Site icon Vistara News

Money Guide: ಇನ್ನು ಸಾಲ ಮಾಡಿ ತುಪ್ಪ ತಿನ್ನೋದು ತುಸು ಕಷ್ಟ!; ಆರ್‌ಬಿಐ ನಿಯಮ ಏನು ಹೇಳುತ್ತದೆ?

loan new

loan new

ಮುಂಬೈ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ನಿಂದ ಸಾಲ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುತ್ತಿದೆ ಅಂಕಿ-ಅಂಶಗಳು. ಉಳಿತಾಯ ಮಾಡುವ ಮನೋಭಾವ ಕಡಿಮೆಯಾಗಿ ಸಾಲದತ್ತ ಕೈಚಾಚುವ ಪರಿಸ್ಥಿತಿ ವೃದ್ಧಿಸುತ್ತಿದೆ ಎಂದು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತಿಳಿಸಿದೆ. ಆರ್‌ಬಿಐ ಮೂಲಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ದೇಶದಲ್ಲಿ ಜನರು ಪಡೆದಿರುವ ವೈಯಕ್ತಿಕ ಸಾಲಗಳ (Personal loans) ಪ್ರಮಾಣ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸಾಲ ಪ್ರಮಾಣ ಶೇ. 7ರಷ್ಟು ಇದ್ದರೆ ಈ ಬಾರಿ ಶೇ. 16.8ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಆರ್‌ಬಿಐ ವೈಯಕ್ತಿಕ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಸ್‌ಗೆ (Credit Cards) ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಸಾಲದ ವಿಚಾರದಲ್ಲಿ ಆರ್‌ಬಿಐ ಕೈಗೊಂಡ ನಿರ್ಧಾರವೇನು? ಹೊಸ ನಿಯಮ ಏನು ಹೇಳುತ್ತದೆ? ಆರ್‌ಬಿಐ ನಿರ್ಧಾರಕ್ಕೆ ಕಾರಣವೇನು? ಮುಂತಾದ ಪ್ರಶ್ನೆಗಳಿಗೆ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ನಿಯಮ ಇನ್ನಷ್ಟು ಕಠಿಣ

ಆರ್‌ಬಿಐ ಇತ್ತೀಚೆಗೆ ಗ್ರಾಹಕ ಸಾಲದ ನಿಯಮಗಳನ್ನು ಬಿಗಿಗೊಳಿಸಿದೆ. ಅಸುರಕ್ಷಿತ ವೈಯಕ್ತಿಕ ಸಾಲಗಳಿಗೆ ಹೆಚ್ಚಿನ ರಿಸ್ಕ್ ವೇಯ್ಟ್ ನಿಗದಿಪಡಿಸುವಂತೆ ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಕಂಪನಿ(ಎನ್‌ಬಿಎಫ್‌ಸಿ)ಗಳಿಗೆ ಸೂಚಿಸಿದೆ. ಇದು ಸಾಲದಾತರನ್ನು ಇನ್ನಷ್ಟು ಜಾಗರೂಕರನ್ನಾಗಿಸುವ ಗುರಿ ಹೊಂದಿದೆ. ವೈಯಕ್ತಿಕ ಸಾಲಗಳ ಮೇಲಿನ ರಿಸ್ಕ್ ವೇಯ್ಟ್ ಅನ್ನು ಹೆಚ್ಚಿಸಲಾಗಿದೆ. ಅಂದರೆ ಸಾಲ ನೀಡುವಾಗ ಬ್ಯಾಂಕ್‌ಗಳು ಸಾಲ ನೀಡುವ ಪ್ರಮಾಣಕ್ಕೆ ರಿಸ್ಕ್ ವೇಯ್ಟ್ ಆಗಿ ಒಂದಿಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ. ಈಗ ಆರ್‌ಬಿಐ ಈ ಮೀಸಲು ಮೊತ್ತದ ಪ್ರಮಾಣವನ್ನು ಹೆಚ್ಚಿಸಿದ್ದರಿಂದ ಬ್ಯಾಂಕ್‌ಗಳು ನೀಡುವ ಸಾಲವನ್ನು ಹೆಚ್ಚು ದುಬಾರಿಯಾಗುತ್ತದೆ. ಒಟ್ಟಿನಲ್ಲಿ ಈ ಹೊಸ ನಿಯಮ ಬ್ಯಾಂಕ್‌ಗಳ ಸಾಲ ನೀಡುವ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ.

ಆರ್‌ಬಿಐ ಕಳವಳ

ವೈಯಕ್ತಿಕ ಸಾಲದ ಬೆಳವಣಿಗೆ ಹೆಚ್ಚುತ್ತಿರುವ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಳವಳ ವ್ಯಕ್ತಪಡಿಸಿದ ಒಂದು ತಿಂಗಳೊಳಗೆ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ರಿಸ್ಕ್ ವೇಯ್ಟ್ ಪ್ರಮಾಣವನ್ನು ಶೇ. 25ರಿಂದ 125ರ ವರೆಗೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಇದು ಚಿನ್ನ ಮತ್ತು ಚಿನ್ನಾಭರಣ ಸಾಲ, ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲಗಳಿಗೆ ಅನ್ವಯವಾಗುವುದಿಲ್ಲ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ. ಸುತ್ತೋಲೆಯ ಪ್ರಕಾರ, ಕ್ರೆಡಿಟ್ ಕಾರ್ಡ್ ಸ್ವೀಕರಿಸುವ ವಿಷಯದಲ್ಲಿ ಇದೇ ರೀತಿಯ ಹೆಚ್ಚಳವನ್ನು ಜಾರಿಗೆ ತರಲಾಗಿದೆ. ವೈಯಕ್ತಿಕ ಸಾಲದಲ್ಲಿ ಕಂಡುಬರುವ ಹೆಚ್ಚಿನ ಬೆಳವಣಿಗೆ ಮತ್ತು ಬ್ಯಾಂಕ್ ಸಾಲಗಳ ಮೇಲೆ ಎನ್‌ಬಿಎಫ್‌ಸಿಗಳಿಗೆ ಹೆಚ್ಚುತ್ತಿರುವ ಅವಲಂಬನೆಯನ್ನು ಶಕ್ತಿಕಾಂತ ದಾಸ್ ಈ ಹಿಂದೆ ಪ್ರಸ್ತಾವಿಸಿದ್ದರು.

ಸಾಲ ಹೆಚ್ಚಳಕ್ಕೆ ಕಾರಣವೇನು?

ಹಿಂದೆಲ್ಲ ಹಿರಿಯರು ಹೇಳಿಕೊಟ್ಟ ʼಹಾಸಿಗೆ ಇದ್ದಷ್ಟೇ ಕಾಲು ಚಾಚುʼ ಎನ್ನುವ ತತ್ವದಂತೆ ಜೀವನ ನಡೆಸಲಾಗುತ್ತಿತ್ತು. ಅಂದರೆ ಆದಾಯಕ್ಕೆ ತಕ್ಕ ಖರ್ಚು ಮಾಡಿ ಜನ ತೃಪ್ತಿಪಡುತ್ತಿದ್ದರು. ಆದರೆ ಈಗ ʼಸಾಲ ಮಾಡಿಯಾದರೂ ತುಪ್ಪ ತಿನ್ನುʼ ಎನ್ನುವ ಮಾತಿಗೆ ಜನ ಜೋತು ಬಿದ್ದಿದ್ದಾರೆ. ವಾಸಕ್ಕೆ ಉತ್ತಮ ಮನೆ ಬೇಕು, ಅದೂ ಬಂಗಲೆಯೇ ಆಗಬೇಕು, ಓಡಾಟಕ್ಕೆ ಕಾರು ಬೇಕು, ಐಷರಾಮಿ ಸೌಲಭ್ಯ ಹೊಂದಬೇಕು ಮುಂತಾದ ಕಾರಣಗಳು ಜನರಲ್ಲಿ ಸಾಲದ ಪ್ರವೃತ್ತಿ ಹೆಚ್ಚಿಸುತ್ತಲೇ ಇದೆ.

ಇದನ್ನೂ ಓದಿ: Money Guide: ಪಿಪಿಎಫ್‌, ಎಸ್‌ಸಿಎಸ್‌ಎಸ್‌, ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ ನಿಯಮದಲ್ಲಿ ಬದಲಾವಣೆ

ಎಚ್ಚರಿಕೆ ಇರಲಿ

ಯಾವುದೇ ಸಾಲ ಪಡೆಯುವ ಮುನ್ನ ಮರುಪಾವತಿ ಬಗ್ಗೆ ಆಲೋಚಿಸುವುದು ಅಗತ್ಯ. ಹಣದುಬ್ಬರ ಏರಿಕೆಯಾದರೆ ಸಾಲ ಮರು ಪಾವತಿಸಬೇಕಾದ ಮೊತ್ತವೂ ಹೆಚ್ಚಾಗುತ್ತದೆ ಎನ್ನುವುದ ಬಗ್ಗೆ ಅರಿವಿರಬೇಕು ಎಂದು ಆರ್ಥಿಕ ತಜ್ಞರು ಕಿವಿ ಮಾತು ಹೇಳುತ್ತಾರೆ. ಸದ್ಯ ಜನರ ಆಸ್ತಿಯ ಒಟ್ಟು ಮೌಲ್ಯದ ಪ್ರಮಾಣ ಶೇ. 7.2ರಿಂದ ಶೇ. 5.1ಕ್ಕೆ ಕುಸಿದಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಕೊರೋನಾ ಬಳಿಕ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಪ್ರಮಾಣದಲ್ಲಿ ಬಲವರ್ಧನೆಗೊಂಡಿಲ್ಲ. ಈ ಎಲ್ಲ ಕಾರಣಗಳಿಂದ ಆರ್‌ಬಿಐ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ತಜ್ಞರು ಹೇಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version