ಬೆಂಗಳೂರು: ಪ್ರತಿಯೊಬ್ಬರೂ ಸೂಕ್ತ ಜೀವ ವಿಮೆ ಪಾಲಿಸಿಯನ್ನು ಹೊಂದಿರಬೇಕು. ಯಾಕೆಂದರೆ ಇದು ಕುಟುಂಬದ ಆಧಾರ ಸ್ತಂಭದಂತೆ ಇರುವ ಸದಸ್ಯರ ಅಗಲಿಕೆಯ ಸಂದರ್ಭದಲ್ಲಿ ಆರ್ಥಿಕ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಇದರ ಜತೆಗೆ ಆರೋಗ್ಯ ವಿಮೆ(Health Insurance) ಮಾಡಿಸುವುದು ಕೂಡ ಅಷ್ಟೇ ಮುಖ್ಯ. ನಿಮ್ಮ ಜತೆಗೆ ಕುಟುಂಬದ ಸದಸ್ಯರು ಒಳಗೊಂಡಿರುವ ಆರೋಗ್ಯ ವಿಮೆ ಮಾಡಿಸುವತ್ತ ಗಮನ ಹರಿಸುವುದು ಅಗತ್ಯ. ಇದರಿಂದ ನೀವು ಅಥವಾ ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದಾಗ ಆಸ್ಪತ್ರೆಯ ಖರ್ಚು ವೆಚ್ಚಗಳಿಗೆ ತಲೆ ಕೆಡಿಸಿಕೊಳ್ಳದೆ, ಹಣಕ್ಕಾಗಿ ಇತರರ ಮುಂದೆ ಕೈಚಾಚನೆ ನಿಶ್ವಿಂತೆಯಿಂದ ಇರಬಹುದು. ಆದರೆ ಕೆಲವೊಮ್ಮೆ ಆರೋಗ್ಯ ವಿಮೆ ಇದ್ದರೂ ಕ್ಲೈಮ್ ಮಾಡುವಾಗ ಸಮಸ್ಯೆಯಾಗುತ್ತದೆ. ಹಣ ಬಿಡುಗಡೆ ಮಾಡಲು ಕಂಪೆನಿಗಳು ನಿರಾಕರಿಸುತ್ತವೆ. ಈ ಸಮಸ್ಯೆ ಯಾಕೆ ಎದುರಾಗುತ್ತದೆ? ಇದಕ್ಕೇನು ಪರಿಹಾರ ? ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).
ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಸಂರಕ್ಷಿಸಲು ಮತ್ತು ನಿಮ್ಮ ಉಳಿತಾಯದ ಹಣವನ್ನು ರಕ್ಷಿಸಲು, ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ವಿಮೆ ಸಹಾಯಕ. ಇದರ ಸಮರ್ಪಕ ಕಾರ್ಯ ನಿರ್ವಹಣೆಗೆ ಈ ಅಂಶಗಳತ್ತ ಗಮನ ಹರಿಸಿ.
- ಷರತ್ತುಗಳನ್ನು ಗಮನಿಸಿ: ವಿಮಾ ಕಂಪೆನಿಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಒಳಗೊಳ್ಳುವ ಮೊದಲು ಕಾಯುವ ಅವಧಿಯನ್ನು ಹೊಂದಿರುತ್ತದೆ. ಇದನ್ನು ಷರತ್ತುಗಳಲ್ಲಿ ಉಲ್ಲೇಖಿಸಿರುತ್ತಾರೆ. ಇದನ್ನು ಗಮನಿಸಿ.
- ತಪ್ಪಾಗಿ ನಿರೂಪಿಸುವುದು: ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಪಾಲಿಸಿದಾರರು ತಮ್ಮ ವೈದ್ಯಕೀಯ ಇತಿಹಾಸ ಅಥವಾ ಇತರ ಯಾವುದೇ ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದರೆ ಅಥವಾ ತಪ್ಪಾಗಿ ನಿರೂಪಿಸಿದರೆ ವಿಮಾ ಕಂಪೆನಿ ಕ್ಲೈಮ್ ಅನ್ನು ನಿರಾಕರಿಸಬಹುದು. ವಿಮೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ವೈದ್ಯಕೀಯ ಸ್ಥಿತಿಯ ವಿವರವನ್ನು ಪ್ರಾಮಾಣಿಕವಾಗಿ ನೀಡಿ. ಅಂದರೆ ನಿಮ್ಮ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಬಹಿರಂಗಪಡಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಮರೆಮಾಚುವುದು ಹಕ್ಕು ನಿರಾಕರಣೆಗೆ ಕಾರಣವಾಗಬಹುದು.
- ಪಾಲಿಸಿ ವಿನಾಯಿತಿಗಳು: ಆರೋಗ್ಯ ವಿಮಾ ಪಾಲಿಸಿಗಳು ಎಲ್ಲವನ್ನೂ ಒಳಗೊಳ್ಳುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ. ಸೌಂದರ್ಯವರ್ಧಕ ಚಿಕಿತ್ಸೆ ಅಥವಾ ಅಪಾಯಕಾರಿ ಚಟುವಟಿಕೆಗಳಿಂದ ಉಂಟಾಗುವ ಗಾಯಗಳಂತಹ ಯಾವುದನ್ನು ಪಾಲಿಸಿಯಿಂದ ಹೊರಗಿಡಲಾಗಿದೆ ಎನ್ನುವುದನ್ನು ಮೊದಲೇ ತಿಳಿದುಕೊಳ್ಳಿ. ಜತೆಗೆ ವಿಮಾ ಪಾಲಿಸಿಗಳು ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಕಾಯಿಲೆಗಳ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿಯೂ ನಿಮ್ಮ ಕ್ಲೈಮ್ ಅನ್ನು ನಿರಾಕರಿಸುವ ಸಾಧ್ಯತೆ ಇದೆ.
- ಡಾಕ್ಯುಮೆಂಟೇಶನ್ ಮತ್ತು ಕಾರ್ಯವಿಧಾನ ದೋಷಗಳು: ವೈದ್ಯಕೀಯ ದಾಖಲೆಗಳು ಕಾಣೆಯಾಗಿರುವುದು, ಕ್ಲೈಮ್ ಫಾರ್ಮ್ ಗಳನ್ನು ಸಮರ್ಪಕವಾಗಿ ಭರ್ತಿ ಮಾಡದಿರುವುದು ಅಥವಾ ಅಗತ್ಯ ಕ್ಲೈಮ್ ಕಾರ್ಯವಿಧಾನಗಳನ್ನು ಅನುಸರಿಸಲು ವಿಫಲವಾಗುವುದು ಮುಂತಾದ ಅಪೂರ್ಣ ಅಥವಾ ತಪ್ಪಾದ ದಾಖಲೆಗಳಿಂದಲೂ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು. ಕ್ಲೈಮ್ ಸಲ್ಲಿಸುವಾಗ ಆಸ್ಪತ್ರೆ ಬಿಲ್ಗಳು ಮತ್ತು ವೈದ್ಯಕೀಯ ದಾಖಲೆಗಳಂತಹ ಎಲ್ಲ ಅಗತ್ಯ ದಾಖಲೆಗಳನ್ನು ನೀವು ಜೋಡಿಸಿಕೊಳ್ಳಿ.
- ಪಾಲಿಸಿ ಲೋಪಗಳು ಅಥವಾ ಪ್ರೀಮಿಯಂ ಪಾವತಿಸದಿರುವುದು: ಪಾಲಿಸಿದಾರರು ಸಮಯಕ್ಕೆ ಸರಿಯಾಗಿ ಪ್ರೀಮಿಯಂಗಳನ್ನು ಪಾವತಿಸಲು ವಿಫಲವಾದರೆ, ಪಾಲಿಸಿ ಸ್ಥಗಿತಗೊಂಡು ಆ ಅವಧಿಯಲ್ಲಿ ಮಾಡಿದ ಯಾವುದೇ ಕ್ಲೈಮ್ ಅನ್ನು ಕಂಪೆನಿ ನಿರಾಕರಿಸಬಹುದು. ಇದಕ್ಕಾಗಿ ನಿಯಮಿತವಾಗಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಪಾಲಿಸಿಯನ್ನು ಸಕ್ರಿಯವಾಗಿಡುವುದು ಅತ್ಯಗತ್ಯ. ಅವಧಿ ಮೀರಿದ ಪಾಲಿಸಿಯಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
- ಕಾಯುವ ಅವಧಿ: ನೀವು ಕ್ಲೈಮ್ ಮಾಡುವ ಮೊದಲು ಕಾಯುವ ಅವಧಿಗಳನ್ನು ಅರ್ತ ಮಾಡಿಕೊಳ್ಳಿ. ಇದರ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: Money Guide: ನಿಮ್ಮ ಮಕ್ಕಳ ಭವಿಷ್ಯ ಸುಭದ್ರಗೊಳಿಸಲಿದೆ ಎಲ್ಐಸಿಯ ಅಮೃತ್ಬಾಲ್ ಪಾಲಿಸಿ; ಏನಿದು ಯೋಜನೆ?