ಮಾರುಕಟ್ಟೆಯ ಏರಿಳಿತಗಳನ್ನು ಎದುರಿಸಲು ಹಾಗೂ ಉತ್ತಮ ಆದಾಯವನ್ನು ಗಳಿಸಲು ಮ್ಯೂಚುವಲ್ ಫಂಡ್‌ಗಳ ವ್ಯವಸ್ಥಿತ ಹೂಡಿಕೆ ಯೋಜನೆ (Systematic investment plan) ಸೂಕ್ತ ಎನ್ನುತ್ತಾರೆ (Mutual fund SIP) ಹೂಡಿಕೆ ತಜ್ಞರಾದ ವಿದ್ಯಾ ಬಾಲಾ. ಸಿಪ್‌ನಿಂದಾಗಿ ಮಾರುಕಟ್ಟೆಯ ಏರುಪೇರಿನ ಸಂದರ್ಭ ಹೂಡಿಕೆಯ ವೆಚ್ಚವನ್ನು ಸರಾಸರಿಗೊಳಿಸಲು ಅನುಕೂಲವಾಗುತ್ತದೆ.
ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಇಳಿಕೆಯಾದ ಸಂದರ್ಭದಲ್ಲಿ ಹೂಡಿಕೆಯ ಸರಾಸರಿ ವೆಚ್ಚವೂ ಕಡಿಮೆಯಾಗುತ್ತದೆ. ಅದೇ ಮೊತ್ತಕ್ಕೆ ಹೆಚ್ಚು ಯುನಿಟ್‌ಗಳು ನಿಮ್ಮದಾಗುತ್ತದೆ. ಸಿಪ್ ಆಧರಿತ ಪೋರ್ಟ್‌ಫೋಲಿಯೊಗಳು ಒಂದು ನಿರ್ದಿಷ್ಟ ಬೆಳವಣಿಗೆ ದಾಖಲಿಸಿದ ಬಳಿಕ ಹೆಚ್ಚುವರಿ ಸಿಪ್ ಕಾಂಟ್ರಿಬ್ಯೂಷನ್‌ಗಳು ಅಂಥ ಪರಿಣಾಮ ಬೀರುವುದಿಲ್ಲ. ಏಕೆಂದರೆ ಸಿಪ್ ಮೂಲಕ ಆ ವೇಳೆಗೆ ದೊಡ್ಡ ಮೊತ್ತ ಆಗಿರುತ್ತದೆ. ಹಾಗೂ ಅದು ಲಂಪ್ಸಮ್ ಹೂಡಿಕೆಯನ್ನು ಹೋಲುತ್ತಿರುತ್ತದೆ. ಈ ಹಂತದಲ್ಲಿ ಸಿಪ್ ಆರಂಭಿಕ ವರ್ಷಗಳಲ್ಲಿದ್ದಂತೆ ಕ್ವಿಕ್ ಆಗಿ ಪರಿಣಾಮ ಬೀರುವುದಿಲ್ಲ.
ಉದಾಹರಣೆಗೆ ನೀವು 10,000 ರೂ.ಗಳ ಸಿಪ್ ಅನ್ನು ಆರಂಭಿಸಿ 25 ಲಕ್ಷ ರೂ.ಗಳ ಪೋರ್ಟ್‌ಫೋಲಿಯೊ ಮಾಡಿದ್ದರೆ, ಮಧ್ಯಂತರದ ಅವಧಿಯಲ್ಲಿ ಮಾರುಕಟ್ಟೆ ಏರಿಳಿತ ಆದರೂ ರೂಪಾಯಿ ಸರಾಸರಿ ಮೌಲ್ಯದ ಪ್ರಭಾವಕ್ಕೆ ಹೂಡಿಕೆ ಅಷ್ಟಾಗಿ ಒಳಗಾಗುವುದಿಲ್ಲ. ಒಂದು ಹಂತದಲ್ಲಿ ಸಿಪ್ ಮೂಲಕ ದೊಡ್ಡ ಫಂಡ್ ಸಂಗ್ರಹವಾದ ಬಳಿಕ, ಕೇವಲ ಸಿಪ್ ಅನ್ನು ಮುಂದುವರಿಸುವುದಕ್ಕೆ ಆದ್ಯತೆ ನೀಡುವುದರ ಬದಲಿಗೆ ಆಗಾಗ್ಗೆ ಲಂಪ್ಸಮ್ ಆಗಿ ಹೂಡಿಕೆ ಮಾಡುವುದು ಕೂಡ ಒಂದು ಸೂಕ್ತ ಕಾರ್ಯತಂತ್ರವಾಗುತ್ತದೆ.
ಮಾರುಕಟ್ಟೆಗಳಲ್ಲಿ ಸೂಚ್ಯಂಕ ಕುಸಿತದ ಚಿಂತೆಯೇ? ಷೇರು ಮಾರುಕಟ್ಟೆಯಲ್ಲಿ ಇತ್ತೀಚಿನ ಕುಸಿತದ ಪರಿಣಾಮ ಆತಂಕಪಟ್ಟಿದ್ದೀರಾ? ಹಲವು ಸಂದರ್ಭ ಆತಂಕಿತ ಹೂಡಿಕೆದಾರರು ಮಾರುಕಟ್ಟೆ ಮಂದಗತಿಯಲ್ಲಿದ್ದಾಗ ಭಯಭೀತರಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಾರೆ. ರುಪೀ ಅವರೇಜಿಂಗ್ ಮೆಕಾನಿಸಂ ಆಗ ಪರಿಣಾಮ ಬೀರುತ್ತದೆ. ( ನೀವು ಮ್ಯೂಚುವಲ್ ಫಂಡ್ ಖರೀದಿಸಲು ತಗಲುವ ವೆಚ್ಚದ ಸರಾಸರಿ) ಕಡಿಮೆ ಬೆಲೆಗೆ ಹೆಚ್ಚು ಯುನಿಟ್‌ಗಳು ಸಿಗುತ್ತದೆ.) ಉದಾಹರಣೆಗೆ 2018ರ ಜನವರಿಯಲ್ಲಿ ಆರಂಭಿಸಿದ ಸಿಪ್ 2020ರ ಮಾರುಕಟ್ಟೆ ಪತನದ ಬಳಿಕ ಕೇವಲ 6 ತಿಂಗಳಿನಲ್ಲಿ ಚೇತರಿಸಿತ್ತು. ನಿಫ್ಟಿ ಇಂಡೆಕ್ಸ್ 12 ತಿಂಗಳಿನಲ್ಲಿ ಚೇತರಿಸಿ, ಕ್ರ್ಯಾಶ್ ಆಗುವುದಕ್ಕೆ ಮೊದಲಿನ ಸ್ಥಿತಿಗೆ ತಲುಪಿತ್ತು. 2005ರ ಜನವರಿಯಲ್ಲಿ ಶುರುವಾದ ಮತ್ತೊಂದು ಸಿಪ್ 2008ರ ಮಾರುಕಟ್ಟೆ ಪತನದ ಬಳಿಕ ಚೇತರಿಸಲು 18 ತಿಂಗಳು ಹಾಗೂ ನಿಫ್ಟಿಯ ಕಮ್ ಬ್ಯಾಕ್‌ಗೆ 34 ತಿಂಗಳು ತೆಗೆದುಕೊಂಡಿತ್ತು. ಇದರ ಅರ್ಥ ಏನೆಂದೆ ಸಿಪ್ ಹೂಡಿಕೆದಾರರು (SIP Investors) ಮಾರುಕಟ್ಟೆಯಲ್ಲಿನ ತಾತ್ಕಾಲಿಕ ಕುಸಿತಗಳನ್ನು ಎದುರಿಸಬೇಕು. ಅಂಥ ಸಂದರ್ಭ ತಾಳ್ಮೆ ಕಳೆದುಕೊಂಡು ಹೂಡಿಕೆ ಹಿಂತೆಗೆಯುವ ಕೆಲಸ ಮಾಡಬಾರದು.
ಕೊನೆಯ ಹಂತದಲ್ಲಿ ದೊಡ್ಡ ಮೊತ್ತ ಆಗುವುದು ಹೇಗೆ?
ಮ್ಯೂಚುವಲ್ ಫಂಡ್‌ನಲ್ಲಿ ಸಿಪ್ ಹೂಡಿಕೆಯ ಕಂಪೌಂಡಿಂಗ್‌ನ ಮ್ಯಾಜಿಕ್ ಬಗ್ಗೆ ನೀವು ಕೇಳಿರಬಹುದು. ಹೂಡಿಕೆಯ ಸಮಯಾನುಸಾರ ಹಾಗೂ ಮರು ಹೂಡಿಕೆಯನ್ನು ಆಧರಿಸಿ ಕಂಪೌಂಡಿಂಗ್ ಎಫೆಕ್ಟ್ ಬಹಳ ಸಕಾರಾತ್ಮಕವಾಗಿರುತ್ತದೆ. ಇದು ನಿಮ್ಮ ಹೂಡಿಕೆಯನ್ನು ಕೊನೆಯ ಹಂತದಲ್ಲಿ ದೊಡ್ಡ ಮೊತ್ತವನ್ನಾಗಿಸುತ್ತದೆ. ಆದರೆ ಅಲ್ಲಿಯವರೆಗೆ ತಾಳ್ಮೆ ಮುಖ್ಯ.
ಎಡಿಲ್‌ವೈಸ್ ಮ್ಯೂಚುವಲ್ ಫಂಡ್‌ನ ಅಧ್ಯಯನದ ಪ್ರಕಾರ, ನಿಫ್ಟಿ 50 ಇಂಡೆಕ್ಸ್‌ನಲ್ಲಿ ಪ್ರತಿ ತಿಂಗಳು 10,000 ರೂ. ಸಿಪ್ ಹೂಡಿಕೆಯನ್ನು 21 ವರ್ಷಗಳ ತನಕ ಮಾಡಿದರೆ, (2002ರ ಜನವರಿಯಿಂದ 2022ರ ಡಿಸೆಂಬರ್ ತನಕ ) ಮೊದಲ 7 ವರ್ಷಗಳಲ್ಲಿ 8.4 ಲಕ್ಷ ರೂ. ಹೂಡಿಕೆಯು 13.64 ಲಕ್ಷ ರೂ.ಗೆ ಏರಿಕೆಯಾಗುತ್ತದೆ. ಅಂದರೆ 5.24 ಲಕ್ಷ ರೂ. ಗಳಿಕೆಯಾಗುತ್ತದೆ.
ಮುಂದಿನ 7 ವರ್ಷಗಳಲ್ಲಿ 16.8 ಲಕ್ಷ ರೂ. ಹೂಡಿಕೆಯು 52.01 ಲಕ್ಷ ರೂ.ಗೆ ಬೆಳೆಯುತ್ತದೆ. 35.21 ಲಕ್ಷ ರೂ. ಗಳಿಕೆಯಾಗುತ್ತದೆ. ಮತ್ತೆ 7 ವರ್ಷಗಳಿಗೆ ಸಿಪ್ ಮುಂದುವರಿಸಿದರೆ ಹೂಡಿಕೆಯ ಮೊತ್ತೆ 25.2 ಲಕ್ಷ ರೂ. ಹಾಗೂ ಗಳಿಕೆ 1.44 ಕೋಟಿ ರೂ.ಗಳಾಗುತ್ತದೆ. 1.18 ಕೋಟಿ ರೂ. ಗಳಕೆಯಾಗುತ್ತದೆ. ಎಲ್ಲ ಸಿಪ್‌ಗಳೂ ಇದೇ ರೀತಿ ಗಳಿಸಿಕೆ ದಾಖಲಿಸುತ್ತದೆ ಎಂದಲ್ಲ. ಆದರೆ ಕೊನೆಯ ಹಂತದಲ್ಲಿ ದೊಡ್ಡ ಮೊತ್ತ ಸಿಗುತ್ತದೆ ಎಂಬುದಕ್ಕೆ ಇದು ಉದಾಹರಣೆ.