ಬೆಂಗಳೂರು: ನಿರ್ದಿಷ್ಟ ಆದಾಯದ ಸ್ಲ್ಯಾಬ್‌ಗಿಂತ ಹೆಚ್ಚಿನ ವೇತನವನ್ನು ಹೊಂದಿರುವ ಪ್ರತಿಯೊಬ್ಬರೂ ವಾರ್ಷಿಕವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಇದನ್ನು ಫೈಲ್ ಮಾಡಬೇಕಾಗುತ್ತದೆ. ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಮಾಡಬೇಕು. ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ಇದರಿಂದ ಭವಿಷ್ಯದಲ್ಲಿ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಪೈಕಿ ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸುವ ಲಾಭಕ್ಕೆ ಸರಿಹೊಂದಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಅವಧಿ ಮುಗಿಯುವ ಮೋದಲೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಬಗ್ಗೆ ಹೆಚ್ಚಿನ ವಿವರ ಮನಿಗೈಡ್ (Money Guide) ನೀಡಲಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇದೆ ವಿವಿಧ ಮಾರ್ಗ
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿವಿಧ ಫಾರ್ಮ್‌ಗಳು ಲಭ್ಯ. ITR-1, ITR-2, ITR-3, ITR-4, ITR-5, ITR-6 ಮತ್ತು ITR-7 ಫಾರ್ಮ್‌ಗಳ ಪೈಕಿ ನಿಮ್ಮ ಆದಾಯದ ಮೂಲಗಳು, ಗಳಿಸಿದ ಮೊತ್ತ ಮತ್ತು ನೀವು ಯಾವ ವರ್ಗಕ್ಕೆ ಸೇರಿದ್ದೀರಿ ಎಂಬುದರ ಆಧಾರದ ಮೇಲೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ ರಿಟರ್ನ್ ಫಾರ್ಮ್ ಅನ್ನು ಹಣಕಾಸು ವರ್ಷದ ಕೊನೆಯ ತಿಂಗಳುಗಳಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬಿಡುಗಡೆ ಮಾಡುತ್ತದೆ.
ಯಾವ ಫಾರ್ಮ್ ಯಾವ ವಿಭಾಗಕ್ಕೆ?
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ತೆರಿಗೆ ಇಲಾಖೆ ಸೂಚಿಸಿದ 7 ಫಾರ್ಮ್‌ಗಳ ಪೈಕಿ ಯಾವ ವಿಭಾಗಕ್ಕೆ ಯಾವುದು ಎನ್ನುವ ವಿವರ ಇಲ್ಲಿದೆ.
ITR-1
ಭಾರತದಲ್ಲಿ ನೆಲೆಸಿರುವ ಸಾಮಾನ್ಯ ನಾಗರಿಕರು ಮತ್ತು 50 ಲಕ್ಷ ರೂ. ಆದಾಯವನ್ನು ಹೊಂದಿರುವವರು ಐಟಿಆರ್-1 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಸಂಬಳ, ಮನೆಯಿಂದ ಬರುವ ಆದಾಯ, ಇತರ ಮೂಲಗಳಿಂದ ಬರುವ ಆದಾಯ, ಸಂಗಾತಿ ಅಥವಾ ಮಕ್ಕಳಿಂದ ಬರುವ ಆದಾಯ ಸೇರಿ ಎಲ್ಲವೂ 50 ಲಕ್ಷ ರೂ. ಇದ್ದರೆ ಐಟಿಆರ್-1ರ ಅಡಿ ರಿಟರ್ನ್ಸ್ ಸಲ್ಲಿಸಬೇಕು.
ITR-2
50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿ, ಕಂಪೆನಿಯ ನಿರ್ದೇಶಕರು, ಈಕ್ವಿಟಿ ಷೇರುಗಳನ್ನು ಹೊಂದಿರುವವರು ಈ ಐಟಿಆರ್ ಫಾರ್ಮ್-2 ಅನ್ನು ಸಲ್ಲಿಸಬೇಕು. ಜತೆಗೆ ಮಾಸಿಕ ಸಂಬಳ ಹೊಂದಿರುವವರು, ಬಂಡವಾಳ ಲಾಭಗಳು, ವಿದೇಶಗಳಲ್ಲಿ ಆಸ್ತಿಗಳು ಮತ್ತು ಆದಾಯದ ಮಾರ್ಗಗಳನ್ನು ಹೊಂದಿರುವವರೂ ಇದೇ ವರ್ಗಕ್ಕೆ ಬರುತ್ತಾರೆ.
ITR-3
ವೃತ್ತಿ, ವ್ಯಾಪಾರ ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಮತ್ತು ಲಾಭ ಗಳಿಸುವ ವ್ಯಕ್ತಿಗಳು 50 ಲಕ್ಷ ರೂ. ವರಮಾನ ಹೊಂದಿದ್ದರೆ ಈ ಫಾರ್ಮ್ (ಐಟಿಆರ್-3) ಸಲ್ಲಿಸಬೇಕು.
ITR-4
50 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಸಂಸ್ಥೆಗಳು, ವೃತ್ತಿ ಮತ್ತು ವ್ಯವಹಾರದ ಮೂಲಕ ಆದಾಯ ಗಳಿಸುವ ವ್ಯಕ್ತಿಗಳು ಐಟಿಆರ್-4 ಅನ್ನು ಸಲ್ಲಿಸಬೇಕು.
ITR-5
ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಕಂಪೆನಿಗಳು, ಇತರ ರೀತಿಯಲ್ಲಿ 50 ಲಕ್ಷ ರೂ.ವರೆಗೆ ಆದಾಯವನ್ನು ಗಳಿಸುವವರು ಈ ಐಟಿಆರ್-5 ಫಾರ್ಮ್ ಅನ್ನು ಸಲ್ಲಿಸಬೇಕು.
ITR-6
ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಪಡೆಯುವ ಕಂಪೆನಿಗಳನ್ನು ಹೊರತುಪಡಿಸಿ ಇತರ ಕಂಪನಿಗಳು ಐಟಿಆರ್-6 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.
ITR-7
ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(4ಎ) ಅಥವಾ 139(4ಬಿ) ಅಥವಾ 139(4ಸಿ) ಅಥವಾ 139(4ಡಿ) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳು ಮತ್ತು ಕಂಪೆನಿಗಳು ಇದನ್ನು ಸಲ್ಲಿಸಬೇಕಾಗುತ್ತದೆ. ವ್ಯಕ್ತಿಗಳು, ದತ್ತಿ ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ವೈಜ್ಞಾನಿಕ ಸಂಶೋಧನಾ ಸಂಘಗಳು, ಸುದ್ದಿ ಸಂಸ್ಥೆಗಳು, ಆಸ್ಪತ್ರೆಗಳು, ಟ್ರೇಡ್ ಯೂನಿಯನ್‌ಗಳು, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಎನ್‌ಜಿಒಗಳು ಅಥವಾ ಅಂತಹ ಇತರ ಸಂಸ್ಥೆಗಳೂ ಈ ವ್ಯಾಪ್ತಿಗೆ ಒಳಪಡುತ್ತವೆ.
ಗಮನಿಸಿ
ಮೊದಲ ಬಾರಿಗೆ ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿದ್ದರೆ ನಿಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಸಿದ್ಧವಾಗಿಟ್ಟುಕೊಳ್ಳಬೇಕು. ಬಳಿಕ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ eportal.incometax.gov.inಗೆ ಭೇಟಿ ನೀಡಿ. ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರು ನೀವಾಗಿದ್ದರೆ ತಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ರಚಿಸಿ. ನಿಮ್ಮ ಪಾನ್ ಕಾರ್ಡ್ ಯೂಸರ್ ಐಡಿಯಾಗಿರುತ್ತದೆ. ಬಳಿಕ ನಿಮ್ಮ ಸ್ವಂತ ಪಾಸ್‌ವರ್ಡ್ ರಚಿಸಿಕೊಳ್ಳಬಹುದು.
ಇದನ್ನೂ ಓದಿ: Money Guide: ಸೈಬರ್ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ