ಬೆಂಗಳೂರು: ಅನೇಕ ಮಂದಿ ಮ್ಯೂಚುವಲ್ ಫಂಡ್ (Mutual Fund)ನಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುತ್ತಾರೆ. ಇನ್ನು ಕೆಲವು ಮಂದಿ ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ, ಅದು ಹೇಗೆ ಎಂಬುದು ಕರಗತವಾಗಿರುವುದಿಲ್ಲ. ಅವರಿಗೆ ಮಾರುಕಟ್ಟೆ ಮತ್ತು ಕಂಪೆನಿಗಳ ಫಂಡಮೆಂಟಲ್ ಅನಾಲಿಸಿಸ್ ನಡೆಸಲು ಸಮಯದ ಅಭಾವ ಇರುವುದೂ ಇದಕ್ಕೆ ಕಾರಣ ಇರಬಹುದು. ಅಂತಹ ಮಂದಿ ಮ್ಯೂಚುವಲ್ ಫಂಡ್ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಹಾಗಾದರೆ ಮ್ಯೂಚುವಲ್ ಫಂಡ್ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಮನಿಗೈಡ್ (Money Guide)ನಲ್ಲಿದೆ.
ಮ್ಯೂಚುವಲ್ ಫಂಡ್ ಎಂದರೇನು?
ಪ್ರಸ್ತುತ ಅತ್ಯುತ್ತಮ ಹೂಡಿಕೆ ವಿಧಾನಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ವೈಯಕ್ತಿಕವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ನಿಮಗಿರುವ ಅತ್ಯುತ್ತಮ ಮಾರ್ಗ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಮ್ಯೂಚುವಲ್ ಫಂಡ್‌ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪೆನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್‌ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನೀವು ಮ್ಯೂಚುವಲ್ ಫಂಡ್‌ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ. ಗಮನಿಸಿ, ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತದೆ. ಅಲ್ಪಾವಧಿಗೆ ಅಲ್ಲ.
ಆದಾಗ್ಯೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿ ದಾಖಲೆಯನ್ನು ಎಚ್ಚರಿಕೆಯಿಂದ ಓದಬೇಕು. ಅಲ್ಲದೆ ಯೋಜನೆಯ ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದ ಆದಾಯವನ್ನು ಸೂಚಿಸುವುದಿಲ್ಲ. ಯಾವುದೇ ಕನಿಷ್ಠ ಅಥವಾ ಗರಿಷ್ಠ ಆದಾಯದ ಭರವಸೆ ಅಥವಾ ಖಾತರಿ ಇರಲು ಸಾಧ್ಯವಿಲ್ಲ ಮುಂತಾದ ಅಂಶಗಳನ್ನು ಹೂಡಿಕೆ ಮೊದಲೇ ಗಮನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಭಾರತದಲ್ಲಿ ಲಭ್ಯವಿರುವ ಮ್ಯೂಚುವಲ್ ಫಂಡ್‌ನ ವಿಧಗಳು
ಈಕ್ವಿಟಿ ಫಂಡ್ (Equity Funds): ಈ ಫಂಡ್ ಮುಖ್ಯವಾಗಿ ಕಂಪೆನಿಗಳ ಸ್ಟಾಕ್‌ಗಳು / ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿವೆ. ಇದರ ಮೂಲಕ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅವು ಹೆಚ್ಚಿನ ಆದಾಯವನ್ನು ನೀಡುವ ಜತೆಗೆ ಆದರೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಈಕ್ವಿಟಿ ಫಂಡ್‌ಗಳನ್ನು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಬ್ಯಾಂಕಿಂಗ್, ತಂತ್ರಜ್ಞಾನ, ಇತ್ಯಾದಿ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಬಹುದು.
ಡೆಬ್ಟ್ ಫಂಡ್ (Debt Fund): ಡೆಬ್ಟ್ ಫಂಡ್ ಪ್ರಾಥಮಿಕವಾಗಿ ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳಂತಹ ಸ್ಥಿರ-ಆದಾಯದ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಈಕ್ವಿಟಿ ಫಂಡ್‌ಗೆ ಹೋಲಿಸಿದರೆ ನಿಯಮಿತ ಆದಾಯ ಮತ್ತು ಕಡಿಮೆ ಅಪಾಯವನ್ನು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ.
ಹೈಬ್ರಿಡ್ ಫಂಡ್ (Hybrid Funds): ಬ್ಯಾಲೆನ್ಸ್ಡ್ ಫಂಡ್ (Balanced funds) ಎಂದೂ ಕರೆಯಲ್ಪಡುವ ಇದರಲ್ಲಿ ಈಕ್ವಿಟಿ ಮತ್ತು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಅಪಾಯದೊಂದಿಗೆ ಮಧ್ಯಮ ಆದಾಯವನ್ನು ಬಯಸುವ ಹೂಡಿಕೆದಾರರು ಇದನ್ನು ಆಯ್ಕೆ ಮಾಡಬಹುದು.
ಇಂಡಕ್ಸ್ ಫಂಡ್ (Index Funds): ಇದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕದಂತೆ ಅದೇ ಪ್ರಮಾಣದಲ್ಲಿ ಅದೇ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವ ಯೋಜನೆ. ಸೂಚ್ಯಂಕಕ್ಕೆ ಹೋಲುವ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ.
ಸೆಕ್ಟರಲ್ ಫಂಡ್ (Sectoral Funds): ಬ್ಯಾಂಕಿಂಗ್, ಐಟಿ, ಆರೋಗ್ಯ ರಕ್ಷಣೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವ ವಿಧಾನ ಇದು. ಇದು ಹೆಚ್ಚಿನ ಅಪಾಯವನ್ನು ಹೊಂದಿದೆ.
ಥೀಮಾಟಿಕ್ ಫಂಡ್ (Thematic Funds): ಮೂಲಸೌಕರ್ಯ ಅಥವಾ ತಂತ್ರಜ್ಞಾನದಂತಹ ನಿರ್ದಿಷ್ಟ ವಿಷಯಗಳು ಅಥವಾ ಪ್ರವೃತ್ತಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿಯೂ ಅಪಾಯ ಸಾಧ್ಯತೆ ಅಧಿಕ.
ಟ್ಯಾಕ್ಸ್ ಸೇವಿಂಗ್ ಫಂಡ್ (Tax Saving Funds): ಈ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (Equity Linked Savings Schemes) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಇದರಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.
ಲಿಕ್ವಿಡ್ ಫಂಡ್ (Liquid Funds): ಲಿಕ್ವಿಡ್ ಫಂಡ್ 91 ದಿನಗಳಲ್ಲಿ ಮುಕ್ತಾಯಗೊಳ್ಳುವ ಅಲ್ಪಾವಧಿಯ ಹೂಡಿಕೆಯಾಗಿದೆ. ಅಲ್ಪಾವಧಿಯ ಹೂಡಿಕೆದಾರರಿಗೆ ಇದು ಸೂಕ್ತ.
ಗಿಲ್ಟ್ ಫಂಡ್ (Gilt Funds): ಇದು ಉಳಿದ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ ಎಂದೇ ಹೇಳಬಹುದು. ಹೂಡಿಕೆ ಮಾಡಿದ ಹೆಚ್ಚಿನ ಹಣಗಳು ಸರ್ಕಾರ ಅಭಯವಿರುವ ಕಡೆಯೇ ಇರುತ್ತವೆ. ಇಲ್ಲಿ ಹಣ ಕಳೆದುಕೊಳ್ಳುವ ಆತಂಕ ಇರುವುದಿಲ್ಲ.
ಇಂಟರ್‌ನ್ಯಾಷನಲ್ ಫಂಡ್ (International Funds): ಈ ಸ್ಕೀಮ್ ಮೂಲಕ ಭಾರತದ ಹೊರಗಿನ ಸ್ವತ್ತುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿನ ವೈವಿಧ್ಯತೆಯನ್ನು ನೀಡುತ್ತದೆ. ಸ್ಟಾಕ್, ಬಾಂಡ್ ಅಥವಾ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ