‌ನ ವೈಶಿಷ್ಟ್ಯ
- ವಾರ್ಷಿಕ ಗರಿಷ್ಠ 1,50,000 ರೂ.ಗಳಿಂದ ಕನಿಷ್ಠ 500 ರೂ.ಗಳವರೆಗೆ ಠೇವಣಿ ಇಡಬಹುದು.
- ಮೂಲ ಅವಧಿ 15 ವರ್ಷಗಳು. ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು.
- ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಪ್ರಸ್ತುತ ಬಡ್ಡಿದರ ವಾರ್ಷಿಕ ಶೇ. 7.10ರಷ್ಟಿದೆ.
- ಖಾತೆಯ ತೆರೆದ ದಿನಾಂಕ ಆಧಾರದಲ್ಲಿ ಸಾಲ ಪಡೆಯಬಹುದು.
- ಪಿಪಿಎಫ್ ಖಾತೆಗಳಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
- ಒಂದು ಅಥವಾ ಹೆಚ್ಚು ವ್ಯಕ್ತಿಗಳ ನಾಮನಿರ್ದೇಶನ ಸೌಲಭ್ಯ ಇದೆ.
- ಖಾತೆಯನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನ ಇತರ ಶಾಖೆಗಳಿಗೆ ವರ್ಗಾಯಿಸಬಹುದು.
ಎನ್‌ಪಿಎಸ್ ವಾತ್ಯಲ್ಯ ಯೋಜನೆ
ಎನ್‌ಪಿಎಸ್ ವಾತ್ಸಲ್ಯ – 2024ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾದ ಹೊಸ ಪಿಂಚಣಿ ಯೋಜನೆಯಾಗಿದ್ದು, ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಪೋಷಕ ಖಾತೆ ತೆರೆಯಬಹುದು. ಪೋಷಕರಿಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹಾಕಿಕೊಟ್ಟಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್‌ಪಿಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸ ಸುಗಮವಾಗಿ ಮುಂದುವರಿಯುತ್ತದೆ.
ಎನ್‌ಪಿಎಸ್ ಅನ್ನು 18 ವರ್ಷದ ನಂತರ ಆರಂಭಿಸಬಹುದಾಗಿದ್ದರೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದಾಗಿದೆ. ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ನಿಮ್ಮ ಮಕ್ಕಳು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯುತ್ತಾರೆ.
ಯಾವುದು ಉತ್ತಮ?
ಎನ್‌ಪಿಎಸ್ ವಾತ್ಯಲ್ಯ ಯೋಜನೆಯನ್ನು ಸರ್ಕಾರ ಇತ್ತೀಚೆಗೆಷ್ಟೇ ಘೋಷಿಸಿದ್ದು ಹೂಡಿಕೆ ಮಾಡಬಹುದಾದ ಅಪ್ರಾಪ್ತ ವಯಸ್ಕರ ಕನಿಷ್ಠ ವಯಸ್ಸನ್ನು ಇನ್ನೂ ಬಹುರಂಗಪಡಿಸಿಲ್ಲ. ಎರಡೂ ಯೋಜನೆಗಳು ನಿಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನಿಮ್ಮ ಉದ್ದೇಶಕ್ಕೆ ಅನುಗುಣವಾದ, ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ