ಬೆಂಗಳೂರು: ಹೆಣ್ಣು ಮಕ್ಕಳನ್ನು ಈ ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂದು ಹೆಣ್ಣು ಮಕ್ಕಳು ತಮ್ಮ ಇತಿಮಿತಿಯನ್ನು ಮೀರಿ ಎಲ್ಲ ರಂಗದಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಆದರೂ ಲಿಂಗ ಅಸಮಾನತೆ ಎನ್ನುವುದು ಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಹೆಣ್ಣು-ಗಂಡು ಎಂಬ ತಾರತಮ್ಯ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಪರಿಸ್ಥಿತಿಯನ್ನು ತೊಡೆದು ಹಾಕಲು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಇಂದಿನ ಮನಿಗೈಡ್ (Money Guide)ನಲ್ಲಿ ದೇಶದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ವಿವರಿಸಲಾಗಿದೆ.
ಬೇಟಿ ಬಚಾವೋ, ಬೇಟಿ ಪಡಾವೋ (BBBP) ಯೋಜನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಪ್ರಾರಂಭಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಲಿಂಗ ಆಧಾರಿತ ತಾರತಮ್ಯವನ್ನು ಪರಿಹರಿಸುವ ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಿಲ್ಲಾ ಮಟ್ಟದ ಉಪಕ್ರಮಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಲಿಂಗ ಆಧಾರಿತ ಗರ್ಭಪಾತವನ್ನು ತಡೆಗಟ್ಟುವುದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಶಿಕ್ಷಣವನ್ನು ಬೆಂಬಲಿಸುವುದು ಮುಂತಾದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.
ಸಿಬಿಎಸ್ಇ ಉಡಾನ್ (CBSE Udaan) ಯೋಜನೆ
ಈ ಯೋಜನೆಯನ್ನು ಮುಖ್ಯವಾಗಿ 11 ಮತ್ತು 12ನೇ ತರಗತಿಯ ಹುಡುಗಿಯರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಉಚಿತ ಕಲಿಕಾ ಉಪಕರಣಗಳ ವಿತರಣೆ, ವರ್ಚುವಲ್ ತರಗತಿ ಆಯೋಜನೆ ಮತ್ತು ವೃತ್ತಿ ಮಾರ್ಗದರ್ಶನವನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ. 70 ಅಂಕ ಪಡೆಯುವುದು ಕಡ್ಡಾಯ.
ಬಾಲಿಕಾ ಸಮೃದ್ಧಿ (Balika Samriddhi) ಯೋಜನೆ
ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. ಅವರ ಶಿಕ್ಷಣಕ್ಕೆ ನೆರವಾಗುವುದು ಈ ಯೋಜನೆ ಉದ್ದೇಶ. ಜನನದ ಸಮಯದಲ್ಲಿ ನಗದು ಹಸ್ತಾಂತರ ಮತ್ತು 18 ವರ್ಷದವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತದೆ.
ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಧನ ಸಹಾಯ ಮಾಡಲು ನೆರವಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹೆಣ್ಣು ಮಗು ಮತ್ತು ಅವಳ ಆರ್ಥಿಕ ಅಗತ್ಯಗಳಿಗಾಗಿ ಸರ್ಕಾರದ ಬೆಂಬಲಿತ ಸಣ್ಣ ಡೆಪಾಸಿಟ್ ಯೋಜನೆಯಾಗಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯಿಂದ ಸಿಗುವ ಬಡ್ಡಿ ಅಥವಾ ಉಳಿತಾಯ ಹಣಕ್ಕೆ ತೆರಿಗೆ ಕಟ್ಟುವ ಆವಶ್ಯಕತೆ ಕೂಡ ಇರುವುದಿಲ್ಲ. ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು, ಅಲ್ಲಿ ನೀವು ಕನಿಷ್ಠ 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಇಡಬೇಕು.
ಮಾಧ್ಯಮಿಕ ಶಿಕ್ಷಣದ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ (National Scheme of Incentive for Girls of Secondary Education) ಯೋಜನೆ
ಶಿಕ್ಷಣ ವಂಚಿತ ಹುಡುಗಿಯರ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 3,000 ರೂ.ಗಳ ಸ್ಥಿರ ಠೇವಣಿಯನ್ನು ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್ ಅಪ್ ಲೋನ್‌ಗೆ ಅಪ್ಲೈ ಮಾಡಿ
ಇದಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕದ ಭಾಗ್ಯಶ್ರೀ ಯೋಜನೆ, ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮೀ ಯೋಜನೆ, ಮಹಾರಾಷ್ಟ್ರದ ಮಾಝಿ ಕನ್ಯಾ ಭಾಗ್ಯಶ್ರೀ ಯೋಜನೆ, ತಮಿಳುನಾಡಿನ ಮುಖ್ಯಮಂತ್ರಿಯ ಹೆಣ್ಣು ಮಕ್ಕಳ ರಕ್ಷಣೆ ಯೋಜನೆ ಇತ್ಯಾದಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿವೆ.