ಬೆಂಗಳೂರು: ʼಮನಿ ಮ್ಯೂಲ್ʼ (Money mule) ಎನ್ನುವ ಪದ ಕೇಳಿದ್ದೀರಾ? ಆನ್‌ಲೈನ್ ಮೂಲಕ ವಂಚಿಸಿದ ಹಣವನ್ನು ಸ್ವೀಕರಿಸುವ ವ್ಯಕ್ತಿಯನ್ನು ʼಮನಿ ಮ್ಯೂಲ್ʼ ಎಂದು ಕರೆಯಲಾಗುತ್ತದೆ. ಎಲ್ಲ ʼಮನಿ ಮ್ಯೂಲ್ʼಗಳು ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಚಟುವಟಿಕೆಗಳು, ಹಗರಣಗಳು ಮತ್ತು ವಂಚನೆಗಳಲ್ಲಿ ಭಾಗಿಯಾಗಿರುತ್ತಾರೆ ಎನ್ನಲು ಸಾಧ್ಯವಿಲ್ಲ. ತಾವು ವಂಚಕರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಅರಿವಿಗೆ ಬಾರದವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಹಾಗಾದರೆ ʼಮನಿ ಮ್ಯೂಲ್ʼ ಹೇಗೆ ನಡೆಯುತ್ತದೆ ? ಈ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು? ಎನ್ನುವ ವಿವರ ಮನಿಗೈಡ್ (Money Guide)ನಲ್ಲಿದೆ.
ಬಲೆಗೆ ಬೀಳುವುದು ಹೇಗೆ?
ʼಮನಿ ಮ್ಯೂಲ್ʼ ಎಂದು ಕರೆಯಲ್ಪಡುವ ಮುಗ್ಧರು ಅನೇಕ ಸಂದರ್ಭಗಳಲ್ಲಿ ಉದ್ಯೋಗಾವಕಾಶ, ಆನ್‌ಲೈನ್ ಜಾಹೀರಾತುಗಳು ಅಥವಾ ಸಾಮಾಜಿಕ ಮಾಧ್ಯಮ ಸಂದೇಶಗಳಂತಹ ವಿವಿಧ ವಿಧಾನಗಳ ಮೂಲಕ ಮೋಸ ಹೋಗುತ್ತಾರೆ. ಭಯೋತ್ಪಾದಕರು, ಮಾದಕ ವಸ್ತು ವ್ಯಾಪಾರಿಗಳು ಮತ್ತು ದೇಶದ್ರೋಹಿಗಳು ಅಮಾಯಕರನ್ನು ತಮ್ಮ ಹಣವನ್ನು ಬೇರೆ ಕಡೆ ವರ್ಗಾವಣೆ ಮಾಡಿಕೊಳ್ಳುವ ಈ ಸೈಬರ್ ಅಪರಾಧಕ್ಕೆ ಬಳಸುತ್ತಾರೆ. ಭಾರತವೂ ಸೇರಿದಂತೆ ಜಪಾನ್, ಯುರೋಪ್ ಮೊದಲಾದ ಕಡೆ ಸಾವಿರಾರು ಮುಗ್ಧರು ಇಂಥ ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ. ಭಾರತ ಸರಕಾರದ ಸೈಬರ್ ಸುರಕ್ಷತಾ ವಿಭಾಗ, ಬ್ಯಾಂಕ್‌ಗಳು ಹಾಗೂ ರಾಜ್ಯಗಳ ಸೈಬರ್ ಪೊಲೀಸರು ಈ ಕುರಿತು ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ.
ವಂಚನೆ ಹೇಗೆ?
ಸೈಬರ್ ವಂಚಕರು ʼಮನಿ ಮ್ಯೂಲ್ʼಗಳ ಬ್ಯಾಂಕ್ ಅಕೌಂಟ್‌ಗೆ ಒಂದಷ್ಟು ಹಣವನ್ನು ಡೆಪಾಸಿಟ್ ಮಾಡುತ್ತಾರೆ. ಬಳಿಕ ಅದನ್ನು ಬೇರೆ ಖಾತೆಗೆ ವರ್ಗಾಯಿಸಲು ಅಥವಾ ನಗದು ನೀಡುವಂತೆ ಕೇಳುತ್ತಾರೆ. ಇದಕ್ಕಾಗಿ ಒಂದಷ್ಟು ಮೊತ್ತವನ್ನು ಕಮಿಷನ್ ರೂಪದಲ್ಲಿ ವಂಚಕರು ನೀಡುತ್ತಾರೆ. ವಂಚಕರು ತಮ್ಮ ಗುರುತನ್ನು ಮರೆ ಮಾಚಲು ಅನೇಕ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ ಅಥವಾ ಸುಳ್ಳು ಗುರುತುಗಳನ್ನು ಬಳಸುತ್ತಾರೆ.
ಯಾರೆಲ್ಲ ಟಾರ್ಗೆಟ್?
ವಂಚಕರು ಹೆಚ್ಚಾಗಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಅಥವಾ ಡೇಟಿಂಗ್ ವೆಬ್‌ಸೈಟ್‌ಗಳನ್ನು ಬಳಸುವವರನ್ನು ಗುರಿಯಾಗಿಸಿ ಕಾರ್ಯ ಪ್ರವೃತ್ತರಾಗುತ್ತಾರೆ. ಈ ಸಂಘಟಿತ ಅಪರಾಧ ಗುಂಪುಗಳು ಯುವ ಪೀಳಿಗೆಯ ಮೇಲೆ ವಿಶೇಷವಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೇ ಟಾರ್ಗೆಟ್ ಮಾಡುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಂಚಕರು ಸುಳ್ಳು ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮೂಲಕ ಬಲೆ ಬೀಸುತ್ತಾರೆ.
ಗುರುತಿಸುವುದು ಹೇಗೆ?
ʼಮನಿ ಮ್ಯೂಲ್ʼ ಆಗುವುದನ್ನು ತಪ್ಪಿಸಲು ನೀವು ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಈ ಕಾನೂನುಬಾಹಿರ ಚಟುವಟಿಕೆಗೆ ಯಾರಾದರೂ ನಿಮ್ಮನ್ನು ನೇಮಕ ಮಾಡಲು ಪ್ರಯತ್ನಿಸುತ್ತಿರುವ ಚಿಹ್ನೆಗಳನ್ನು ಗುರುತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಂಚಕರು ಸಾಮಾನ್ಯವಾಗಿ ಅನುಸರಿಸುವ ಮಾರ್ಗ:
- ಸುಲಭವಾಗಿ ಹಣ ಸಂಪಾದಿಸಲು ನಿಮಗೆ ಸಹಾಯ ಮಾಡುವ ಸಂದೇಶ ಕಳುಹಿಸುತ್ತಾರೆ.
- ಸಂದೇಶ ಕಳುಹಿಸಲು ವಂಚಕರು ಜಿಮೇಲ್, ಯಾಹೂ, ಹಾಟ್ಮೇಲ್ ಅಥವಾ ಔಟ್ಲುಕ್ನಂತಹ ಸೇವೆಗಳನ್ನು ಬಳಸುತ್ತಾರೆ.
- ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕೆಂದು ಅವರು ಸೂಚಿಸುತ್ತಾರೆ.
- ನಿಮ್ಮ ಬ್ಯಾಂಕ್ ಖಾತೆಗೆ ಬಂದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಹೇಳಿತ್ತಾರೆ.
- ಒಂಷ್ಟು ಮೊತ್ತ ಬಳಸಿಕೊಳ್ಳಲು ತಿಳಿಸುತ್ತಾರೆ.
ಯುವ ಜನತೆಯ ಗಮನಕ್ಕೆ
ಉದ್ಯೋಗಕ್ಕಾಗಿ ಪ್ರಯತ್ನಿಸುವಾಗ, ಅಪರಿಚಿತ ವ್ಯಕ್ತಿಗಳನ್ನು ಅಥವಾ ನಕಲಿ ಸಂಸ್ಥೆಗಳನ್ನು ನಂಬಿ ಮೋಸ ಹೋಗಬೇಡಿ. ಸಂಸ್ಥೆಗಳ ಪೂರ್ವಾಪರ ತಿಳಿದುಕೊಂಡು, ನಿಮಗೆ ಅದು ಅಸಲಿ ಸಂಸ್ಥೆಯಂದು ಖಚಿತವಾದರೆ ಮಾತ್ರ ಉದ್ಯೋಗಕ್ಕಾಗಿ ಪ್ರಯತ್ನ ಪಡಿ. ಸಾಮಾಜಿಕ ಜಾಲತಾಣಗಳಲ್ಲಿ ಜನ್ಮ ದಿನಾಂಕ, ವಿದ್ಯಾಭ್ಯಾಸ ಹಾಗೂ ಕೆಲಸದ ವಿವರ, ದೂರವಾಣಿ ಸಂಖ್ಯೆ, ವಾಹನದ ಮಾಹಿತಿ ಹಾಗೂ ಖಾಸಗಿ ಫೋಟೊಗಳನ್ನು ಹಂಚಿಕೊಳ್ಳಬೇಡಿ. ಗಮನಿಸಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಯಾವ ಕಾರಣಕ್ಕೂ ಅಪರಿಚಿತರೊಡನೆ ಹಂಚಿಕೊಳ್ಳಲೇಬೇಡಿ. ಒಟಿಪಿಯನ್ನಂತೂ ಯಾರಿಗೂ ನೀಡಬೇಡಿ.
ಹೀಗೆ ಮಾಡಿ
ಹಣ ವರ್ಗಾವಣೆ ಮತ್ತು ಹಂಚಿಕೆ, ಗಂಭೀರ ಸ್ವರೂಪದ ಆರ್ಥಿಕ ಮತ್ತು ಸೈಬರ್ ಅಪರಾಧವಾಗಿದ್ದು, ಸಾಬೀತಾದರೆ ನ್ಯಾಯಾಲಯವು ದೊಡ್ಡ ಮೊತ್ತದ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆ ವಹಿಸಿ. ಒಂದು ವೇಳೆ ʼಮನಿ ಮ್ಯೂಲ್’ ಸಂಶಯ ಬಂದರೆ ಕೂಡಲೇ ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಿ. ಸೈಬರ್ ಪೊಲೀಸರಿಗೆ ದೂರು ನೀಡಿ ಮತ್ತು ಅವರಿಗೆ ಸಂಪೂರ್ಣ ಮಾಹಿತಿ ಒದಗಿಸಿ.
ಇದನ್ನೂ ಓದಿ: Money Guide: ಏ. 1ರಿಂದ ಹೊಸ ತೆರಿಗೆ ನಿಯಮಗಳ ಜಾರಿ; ಏನೆಲ್ಲ ಬದಲಾವಣೆ ?