ಬೆಂಗಳೂರು: ಮನೆಯಲ್ಲಿನ ಕ್ಯಾಲೆಂಡರ್ (New Year 2024) ಬದಲಾಗುವ ಸಮಯ ಬಂದೇ ಬಿಟ್ಟಿತು. 2023ಕ್ಕೆ ಗುಡ್ ಬೈ ಹೇಳಿ ಹೊಸ್ತಿಲಲ್ಲಿ ನಿಂತಿರುವ 2024 ಅನ್ನು ಸ್ವಾಗತಿಸುವ ದಿನ ಸನ್ನಿಹಿತವಾಗಿದೆ. ಈ ವರ್ಷ ಮಾಡಿದ ತಪ್ಪಿನಿಂದ ಪಾಠ ಕಲಿತು ಮುಂದಿನ ವರ್ಷ ಹಾಗಾಗದಂತೆ ಮುನ್ನೆಚ್ಚರಿಕೆಯಿಂದ ನಡೆಯುವುದೇ ಜಾಣತನ ಎನ್ನುತ್ತಾರೆ ತಜ್ಞರು. ಅದರಲ್ಲೂ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ 2024ರಲ್ಲಿ ನಾವು ಯಾವ ರೀತಿ ಶಿಸ್ತನ್ನು ರೂಢಿಸಿಕೊಳ್ಳಬಹುದು ಎನ್ನುವ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಿ
ಉತ್ತಮ ಹಣಕಾಸು ನಿರ್ವಹಣೆಯ ಮೂಲಭೂತ ತತ್ವಗಳಲ್ಲಿ ವೈವಿಧ್ಯೀಕರಣವೂ ಒಂದು. ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸುವುದು ಅಪಾಯವನ್ನು ಕಡಿಮೆ ಮಾಡಲಿರುವ ಅತ್ಯುತ್ತಮ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಸ್ಟಾಕ್, ಬಾಂಡ್, ರಿಯಲ್ ಎಸ್ಟೇಟ್ ಮತ್ತು ಇತರ ಹೂಡಿಕೆಗಳಿಗೆ ಹಣವನ್ನು ಹಂಚಿಕೆ ಮಾಡಿ. ಒಟ್ಟಿನಲ್ಲಿ ಒಂದೇ ಕಡೆ ನಿಮ್ಮ ಹಣವನ್ನು ಹೂಡಿಕೆ ಮಾಡಬೇಡಿ.
ಹಣಕಾಸಿನ ಗುರಿಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಿ
ಜೀವನವು ವಿಕಸನಗೊಂಡಂತೆ ಆರ್ಥಿಕ ಗುರಿಗಳೂ ವೃದ್ಧಿಯಾಗುತ್ತವೆ. ನೀವು ಮನೆಗಾಗಿ ಉಳಿತಾಯ ಮಾಡುತ್ತಿದ್ದೀರಾ? ಮಕ್ಕಳ ಶಿಕ್ಷಣಕ್ಕಾಗಿ ಯೋಜನೆ ರೂಪಿಸುತ್ತಿದ್ದೀರಾ? ಅಥವಾ ನಿವೃತ್ತ ಜೀವನಕ್ಕೆ ಉಳಿತಾಯ ಮಾಡುತ್ತಿದ್ದೀರಾ? ಎನ್ನುವ ಬಗ್ಗೆ ಸ್ಪಷ್ಟ ನಿಲುವು ಇರಲಿ. ಈ ಬಗ್ಗೆ ನಿಯಮಿತವಾಗಿ ಮೌಲ್ಯಮಾಪನ ಮಾಡಿ. ಇದರಿಂದಾಗಿ ಬದಲಾಗುತ್ತಿರುವ ಆದ್ಯತೆಗಳಿಗೆ ಹೊಂದಿಕೆಯಾಗುವಂತೆ ಹಣಕಾಸು ತಂತ್ರಗಳನ್ನು ನೀವು ಸರಿ ಹೊಂದಿಸಬಹುದು.
ಸರ್ಕಾರದ ನೀತಿಗಳ ಬಗ್ಗೆ ಮಾಹಿತಿ ಇರಲಿ
ಸರ್ಕಾರದ ನೀತಿಗಳು ಮತ್ತು ನಿಬಂಧನೆಗಳು ನಿಮ್ಮ ಹಣಕಾಸಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ತೆರಿಗೆ ಕಾನೂನುಗಳು, ನಿವೃತ್ತಿ ಯೋಜನೆಗಳು ಮತ್ತು ಇತರ ಹಣಕಾಸು ನಿಬಂಧನೆಗಳಲ್ಲಿನ ಬದಲಾವಣೆಗಳ ಬಗ್ಗೆ ನಿಯಮಿತವಾಗಿ ಮಾಹಿತಿ ಪಡೆದುಕೊಳ್ಳಿ. ಸರ್ಕಾರದ ನೀತಿಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥ ಮಾಡಿಕೊಂಡರೆ ಮುಂದೆ ಎದುರಾಗಬಹುದಾದ ಸಂಕಷ್ಟದಿಂದ ಪಾರಾಗಬಹುದು. ನಿಮ್ಮ ಹಣಕಾಸಿನ ಯೋಜನೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ನೀತಿ, ಕಾನೂನುಗಳನ್ನು ಹಣಕಾಸು ಸಲಹೆಗಾರರೊಂದಿಗೆ ಚರ್ಚೆ ನಡೆಸಿ.
ನಿಮ್ಮ ತೆರಿಗೆ ಕಾರ್ಯತಂತ್ರವನ್ನು ಮೌಲ್ಯಮಾಪನ ಮಾಡಿ
ತೆರಿಗೆಗಳು ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಮಹತ್ವದ ಅಂಶ. ನಿಮ್ಮ ತೆರಿಗೆ ಕಾರ್ಯತಂತ್ರವನ್ನು ಉತ್ತಮಗೊಳಿಸುವುದು ಗಣನೀಯ ಉಳಿತಾಯಕ್ಕೆ ಕಾರಣವಾಗಬಹುದು. ಗರಿಷ್ಠ ಆದಾಯದೊಂದಿಗೆ ಕಡಿಮೆ ತೆರಿಗೆಯನ್ನು ಆಕರ್ಷಿಸುವ ಇತರ ಹೂಡಿಕೆ ಆಯ್ಕೆಗಳನ್ನು ಅನ್ವೇಷಿಸಿ.
ತುರ್ತು ಹೂಡಿಕೆ ಯೋಜನೆ
ವೈವಿಧ್ಯೀಕರಣ ಮತ್ತು ಸರ್ಕಾರದ ನೀತಿಗಳ ಅರಿವು ಹೊಂದಿದ್ದರೂ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆರ್ಥಿಕವಾಗಿ ಸಿದ್ಧರಾಗಿರುವುದು ಅತ್ಯಗತ್ಯ. ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಅನಿರೀಕ್ಷಿತ ಘಟನೆಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನಿಮ್ಮ ತುರ್ತು ನಿಧಿಯ ಮೇಲೆ ಹೂಡಿಕೆ ಮಾಡಿ. ಅಂದರೆ ಕನಿಷ್ಠ ಮೂರರಿಂದ ಆರು ತಿಂಗಳ ಜೀವನ ವೆಚ್ಚಗಳನ್ನು ಭರಿಸಬಹುದಾದಷ್ಟು ಮೊತ್ತ ನಿಮ್ಮ ಅಕೌಂಟ್‌ನಲ್ಲಿರಲಿ. ಈ ಆರ್ಥಿಕ ಭದ್ರತೆ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ ಮತ್ತು ಅನಿರೀಕ್ಷಿತ ಸವಾಲುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ವಿಸ್ತಾರ Money Guide: ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಎಷ್ಟು ಆದಾಯ ಗಳಿಸಬಹುದು?