Site icon Vistara News

Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Money Guide

Money Guide

ಬೆಂಗಳೂರು: ಮಕ್ಕಳಿಗೆ ಈಗ ರಜಾ ಅವಧಿ. ಪಾಠ, ಪರೀಕ್ಷೆ, ಸೆಮಿನಾರ್‌ ಹೀಗೆ ವರ್ಷಪೂರ್ತಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ರಿಲೀಫ್‌ ಆಗುವ ಸಮಯ. ಈಗ ಬೆಳಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ಶಾಲೆ, ಕಾಲೇಜಿಗೆ ಓಡಬೇಕೆಂಬ ಧಾವಂತ ಇರುವುದಿಲ್ಲ. ತಮಗೆ ಬೇಕಾದಂತೆ ಕಾಲ ಕಳೆಯಬಹುದು. ಹಾಗಂತ ಅವರನ್ನು ಅವರ ಪಾಡಿಗೆ ಪೂರ್ತಿಯಾಗಿ ಬಿಡಬೇಡಿ. ಅವರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಇದು ತಕ್ಕ ಸಮಯ. ಎಳವೆಯಲ್ಲಿಯೇ ಆರ್ಥಿಕತೆಯ ವಿಚಾರದಲ್ಲಿ ಅವರಲ್ಲಿ ಶಿಸ್ತು ಮೂಡಿದರೆ ಭವಿಷ್ಯದಲ್ಲಿ ಎದುರಾಗುವ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು. ನೀವು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಪ್ರಾಕ್ಟಿಕಲ್‌ ಆಗಿ ಅವರಿಗೆ ತಿಳಿ ಹೇಳಲು ಈ ರಜಾ ಅವಧಿ ಅತ್ಯಂತ ಪ್ರಶಸ್ತ ಸಮಯ. ಹಾಗಾದರೆ ಹೇಗೆ ಮಕ್ಕಳಿಗೆ ಪ್ರಾಯೋಗಿಕ ಪಾಠ ಮಾಡಬಹುವುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಉಳಿತಾಯದ ಮಹತ್ವ ತಿಳಿ ಹೇಳಿ

ಹಣದ ಉಳಿತಾಯ ಎಲ್ಲರಿಗೂ, ಎಲ್ಲ ಕಾಲಕ್ಕೂ ಅನಿವಾರ್ಯ. ಒಂದಷ್ಟು ಉಳಿತಾಯ ನಿಮ್ಮ ಬಳಿ ಇದ್ದರೆ ಸಾಲ ಮಾಡುವುದರಿಂದ ಪಾರಾಗಬಹುದು. ಆರಂಭದಲ್ಲಿ ಈ ಪಾಠವನ್ನು ಮಕ್ಕಳಿಗೆ ತಿಳಿ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಇದನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಿ. ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್‌ ಅಕೌಂಟ್‌ ಓಪನ್‌ ಮಾಡಿ. ಪೋಸ್ಟ್‌ ಆಫೀಸ್‌ನಲ್ಲಿಯೂ ಖಾತೆ ತೆರೆಯಬಹುದು. ಅದರಲ್ಲಿ ನಿಯಮಿತವಾಗಿ ಠೇವಣಿ ಇಡಲು ಹೇಳಿ. ನೀವು ಅವರ ಅಕೌಂಟ್‌ಗೆ ಹಣ ಹಾಕುವುದಕ್ಕಿಂತ ಈ ಕೆಲಸವನ್ನು ಸ್ವತಃ ಅವರೇ ನಿರ್ವಹಿಸಲಿ. ಇದರಿಂದ ಅವರಿಗೆ ಉಳಿತಾಯದ ಪ್ರಾಧಾನ್ಯತೆ ಅರಿವಾಗುತ್ತದೆ. ಇದರ ಜತೆಗೆ ಚಿಕ್ಕ ಮಕ್ಕಳಾಗಿದ್ದರೆ ಮನೆಯಲ್ಲಿಯೇ ಉಳಿತಾಯ ಮಾಡಲು ಪಿಗ್ಗಿ ಬ್ಯಾಂಕ್‌ನ ವ್ಯವಸ್ಥೆ ಮಾಡಿ. ಭವಿಷ್ಯದ ಗುರಿಗಳಿಗಾಗಿ ಉಳಿತಾಯದ ಪ್ರಾಮುಖ್ಯತೆ ಮತ್ತು ಕಾಲಾನಂತರದಲ್ಲಿ ಸಣ್ಣ ಮೊತ್ತಗಳು ಹೇಗೆ ಉತ್ತಮ ಸಂಗ್ರಹವಾಗಿ ಬದಲಾಗಬಹುದು ಎಂಬುದನ್ನು ಅರ್ಥ ಮಾಡಿಸಿ. ಅದಕ್ಕಾಗಿ ಹೀಗೆ ಮಾಡಿ: ಅವರು ಯಾವುದಾದರೂ ವಸ್ತುವಿಗೆ ಬೇಡಿಕೆ ಇಟ್ಟರೆ (ಸೈಕಲ್‌, ಬ್ಯಾಗ್‌ ಇತ್ಯಾದಿ) ಕೂಡಲೇ ತಂದು ಕೊಡಬೇಡಿ. ಅವರ ಉಳಿತಾಯದ ಹಣದಿಂದ ಅವರ ಅಗತ್ಯವನ್ನು ಕಂಡುಕೊಳ್ಳುವ ಬಗ್ಗೆ ಪ್ರಸ್ತಾವಿಸಿ. ನಿರ್ದಿಷ್ಟ ಸಮಯದವರೆಗೆ ಹಣ ಉಳಿಸಿದರೆ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವದನ್ನು ಅವರಿಗೆ ಮನದಟ್ಟು ಮಾಡಿ.

ಪಾರ್ಟ್‌ ಟೈಮ್‌ ಜಾಬ್‌

ಸ್ವಲ್ಪ ದೊಡ್ಡ ಮಕ್ಕಳಾದರೆ (ಎಸ್ಸೆಸ್ಸೆಲ್ಸಿ / ಪಿಯು / ಪದವಿ) ಅವರಿಗೆ ರಜೆಯಲ್ಲಿ ಸಣ್ಣ ಪುಟ್ಟ ಪಾರ್ಟ್‌ ಟೈಮ್‌ ಜಾಬ್‌ ಕೊಡಿಸಿ. ಈ ಮೂಲಕ ಅವರಿಗೆ ಹಣದ ಮಹತ್ವ ತಿಳಿಸಿಕೊಡಿ. ಕಾರ್ಖಾನೆಗಳಲ್ಲಿ ಲೆಕ್ಕ ಪತ್ರ ನೋಡಿಕೊಳ್ಳುವುದು, ಪ್ಯಾಕ್‌ ಮಾಡುವುದು, ಕಂಪ್ಯೂಟರ್‌ ಕೆಲಸ, ಸೇಲ್‌ ಮ್ಯಾನ್‌ / ಸೇಲ್ಸ್‌ ಗರ್ಲ್‌, ಬೆಳಗ್ಗೆ ದಿನ ಪತ್ರಿಕೆ ಹಂಚುವುದು ಇತ್ಯಾದಿ ಕೆಲಸ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಹಳ್ಳಿಯವರಾದರೆ ಹೊಲ, ತೋಟದ ಕೆಲಸಕ್ಕೆ ತಮ್ಮೊಂದಿಗೆ ಬರುವಂತೆ ಹೇಳಿ. ಅವರ ಕೆಲಸಕ್ಕೆ ಅನುಗುಣವಾಗಿ ಇಂತಿಷ್ಟು ಸಂಬಳ ನಿಗದಿ ಪಡಿಸಿ. ಬೇಕಿದ್ದರೆ ಅವರ ಟ್ಯೂಷನ್‌ ಕೂಡ ಮಾಡಬಹುದು. ಒಟ್ಟಿನಲ್ಲಿ ಅವರು ಸಂಪಾದಿಸುವಂತೆ ಮಾಡಿ ಅವರಿಗೆ ದುಡಿಮೆಯ ಮಹತ್ವ ತಿಳಿಸಿ.

ಸಂಬಳವನ್ನು ಸರಿಯಾಗಿ ಹಂಚಿಕೆ ಮಾಡಿ

ಮಕ್ಕಳ ಸಂಪಾದನೆಯನ್ನು ಮುಂದಿಟ್ಟುಕೊಂಡು ಅದನ್ನು ಯಾವೆಲ್ಲ ರೀತಿ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೊಂದಿಗೆ ಚರ್ಚಿಸಿ. ಅವರ ಖರ್ಚಿಗೆ, ಮನೆ ಖರ್ಚಿಗೆ, ಇತರ ಅಗತ್ಯಗಳಿಗೆ ಹಂಚಿಕೆ ಮಾಡಿ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡುವುದು ಹೇಗೆ ಎನ್ನುವುದರ ಯೋಜನೆ ತಯಾರಿಸಿ. ಇನ್ನು ಅನಗತ್ಯ ವಸ್ತುಗಳನ್ನು ಅವರು ಖರೀದಿಸುವುದನ್ನು ತಪ್ಪಿಸಿ. ಅವರ ಆನ್‌ಲೈನ್‌ ಶಾಪಿಂಗ್‌ ಬಗ್ಗೆ ನಿಗಾ ಇಡಿ.

ಬಜೆಟ್‌ ತಯಾರಿಸಲಿ

ಬಜೆಟ್‌ ಯಾಕೆ ಮುಖ್ಯ ಎನ್ನುವುದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್‌ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್‌ ಮನಿ, ಉಡುಗೊರೆ ಸಿಕ್ಕ ಹಣ, ಸಂಬಳವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ಪ್ಲ್ಯಾನ್‌ ಮಾಡಲಿ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಪಾಠ

ಮನೆ ಸಾಮಗ್ರಿ ಖರೀದಿಗೆ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. ನೆನಪಿಡಿ, ಮಕ್ಕಳು ನಿಮ್ಮನ್ನು ನೋಡಿ ಕಲಿಯುವುದರಿಂದ, ನಿಮ್ಮ ಪ್ರಭಾವ ಹೆಚ್ಚೇ ಬೀರುವುದರಿಂದ ನೀವು ಕೂಡ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಿ. ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ. ಎಲ್ಲದಕ್ಕಿಂತ ಮುಖ್ಯವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಅದನ್ನೇ ಮಕ್ಕಳಿಗೂ ತಿಳಿಸಿ. ಮಾತ್ರವಲ್ಲ ಹೂಡಿಕೆಯ ಪ್ರಾಧಾನ್ಯತೆಯ ಬಗ್ಗೆ ಮಕ್ಕಳಿಗೆ ವಿವರಿಸಿ. ಸಂಪತ್ತು ವೃದ್ಧಿಗೆ ಹೂಡಿಕೆ ಎನ್ನುವುದು ಅತ್ಯುತ್ತಮ ಮಾರ್ಗ ಎನ್ನವುದನ್ನು ತಿಳಿಸಿ. ಹೂಡಿಕೆಗೆ ವಿವಿಧ ವಿಧಾನಗಳಿದ್ದರೂ ಸುರಕ್ಷಿತ ಮಾರ್ಗವನ್ನು ಆಯ್ದುಕೊಳ್ಳುವ ಬಗ್ಗೆ ತಿಳಿಸಿ.

ಇದನ್ನೂ ಓದಿ: Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Exit mobile version