ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ ಬಹು ಪ್ರಯಾಸದ ಸಂಗತಿ. ಅದರಲ್ಲಿಯೂ ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟಬೇಕು ಎಂದರೆ ಸಾಮಾನ್ಯ ವರ್ಗದ ಜನರು ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಸರಿ ಅಂತೂ ಗೃಹಸಾಲ ಮಂಜೂರಾಗಿ, ಗೃಹ ಪ್ರವೇಶ ನಡೆದು, ಸಾಲವನ್ನೂ ಕಟ್ಟಿಯಾಯ್ತು ಎಂದುಕೊಳ್ಳೋಣ. ʼಅಬ್ಬ ದೊಡ್ಡ ಹೊರೆಯೊಂದು ತಲೆಯ ಮೇಲಿಂದ ಇಳಿಯಿತುʼ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಇಲ್ಲಿ ಗಮನಿಸಿ. ಸಾಲ ಕಟ್ಟಿದ ಮಾತ್ರಕ್ಕೆ ನಿಮ್ಮ ಎಲ್ಲ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಸಾಲ ತೀರಿಸಿದ ಮೇಲೂ ನೀವು ಮಾಡಿ ಮುಗಿಸಬಹುದಾದು ಬಹು ಮುಖ್ಯ ಕೆಲಸಗಳಿವೆ. ಅವು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಇಂದಿನ ಮನಿಗೈಡ್ (Money Guide) ಓದಿ.
ಎನ್‌ಒಸಿ ಪಡೆದುಕೊಳ್ಳಿ
ಗೃಹಸಾಲವನ್ನು ಸಂಪೂರ್ಣವಾಗಿ ಪಾವತಿಸದ ಬಳಿಕ ನೀವು ಮಾಡಬೇಕಾದ ಬಹು ಮುಖ್ಯ ಕೆಲಸ ಎಂದರೆ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಅಥವಾ ನೋ ಡ್ಯೂ ಸರ್ಟಿಫಿಕೆಟ್ (ಎನ್‌ಡಿಸಿ) ಪಡೆದುಕೊಳ್ಳುವುದು. ನೀವು ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದೀರಿ ಎನ್ನುವುದನ್ನು ಬ್ಯಾಂಕ್ ಪ್ರಮಾಣಿಕರಿಸುವ ಸರ್ಟಿಫಿಕೆಟ್ ಇದು. ಗಮನಿಸಿ, ಈ ಪತ್ರವನ್ನು ಪಡೆದುಕೊಳ್ಳುವ ಮುನ್ನ ಇದರಲ್ಲಿ ನಮೂದಿಸಿರುವ ಎಲ್ಲ ಅಂಶಗಳು ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಅಕ್ಷರ ದೋಷ ಅಥವಾ ಯಾವುದಾದರೂ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಜತೆಗೆ ಈ ಪ್ರಮಾಣ ಪತ್ರದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿಯ ವಿವರ, ನಿಮ್ಮ ವಿಳಾಸ, ಸಾಲದ ಕಂತು ಆರಂಭಗೊಂಡ ಮತ್ತು ಕೊನೆಗೊಂಡ ದಿನಾಂಕ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಇನ್ನು ಸಂಪೂರ್ಣವಾಗಿ ನಿಮ್ಮ ಸೊತ್ತು ಎನ್ನುವುದು ಕೂಡ ಇದರಲ್ಲಿ ನಮೂದಾಗಿದೆ ಎನ್ನುವುದನ್ನು ಚೆಕ್ ಮಾಡಿ.
ಮೂಲ ದಾಖಲೆ ಪಡೆದುಕೊಳ್ಳಿ
ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ಗಳು ನಿಮ್ಮ ಮನೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತವೆ. ಸಾಲ ಪಾವತಿಯಾದ ಬಳಿಕ ಬ್ಯಾಂಕ್‌ಗಳು ಈ ಮೂಲ ದಾಖಲೆಗಳನ್ನು ನಿಮಗೆ ಹಿಂದಿರುಗಿಸಬೇಕು ಎನ್ನುವ ನಿಯಮ ಇದೆ. ಒಂದು ಬೇಳೆ ಬ್ಯಾಂಕ್ ಇದನ್ನು ನೀಡಲು ಮರೆತರೆ ನೀವು ನೆನಪಿಸಿ ತಪ್ಪದೆ ಪಡೆದುಕೊಳ್ಳಿ. ದಾಖಲೆಗಳೆಲ್ಲ ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.
ದಾಖಲೆಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ
ಗೃಹಸಾಲ ನೀಡುವಾಗ ನಿಮ್ಮ ಆಸ್ತಿಯ ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ. ಒಂದುವೇಳೆ ಸಾಲ ಪಡೆದವರು ಮರು ಪಾವತಿಸದಿದ್ದರೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಬ್ಯಾಂಕ್‌ಗೆ ಇರುತ್ತದೆ. ಹೀಗಾಗಿ ಸಾಲ ಮರುಪಾವತಿ ಮಾಡಿದ ಬಳಿಕ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬೇಡಿ. ಜತೆಗೆ ಋಣಭಾರ ಪ್ರಮಾಣಪತ್ರ ಪಡೆದುಕೊಳ್ಳಿ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಬಳಿ ಕೇಳಿ ತಿಳಿದುಕೊಳ್ಳಿ.
ಕ್ರೆಡಿಟ್ ಸ್ಕೋರ್ ಪರಿಶೀಲಿಸಿ
ಸಾಲ ಮಂಜೂರಾದ ಬಳಿಕ ನಿಮ್ಮ ಮರುಪಾವತಿಯನ್ನು ಗಮನಿಸಿ ಕ್ರೆಡಿಟ್ ಬ್ಯೂರೋ ಕ್ರೆಡಿಟ್ ಸ್ಕೋರ್ ನೀಡುತ್ತದೆ. ಹೀಗಾಗಿ ಸಾಲದ ಎಲ್ಲ ಕಂತನ್ನು ಪಾವತಿಸಿದ ಬಳಿಕ ಸಾಲಮುಕ್ತರಾಗಿದ್ದೀರಿ ಎನ್ನುವುದನ್ನು ಬ್ಯಾಂಕ್ ಅಪ್‌ಡೇಟ್ ಮಾಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಬ್ಯಾಂಕ್‌ಗಳು ಬ್ಯುರೋಕ್ಕೆ ಮಾಹಿತಿ ನೀಡಲು ಮರೆಯುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ತನ್ನಿ.
ಒಟ್ಟಿನಲ್ಲಿ ಗೃಹಸಾಲದ ಎಲ್ಲ ಕಂತುಗಳನನು ಪಾವತಿಸಿದ ಬಳಿಕ ಭವಿಷ್ಯದಲ್ಲಿ ಯಾವುದೇ ತೊಂದರೆ, ಕಾನೂನು ಸಮಸ್ಯೆ ಎದುರಾಗದಿರಲು ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.
ಇದನ್ನೂ ಓದಿ: Money Guide: ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ