Site icon Vistara News

Planning to retire early : 40 ವರ್ಷಕ್ಕೇ ನಿವೃತ್ತಿಯಾಗಲು ಬಯಸುತ್ತೀರಾ? ಮೊದಲು ಈ ಪ್ರಶ್ನೆಗಳನ್ನು ಕೇಳಿ

An young employee at office work

ಕೆಲವರು ಉದ್ಯೋಗದಲ್ಲಿ ಬೇಸತ್ತು 40 ವರ್ಷಕ್ಕೆಲ್ಲ ನಿವೃತ್ತಿಯಾಗಿ ಇರಲು ಬಯಸುತ್ತಾರೆ. ದಿನ ನಿತ್ಯ ಕಚೇರಿಗೆ ಹೋಗಿ ಕೆಲಸ ಮಾಡುವುದು, ಹೈರಾಣಾಗುವುದು ಸಾಕಪ್ಪಾ ಸಾಕು ಎಂದು ಎಷ್ಟೋ ಸಲ ಅನ್ನಿಸುತ್ತದೆ. ನಮಗೆ ಬೇಕಾದ ಸ್ಥಳಗಳಿಗೆ ಭೇಟಿ ನೀಡಬೇಕು. ಜಗತ್ತಿನ ನಾನಾ ದೇಶಗಳನ್ನು ಸುತ್ತಾಡಬೇಕು. ಇದೆಲ್ಲ ಕೈಕಾಲು ಗಟ್ಟಿಯಾಗಿದ್ದಾಗ ಮಾತ್ರ ಸಾಧ್ಯ ಎಂಬ ಮಾತೇನೋ ನಿಜ. ಹೀಗೆ ಹೇಳುವುದು ಸುಲಭ. ಆದರೆ ಇದು ಎಲ್ಲರಿಗೂ ಹಲವು ಕಾರಣಗಳಿಂದಾಗಿ ಸಾಧ್ಯವಾಗುವುದಿಲ್ಲ. (early retirement) ಆದ್ದರಿಂದ ಇಂಥ ಯೋಚನೆಗೆ ಮುನ್ನ ಕೆಲವು ಪ್ರಶ್ನೆಗಳನ್ನು ನೀವು ನಮ್ಮಲ್ಲೇ ಕೇಳಿಕೊಂಡು ಬಳಿಕ ಉತ್ತರವನ್ನೂ ಕಂಡುಕೊಳ್ಳಬೇಕು. ಬಳಿಕ ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳಬಹುದು.

ಮೊದಲನೆಯದಾಗಿ ನೀವು 40ನೇ ವರ್ಷಕ್ಕೆ ನಿವೃತ್ತಿಯಾಗುವುದಿದ್ದರೆ, ಉಳಿದ ಬದುಕಿಗೆ ಬೇಕಾದ ಏರ್ಪಾಟುಗಳನ್ನು ಮಾಡಿದ್ದೀರಾ, ಅದರ ಸಮಗ್ರ ವಿವರಗಳು ನಿಮ್ಮಲ್ಲಿ ಇದೆಯಾ ಎಂದು ಕೇಳಿಕೊಳ್ಳಬೇಕು. ಎರಡನೆಯದಾಗಿ ಮುಂದಿನ ಬದುಕಿನುದ್ದಕ್ಕೂ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಿದ್ದೀರಾ? ಎಂದು ಕೇಳಿಕೊಳ್ಳಿ. ಇನ್ನು ಮುಂದೆ ಕಚೇರಿ ಕೆಲಸದ ಹೊರೆ ಹೊತ್ತುಕೊಳ್ಳಲು ಸಾಧ್ಯವೇ ಇಲ್ಲ ಎಂದು ಬೇಸತ್ತುಕೊಂಡಿರುವವರು ಈ ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು. (personal finance advice) ಏಕೆಂದರೆ ಇದು ಮೂಲಭೂತ ಪ್ರಶ್ನೆ. ಈ ಎರಡು ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಅವಸರದಲ್ಲಿ ನಿವೃತ್ತಿಯ ಆಲೋಚನೆ ಮಾಡದಿರಿ.

ಮೇಲ್ಕಂಡ ಎರಡೂ ಪ್ರಶ್ನೆಗಳು ತುಸು ಕಹಿ ಎನ್ನಿಸಬಹುದು. ಆದರೆ ಅದು ವಸ್ತುನಿಷ್ಠ. ವಾಸ್ತವ ಆಧರಿತ. ಅದನ್ನು ಬಗೆಹರಿಸದೆ ಬೇರೆ ವಿಧಿ ಇಲ್ಲ. ಉದ್ಯೋಗ ಬಿಟ್ಟ ಕೆಲ ವರ್ಷಗಳು ಗ್ರೇಟ್‌ ಎನ್ನಿಸುತ್ತವೆ. ನಮ್ಮ ಎಲ್ಲ ಹವ್ಯಾಸಗಳಿಗೆ ಬಹಳಷ್ಟು ಸಮಯ, ಸಂದರ್ಭ ಸಿಗುತ್ತದೆ ಎಂದು ಅನ್ನಿಸುತ್ತದೆ. ಸುತ್ತಮುತ್ತಲಿನ ಸಮಾಜ, ಬಂಧು ಬಳಗದವರು ಕೂಡ ನಿವೃತ್ತಿಗೆ ಉತ್ತೇಜಿಸಬಹುದು. ಆದರೆ ಕ್ಷಣ ಭಂಗುರದಂತೆ ಕಾಲ ಸಾಗಿದಂತೆ ಭ್ರಮ ನಿರಸನವಾಗುವ ರಿಸ್ಕ್‌ ಕೂಡ ಇದ್ದೇ ಇರುತ್ತದೆ ಎಂಬುದನ್ನು ಮರೆಯಬಾರದು.

ಒಬ್ಬ ವ್ಯಕ್ತಿ ತನ್ನಲ್ಲಿರುವ ಎನರ್ಜಿ, ಸಮಯ, ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಸದಾ ಬಯಸುತ್ತಾನೆ. ಇವೆಲ್ಲ ಇದ್ದೂ ಸುಮ್ಮನಿರುವುದು ಕಷ್ಟ. ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಬಯಕೆ ಸುಪ್ತವಾಗಿರುತ್ತದೆ. ದಿನ ನಿತ್ಯ ಪ್ರಯಾಣ, ಟ್ರೆಕ್ಕಿಂಗ್‌ ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆ ನಿವೃತ್ತಿಯ ಬಳಿಕವೂ ಬರುವುದಿಲ್ಲ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: Stock trading : ನೀವೂ ಸ್ಟಾಕ್‌ ಟ್ರೇಡಿಂಗ್‌ ಮಾಡ್ತೀರಾ? ವಿಸ್ತಾರ ಮನಿ ಪ್ಲಸ್‌ ವಿಡಿಯೊ ವೀಕ್ಷಿಸಿ

ಎಲ್ಲಕ್ಕಿಂತ ಮುಖ್ಯವಾಗಿ ಕೆಲ ಆರ್ಥಿಕ ಲೆಕ್ಕಾಚಾರಗಳನ್ನು ಕರಾರುವಕ್ಕಾಗಿ ಮಾಡಬೇಕು. ಅನೇಕ ಮಂದಿ ತಮ್ಮ ಕೂಡಿಟ್ಟ ಒಟ್ಟು ಹಣದಲ್ಲಿ ಪ್ರತಿ ವರ್ಷ 4% ಮೊತ್ತವನ್ನು ಹಿಂತೆಗೆದುಕೊಂಡರೆ ಜೀವನದ ಖರ್ಚು ವೆಚ್ಚಗಳಿಗೆ ಸಾಕಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ 4% ವಿತ್‌ ಡ್ರಾವಲ್ಸ್‌ ನಿಮ್ಮ ವರ್ಷದ ವೆಚ್ಚಗಳಿಗೆ ಸಾಕಾಗಬೇಕಿದ್ದರೆ ಬಂಡವಾಳವೂ ದೊಡ್ಡ ಮೊತ್ತದಲ್ಲಿ ಇರಬೇಕಾಗುತ್ತದೆ. ನಿಮಗೆ ತಿಂಗಳಿಗೆ 50,000 ರೂ. ಖರ್ಚು ವೆಚ್ಚ ಇದೆ ಎಂದಿಟ್ಟುಕೊಳ್ಳಿ. ವರ್ಷಕ್ಕೆ 6 ಲಕ್ಷ ರೂ. ವೆಚ್ಚವಾಗುತ್ತದೆ. ಆಗ ನಿಮ್ಮ ಅಸಲು ಸಂಪತ್ತು 1.5 ಕೋಟಿ ರೂ. ಬೇಕಾಗುತ್ತದೆ. (investment corpus) ಸಾಲದ್ದಕ್ಕೆ ಅನಿರೀಕ್ಷಿತವಾಗಿ ಖರ್ಚುಗಳು ಬಂದಾಗ ಕೂಡ ಅಸಲು ಸಂಪತ್ತು ಕರಗುತ್ತದೆ.

ಹಣದುಬ್ಬರ ಕೂಡ ಏರುಗತಿಯಲ್ಲಿದ್ದರೆ, ಅದು ಹಣದ ಮೌಲ್ಯವನ್ನು ಕಳೆಯುತ್ತದೆ. ನೀವು 40 ವರ್ಷಕ್ಕೇ ನಿವೃತ್ತಿಯಾಗುವುದಿದ್ದರೆ, ಮುಂದಿನ 50 ವರ್ಷಗಳ ಅವಧಿಗೆ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸುವುದು ಕಷ್ಟಕರ. ಹೀಗಾಗಿ ಈ ಪ್ರಶ್ನೆಯನ್ನು ಬಗೆಹರಿಸಲುವ ಮುನ್ನ ಪ್ರತಿಯೊಂದು ವಿಷಯದಲ್ಲೂ ಆಳವಾಗಿ, ಸಮಗ್ರವಾಗಿ ಹಾಗೂ ಸಾಧ್ಯವಾದಷ್ಟು ನಿಖರವಾಗಿ ಯೋಚಿಸಿ, ಬಳಿಕವಷ್ಟೇ 40ನೇ ವಯಸ್ಸಿಗೆ ನಿವೃತ್ತಿಯ ಬಗ್ಗೆ ನಿರ್ಧರಿಸಿ. ಆತುರದ ನಿರ್ಣಯ ಬೇಡ. ಅದಕ್ಕೂ ಮುನ್ನ ಆರ್ಥಿಕ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ಸಾಕಷ್ಟು ವಿಮೆಯನ್ನು ಖರೀದಿಸಿ. ಪಿಂಚಣಿ ಯೋಜನೆಗಳನ್ನೂ ವ್ಯವಸ್ಥೆಗೊಳಿಸಿ. ಹಲವಾರು ಆದಾಯ ಮೂಲಗಳನ್ನು ಖಚಿತಪಡಿಸಿಕೊಳ್ಳಿ.

Exit mobile version