ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ (Online shopping) ಜನಪ್ರಿಯವಾಗುತ್ತಿದೆ. ಒಂದೇ ಕಡೆ ಹಲವು ಆಯ್ಕೆ, ಕಡಿಮೆ ಬೆಲೆ ಮತ್ತು ಸಮಯದ ಉಳಿತಾಯ ಹೀಗೆ ನಾನಾ ಕಾರಣಗಳಿಂದ ಇದು ಗ್ರಾಹಕರ ಮನ ಗೆದ್ದಿದೆ. ಇದಕ್ಕಾಗಿಯೇ ಇರುವ ನಾನಾ ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಕೊಡುಗೆ ಪ್ರಕಟಿಸಿ ಇನ್ನಷ್ಟು ಆಕರ್ಷಿಸುತ್ತದೆ. ಇದರ ಜತೆಗೆ ಕೆಲವೊಮ್ಮೆ ವಂಚನೆಯೂ ನಡೆಯುತ್ತದೆ. ಆರ್ಡರ್ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್ ಮೂಲಕ ಬರುತ್ತದೆ! ಕೆಲವೊಂದು ಫೇಕ್ ವೆಬ್‌ಸೈಟ್‌ಗಳು ಆರ್ಡರ್ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತವೆ. ಹೀಗಾಗಿ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಇಂದಿನ ಮನಿಗೈಡ್ (Money Guide)ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.
ಮಾರಾಟಗಾರರ ಹಿನ್ನಲೆ
ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಖರೀದಿಸುವ ಮುನ್ನ ಮಾರಾಟಗಾರರ ಹಿನ್ನಲೆ ಪರಿಶೀಲಿಸಿ. ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಆಕರ್ಷಕ ಕೊಡುಗೆ ಪ್ರಕಟಿಸಿ ಫೇಕ್ ವೆಬ್‌ಸೈಟ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಇವರು ಕ್ಯಾಷ್ ಆನ್ ಡೆಲಿವರಿ ಆಯ್ಕೆಯನ್ನು ಹೊಂದಿರುವುದಿಲ್ಲ. ನೀವು ಆರ್ಡರ್ ಮಾಡುವಾಗಲೇ ಹಣ ಪಾವತಿಸಬೇಕಾಗುತ್ತದೆ. ಒಮ್ಮೆ ನೀವು ಹಣ ಪಾವತಿಸಿದರೆ ಬಳಿಕ ಸಂಪರ್ಕಕ್ಕೇ ಸಿಗುವುದಿಲ್ಲ. ಜತೆಗೆ ನೀವು ಆರ್ಡರ್ ಮಾಡಿದ ಉತ್ಪನ್ನವೂ ನಿಮ್ಮನ್ನು ತಲುಪುವುದಿಲ್ಲ. ಇನ್ನು ಕೆಲವೊಮ್ಮೆ ಇಂತಹ ಅನಧಿಕೃತ ವೆಬ್‌ಸೈಟ್‌ಗಳು ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತವೆ. ಆಕರ್ಷಕ ಫೋಟೊ ತೋರಿಸಿ ಹಾಳಾದ ಉತ್ಪನ್ನ ಅಥವಾ ಬೇರೆಯದೇ ಪ್ರಾಡಕ್ಟ್ ಕಳುಹಿಸುತ್ತವೆ. ಹೀಗಾಗಿ ವೆಬ್‌ಸೈಟ್ ಅಧಿಕೃತವೇ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಿ. ವೆಬ್‌ಸೈಟ್ ಸುರಕ್ಷಿತ ಪಾವತಿ ವಿಧಾನ, ಸೂಕ್ತ ರಿಟರ್ನ್ ಪಾಲಿಸಿಗಳು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಗ್ರಾಹಕ ರಿವ್ಯೂ ಕೂಡ ಗಮನಿಸಿ.
ಉತ್ಪನ್ನದ ರಿವ್ಯೂ ಗಮನಿಸಿ
ರಿಯಾಯಿತಿ ಇದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳಬೇಡಿ. ಖರೀದಿಸುವ ಮುನ್ನ ಆ ಉತ್ಪನ್ನಕ್ಕೆ ಗ್ರಾಹಕರು ಕೊಟ್ಟಿರುವ ರಿವ್ಯೂ ಪರಿಶೀಲಿಸಿ. ಜಾಹೀರಾತು, ಮಾರಾಟಗಾರರ ಮಾತನ್ನು ಪೂರ್ಣವಾಗಿ ನಂಬಬೇಡಿ. ಗ್ರಾಹಕ ರಿವ್ಯೂ ಗಮನಿಸಿ ಅಲ್ಲಿ ಸಕಾರಾತ್ಮಕ ಪ್ರಕ್ರಿಯೆಗಿಂತ ನಕಾರಾತ್ಮಕ ಅಭಿಮತವೇ ಹೆಚ್ಚಿದ್ದರೆ ಖರೀದಿಸಬೇಡಿ.
ಶಿಪ್ಪಿಂಗ್ ಚಾರ್ಜ್ ಮತ್ತು ಸಮಯ
ನೀವು ಖರೀದಿಸಲು ಬಯಸುವ ಉತ್ಪನ್ನಕ್ಕೆ ವಿಧಿಸುವ ಶಿಪ್ಪಿಂಗ್ ಜಾರ್ಜ್ ಅನ್ನು ಗಮನಿಸಿ. ಜತೆಗೆ ಅದು ಯಾವಾಗ ತಲುಪುತ್ತದೆ ಎನ್ನುವುದನ್ನೂ ಪರಿಶೀಲಿಸಿ. ಕೆಲವೊಂದು ಆನ್‌ಲೈನ್ ಅಪ್ಲಿಕೇಷನ್‌ಗಳು ಶಿಪ್ಪಿಂಗ್ ಜಾರ್ಜ್ ಇಲ್ಲದೆ ಡೆಲಿವರಿ ಮಾಡುತ್ತವೆ. ಆದರೆ ಉತ್ಪನ್ನ ತಲುಪಲು ಹೆಚ್ಚಿನ ಸಮಯ ತಗಲುತ್ತದೆ. ಹೀಗಾಗಿ ಈ ಅಂಶದ ಬಗ್ಗೆ ಗಮನ ಹರಿಸಿ. ಜತೆಗೆ ಶಿಪ್ಪಿಂಗ್ ಜಾರ್ಜ್ ಮತ್ತು ಪ್ರಾಡಕ್ಟ್ ನಿಮ್ಮ ಕೈ ಸೇರಲಿರುವ ದಿನಗಳನ್ನು ಬೇರೆ ಆ್ಯಪ್‌ಗಳೊಂದಿಗೆ ಹೋಲಿಸಿ ನೋಡಿ. ವಿದೇಶಗಳಿಂದ ನೀವು ಉತ್ಪನ್ನ ಖರೀದಿಸುತ್ತಿದ್ದರೆ ಇದರ ಮೇಲೆ ವಿಧಿಸುವ ತೆರಿಗೆಯೂ ನಿಮ್ಮ ಗಮನದಲ್ಲಿರಲಿ.
ರಿಟರ್ನ್ ಪಾಲಿಸಿ ಅರ್ಥ ಮಾಡಿಕೊಳ್ಳಿ
ಆನ್‌ಲೈನ್ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದರ ರಿಟರ್ನ್ ಪಾಲಿಸಿಯನ್ನು. ಹೆಚ್ಚಿನ ಅಪ್ಲಿಕೇಷನ್‌ಗಳು ಉತ್ಪನ್ನಗಳನ್ನು ಹಿಂದಿರುಗಿಸಲು 20-30 ದಿನಗಳ ಕಾಲಾವಕಾಶ ನೀಡುತ್ತವೆ. ಕೆಲವೊಮ್ಮೆ ಉತ್ಪನ್ನ, ಮಾರಾಟಗಾರರನ್ನು ಹೊಂದಿಕೊಂಡು ಈ ನಿಯಮದಲ್ಲಿ ವ್ಯತ್ಯಾಸಗಳಿರುತ್ತವೆ. ಜತೆಗೆ ರಿಟರ್ನ್ ಮಾಡುವಾಗ ಶಿಪ್ಪಿಂಗ್ ಚಾರ್ಜ್ ಇದೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಸಮರ್ಪಕ ರಿಟರ್ನ್ ಪಾಲಿಸಿಯಿಂದ ನಿಮ್ಮ ಹಣ ವ್ಯರ್ಥವಾಗುವುದನ್ನು ತಡೆಯಬಹುದು.
ಬೆಲೆ ಹೋಲಿಕೆ ಮಾಡಿ
ನಾವು ಅಂಗಡಿಗೆ ತೆರಳಿ ಶಾಪಿಂಗ್ ಮಾಡುವಾಗ ವಿವಿಧ ಕಡೆಗಳ ಬೆಲೆ ಹೋಲಿಸಿ ನೋಡುವಂತೆ ವಿವಿಧ ಅಪ್ಲಿಕೇಷನ್, ವೆಬ್‌ಸೈಟ್‌ಗಳಲ್ಲಿನ ಬೆಲೆಯನ್ನು ಪರಿಶೀಲಿಸಿ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು. ಜತೆಗೆ ಹಲವು ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಪ್ರಕಟಿಸುವ ವಿಶೇಷ ಕೊಡುಗೆ, ರಿಯಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ. ಕೆಲವೊಮ್ಮೆ ಕೂಪನ್‌ಗಳೂ ಲಭ್ಯ. ಇದರ ಲಾಭ ಪಡೆಯಿರಿ.
ಪಾವತಿ ವಿಧಾನ ಚೆಕ್ ಮಾಡಿ
ಹಲವು ಆನ್‌ಲೈನ್ ಸ್ಟೋರ್‌ಗಳು ಪಾವತಿಗಾಗಿ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಕೆಲವೊಮ್ಮೆ ಎಲ್ಲ ರೀತಿಯ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಆರ್ಡರ್ ಮಾಡುವ ಮುನ್ನ ನಿಮಗೆ ಅನುಕೂಲವಾಗುವ ಪಾವತಿ ವಿಧಾನ ಇದೆಯೇ ಎನ್ನುವುದನ್ನು ಚೆಕ್ ಮಾಡಿ. ನಿಮ್ಮ ಪಾವತಿಯ ಸುರಕ್ಷತೆಯನ್ನು ಗಮನಿಸಲು ಮರೆಯಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನೂ ಖಚಿತಪಡಿಸಿ.
ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ
ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಫೋನ್ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಆದಷ್ಟು ಕ್ಯಾಷ್ ಆನ್ ಡೆಲಿವರಿ (Cash on delivery)ಯನ್ನೇ ಆಯ್ಕೆ ಮಾಡಿ. ಜತೆಗೆ ಉತ್ಪನ್ನ ಬಂದಾಗ ಡೆಲಿವರಿ ಬಾಯ್ ಎದುರಿನಲ್ಲೇ ಓಪನ್ ಮಾಡಿ. ಒಂದು ವೇಳೆ ಇದೂ ಆಗಿಲ್ಲ ಎಂದಾದರೆ ಪಾರ್ಸೆಲ್ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ