ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರುಪೇ ಪ್ರಿಪೇಯ್ಡ್ ಫೊರೆಕ್ಸ್ ಕಾರ್ಡ್ (Rupay Prepaid Forex card) ಅನ್ನು ಬಿಡುಗಡೆ ಮಾಡಲು ಭಾರತದಲ್ಲಿನ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳ ಎಟಿಎಂ, ಪಿಒಎಸ್ ಮೆಶೀನ್‌ಗಳಲ್ಲಿ, ಆನ್‌ಲೈನ್ ಹಣ ವರ್ಗಾವಣೆಗೆ, ಶಾಪಿಂಗ್‌ಗೆ ಬಳಸಬಹುದು.
ರುಪೇ ಡೆಬಿಟ್ ಕಾರ್ಡ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳ ಜತೆಗೆ ಹೆಚ್ಚುವರಿಯಾಗಿ ರುಪೇ ಫೊರೆಕ್ಸ್ ಕಾರ್ಡ್ ಬಿಡುಗಡೆಯಾಗಲಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಇದನ್ನು ಬಳಸಬಹುದು. ಜಗತ್ತಿನಾದ್ಯಂತ ರುಪೇ ಕಾರ್ಡ್ ಬಳಕೆ ಹೆಚ್ಚಿಸಲಿದೆ. ಆರ್‌ಬಿಐ ಗವರ್ವರ್ ಶಕ್ತಿಕಾಂತ ದಾಸ್ ಅವರು ಜೂನ್ 8ರ ಹಣಕಾಸು ನೀತಿ ಪರಾಮರ್ಶೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಭಾರತೀಯ ಬ್ಯಾಂಕ್‌ಗಳು ಬಿಡುಗಡೆ ಮಾಡುತ್ತಿರುವ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು (RuPay Debit and Credit cards) ದ್ವಿಪಕ್ಷೀಯ ವ್ಯವಸ್ಥೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸ್ವೀಕೃತಿಯಾಗುತ್ತಿದೆ. ಅಂತಾರಾಷ್ಟ್ರೀಯ ಕಾರ್ಡ್ ಸಿಸ್ಟಮ್‌ಗಳಲ್ಲಿ ಜನಪ್ರಿಯವಾಗುತ್ತಿವೆ. ಭಾರತೀಯರಿಗೆ ತವರಿನಲ್ಲಿ ಹಾಗೂ ವಿದೇಶಗಳಲ್ಲಿ ಪ್ರಯಾಣ ಮಾಡುವಾಗ ಹೆಚ್ಚಿನ ಅನುಕೂಲಕ್ಕಾಗಿ ರುಪೇ ಪ್ರಿಪೇಯ್ಡ್ ಫೊರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ ಎಂದು ಆರ್‌ಬಿಐ ವಿವರಿಸಿದೆ.
ಆರ್‌ಬಿಐನ ಪೇಮೆಂಟ್ಸ್ ವಿಶನ್ ಡಾಕ್ಯುಮೆಂಟ್ 2025 (RBI Payments vision document 2025) ಈಗಾಗಲೇ ರಚನೆಯಾಗಿದೆ. ಇದರ ಅಡಿಯಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಅನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ನೀಲನಕ್ಷೆ ಮತ್ತು ಕಾರ್ಯತಂತ್ರವನ್ನು ಹೆಣೆಯಲಾಗಿದೆ. ಭೂತಾನ್, ಸಿಂಗಾಪುರ, ನೇಪಾಳ, ಯುಎಇ ಜತೆಗೆ ಕೋ-ಬ್ರಾಂಡಿಂಗ್ ಇಲ್ಲದೆಯೇ ರುಪೇ ಕಾರ್ಡ್ ಬಳಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ದೇಶಗಳಿಗೆ ಹೋದಾಗ ಸಲೀಸಾಗಿ ರುಪೇ ಕಾರ್ಡ್ ಮೂಲಕ ಹಣ ವರ್ಗಾಯಿಸಬಹುದು. ಶಾಪಿಂಗ್ ಮಾಡಬಹುದು. ಭವಿಷ್ಯದ ದಿನಗಳಲ್ಲಿ ಎನ್‌ಪಿಸಿಐ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಲಿಮಿಟೆಡ್ (NPCI International payments limited) ಜೆತೆಗ ಪಾಲುದಾರಿಕೆಯಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಅನ್ನು ವಿದೇಶದಲ್ಲಿ ವ್ಯಾಪಕವಾಗಿ ಬಳಸಲು ಹಾದಿ ಸುಗಮಗೊಳಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ರುಪೇ ಪ್ರಿ-ಪೇಯ್ಡ್ ಫೊರೆಕ್ಸ್ ಕಾರ್ಡ್‌ಗಳು ಹಣಕಾಸು ತಂತ್ರಜ್ಞಾನ ಇಂಡಸ್ಟ್ರಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸೀಮಾತೀತವಾಗಿ ಹಾಗೂ ಸುಲಭವಾಗಿ ಹಣಕಾಸು ವರ್ಗಾವಣೆಗೆ ಹಾದಿಯಾಗಲಿದೆ ಎಂದು ಬ್ಯಾಂಕಿಂಗ್ ತಂತ್ರಜ್ಞಾನ ತಜ್ಞರಾದ ರಾಜಶ್ರೀ ರಂಗನ್ ತಿಳಿಸಿದ್ದಾರೆ. ಆರ್‌ಬಿಐ ಇ-ರುಪೀ ವೋಚರ್ ಬಿಡುಗಡೆಗೂ ಪ್ರಸ್ತಾಪಿಸಿದೆ. ಇ-ರುಪೀ ಡಿಜಿಟಲ್ ವೋಚರ್‌ನಿಂದ ಭಾರತದಲ್ಲಿ ಡಿಜಿಟಲ್ ಪೇಮೆಂಟ್‌ಗಳು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಸಾಲಗಾರರಿಗೆ 2023-24ರಲ್ಲಿ ಸಾಲದ ಬಡ್ಡಿ ದರ ಇಳಿಕೆಯ ಸಿಹಿ ಸುದ್ದಿ ಶೀಘ್ರದಲ್ಲಿಯೇ ದೊರೆಯುವ ಸಾಧ್ಯತೆ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರೀಕ್ಷೆಯಂತೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಿದೆ. ಮತ್ತೊಂದು ಕಡೆ ರಿಟೇಲ್ ಹಣದುಬ್ಬರ ಕೂಡ ಇಳಿಕೆಯ ಹಾದಿಯಲ್ಲಿದೆ. ಇದು ಗೃಹ ಸಾಲಗಾರರಿಗೆ ದೊಡ್ಡ ರಿಲೀಫ್ ಕೊಟ್ಟಿದೆ. ಏಕೆಂದರೆ 2022ರ ಮೇಯಿಂದ 2023ರ ಫೆಬ್ರವರಿ ತನಕ ಕೇವಲ 10 ತಿಂಗಳುಗಳಲ್ಲಿ ಆರ್‌ಬಿಐ ರೆಪೊ ದರದಲ್ಲಿ ಒಟ್ಟು 2.5% ಏರಿಕೆ ಮಾಡಿತ್ತು.
ಆರ್‌ಬಿಐ ಸತತ ಎರಡನೇ ದ್ವೈಮಾಸಿಕದಲ್ಲಿ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ಸಾಲಗಳ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಉಂಟಾಗಿದೆ. ಮುಖ್ಯವಾಗಿ ರೆಪೊ ದರವನ್ನು (repo rate) ಆಧರಿಸಿದ ಗೃಹ ಸಾಲಗಳ ಬಡ್ಡಿಯಲ್ಲಿ ಇಳಿಕೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: RBI Monetary Policy : ಸಾಲಗಾರರಿಗೆ ಶೀಘ್ರದಲ್ಲೇ ಬಡ್ಡಿ ದರ ಇಳಿಕೆಯ ಬಿಗ್ ರಿಲೀಫ್ ?