ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾವರಿನ್ ಗೋಲ್ಡ್ ಬಾಂಡ್ (SGB) 2016-I ಯೋಜನೆಯ ರಿಡೆಮ್ಷನ್‌ಗೆ ಕೊನೆಯ ದಿನಾಂಕವನ್ನು ಘೋಷಿಸಿದೆ. ( Sovereign Gold Bond-SGBs) 2024ರ ಫೆಬ್ರವರಿ 8 ಕೊನೆಯ ದಿನಾಂಕವಾಗಿದೆ. ಅಂದಹಾಗೆ ಈ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಿದವರ ಹಣ ಕಳೆದ 8 ವರ್ಷಗಳಲ್ಲಿ ಡಬಲ್ ಆಗಿ ಬೆಳೆದಿದೆ, ಹಾಗಾದರೆ ಇದರ ವಿವರಗಳೇನು? ಎಂಬುದನ್ನು ನೋಡೋಣ.
ಸಾವರಿನ್ ಗೋಲ್ಡ್ ಬಾಂಡ್ಸ್ 2016-I (SGB) ಯೋಜನೆಯು 2016ರ ಜುಲೈನಲ್ಲಿ ಬಿಡುಗಡೆಯಾದಾಗ ಅದರ ದರ ಪ್ರತಿ ಯುನಿಟ್‌ಗೆ 3,119 ರೂ. ಆಗಿತ್ತು. 2024ರ ಫೆಬ್ರವರಿ 8ರಂದು ಅದರ ದರ ಪ್ರತಿ ಯುನಿಟ್‌ಗೆ 6,271 ರೂ. ಆಗಿರಲಿದೆ. ರಿಡೆಮ್ಷನ್ ದರ ನಿಶ್ಚಿತವಾಗಿದ್ದು, ಕಳೆದ ವಾರದ 999 ಪ್ಯೂರಿಟಿ ಚಿನ್ನದ ಸರಾಸರಿ ಕ್ಲೋಸಿಂಗ್ ರೇಟ್ ಆಗಿರುತ್ತದೆ.
ಒಬ್ಬ ಹೂಡಿಕೆದಾರ ಎಂಟು ವರ್ಷಗಳ ಹಿಂದೆ ಗೋಲ್ಡ್ ಬಾಂಡ್ ಸ್ಕೀಮ್‌ನಲ್ಲಿ 35 ಗ್ರಾಮ್ ಗೆ ಹೂಡಿಕೆ ಮಾಡಿರುತ್ತಿದ್ದರೆ ಆಗ ಅದರ ಮೊತ್ತ 109,165 ರೂ. ಆಗಿರುತ್ತಿತ್ತು. ಹಾಗೂ ಈಗ ಅದರ ಮೌಲ್ಯ 217,595 ರೂ. ಆಗಿರುತ್ತಿತ್ತು. ಬಡ್ಡಿ ದರ ಹೊರತುಪಡಿಸಿ ಎಸ್‌ಜಿಬಿಯು ವಾರ್ಷಿಕ 9.12% ಬೆಳವಣಿಗೆ ದಾಖಲಿಸಿದೆ. ಬಡ್ಡಿ ಆದಾಯವನ್ನೂ ಪರಿಗಣಿಸಿದರೆ ಹೂಡಿಕೆದಾರರಿಗೆ 101.05% ರಿಟರ್ನ್ ಸಿಕ್ಕಿದಂತಾಗಿದೆ.
ಎಂಟು ವರ್ಷಗಳ ಮೆಚ್ಯೂರಿಟಿ ಆದಾಗ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಎಸ್‌ಜಿಬಿ ಬಾಂಡ್‌ಗಳು ಪ್ರತಿ ಗ್ರಾಮ್ ಚಿನ್ನದ ಮುಖಬೆಲೆಯಲ್ಲಿ ದೊರೆಯುತ್ತವೆ. ಬೇಸಿಕ್ ಯನಿಟ್ 1 ಗ್ರಾಮ್. ಒಬ್ಬ ವ್ಯಕ್ತಿ ಗರಿಷ್ಠ 4 ಕೆ.ಜಿ ಖರೀದಿಸಬಹುದು. ಟ್ರಸ್ಟ್‌ಗಳು 20 ಕೆಜಿ ಪಡೆಯಬಹುದು. ಎಸ್‌ಜಿಬಿ ಬಾಂಡ್‌ಗಳನ್ನು ಬ್ಯಾಂಕ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL ), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್( CCIL ) , ನಿರ್ದಿಷ್ಟ ಅಂಚೆ ಕಚೇರಿಗಳು, ಮಾನ್ಯತೆ ಪಡೆದಿರುವ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಎನ್ ಎಸ್‌ಇ, ಬಿಎಸ್‌ಇನಲ್ಲಿ ಎಸ್‌ಜಿಬಿ ಬಾಂಡ್ ಗಳು ಸಿಗುತ್ತವೆ. 2015ರ ನವೆಂಬರ್‌ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಆರ್‌ಬಿಐ ಸರ್ಕಾರದ ಜತೆಗೆ ಸಮಾಲೋಚನೆ ನಡೆಸಿ ಎಸ್ ಜಿಬಿಯನ್ನು ಬಿಡುಗಡೆಗೊಳಿಸುತ್ತದೆ.
ಇದನ್ನೂ ಓದಿ: Money Guide : ಹೂಡಿಕೆದಾರರಿಗೆ ಗುಡ್ ನ್ಯೂಸ್, 3 ವರ್ಷ ಹೂಡಿಕೆ ಮಾಡಿದ್ರೆ ಎನ್‌ಪಿಎಸ್ ಹಿಂತೆಗೆತಕ್ಕೆ ಅವಕಾಶ
ಬಾಂಡ್‌ನ ಮೌಲ್ಯವು India Bullion and Jewellers Association ltd ಪ್ರಕಟಿಸುವ, 999 ಪ್ಯೂರಿಟಿ ಇರುವ ಚಿನ್ನದ (24 ಕ್ಯಾರಟ್) ಕಳೆದ ಮೂರು ದಿನಗಳ ಸರಾಸರಿ ಕ್ಲೋಸಿಂಗ್ ರೇಟ್‌ನ ಆಧಾರದಲ್ಲಿ ನಿಗದಿಯಾಗುತ್ತದೆ. ಹಲವು ವಿಧಗಳಲ್ಲಿ ಎಸ್‌ಜಿಬಿಯಿಂದ ಪ್ರಯೋಜನಗಳಿವೆ. ಮೊದಲನೆಯದಾಗಿ ಚಿನ್ನದ ದರ ಏರಿಕೆಯ ಲಾಭ ಸಿಗುತ್ತದೆ. ಎರಡನೆಯದಾಗಿ ವಾರ್ಷಿಕ 2.5% ಬಡ್ಡಿ ಸಿಗುತ್ತದೆ. ಮೂರನೆಯದಾಗಿ 8 ವರ್ಷಗಳ ತನಕ ವ್ಯಕ್ತಿಯೊಬ್ಬ ಹೂಡಿಕೆ ಮಾಡಿದರೆ ಲಭಿಸುವ ಆದಾಯಕ್ಕೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುವುದಿಲ್ಲ. ಎಸ್‌ಜಿಬಿಯು ಲಿಕ್ವಿಡಿಟಿಯನ್ನು ಹೊಂದಿದ್ದು, ಎಕ್ಸ್‌ಚೇಂಜ್‌ಗಳಲ್ಲಿ ಇದರ ವಹಿವಾಟು ನಡೆಯುತ್ತದೆ. ಸಾವರಿನ್ ಗ್ಯಾರಂಟಿ ಇರುವುದರಿಂದ ಡಿಫಾಲ್ಟ್ ಆಗುವ ಅಪಾಯ ಇರುವುದಿಲ್ಲ. ನಿರ್ವಹಣೆಗೆ ಯಾವುದೇ ವೆಚ್ಚ ತಗಲುವುದಿಲ್ಲ.
ನೀವು ಏಕೆ ಗೋಲ್ಡ್ ಬಾಂಡ್ ಖರೀದಿಸಬೇಕು?
- ಎಸ್‌ಜಿಬಿ ಅಥವಾ ಗೋಲ್ಡ್ ಬಾಂಡ್ ಸ್ಕೀಮ್ ಎನ್ನುವುದು ಲಾಂಗ್ ಟರ್ಮ್ ಹೂಡಿಕೆಯ ಯೋಜನೆಯಾಗಿದ್ದು, ವ್ಯಕ್ತಿಯೊಬ್ಬ 8 ವರ್ಷಗಳ ಹೂಡಿಕೆಯಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
- ಚಿನ್ನದ ಪರಿಶುದ್ಧತೆಯ ರಿಸ್ಕ್ ಇಲ್ಲ.
- ಸಾವರಿನ್ ಗ್ಯಾರಂಟಿ ಇರುವುದರಿಂದ ಡಿಫಾಲ್ಟ್ ಆಗುವ ಅಪಾಯ ಇರುವುದಿಲ್ಲ.
- 8 ವರ್ಷ ಹೂಡಿಕೆಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುವುದಿಲ್ಲ.
- ವಾರ್ಷಿಕ 2.5% ಬಡ್ಡಿ ದರದ ಆದಾಯವೂ ಸಿಗುತ್ತದೆ.
- ಇದನ್ನು ಅಡಮಾನ ಇಟ್ಟು ಸಾಲ ಪಡೆಯಬಹುದು.
- ರಿಟೇಲ್ ಹೂಡಿಕೆದಾರರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದಿದ್ದರೆ ಡಿಸ್ಕೌಂಟ್ ಪಡೆಯಲಿದ್ದಾರೆ.
ಭೌತಿಕ ಬಂಗಾರಕ್ಕಿಂತ ಹೇಗೆ ಅನುಕೂಲಕರ? ಸಾವರಿನ್ ಗೋಲ್ಡ್ ಬಾಂಡ್ ಸರ್ಕಾರಿ ಸೆಕ್ಯುರಿಟೀಸ್‌ಗಳಾಗಿದ್ದು, ಚಿನ್ನದ ಗ್ರಾಮ್ ಲೆಕ್ಕದಲ್ಲಿ ವಿಕ್ರಯವಾಗುತ್ತದೆ. ಫಿಸಿಕಲ್ ಗೋಲ್ಡ್ ಅನ್ನು ಇಟ್ಟುಕೊಳ್ಳುವುದಕ್ಕೆ ಇದು ಪರ್ಯಾಯವಾಗಿರುತ್ತದೆ. ಹೂಡಿಕೆದಾರರು ಹಣ ಕೊಟ್ಟು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಮೆಚ್ಯೂರಿಟಿ ಮೊತ್ತವನ್ನೂ ಹಣದಲ್ಲಿಯೇ ಪಡೆಯುತ್ತಾರೆ. ಸರ್ಕಾರದ ಪರವಾಗಿ ಆರ್‌ಬಿಐ ಬಿಡುಗಡೆ ಮಾಡುತ್ತದೆ. ಭೌತಿಕ ಬಂಗಾರವನ್ನು ಕಳೆದುಕೊಳ್ಳುವ ರಿಸ್ಕ್ ಇರುತ್ತದೆ. ಆದರೆ ಗೋಲ್ಡ್ ಬಾಂಡ್‌ಗೆ ಅಂಥ ರಿಸ್ಕ್ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದರೆ ಮಾತ್ರ ಹೂಡಿಕೆ ಮೌಲ್ಯ ತಗ್ಗಬಹುದು. ಆದರೆ ಇತಿಹಾಸ ಗಮನಿಸಿದರೆ 8 ವರ್ಷಗಳ ಅವಧಿಯಲ್ಲಿ ಬಂಗಾರದ ದರ ಇಳಿದ ಉದಾಹರಣೆ ಇಲ್ಲ.
ಆನ್‌ಲೈನ್‌ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಸಂಬಂಧಿಸಿದ ಬ್ಯಾಂಕ್‌ಗಳ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ. ಇ-ಸರ್ವೀಸ್ ಆಯ್ಕೆ ಕ್ಲಿಕ್ಕಿಸಿ (e-service) ಬಳಿಕ sovereign gold bond ಒತ್ತಿರಿ. ಟರ್ಮ್ & ಕಂಡೀಶನ್ ಓದಿರಿ, ಬಳಿಕ Proceed ಕ್ಲಿಕ್ಕಿಸಿ. ರಿಜಿಸ್ಟ್ರೇಶನ್ ಫಾರ್ಮ್ ತುಂಬಿಸಿ ಸಬ್‌ಮಿಟ್ ಒತ್ತಿರಿ. ಆಧಾರ್ ಕಾರ್ಡ್ ಮತ್ತು ಪ್ಯಾನ್ ವಿವರ ನೀಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಸಬ್ ಸ್ಕ್ರೈಬ್ ಮಾಡುವ ಹಾಗೂ ಡಿಜಿಟಲ್ ವಿಧಾನದಲ್ಲಿ ಹಣ ನೀಡುವವರಿಗೆ ಪ್ರತಿ ಗ್ರಾಮ್ ಹೂಡಿಕೆಗೆ 50 ರೂ. ಡಿಸ್ಕೌಂಟ್ ಸಿಗುತ್ತದೆ.