ನವ ದೆಹಲಿ: 2023ರ ಅಕ್ಟೋಬರ್-ಡಿಸೆಂಬರ್ ತ್ರೈ ಮಾಸಿಕದ (October-December 2023 quarter) ಪಿಪಿಎಫ್(PPF), ಎನ್‌ಎಸ್‌ಸಿ(NSC), ಕೆವಿಪಿ(KVP) ಮತ್ತು ಪೋಸ್ಟ್ ಆಫೀಸ್(Post office) ಮುಂತಾದ ಸಣ್ಣ ಉಳಿತಾಯ ಯೋಜನೆಗಳ(small savings schemes) ಹೂಡಿಕೆ ಮೇಲಿನ ಬಡ್ಡಿದರಗಳ ಪರಿಷ್ಕರಣೆ ಸೆಪ್ಟೆಂಬರ್ 30ರಂದು ನಡೆಯಲಿದೆ. ಹಿಂದಿನ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್ 2023)ದ ದರವನ್ನು ಜಿ-ಸೆಕ್ ಇಳುವರಿಯ ಆಧಾರದ ಮೇಲೆ ನಿರ್ಧರಿಸಲಾಗುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಈ ಬಾರಿ ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹಿಂದಿನ ತ್ರೈ ಮಾಸಿಕದ ಟ್ರೆಂಡ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
ತಜ್ಞರು ಏನು ಹೇಳುತ್ತಾರೆ?
ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ ಮತ್ತು ಅದಕ್ಕನುಗುಣವಾಗಿ ಮುಂದಿನ ತ್ರೈ ಮಾಸಿಕ ದರವನ್ನು ನಿರ್ಧರಿಸಲಾಗುತ್ತದೆ. 10 ವರ್ಷಗಳ ಜಿ-ಸೆಕ್ ಶೇಕಡಾ 7.0 ರಿಂದ 7.2ರ ನಡುವೆ ಇದೆ ಮತ್ತು ಮುಂದೆ ಶೇಕಡಾ 7.1-7.2ರಷ್ಟು ಮುಂದುವರಿಯುವ ನಿರೀಕ್ಷೆಯಿದೆ. ಈ ವರ್ಷದ ಸೆಪ್ಟಂಬರ್ ನಂತರ ಹಣದುಬ್ಬರ ದರವು ಶೇಕಡಾ 5-6ರ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಬದಲಾಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ಪರಿಣತರು ಹೇಳಿದ್ದಾರೆ.
ಪ್ರಸಕ್ತ ಬಡ್ಡಿ ದರ ಎಷ್ಟಿದೆ?
ಪ್ರಸ್ತುತ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರಗಳ ವಿವರ ನೋಡುವುದಾದರೆ, ವಾರ್ಷಿಕವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಿಗೆ 4%, ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್-SCSSಗೆ 8.2% ಮತ್ತು ಸಾರ್ವಜನಿಕ ಭವಿಷ್ಯ ನಿಧಿ-PPFಗೆ 7.1% ಬಡ್ಡಿ ದರವಿದೆ.
ಹಣಕಾಸು ಸಚಿವಾಲಯವು ಅಕ್ಟೋಬರ್-ನವೆಂಬರ್ ತ್ರೈಮಾಸಿಕದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳ ಬಡ್ಡಿದರವನ್ನು 2023ರ ಸೆಪ್ಟಂಬರ್ ವೇಳೆಗೆ ವಾರ್ಷಿಕವಾಗಿ ಶೇಕಡಾ 7.10ಕ್ಕೆ ಉಳಿಸಿಕೊಳ್ಳಬಹುದು ಎಂಬ ಸಲಹೆ ವ್ಯಕ್ತವಾಗಿದೆ.
ಕಳೆದ ವರ್ಷದಲ್ಲಿ ದರ ಏರಿಕೆಯೊಂದಿಗೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪ್ರಸ್ತುತ ದೀರ್ಘಾವಧಿಯ ಸ್ಥಿರ ಠೇವಣಿ(FD)ಗಳಿಗೆ ಸಮಾನವಾಗಿವೆ ಎಂದು ಬ್ಯಾಂಕಿಂಗ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಏಪ್ರಿಲ್‌ನಿಂದ ದರ ಏರಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಜಾಗತಿಕವಾಗಿ ಹಣದುಬ್ಬರವು ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ ರೆಪೊ ದರವು ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ. ಆದ್ದರಿಂದ ಹೆಚ್ಚಿನ ಪರಿಷ್ಕರಣೆಗೆ ಯಾವುದೇ ಸಾಧ್ಯತೆ ಇಲ್ಲ. ಜೊತೆಗೆ SCSSನಲ್ಲಿ ಗಮನಾರ್ಹ ದರ ಏರಿಕೆಯ ಸಾಧ್ಯತೆಗಳು ಕಡಿಮೆ ಎಂದೂ ಅವರು ಹೇಳಿದ್ದಾರೆ.
ಜೂನ್ 30, 2023ರಲ್ಲಿ ಸರ್ಕಾರ ಅನೇಕ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹೆಚ್ಚಿಸಿತ್ತು. 2020-21ರ ಎರಡನೇ ತ್ರೈ ಮಾಸಿಕದಿಂದ 2022-23ರ ಎರಡನೇ ತ್ರೈಮಾಸಿಕದವರೆಗೆ ಸತತ ಒಂಬತ್ತು ತ್ರೈ ಮಾಸಿಕಗಳಲ್ಲಿ ಯಾವುದೇ ಬದಲಾವಣೆಯಾಗದ ನಂತರ, ಅಕ್ಟೋಬರ್-ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ಇದು ನಾಲ್ಕನೇ ಹೆಚ್ಚಳವಾಗಿತ್ತು.
ಸದ್ಯದ ಬಡ್ಡಿ ದರಗಳ ವಿವರ
ಜುಲೈ ಮತ್ತು ಸೆಪ್ಟೆಂಬರ್ 2023ರ ತ್ರೈ ಮಾಸಿಕದಲ್ಲಿರುವ ಬಡ್ಡಿ ದರಗಳ ವಿವರ ಇಲ್ಲಿದೆ.
- ಉಳಿತಾಯ ಠೇವಣಿ-4%
- 1 ವರ್ಷದ ಪೋಸ್ಟ್ ಆಫೀಸ್ ಠೇವಣಿ-6.9%
- 1 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್-6.9%
- 2 ವರ್ಷದ ಪೋಸ್ಟ್ ಆಫೀಸ್ ಡೆಪಾಸಿಟ್- 7.0%
- 3 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್-7%
- 5 ವರ್ಷದ ಪೋಸ್ಟ್ ಆಫೀಸ್ ಡೆಪಾಸಿಟ್-7.5%
- 5 ವರ್ಷದ ರಿಕರಿಂಗ್ ಡೆಪಾಸಿಟ್-6.5%
- ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ಸ್(NCS)-7.7%
- ಕಿಸಾನ್ ವಿಕಾಸ್ ಪತ್ರ: 7.5%(ಇದು 115 ತಿಂಗಳಲ್ಲಿ ಮೆಚ್ಯುರ್ ಆಗಲಿದೆ)
- ಪಬ್ಲಿಕ್ ಪ್ರೊವಿಡೆಂಟ್ ಫಂಡ್-7.1%
- ಸುಕನ್ಯಾ ಸಮೃದ್ದಿ ಖಾತೆ- 8.0%
- ಸೀನಿಯರ್ ಸಿಟಿಸನ್ ಸೇವಿಂಗ್ ಸ್ಕೀಮ್-8.2%
- ಮಾಸಿಕ ಆದಾಯ ಖಾತೆ-7.4%
ಸಣ್ಣ ಉಳಿತಾಯ ಯೋಜನೆಗಳಲ್ಲಿ 3 ವಿಧಗಳಿವೆ – ಉಳಿತಾಯ ಠೇವಣಿ, ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರಿಕರಿಂಗ್ ಡಿಪಾಸಿಟ್ ಗಳು ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.
ಇದನ್ನೂ ಓದಿ: Server Hack : ಆಸ್ತಿ ನೋಂದಣಿಗಾಗಿ ರಿಜಿಸ್ಟ್ರಾರ್ ಕಚೇರಿಗೆ ಹೋದವರ ಬ್ಯಾಂಕ್ ಖಾತೆಯಿಂದ ಹಣ ಮಾಯ!