ಬೆಂಗಳೂರು: ಪ್ರಸ್ತುತ ಯಾವುದೇ ಸಾಲ ಮಾಡದೆ ಜೀವನ ಸಾಗಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅದರಲ್ಲೂ ಮಧ್ಯಮ ವರ್ಗದ ಜನರು ಒಂದಲ್ಲ ಒಂದು ಕಾರಣಕ್ಕೆ ಸಾಲವನ್ನು ಮಾಡಲೇಬೇಕು ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಬ್ಯಾಂಕ್‌ನಿಂದ ಪರ್ಸನಲ್ ಲೋನ್ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಒಂದು ವೇಳೆ ಸಾಲ ಮಂಜೂರಾದರೂ ಅದಕ್ಕಿರುವ ಬಡ್ಡಿದರ ಹೆಚ್ಚಾಗಿರುತ್ತದೆ. ಹಾಗಾದರೆ ಇದಕ್ಕಿರುವ ಪರ್ಯಾಯ ಮಾರ್ಗಗಳೇನು? ಇಂದಿನ ಮನಿಗೈಡ್ (Money Guide)ನಲ್ಲಿದೆ ಉತ್ತರ.
ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಸಾಲ ಪಡೆದುಕೊಳ್ಳುವ ಸೌಲಭ್ಯವೂ ಈಗ ಲಭ್ಯ. ಮೊಬೈಲ್ ಸಹಾಯದಿಂದ ಆನ್‌ಲೈನ್ ಮೂಲಕವೇ ಲೋನ್ ಪಾಸ್ ಮಾಡಿಸಬಹುದು. ಅಂತಹ ವಿವಿಧ ಸಾಲ ಸೌಲಭ್ಯಗಳ ವಿವರ ಇಲ್ಲಿದೆ.
ಪಿಪಿಎಫ್
ನೀವು ಉದ್ಯೋಗದಲ್ಲಿದ್ದರೆ ಸಾರ್ವಜನಿಕ ಭವಿಷ್ಯ ನಿಧಿಯಿಂದ (PPF) ಸಾಲ ತೆಗೆದುಕೊಳ್ಳಬಹುದು. ನಿಮ್ಮ ಪಿಪಿಎಫ್‌ನಲ್ಲಿರುವ ಹಣದ ಮೇಲೆ ನೀವು ಸಾಲವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಕನಿಷ್ಠ ಒಂದು ವರ್ಷದವರೆಗೆ ಪಿಪಿಎಫ್ ಖಾತೆಯನ್ನು ಹೊಂದಿರುವುದು ಅಗತ್ಯ. ನಿಮ್ಮ ಪಿಪಿಎಫ್ ಖಾತೆಯಲ್ಲಿರುವ ಮೊತ್ತದ ಆಧಾರದ ಮೇಲೆ ಸಾಲ ದೊರೆಯುತ್ತದೆ. ಪರ್ಸನಲ್ ಲೋನ್‌ಗೆ ಹೋಲಿಸಿದರೆ ಇದರಲ್ಲಿ ಬಡ್ಡಿದರ ಕಡಿಮೆ.
ಚಿನ್ನದ ಮೇಲಿನ ಸಾಲ
ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದ ಮೂಲವಾಗಿಯೂ ಕಷ್ಟಕಾಲದಲ್ಲಿ ನೆರವಾಗುತ್ತದೆ. ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲ 2ರಿಂದ 3 ದಿನಗಳಲ್ಲಿ ದೊರೆಯುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (Non-banking Financial Company)ಗಳು 1.5 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ನೀಡುತ್ತವೆ. ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 8ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್ ಇನ್ಶೂರೆನ್ಸ್; ಏನಿದರ ಮಹತ್ವ?
ಎಲ್‌ಐಸಿ
ನಿಮ್ಮ ಬಳಿ ಎಲ್ಐಸಿ ಪಾಲಿಸಿ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಗೋಲ್ಡ್ ಲೋನ್ ಸಂದರ್ಭದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಚಿನ್ನಾಭರಣ ಇಡುವಂತೆ ಇಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇಡಬೇಕಾಗುತ್ತದೆ. ಒಂದು ವೇಳೆ ಸಾಲ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ಐಸಿ ಪಾಲಿಸಿಯಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಎಲ್‌ಐಸಿ ಸಾಲ ಪಡೆಯಲು ನೀವು ಕನಿಷ್ಠಪಕ್ಷ ಮೂರು ವರ್ಷಗಳ ಪ್ರೀಮಿಯಂ ಕಟ್ಟಿರಬೇಕು. ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು, ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರುವುದು ಮುಖ್ಯ. ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಜತೆಗೆ ಬಡ್ಡಿದರವನ್ನು ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಲೋನ್ ಹಣವನ್ನು ಪಡೆದುಕೊಳ್ಳಬಹುದು. ಸಾಲದ ಮರುಪಾವತಿಯ ಅವಧಿ ಕನಿಷ್ಠ ಆರು ತಿಂಗಳಿಂದ ಪ್ರಾರಂಭಿಸಿ ಗರಿಷ್ಠ ಐದು ವರ್ಷಗಳವರೆಗೆ ಇರುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ