Site icon Vistara News

Money Guide: ಷೇರು V/S ಚಿನ್ನ: ಹೂಡಿಕೆಗೆ ಯಾವುದು ಬೆಸ್ಟ್‌? ಇಲ್ಲಿದೆ ತಜ್ಞರ ಸಲಹೆ

Money Guide

ಬೆಂಗಳೂರು: ನಮ್ಮ ಭವಿಷ್ಯ ಉತ್ತಮವಾಗಿರಬೇಕೆಂದರೆ, ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದಿದ್ದರೆ ಬ್ಯಾಂಕ್‌ ಬ್ಯಾಲನ್ಸ್‌ ಚೆನ್ನಾಗಿರಬೇಕು. ಇದಕ್ಕಾಗಿ ಹೂಡಿಕೆಯತ್ತಲೂ ಗಮನ ಹರಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ವೃತ್ತಿ ಜೀವನದ ಆರಂಭಿಕ ದಿನಗಳಲ್ಲೇ ಹೂಡಿಕೆ ಮಾಡಲು ತೊಡಗಬೇಕು. ಭಾರತದಲ್ಲಿ ಹೂಡಿಕೆಯ ವೈವಿಧ್ಯ ಆಯ್ಕೆ ಲಭ್ಯವಿದ್ದು, ಸರಿಯಾಗಿ ಯೋಚಿಸಿ ನಿಮ್ಮ ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವುದನ್ನು ಸೆಲೆಕ್ಟ್‌ ಮಾಡುವುದು ಮುಖ್ಯ. ಈ ಪೈಕಿ ಬಹು ಜನಪ್ರಿಯ ವಿಧವಾದ ಚಿನ್ನದ ಮೇಲೆ ಹೂಡಿಕೆ ಮಾಡೋದು ಉತ್ತಮವಾ ಅಥವಾ ಷೇರುಗಳ ಮೇಲಿನ ಹೂಡಿಕೆ ಉತ್ತಮವಾ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೂಡಿಕೆ ಯಾಕೆ ಮುಖ್ಯ?

ಹೂಡಿಕೆ ಯಾಕೆ ಮುಖ್ಯ? ಹೂಡಿಕೆಯಲ್ಲಿ ತೊಡಗುವ ಮುನ್ನ ಗಮನಿಸಬೇಕಾದ ಅಂಶಗಳು ಯಾವುವು ಎನ್ನುವುದನ್ನು ಮೊದಲು ನೋಡೋಣ. ದಿನ ಕಳೆದಂತೆ ವಸ್ತುಗಳು ದುಬಾರಿಯಾಗುತ್ತಿವೆ. ಜೀವನ ವೆಚ್ಚವೂ ಹೆಚ್ಚುತ್ತಾ ಸಾಗುತ್ತಿದೆ. ಇದರಿಂದ ಸಂಬಳವೊಂದನ್ನೇ ನಂಬಿಕೊಂಡರೆ ಸಾಕಾಗುವುದಿಲ್ಲ. ಹೀಗಾಗಿ ಹೂಡಿಕೆ ಮಾಡುವ ಮೂಲಕ ಆದಾಯ ಗಳಿಸುವತ್ತ ಚಿಂತನೆ ನಡೆಸಬೇಕು ಎನ್ನುತ್ತಾರೆ ತಜ್ಞರು. ಹಾಗಂತ ಕಷ್ಟಪಟ್ಟು ದುಡಿದಿರುವ ಹಣವನ್ನು ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವುದು ಕೂಡ ಜಾಣ ನಡೆಯಲ್ಲ. ಹೀಗಾಗಿ ಯಾವುದೇ ಹೂಡಿಕೆಗೂ ಮುನ್ನ ಆ ಕುರಿತಾಗಿ ಕೂಲಂಕುಷ ಅಧ್ಯಯನ ಮಾಡುವುದನ್ನು ಮರೆಯಬೇಡಿ.

ಈ ಅಂಶಗಳನ್ನು ಗಮನಿಸಿ

ದೇಶದ ಮಧ್ಯಮ ವರ್ಗದವರು ತಮ್ಮ ಸಂಪತ್ತನ್ನು ಹೆಚ್ಚಿಸಲು ಹೂಡಿಕೆ ಅತ್ಯುತ್ತಮ ಮಾರ್ಗವೆಂದು ಪರಿಗಣಿಸುತ್ತಾರೆ. ಗಮನಿಸಿ ಮೊದಲೇ ಹೇಳಿದಂತೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಯಾವಾಗಲೂ ಪರಿಶೀಲಿಸಿದ ನಂತರ ಹೂಡಿಕೆ ಮಾಡಬೇಕು. ಇದರಲ್ಲಿ ಅಲ್ಪಾವಧಿ ಹೂಡಿಕೆ ಮತ್ತು ದೀರ್ಘಾವಧಿಯ ಹೂಡಿಕೆ ಎನ್ನುವ ಎರಡು ವಿಧವಿದೆ. ನಿಮ್ಮ ಹಣಕಾಸಿನ ಗುರಿಗೆ ಅನುಗುಣವಾಗಿ ಇದನ್ನು ಆಯ್ಕೆ ಮಾಡಿ. ಜತೆಗೆ ನಿಮ್ಮ ಹೂಡಿಕೆ ಮೇಲೆ ವಿಧಿಸಲಾಗುವ ತೆರಿಗೆ ಪ್ರಮಾಣವನ್ನೂ ತಿಳಿದುಕೊಳ್ಳಿ.

ಷೇರು V/S ಚಿನ್ನ

ಈ ಬಾರಿ ಬಜೆಟ್‌ ಮಂಡಿಸುವ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 6ಕ್ಕೆ ಇಳಿಸಿದ್ದು, ಹಳದಿ ಲೋಹದತ್ತ ಎಲ್ಲರ ಕಣ್ಣು ನೆಟ್ಟಿದೆ. ಇದರಿಂದ ಈಗಾಗಲೇ ಚಿನ್ನದ ಬೆಲೆ ಕಡಿಮೆಯಾಗಿದೆ. ಇನ್ನೂ ಇಳಿಕೆಯಾಗುವ ಸೂಚನೆ ಇದೆ. ಕಳೆದ ಐದು ವರ್ಷಗಳಲ್ಲಿ ಚಿನ್ನದ ಆದಾಯವು ಷೇರು ಆದಾಯವನ್ನು ಮೀರಿಸಿದೆ. ನಿಫ್ಟಿ 50 ಶೇಕಡಾ 13.95ರಷ್ಟು ಆದಾಯ ತಂದುಕೊಟ್ಟರೆ ಚಿನ್ನ ಶೇ. 16.21ರಷ್ಟು ನೀಡುತ್ತಿದೆ. ಆದಾಗ್ಯೂ ಷೇರುಗಳು 20 ವರ್ಷಗಳವರೆಗಿನ ದೀರ್ಘಾವಧಿಗೆ ಉತ್ತಮ ಆದಾಯವನ್ನು ಒದಗಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಹೂಡಿಕೆ ತಜ್ಞರು 2024ರ ಉತ್ತರಾರ್ಧದಲ್ಲಿ ಎರಡೂ ವಿಧದಲ್ಲಿ ಸ್ಥಿರ ಬೆಳವಣಿಗೆಯನ್ನು ನಿರೀಕ್ಷಿಸುತ್ತಾರೆ. ವರ್ಷಾಂತ್ಯದ ವೇಳೆಗೆ ನಿಫ್ಟಿ 50 25,600ರಿಂದ 26,000 ಅಂಕ ತಲುಪಬಹುದು ಮತ್ತು ಚಿನ್ನದ ಬೆಲೆ 10 ಗ್ರಾಂಗೆ 81,500 ರೂ.ಗೆ ಏರಬಹುದು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಅಜಿತ್ ಮಿಶ್ರಾ ಹೇಳಿದ್ದಾರೆ. ಹೀಗಾಗಿ ಸಮತೋಲಿತ ವಿಧಾನವನ್ನು ಕಾಪಾಡಿಕೊಳ್ಳಲು ಹಣವನ್ನು ಹಂಚಿಕೆ ಮಾಡಲು ಅವರು ಸಲಹೆ ನೀಡುತ್ತಾರೆ.

ಮೆಹ್ತಾ ಇಕ್ವಿಟೀಸ್ ಲಿಮಿಟೆಡ್‌ನ ರಾಹುಲ್ ಕಲಾಂತ್ರಿ ಅವರು, ಚಿನ್ನದ ಮಾನ್ಯತೆಯನ್ನು ಹೆಚ್ಚಿಸಲು ಪೋರ್ಟ್‌ಫೋಲಿಯೊ ಸರಿಹೊಂದಿಸಲು ಸಲಹೆ ನೀಡುತ್ತಾರೆ. ಚಿನ್ನದ ಮೇಲಿನ ಹಂಚಿಕೆಯನ್ನು ಶೇ. 10-15ರಿಂದ ಶೇ. 30-35ಕ್ಕೆ ಹೆಚ್ಚಿಸಬೇಕು ಎಂದಿದ್ದಾರೆ.

ಪ್ರಸ್ತುತ, ಷೇರುಗಳು ಮತ್ತು ಚಿನ್ನ ಎರಡೂ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಇವೆರಡೂ ವಿಭಿನ್ನ ಹೂಡಿಕೆ ಉದ್ದೇಶಗಳನ್ನು ಪೂರೈಸುತ್ತಿವೆ. ದೀರ್ಘಾವಧಿಯಲ್ಲಿನ ಆದಾಯಕ್ಕೆ ಷೇರುಗಳು ಹೆಸರುವಾಸಿಯಾದರೆ ಇದಕ್ಕೆ ವಿರುದ್ಧವಾಗಿ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ಚಿನ್ನವನ್ನು ಅಮೂಲ್ಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಎರಡರಲ್ಲೂ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

Exit mobile version