ಬೆಂಗಳೂರು: ಯಾವುದೇ ಉದ್ಯೋಗವಿರಲಿ ಪ್ರಸ್ತುತ ಇನ್ಶೂರೆನ್ಸ್ ಜತೆಗೆ ಹೆಲ್ತ್ ಇನ್ಶೂರೆನ್ಸ್ (Health Insurance) ಕೂಡ ಅತ್ಯಗತ್ಯ. ಯಾವಾಗ, ಯಾವ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದರಂತೆ ಆರಂಭದಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಮಾಡಿಸುವುದು ಅಗತ್ಯ ಎನ್ನುತ್ತಾರೆ ತಜ್ಞರು. ಆದರೆ ಕೆಲವೊಮ್ಮೆ ಹೆಲ್ತ್ ಇನ್ಶೂರೆನ್ಸ್ ಕೊಳ್ಳುವಾಗ ತಪ್ಪು ಹೆಜ್ಜೆ ಇಡುತ್ತೇವೆ. ಹೆಚ್ಚಿನ ಆರೋಗ್ಯ ವಿಮಾ ಏಜೆಂಟರು ಪ್ರಾಮಾಣಿಕ ಮತ್ತು ಪಾರದರ್ಶಕ ಮಾಹಿತಿಯನ್ನು ಒದಗಿಸಿದರೂ, ಕೆಲವು ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸದೆ ಭವಿಷ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ನಾವು ಹೆಲ್ತ್ ಇನ್ಶೂರೆನ್ಸ್ ಮಾಡಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ಎನ್ನುವ ವಿವರ ಇಂದಿನ ಮನಿಗೈಡ್(Money Guide)ನಲ್ಲಿದೆ.
ಕಾರಣವೇನು?
ಏಜೆಂಟರು ಸಂಪೂರ್ಣ ಮಾಹಿತಿ ನೀಡದಿರಲು ಕೆಲವು ಕಾರಣಗಳಿವೆ. ಅವರು ಮಾರಾಟ ಮಾಡುವ ಯೋಜನೆಗಳ ಆಧಾರದ ಮೇಲೆ ಕಮಿಷನ್ ಗಳಿಸುತ್ತಾರೆ. ಹೀಗಾಗಿ ಅವರು ಕೆಲವೊಮ್ಮೆ ಹೆಚ್ಚಿನ ಲಾಭ ಬರುವ ಯೋಜನೆಯನ್ನು ಕೊಂಡುಕೊಳ್ಳುವಂತೆ ಒತ್ತಾಯಿಸಬಹುದು. ಕೆಲವೊಮ್ಮೆ ಏಜೆಂಟರು ಮಾರಾಟ ಕೋಟಾಗಳನ್ನು ಪೂರೈಸಲು ಒತ್ತಡವನ್ನು ಅನುಭವಿಸಬಹುದು. ಇದು ಯೋಜನೆಯ ಎಲ್ಲ ವಿವರಗಳನ್ನು ಸಂಪೂರ್ಣವಾಗಿ ವಿವರಿಸುವ ಬದಲು ಒಪ್ಪಂದವನ್ನು ತ್ವರಿತವಾಗಿ ಮುಕ್ತಾಯಗೊಳಿಸುವತ್ತ ಗಮನ ಹರಿಸುವಂತೆ ಮಾಡಬಹುದು. ಎಲ್ಲ ಕಾರಣಗಳಿಂದ ನೀವು ಹೆಲ್ತ್ ಇನ್ಶೂರೆನ್ಸ್ ಮಾಡಿಸುವಾಗ ಸಂಪೂರ್ಣ ವಿವರಗಳನ್ನು ಪರಿಶೀಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಈ ಅಂಶಗಳನ್ನು ಗಮನಿಸಿ
- ವಿನಾಯಿತಿಗಳು ಮತ್ತು ಮಿತಿಗಳು: ಏಜೆಂಟರು ಕೆಲವೊಮ್ಮೆ ಆರೋಗ್ಯ ವಿಮಾ ಪಾಲಿಸಿಯ ಎಲ್ಲ ವಿನಾಯಿತಿ ಮತ್ತು ಮಿತಿಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವುದಿಲ್ಲ. ನೀವು ಖರೀದಿಸಲು ಉದ್ದೇಶಿಸಿರುವ ಪಾಲಿಸಿ ಆಸ್ಪತ್ರೆ ವೆಚ್ಚಗಳು, ಹೊರರೋಗಿ ವೆಚ್ಚಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಂತಹ ವಿಷಯಗಳನ್ನು ಒಳಗೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ. ಯಾವುದನ್ನು ಒಳಗೊಂಡಿದೆ ಮತ್ತು ಯಾವುದನ್ನು ಒಳಗೊಂಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪಾಲಿಸಿ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
- ಪರ್ಯಾಯ ಚಿಕಿತ್ಸಾ ವ್ಯಾಪ್ತಿ: ಆಯುರ್ವೇದ, ಯೋಗ ಮತ್ತು ಇತರ ಆಯುಷ್ ಚಿಕಿತ್ಸೆಗಳು ನಿಮಗೆ ಮುಖ್ಯವಾಗಿದ್ದರೆ ಅವುಗಳ ವ್ಯಾಪ್ತಿಯ ಬಗ್ಗೆ ಕೇಳಿ. ಎಲ್ಲ ಯೋಜನೆಗಳು ಅವುಗಳನ್ನು ಒಳಗೊಳ್ಳುವುದಿಲ್ಲ.
- ಉಪ-ಮಿತಿಗಳು: ಕೆಲವು ಆರೋಗ್ಯ ವಿಮಾ ಪಾಲಿಸಿಗಳು ಕೊಠಡಿ ಬಾಡಿಗೆ, ವೈದ್ಯರ ಶುಲ್ಕ ಅಥವಾ ನಿರ್ದಿಷ್ಟ ಚಿಕಿತ್ಸೆಗಳಂತಹ ಕೆಲವು ಪ್ರಯೋಜನಗಳ ಮೇಲೆ ಉಪ-ಮಿತಿಗಳನ್ನು ಹೊಂದಿರುತ್ತವೆ. ಏಜೆಂಟರು ಈ ಉಪ-ಮಿತಿಗಳನ್ನು ತಿಳಿಸದೇ ಇರಬಹುದು. ಇದು ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಾಕಷ್ಟು ದುಡ್ಡು ಖರ್ಚಾಗಲು ಕಾರಣವಾಗಬಹುದು. ಆದ್ದರಿಂದ ಈ ಬಗ್ಗೆ ಕೇಳಿ ತಿಳಿದುಕೊಳ್ಳಿ.
- ಕ್ಲೈಮ್ ಇತ್ಯರ್ಥ ಪ್ರಕ್ರಿಯೆ: ಏಜೆಂಟರು ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ಅಥವಾ ಕ್ಲೈಮ್ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸದಿರಬಹುದು. ಆಸ್ಪತ್ರೆಗೆ ದಾಖಲಾದಾಗ ಅಥವಾ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಸುಗಮ ಮತ್ತು ಸಮಯೋಚಿತ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಕ್ಲೈಮ್ ಕಾರ್ಯವಿಧಾನವನ್ನು ಮೊದಲೇ ಅರ್ಥ ಮಾಡಿಕೊಳ್ಳುವುದು ಮುಖ್ಯ.
- ಕಾಯುವ ಅವಧಿ: ಆರೋಗ್ಯ ವಿಮಾ ಪಾಲಿಸಿಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆ, ಹೆರಿಗೆ ಪ್ರಯೋಜನಗಳು ಅಥವಾ ಕೆಲವು ಚಿಕಿತ್ಸೆಗಳಂತಹ ನಿರ್ದಿಷ್ಟ ವಿಚಾರಗಳಿಗೆ ಕಾಯುವ ಅವಧಿ ಹೊಂದಿರುತ್ತವೆ. ಏಜೆಂಟರು ಇಂತಹ ಕಾಯುವ ಅವಧಿಗಳಿಗೆ ಒತ್ತು ನೀಡದೇ ಇರಬಹುದು. ಇದನ್ನು ಕೇಳಿ ತಿಳಿದುಕೊಳ್ಳಿ.
- ಸರಿಯಾಗಿ ಓದದೇ ಸಹಿ ಮಾಡಬೇಡಿ: ಯಾವುದೇ ಪಾಲಿಸಿಗೆ ಸಹಿ ಹಾಕುವ ಮುನ್ನ ಷರತ್ತ ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಬೇಕು. ಪ್ರತಿ ಆರೋಗ್ಯ ವಿಮಾ ಪಾಲಿಸಿಯು ಎಲ್ಲ ವ್ಯಾಪ್ತಿಯನ್ನು ಒಳಗೊಳ್ಳುವುದಿಲ್ಲ. ಪಾಲಿಸಿಯನ್ನು ಖರೀದಿಸುವ ಮೊದಲು ವಿನಾಯಿತಿಗಳನ್ನು ಅರ್ಥಮಾಡಿಕೊಳ್ಳಲು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ