Site icon Vistara News

Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

Mudra loan

ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ ಹಲವಾರು ವಿಷಯಗಳ ಬಗ್ಗೆ ಕಾಳಜಿ ವಹಿಸಲಾಗಿದೆ. ಮೋದಿ ಸರ್ಕಾರದ (Modi government) ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಂಸತ್ತಿನಲ್ಲಿ ಮಂಡಿಸಿ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಮುದ್ರಾ ಸಾಲದ (Mudra loan) ಕುರಿತು ಮಾತನಾಡಿದ್ದು, ಅದರ ಮಿತಿಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.

ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಿರುವುದರಿಂದ ಅನೇಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಮುಖ್ಯವಾಗಿ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಉದ್ಯಮಿಯಾಗಲು ಬಯಸುವವರಿಗೆ ವರದಾನವಾಗಿದೆ.

ಷರತ್ತುಗಳು ಏನು?

ಹೆಚ್ಚಿದ ಸಾಲದ ಮಿತಿಗೆ ಅರ್ಹತೆ ಪಡೆಯಲು ಸಾಲಗಾರರು ಈ ಹಿಂದೆ ಮುದ್ರಾ ಸಾಲವನ್ನು ತೆಗೆದುಕೊಂಡು ಪೂರ್ಣವಾಗಿ ಮರುಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಹೊಸ ಪ್ರಯೋಜನಗಳನ್ನು ಪಡೆಯಬಹುದು.

ಮುದ್ರಾ ಸಾಲ ವಿಭಾಗಗಳು

ಮುದ್ರಾ ಸಾಲಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ʼಶಿಶುʼ ವಿಭಾಗದಲ್ಲಿ 50,000 ರೂ.ವರೆಗೆ ಸಾಲ, ʼಕಿಶೋರʼ ವಿಭಾಗದಲ್ಲಿ 50,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ, ʼತರುಣ್ʼ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳು.

ಪರಿಣಾಮ ಮತ್ತು ವ್ಯಾಪ್ತಿ ಏನು?

ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ 47 ಕೋಟಿಗೂ ಹೆಚ್ಚು ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ 27.75 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಗಮನಾರ್ಹ ಸಂಗತಿ ಎಂದರೆ ಮಂಜೂರಾದ ಒಟ್ಟು 44.46 ಕೋಟಿ ಸಾಲದಲ್ಲಿ ಶೇ.69ರಷ್ಟು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.

Mudra loan


ಹಿಂದುಳಿದ ವರ್ಗದವರಿಗೆ ಬೆಂಬಲ

2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು 2016ರಲ್ಲಿ ಪ್ರಾರಂಭವಾದ ಎಸ್‌ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್‌ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ.

ಇದನ್ನೂ ಓದಿ: Union Budget 2024: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ; ಕಳೆದ ವರ್ಷಕ್ಕಿಂತ ಕಡಿಮೆ

ಉದ್ಯಮಶೀಲತೆಗೆ ಉತ್ತೇಜನ

ʼಮುದ್ರಾʼ ಯೋಜನೆ ಮತ್ತು ಎಸ್‌ಯುಪಿಐ ಯೋಜನೆಗಳು ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ವ್ಯಾಪಾರ ಅವಕಾಶಗಳನ್ನು ಮುಂದುವರಿಸಲು ಅನನುಕೂಲಕರ ಪರಿಸ್ಥಿತಿ ಎದುರಿಸುತ್ತಿರುವವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಬ್ಯಾಂಕ್‌ಗಳ ಸ್ಥಳೀಯ ಶಾಖೆಗೆ ಹೋಗಿ ಮುದ್ರಾ ಸಾಲ ಯೋಜನೆಯ ಮಾಹಿತಿ ಪಡೆಯಬಹುದು.

Exit mobile version