ಬೆಂಗಳೂರು: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅಗತ್ಯ. ಅದಕ್ಕಾಗಿ ಈಗಲೇ ಒಂದಷ್ಟು ಮೊತ್ತವನ್ನು ಕೂಡಿಡಲು ಆರಂಭಿಸಬೇಕು ಎಂದು ಸಲಹೆ ನೀಡುತ್ತಾರೆ ಆರ್ಥಿಕ ತಜ್ಞರು. ಇದಕ್ಕಾಗಿ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಕೂಡ ಒಂದು. ಎನ್‌ಪಿಎಸ್ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್ ಖಾತೆ ನಿಷ್ಕ್ರೀಯವಾಗುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ಸರಿಪಡಿಸಬಹುದು? ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).
ಸ್ಥಗಿತಗೊಂಡ ಎನ್‌ಪಿಎಸ್ ಖಾತೆಯನ್ನು ಸಕ್ರಿಯಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ.
ಯಾಕಾಗಿ ಖಾತೆ ಸ್ಥಗಿತಗೊಳ್ಳುತ್ತದೆ?
ಕನಿಷ್ಠ ಪಾವತಿಯ ಕೊರತೆ: ಟೈರ್ 1 ಎನ್‌ಪಿಎಸ್ ಖಾತೆಗಳಿಗೆ ವಾರ್ಷಿಕ ಕನಿಷ್ಠ 1,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದೊಳಗೆ ಈ ನಿಯಮ ಪಾಲಿಸದಿದ್ದರೆ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಟೈರ್ 1 ಸ್ಥಗಿತಗೊಂಡರೆ ಟೈರ್ 2 ಖಾತೆಗಳು ಸಹ ನಿಷ್ಕ್ರಿಯವಾಗುತ್ತವೆ.
ಅಪೂರ್ಣ ಕೆವೈಸಿ ಪ್ರಕ್ರಿಯೆ: ಎನ್‌ಪಿಎಸ್ ಖಾತೆಗಳಿಗೆ ಕೆವೈಸಿ (Know Your Customer) ಅಪ್‌ಡೇಟ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಅಪೂರ್ಣ ಮಾಹಿತಿ ನೀಡಿದ್ದರೆ ಅಥವಾ ಸೂಕ್ತ ದಾಖಲೆ ಒದಗಿಸದಿದ್ದರೆ ನಿಮ್ಮ ಎನ್‌ಪಿಎಸ್ ಖಾತೆ ಸ್ಥಗಿತಗೊಳ್ಳುತ್ತದೆ.
ದಾಖಲಾತಿ ನಮೂನೆ ಸಲ್ಲಿಕೆಯ ವಿಳಂಬ: ತಾಂತ್ರಿಕ ದೋಷ ಅಥವಾ ಕೇಂದ್ರ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ (CRA) ದಾಖಲಾತಿ ನಮೂನೆಯನ್ನು ಸಲ್ಲಿಸುವಲ್ಲಿನ ವಿಳಂಬವು ಖಾತೆ ಸ್ಥಗಿತಗೊಳಿಸಲು ಕಾರಣವಾಗಬಹುದು.
ಆನ್‌ಲೈನ್ ಮೂಲಕ ಹೀಗೆ ಸಕ್ರಿಯಗೊಳಿಸಿ
ಕನಿಷ್ಠ ಕೊಡುಗೆ ಪಾವತಿಸಿ / ದಂಡ ಕಟ್ಟಿ: ಎನ್‌ಪಿಎಸ್ ಅಕೌಂಟ್‌ಗೆ ಲಾಗಿನ್ ಆಗಿ Contribution ವಿಭಾಗಕ್ಕೆ ತೆರಳಿ. ನಿಮ್ಮ ಖಾತೆ ಸ್ಥಗಿತಗೊಂಡ ಅವಧಿಯಿಂದ ತೊಡಗಿ ಇದುವರೆಗೆ ತಿಂಗಳಿಗೆ ಕನಿಷ್ಠ 500 ರೂ. ಪಾವತಿಸಿ. ಹೆಚ್ಚುವರಿಯಾಗಿ 100 ರೂ. ದಂಡವನ್ನೂ ಕಟ್ಟಿ.
ದೃಢೀಕರಣ ಮತ್ತು ಖಾತೆ ಪುನರುಜ್ಜೀವನ: ಆನ್‌ಲೈನ್ ಪಾವತಿಯನ್ನು ಯಶಸ್ವಿಯಾಗಿ ಮಾಡಿದ ನಂತರ ಇಮೇಲ್ ಅಕೌಂಟ್‌ಗೆ ದೃಢೀಕರಣದ ಸಂದೇಶ ಬರುತ್ತದೆ. ಬಳಿಕ ಪಿಎಫ್‌ಆರ್‌ಡಿಎ ನಿಮ್ಮ ಖಾತೆಯನ್ನು ಪರಿಶೀಲಿಸಿ ಕೆಲವೇ ದಿನಗಳಲ್ಲಿ ಅದನ್ನು ಮತ್ತೆ ಸಕ್ರಿಯಗೊಳಿಸುತ್ತದೆ.
ಆಫ್‌ಲೈನ್ ಮೂಲಕ ಸಕ್ರಿಯಗೊಳಿಸುವ ವಿಧಾನ
ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ: ದಂಡ ಸಹಿತ ಬಾಕಿ ಇರುವ ಮೊತ್ತವನ್ನು ಪಾವತಿಸಿ. ಬಳಿಕ ಎನ್‌ಪಿಎಸ್ ವೆಬ್‌ಸೈಟ್‌ನಿಂದ UOS-S10-A ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿ. ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಪ್ಯಾನ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ. ಇದನ್ನು ನಿಮ್ಮ ಪಿಒಪಿ ಶಾಖೆ (ಬ್ಯಾಂಕ್ ಅಥವಾ ನಿಯೋಜಿತ ಏಜೆನ್ಸಿ)ಗೆ ನೀಡಿ. ಪಿಒಪಿ ನಿಮ್ಮ ಮನವಿಯನ್ನು ಪರಿಶೀಲಿಸಿ ಪಿಎಫ್‌ಆರ್‌ಡಿಎಗೆ ಕಳುಹಿಸುತ್ತದೆ. ಕೆಲವೇ ದಿನಗಳಲ್ಲಿ ಖಾತೆ ಸಕ್ರಿಯಗೊಂಡಿರುವ ಬಗ್ಗೆ ಎಸ್‌ಎಂಎಸ್ ಅಥವಾ ಇಮೇಲ್‌ಗೆ ಮಾಹಿತಿ ರವಾನೆಯಾಗುತ್ತದೆ.
ಆಧಾರ್ ದೃಢೀಕರಣ ಕಡ್ಡಾಯ
ದೇಶಾದ್ಯಂತ ಆನ್‌ಲೈನ್ ವಂಚನೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಿಂದ ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್ ಜಾರಿಗೆ ಬಂದಿದೆ.
ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?