ಪ್ರಾಮಾಣಿಕವಾಗಿಯೂ ಸಿಪ್ (SIP- Systematic investment plan) ಮೂಲಕ ನೀವು ಶ್ರೀಮಂತರಾಗಬಹುದು. ರಿಟೇಲ್ ಹೂಡಿಕೆದಾರರು ಸಣ್ಣ ಮೊತ್ತದ ಹೂಡಿಕೆಯನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ ಮೂಲಕ ಆರಂಭಿಸಿದರೂ ದೊಡ್ಡ ಮೊತ್ತದ ಹಣವನ್ನು ಪಡೆಯಲು ಸಾಧ್ಯವಿದೆ. ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (Association of mutual funds in India) ಪ್ರಕಾರ ಜೂನ್‌ನಲ್ಲಿ ಸಿಪ್ ರಿಜಿಸ್ಟ್ರೇಶನ್ ಸಂಖ್ಯೆ ದಾಖಲೆಯ 27.8 ಲಕ್ಷಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ಒಟ್ಟು ಸಿಪ್‌ಗಳ ಸಂಖ್ಯೆ 6.7 ಕೋಟಿಗೆ ಏರಿಕೆಯಾಗಿದೆ. ಕಳೆದ ಮೇ ಮತ್ತು ಜೂನ್‌ನಲ್ಲಿ ಸತತ ಎರಡನೇ ತಿಂಗಳಿಗೆ ಮಾಸಿಕ ಸಿಪ್ ಮೌಲ್ಯ 14,000 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಣ್ಣ ಹೂಡಿಕೆದಾರರು ಸಿಪ್ ಮೂಲಕ ಶಿಸ್ತುಬದ್ಧ ಹೂಡಿಕೆಯೊಂದಿಗೆ ಹೇಗೆ ಹಣ ಗಳಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಸಾಮಾನ್ಯ ಭಾಷೆಯಲ್ಲಿ ಹೇಳುವುದಿದ್ದರೆ ಸಿಪ್ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲೀನ ಹೂಡಿಕೆಯು ಮಾರುಕಟ್ಟೆಯ ಏರಿಳಿತಗಳನ್ನು ಎದುರಿಸಲು ಹಾಗೂ ಅವುಗಳ ನಡುವೆ ಉತ್ತಮ ಲಾಭ ಪಡೆಯಲು ಸಹಕಾರಿಯಾಗುತ್ತದೆ. ಇದು ಮಾತ್ರವೇ ಅಲ್ಲ, ಸಿಪ್‌ನ ಇತರ ಲಾಭಗಳು ಮತ್ತು ಆಯಾಮಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಬೇಕಾದ ಅಗತ್ಯ ಇದೆ. ಇದನ್ನು ತಿಳಿದುಕೊಳ್ಳುವುದು ಈ ದೀರ್ಘಕಾಲೀನ ಜರ್ನಿಯಲ್ಲಿ ನಿರ್ಣಾಯಕವೂ ಆಗಿದೆ.
ನೀವು ಸರಿಯಾದ ರೀತಿಯಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡರೆ, ಸಿಪ್ ಹೂಡಿಕೆಯ ಮೂಲಕ ಸಾಧಿಸಬಹುದು. ಈ ಕೆಳಕಂಡ ಟೇಬಲ್‌ನಲ್ಲಿ ನೀವು ದೀರ್ಘಕಾಲೀನ ಸಿಪ್ ಹೂಡಿಕೆಯು ಉತ್ತಮ ಆದಾಯ ನೀಡಿರುವುದನ್ನು ಕಾಣಬಹುದು. ಮುಖ್ಯವಾಗಿ 8 ವರ್ಷಗಳಿಗೂ ಹೆಚ್ಚಿನ ಮ್ಯೂಚುವಲ್ ಫಂಡ್ ಸಿಪ್ ಹೂಡಿಕೆ ಸಕಾರಾತ್ಮಕ ಆದಾಯ ನೀಡಿರುವುದನ್ನು ಗಮನಿಸಬಹುದು.
ಸಿಪ್ ಅವಧಿ | ಸಿಪ್ ಅವಧಿ | ಸಿಪ್ ಅವಧಿ | ಸಿಪ್ ಅವಧಿ | ಸಿಪ್ ಅವಧಿ | |
3 ವರ್ಷಗಳು | 5 ವರ್ಷಗಳು | 8 ವರ್ಷಗಳು | 10 ವರ್ಷಗಳು | 15 ವರ್ಷಗಳು | |
ಗರಿಷ್ಠ ಆದಾಯ(%) | 52.4 | 50 | 40.8 | 29.6 | 18.1 |
ಕನಿಷ್ಠ ಆದಾಯ(%) | -36.2 | -10.5 | 1.4 | 4.6 | 7.4 |
ಮಧ್ಯಮ ಆದಾಯ(%) | 12.3 | 13.1 | 14.2 | 14.1 | 14.6 |
% ಪಟ್ಟು ಋಣಾತ್ಮಕ ಆದಾಯ | 16 | 9 | 0 | 0 | 0 |
% ಪಟ್ಟು 10%ಕ್ಕಿಂತ ಹೆಚ್ಚು ರಿಟರ್ನ್ | 55 | 72 | 81 | 94 | 97 |
ನಿಧಾನವಾಗಿ ಆರಂಭಿಸಿ, ಉತ್ತಮ ಆರಂಭ ಆದೀತು: ಸಿಪ್‌ನಲ್ಲಿ ಆರಂಭಿಕ ವರ್ಷಗಳು ನಿಜವಾಗಿಯೂ ನಿಮ್ಮ ಹೂಡಿಕೆಯ ಶಿಸ್ತಿಗೆ ಪರೀಕ್ಷೆಯಂತೆ ಇರುತ್ತದೆ. ಈ ಹಂತದಲ್ಲಿ ಮಾರುಕಟ್ಟೆ ಹೇಗೆ ವರ್ತಿಸುತ್ತದೆ ಎಂಬುದು ಮುಖ್ಯವಾಗುವುದಿಲ್ಲ. ಆದರೆ ಮಾರುಕಟ್ಟೆಯ ಏರಿಳಿತಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ಕೆಲವೊಂದು ಸಲ ಮಾರುಕಟ್ಟೆ ಕೆಳ ಮಟ್ಟದಲ್ಲಿ ಇರುತ್ತದೆ. ಈ ಟ್ರೆಂಡ್ 2-3 ವರ್ಷ ಇದ್ದರೆ ಅಷ್ಟೂ ಕಾಲ ಸಿಪ್ ಆದಾಯ ಕೊಡುವುದಿಲ್ಲ. ಆದರೆ ಆ ಸಂದರ್ಭ ಹೂಡಿಕೆಯ ಶಿಸ್ತನ್ನು ಕಾಪಾಡಿಕೊಳ್ಳಬೇಕು. ತಾಳ್ಮೆ ಕಳೆದುಕೊಳ್ಳಬಾರದು.
ವೈಟ್ ಓಕ್ ಕ್ಯಾಪಿಟಲ್ ಎಎಂಸಿ ಸಂಸ್ಥೆಯ ಪ್ರಕಾರ ಮೊದಲ 5 ವರ್ಷಗಳಲ್ಲಿ ಸಿಪ್‌ಗಳು ಕೊಡುವ ಆದಾಯ ಕಡಿಮೆಯಾಗಿರುತ್ತದೆ. ಆದರೆ 10 ವರ್ಷಗಳ ಬಳಿಕ ಹೆಚ್ಚಿನ ಆದಾಯ ಕೊಟ್ಟಿದೆ. 1996 ರ ಆಗಸ್ಟ್ ಮತ್ತು 2023ರ ಜೂನ್ ನಡುವೆ ಸೆನ್ಸೆಕ್ಸ್ ಆಧರಿತ (ಎಸ್ &ಪಿ ಬಿಎಸ್ ಇ ಸೆನ್ಸೆಕ್ಸ್ ) ಮ್ಯೂಚುವಲ್ ಫಂಡ್‌ನಲ್ಲಿ ಸರಾಸರಿ ಸಿಪ್ ರಿಟರ್ನ್ 8% ಅಥವಾ ಕಡಿಮೆ ಇದ್ದರೆ, 10 ವರ್ಷಗಳ ಅಂತ್ಯಕ್ಕೆ ಆರೋಗ್ಯಕರವಾದ 18.7% ರ ಮಟ್ಟಕ್ಕೆ ಏರಿಕೆಯಾಗಿದೆ. ಸರಾಸರಿಯನ್ನು ಹೋಲಿಸಿದರೆ ಮೊದಲ 5 ವರ್ಷಗಳಲ್ಲಿ ಸರಾಸರಿ 8% ಸಿಪ್ ಆದಾಯ ಲಭಿಸಿದರೆ 10 ವರ್ಷದ ಬಳಿಕ 14.9% ಆಗಿರುವುದನ್ನು ಗಮನಿಸಬಹುದು.
ಹೀಗಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ ಮೂಲಕ ಹೂಡುವುದು ಹಾಗೂ ಮಾರುಕಟ್ಟೆ ಕುಸಿತವಾಗಿದ್ದಾಗ ಎದೆಗುಂದದೆ ಹೂಡಿಕೆ ಮುಂದುವರಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.