Site icon Vistara News

Money plus : ಮಲ್ಟಿ ಬ್ಯಾಗರ್‌ ಷೇರುಗಳಲ್ಲಿ ಹೂಡಿಕೆಯ ಸವಾಲುಗಳೇನು?

Sensex falls

Sensex Opens 700 Points Lower Amid Worries Over US Inflation

ನೀವು ಇನ್ಫೋಸಿಸ್‌ನಲ್ಲಿ 1993ರಲ್ಲಿ 10,000 ರೂ. ಹೂಡಿಕೆ ಮಾಡಿದ್ದರೆ ( Money plus) ಈಗ 4 ಕೋಟಿ ರೂ. ಆಗುತ್ತಿತ್ತು. ನೀವು ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 1995ರಲ್ಲಿ 1 ಲಕ್ಷ ರೂ. ಹೂಡಿರುತ್ತಿದ್ದರೆ 8 ಕೋಟಿ ಆಗಿರುತ್ತಿತ್ತು ಎಂಬ ಮಾತನ್ನು ಕೇಳಿರಬಹುದು. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದೇ? ಇಲ್ಲ. ಅದಕ್ಕೂ ಕಾರಣಗಳು ಇವೆ. ಮಲ್ಟಿ ಬ್ಯಾಗರ್‌ ಷೇರುಗಳಲ್ಲಿ ಹೂಡಿಕೆ ಮಾಡಿ ಸಿರಿವಂತರಾಗಲು ಬಯಸುವವರು ಕೆಲವು ವಿಷಯಗಳನ್ನು ಮರೆಯಕೂಡದು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಆಗಿರಬಹುದು, ಇನ್ಫೋಸಿಸ್‌ ಆಗಿರಬಹುದು, ಹೂಡಿಕೆಯ ಅವಧಿಯಲ್ಲಿ ಷೇರುಗಳ ದರಗಳಲ್ಲಿ ಏರಿಳಿತದ ಪರಿಣಾಮ ಹೂಡಿಕೆದಾರರು ತಮ್ಮ ನಿರ್ಧಾರಗಳನ್ನು ಬದಲಿಸಿರಬಹುದು. ಹೀಗಾಗಿ ಲಾಭ-ನಷ್ಟಗಳೂ ಆಗಿರಬಹುದು. ಲಕ್ಷ ರೂ. ಹೂಡಿಕೆಯೂ ಝೀರೋ ಆಗಿರಬಹುದು. ಉದಾಹರಣೆಗೆ 1980-1990ರ ಅವಧಿಯಲ್ಲಿ ಅಂಬಾಸಿಡರ್‌ ಕಾರುಗಳ ಉತ್ಪಾದಕ ಹಿಂದೂಸ್ತಾನ್‌ ಮೋಟಾರ್ಸ್‌ ಷೇರು ಎಂದರೆ ಬ್ಲೂ ಚಿಪ್‌ ಷೇರಾಗಿತ್ತು. ನಿಫ್ಟಿ 50ಯ ಭಾಗವಾಗಿತ್ತು. ಆಗ ಭಾರತದಲ್ಲಿ ಏಕೈಕ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಅದಾಗಿತ್ತು. ಆದರೆ 1990ರಲ್ಲಿ ಮೌಲ್ಯಯುತವಾಗಿದ್ದ ಹಿಂದೂಸ್ತಾನ್‌ ಮೋಟಾರ್ಸ್‌ ಷೇರು ಈಗ ಆ ಮೌಲ್ಯವನ್ನು ಕಳೆದುಕೊಂಡಿದೆ.

ಎಜುಕ್ಯಾಂಪ್‌, ಯುನಿಟೆಕ್‌, ರಿಲಯನ್ಸ್‌ ಕ್ಯಾಪಿಟಲ್‌ ಇತ್ಯಾದಿ ಕಂಪನಿಗಳ ಷೇರುಗಳು ಒಂದು ಕಾಲದಲ್ಲಿ ಉನ್ನತ ಮಟ್ಟದಲ್ಲಿದ್ದರೆ ಈಗ ಪಾತಾಳಕ್ಕೆ ಕುಸಿದಿವೆ. ಇವುಗಳು ಹೂಡಿಕೆದಾರರಿಗೆ ಭಾರಿ ನಷ್ಟವನ್ನು ಉಂಟು ಮಾಡಿವೆ. ಆದ್ದರಿಂದ 1995ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 1 ಲಕ್ಷ ಹೂಡಿದ್ದರೆ ಈಗ 8 ಕೋಟಿ ರೂ. ಆಗುತ್ತಿತ್ತು ಎಂಬುದು ನಾಣ್ಯದ ಒಂದು ಮುಖವಷ್ಟೇ. ಸಮಗ್ರ ಚಿತ್ರಣ ಆಗಿರುವುದಿಲ್ಲ.

ಇದನ್ನೂ ಓದಿ: Money Guide : ಏನಿದು ಮಲ್ಟಿ ಬ್ಯಾಗರ್‌ ಸ್ಟಾಕ್ಸ್, ಹೂಡಿಕೆದಾರರನ್ನು ಆಕರ್ಷಿಸುವುದೇಕೆ?

ಏಕೆಂದರೆ, 1990ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಅಥವಾ ಇನ್ಫೋಸಿಸ್‌ ಷೇರುಗಳನ್ನು ಖರೀದಿಸಿದವರು ಮಾರುಕಟ್ಟೆಯ ಮುಂದಿನ ಪತನದ ಸಂದರ್ಭ ಮಾರಾಟ ಮಾಡಿರಬಹುದು. ಅಥವಾ ಸೂಚ್ಯಂಕ ಜಿಗಿದಿರುವ ಸಂದರ್ಭ ಪ್ರಾಫಿಟ್‌ ಬುಕ್‌ ಮಾಡಲು ಮಾರಾಟ ಮಾಡಿರಬಹುದು. ಎಚ್‌ಡಿಎಫ್‌ಸಿ ಷೇರು ದರ ಹಲವು ಸಲ 40-60% ಕುಸಿದಿದೆ. ಆಗ ಹೂಡಿಕೆದಾರರ ವಿಶ್ವಾಸ ಕುಸಿದಿರಬಹುದು. ಷೇರುಗಳನ್ನು ಇಪ್ಪತ್ತು-ಇಪ್ಪತ್ತೈದು ವರ್ಷ ಇಟ್ಟುಕೊಂಡಿರುವವರ ಸಂಖ್ಯೆ ಅತಿ ವಿರಳವಾಗಿರುತ್ತದೆ.

ಎರಡನೆಯದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಹೂಡಿಕೆದಾರರಿಗೆ 800 ಪಟ್ಟು ಆದಾಯ ನೀಡಿದೆ ಎಂದ ಮಾತ್ರಕ್ಕೆ ನೀವು ಮತ್ತೆ 800 ಪಟ್ಟು ರಿಟರ್ನ್‌ ಸಲುವಾಗಿ ಮತ್ತೆ ಇಪ್ಪತ್ತೈದು ವರ್ಷ ಕಾಲ ಹೂಡಿಕೆ ಮಾಡುವಿರಾ? ಹೌದು ಎಂದಾದರೆ ಅದು ತಪ್ಪಾಗುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ ಇತಿಹಾಸ ರಿಪೀಟ್‌ ಆಗುತ್ತದೆ ಎಂದು ಇಲ್ಲಿ ನಿಖರವಾಗಿ ಹೇಳಲಾಗದು.

Exit mobile version