ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ 2015ರಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (Pradhan Mantri Jeevan Jyoti Bima Yojana)ಯನ್ನು ಪರಿಚಯಿಸಿದ್ದು, ಸಾವಿರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಜೀವ ವಿಮೆ ಯೋಜನೆ ಪಾಲಿಸಿದಾರ ಆಕಸ್ಮಿಕವಾಗಿ ಮರಣ ಹೊಂದಿದರೆ ನಾಮಿನಿಗೆ 2 ಲಕ್ಷ ರೂ. ಸಿಗುತ್ತದೆ. ಒಂದು ವರ್ಷ ಅವಧಿಯ ಈ ಯೋಜನೆಯನ್ನು ಪ್ರತಿ ವರ್ಷ ನವೀಕರಿಸಲೂ ಬಹುದು. ಈ ಯೋಜನೆಯನ್ನು ಬ್ಯಾಂಕ್ / ಅಂಚೆ ಕಚೇರಿ ಮೂಲಕ ಆರಂಭಿಸಬಹುದು. ಜೀವ ವಿಮಾ ಕಂಪೆನಿಗಳು ಇವುಗಳನ್ನು ನಿರ್ವಹಿಸುತ್ತವೆ. 18ರಿಂದ 50 ವರ್ಷದೊಳಗಿನ ಎಲ್ಲರೂ ಈ ಯೋಜನೆಗೆ ಅರ್ಹರು. ಈ ಬಗ್ಗೆ ವಿವರವಾದ ಮಾಹಿತಿ ಮನಿಗೈಡ್ (Money Guide)ನಲ್ಲಿದೆ.
ಪ್ರೀಮಿಯಂ ಮೊತ್ತ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ಪ್ರತಿ ವರ್ಷ 436 ರೂ. ಪಾವತಿಸದರೆ ಸಾಕು. ಪಾಲಿಸಿದಾರ ಯಾವುದೇ ಕಾರಣಕ್ಕೂ ಮೃತಪಟ್ಟರೆ ನಾಮಿನಿಗೆ 2 ಲಕ್ಷ ರೂ. ಒದಗಿಸಲಾಗುತ್ತದೆ. ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಈ ವಿಮೆಯನ್ನು ಮಾಡಿಬಹುದು. ಪ್ರತಿ ವರ್ಷ ಒಂದು ಕಂತಿನಲ್ಲಿ ‘ಆಟೋ ಡೆಬಿಟ್’ ಸೌಲಭ್ಯದ ಮೂಲಕ ಖಾತೆದಾರರ ಬ್ಯಾಂಕ್ / ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಪ್ರಯೋಜನಗಳು
- ಪಿಎಂಜೆಜೆಬಿವೈ ಒಂದು ವರ್ಷದ ಯೋಜನೆಯಾಗಿದ್ದು, 18-50 ವರ್ಷದೊಳಗಿನವರು ನೋಂದಾಯಿಸಬಹುದು.
- ಸಾವು ಯಾವುದೇ ಕಾರಣಕ್ಕೆ ಸಂಭವಿಸಿದರೂ 2 ಲಕ್ಷ ರೂ. ನಾಮಿನಿಗೆ ಸಿಗಲಿದೆ.
- ಪ್ರತಿ ವರ್ಷ 436 ರೂ. ಪಾವತಿಸಿದರೆ ಸಾಕು.
- ಪಾಲಿಸಿದಾರರ ಅಕೌಂಟ್ನಿಂದ ನೇರ ದುಡ್ಡು ಪಾವತಿಯಾಗುವ ಅಟೋ-ಡೆಬಿಟ್ ಸೌಲಭ್ಯ ಲಭ್ಯ.
- ನೀವು ಖಾತೆ ಹೊಂದಿರುವ ಯಾವುದೇ ಬ್ಯಾಂಕ್ / ಪೋಸ್ಟ್ ಆಫೀಸ್‌ನಲ್ಲಿ ಹೆಸರು ನೋಂದಾಯಿಸಬಹುದು.
ಅನಿವಾಸಿ ಭಾರತೀಯರು ಸೇರಬಹುದೆ?
ವಿಶೇಷ ಎಂದರೆ ಈ ಮಹತ್ವದ ಯೋಜನೆಯಲ್ಲಿ ಅನಿವಾಸಿ ಭಾರತೀಯರೂ (Non-Resident Indian) ಸೇರಬಹುದು. ಆದರೆ ಅವರಿಗೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಅವರು ಭಾರತದಲ್ಲಿರುವ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಭಾರತ ಸರ್ಕಾರ ಅಳವಡಿಸಿದ ಎಲ್ಲ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ಭಾರತೀಯ ಕರೆನ್ಸಿಗಳಲ್ಲಿ ಮಾತ್ರ ಪರಿಹಾರದ ಮೊತ್ತ ಪಾವತಿಸಲಾಗುತ್ತದೆ.
ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ?
ನೀವು ಖಾತೆ ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ತೆರಳಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ ಯೋಜನೆಗೆ ಹೆಸರು ನೋಂದಾಯಿಸಬಹುದು. ಇಲ್ಲವೇ ಆನ್‌ಲೈನ್ ಮೂಲಕವೂ ಹೆಸರು ನೋಂದಾಯಿಸುವ ಸೌಲಭ್ಯವಿದೆ.
ಆನ್‌ಲೈನ್ ಮೂಲಕ ಹೀಗೆ ಹೆಸರು ನೋಂದಾಯಿಸಿ
- ಅಪ್ಲಿಕೇಷನ್ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ.
- ಈಗ ತೆರೆದುಕೊಳ್ಳುವ ಅಪ್ಲಿಕೇಷನ್ ಫಾರಂನ ಪ್ರಿಂಟ್ಔಟ್ ತೆಗೆದುಕೊಳ್ಳಿ.
- ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಬ್ಯಾಂಕ್ / ಪೋಸ್ಟ್ ಆಫೀಸ್‌ಗೆ ಸಲ್ಲಿಸಿ. ಆಗ ದೊರೆಯುವ Acknowledgement Slip Cum Certificate Of Insurance ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
ಇದನ್ನೂ ಓದಿ: Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ