Site icon Vistara News

Business Guide : ಹೈಕೋರ್ಟ್‌ ಬಳಿ ಮಸಾಲ ಪುರಿ ಮಾರಾಟ ಮಾಡುವ ಯುವಕನ ಯಶೋಗಾಥೆ

Money

cash

ಬೆಂಗಳೂರು: ಮಸಾಲ ಪುರಿ ಅಂದರೆ ನಿಮಗೆ ಬಾಯಲ್ಲಿ ನೀರೂರಬಹುದು. ಚಾಟ್ಸ್‌ಗಳ ಮಹಾರಾಜನಂತಿರುವ ಮಸಾಲ ಪುರಿ ದಕ್ಷಿಣ ಭಾರತದಲ್ಲಿ, ( Business Guide ) ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಜನಪ್ರಿಯ ಚಾಟ್ಸ್.‌ ಕರ್ನಾಟಕ ಮೂಲದ ಮಸಾಲ ಪುರಿ ಇಡೀ ಭಾರತವನ್ನು ಈಗ ಆವರಿಸಿದೆ. ಹೀಗಾಗಿ ಮಸಾಲ ಪುರಿ ಈಗ ಬಹು ದೊಡ್ಡ ಬಿಸಿನೆಸ್‌ ಅವಕಾಶವಾಗಿಯೂ ಹೊರಹೊಮ್ಮಿದೆ. ಮನಸ್ಸು ಮಾಡಿದ್ರೆ ಮಸಾಲ ಪುರಿ, ಪಾನಿಪುರಿ , ದಹಿ ಪುರಿ ಇತ್ಯಾದಿ ಚಾಟ್ಸ್‌ಗಳ ಪುಟ್ಟ ಅಂಗಡಿಯನ್ನು ತೆರೆದು ಸ್ವಂತ ಉದ್ಯೋಗ ಮಾಡಬಹುದು. ಲಕ್ಷಾಂತರ ರೂ. ಸಂಪಾದನೆಯನ್ನೂ ಮಾಡಬಹುದು. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು.

ಅಂದಹಾಗೆ ಮಸಾಲ ಪುರಿ ಸವಿದಿರುವ ನೀವು ಎಂದಾದರೂ, ಮಸಾಲ ಪುರಿ ಮಾರಾಟ ಮಾಡುವವರು ಎಷ್ಟು ಆದಾಯ ಗಳಿಸಬಹುದು? ಎಷ್ಟು ಲಾಭದಾಯಕ ಎಂದು ಕೇಳಿದ್ದೀರಾ? ನಿಮಗೆ ಅಚ್ಚರಿಯಾಗಬಹುದು. ಸಣ್ಣ ಬಂಡವಾಳದಲ್ಲಿ ಆರಂಭಿಸಬಹುದಾದ ಮಸಾಲ ಪುರಿ ಮಾರಾಟದ ಮೂಲಕ ಬೆಂಗಳೂರಿನಲ್ಲಿ ಹಲವಾರು ಮಂದಿ ಲಕ್ಷಾಂತರ ರೂ. ಆದಾಯ ಮತ್ತು ಲಾಭ ಗಳಿಸುತ್ತಾರೆ.

ಬೆಂಗಳೂರಿನ ಹೈಕೋರ್ಟ್‌ ಸಮೀಪ ಶರ್ಮಾ ಚಾಟ್ಸ್‌ ಎಂಬ ಚಾಟ್ಸ್‌ ಅಂಗಡಿ ಸಂಜೆ ಮೂರು ಗಂಟೆಯಿಂದ ರಾತ್ರಿ 10 ಗಂಟೆ ತನಕ ತೆರೆದಿರುತ್ತದೆ. ನಿಮಗೆ ಅಚ್ಚರಿಯಾದೀತು. ಈ ಶರ್ಮಾ ಚಾಟ್ಸ್‌ನಲ್ಲಿ ಸರಾಸರಿ ದಿನಕ್ಕೆ 400 ರಿಂದ 500 ಪ್ಲೇಟ್‌ ಗಳಷ್ಟು ಚಾಟ್ಸ್‌ ಮಾರಾಟವಾಗುತ್ತದೆ. ಪ್ರತಿ ಪ್ಲೇಟಿಗೆ 40 ರೂ. ಎಂದರೆ ದಿನಕ್ಕೆ 16,000 ರೂ.ಗಳಿಂದ 20,000 ರೂ. ತನಕ ವ್ಯಾಪಾರ ನಡೆಯುತ್ತದೆ. ಈ ಶರ್ಮಾ ಚಾಟ್ಸ್‌ ಕಳೆದ 40 ವರ್ಷಗಳಿಂದ ಇಲ್ಲಿ ನಡೆಯುತ್ತಿದೆ. ಇಲ್ಲಿ ಕೆಲಸ ಕಲಿತವರು ನಗರದ ನಾನಾ ಕಡೆಗಳಲ್ಲಿ ತಮ್ಮದೇ ಶರ್ಮಾ ಚಾಟ್ಸ್‌ ನಡೆಸುತ್ತಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ. ಹಾಗಂತ ದಿನಕ್ಕೆ 20,000 ರೂ. ಆದಾಯದಲ್ಲಿ ಖರ್ಚುಗಳೂ ಇರುತ್ತವೆ. ಅಗತ್ಯ ಪದಾರ್ಥಗಳು, ಗ್ಯಾಸ್‌, ಸಹಾಯಕರ ಸಂಬಳ ಇತ್ಯಾದಿ ಖರ್ಚು ವೆಚ್ಚಗಳೂ ಇರುತ್ತವೆ. ಆದಾಯಕ್ಕೂ ಲಾಭಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬೇಕು.

ತೀರ್ಥಹಳ್ಳಿಯ ಮೂಲದ ಪ್ರದೀಪ ಅವರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೆಲಸ ಹುಡುಕುತ್ತಾ ಬೆಂಗಳೂರಿಗೆ ಬರುತ್ತಾರೆ. ಹೈಕೋರ್ಟ್ ಬಳಿ ಪ್ರಸಿದ್ಧವಾಗಿದ್ದ ಶರ್ಮಾ ಚಾಟ್ಸ್ ನಲ್ಲಿ ಕೆಲಸಕ್ಕೆ ಸೇರ್ತಾರೆ. ಕೊನೆಗೊಂದು ದಿನ ಮಾಲೀಕರು ಹುಡುಗನ ಶ್ರಮಕ್ಕೆ ಮೆಚ್ಚಿ ಅಂಗಡಿಯನ್ನೇ ಬಿಟ್ಟುಕೊಡುತ್ತಾರೆ. 2008 ರಿಂದ ಪ್ರದೀಪ್ ಅವರು ಶರ್ಮಾ ಚಾಟ್ಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. 9 ನೇ ಕ್ಲಾಸ್ ತನಕ ಓದಿರುವ ಪ್ರದೀಪ್ ಅವರಿಗೆ ಲೋಕಾನುಭವವೇ ದಾರಿ ತೋರಿದೆ. ಹಾಗಾದರೆ ಚಾಟ್ಸ್‌ ಬಿಸಿನೆಸ್‌ಗೆ ಎಷ್ಟು ಬಂಡವಾಳ ಬೇಕು? ಎಷ್ಟು ಲಾಭ ಸಿಗುತ್ತದೆ? ಬೇಕಾಗುವ ಕೌಶಲವೇನು? ನೋಡೋಣ.

ಮುಖ್ಯವಾಗಿ ಜನ ಸಂಚಾರ ಇರುವಂಥ ಸ್ಥಳದಲ್ಲಿ ನೀವು ಚಾಟ್ಸ್‌ ಬಿಸಿನೆಸ್‌ ಶುರು ಮಾಡಬೇಕು. 50 ಸಾವಿರದಿಂದ 1 ಲಕ್ಷ ರೂ. ತನಕದ ಬಂಡವಾಳದಲ್ಲಿ ಚಾಟ್ಸ್‌ ಅಂಗಡಿ ತೆರೆಯಬಹುದು. ಚಾಟ್ಸ್‌ ಮಾರಾಟ ಮಾಡುವ ಗಾಡಿಗೆ 40 ಸಾವಿರದಿಂದ 70 ಸಾವಿರ ರೂ. ತನಕ ಖರ್ಚಾಗುತ್ತದೆ. ಬಳಿಕ ಒಂದಷ್ಟು ತಟ್ಟೆ, ಪಾತ್ರೆ ಪಗಡಿಗಳು ಬೇಕು. ಸಿಲಿಂಡರ್‌, ಸ್ಟೌ ಅಗತ್ಯ. ಒಂದಿಬ್ಬರು ಸಹಾಯಕರೂ ಬೇಕು. ಆರಂಭದಲ್ಲಿ ಮನೆಯ ಸದಸ್ಯರನ್ನೇ ಸಹಾಯಕರಾಗಿ ನೆರವು ಪಡೆಯಬಹುದು. ಅದಕ್ಕೂ ಮುನ್ನ ಮಸಾಲ ಪುರಿ, ಪಾನಿಪುರಿ ಸಿದ್ಧಪಡಿಸುವ ವಿಧಾನವನ್ನು ಕಲಿಯಿರಿ. ಬೇಕಾಗುವ ಬೇಳೆಕಾಳು, ಮಸಾಲ ಪುಡಿಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುತ್ತವೆ. ಈ ಬಿಸಿನೆಸ್‌ನಲ್ಲಿ ಕನಿಷ್ಠ 40% ಲಾಭ ಸಿಗುತ್ತದೆ. ಅಂದರೆ ದಿನಕ್ಕೆ 2000 ರೂ. ವ್ಯಾಪಾರವಾದರೆ 800 ರೂ. ಲಾಭ ಸಿಗುತ್ತದೆ. ಉತ್ತಮ ರುಚಿ, ಸ್ವಚ್ಛತೆ ಮತ್ತು ಗ್ರಾಹಕರೊಡನೆ ಸೌಹಾರ್ದತೆಯಿಂದ ವ್ಯವಹರಿಸಿದಾಗ ಚಾಟ್ಸ್‌ ಬಿಸಿನೆಸ್‌ ಲಾಭದಾಯಕವಾಗುತ್ತದೆ.

ಸಣ್ಣ ಬಿಸಿನೆಸ್‌ ಐಡಿಯಾಗಳು: ಕೇವಲ ಸಾವಿರ ರೂ. ಬಂಡವಾಳದಲ್ಲಿ ಮಾಡಬಹುದಾದ ಮೂರು ಬಿಸಿನೆಸ್‌ ಐಡಿಯಾಗಳನ್ನು ತಿಳಿಯೋಣ ಬನ್ನಿ. ನೀವು ಲಿಂಬೆ ಹಣ್ಣಿನ ಜ್ಯೂಸ್‌ ಬಿಸಿನೆಸ್‌ ಮಾಡಬಹುದು. ಒಂದು ಲೋಟ ಅಥವಾ ಬಾಟಲಿಗೆ 20 ರೂ. ದರ ನಿಗದಿಪಡಿಸಬಹುದು. ಪ್ರತಿ ಲೋಟಕ್ಕೆ 10 ರೂ. ಲಾಭ ಸಿಗುತ್ತದೆ. ದಿನಕ್ಕೆ 100 ಗ್ಲಾಸ್‌ ವ್ಯಾಪಾರ ಮಾಡಿದರೆ 1000 ರೂ. ಲಾಭ ಮಾಡಬಹುದು.

ಎರಡನೆಯದಾಗಿ 250 ಎಂಎಲ್‌ನ ನೀರಿನ ಬಾಟಲಿಯನ್ನು 5 ರೂ.ಗೆ ಮಾಡಬಹುದು. 10 ರೂ.ಗೆ ಮಾರಬಹುದು. ದಿನಕ್ಕೆ 100 ಬಾಟಲಿ ಮಾರಿದರೆ 500 ರೂ. ಲಾಭ ಸಿಗುತ್ತದೆ. ನೀವು ಡೀಲರ್‌ಗಳಿಂದ ಆಟಿಕೆಗಳ ಪಡೆದು, ಪ್ರತಿ ಟಾಯ್ಸ್‌ಗೆ 25 ರೂ. ಪ್ರಾಫಿಟ್‌ನೊಂದಿಗೆ ಮಾರಾಟ ಮಾಡಬಹುದು. ಮಾಲ್‌, ಬೀಚ್‌, ಮಾರುಕಟ್ಟೆ ಪ್ರದೇಶಗಳಲ್ಲಿ ಮಾರಬಹುದು. ದಿನಕ್ಕೆ 40 ಆಟಿಕೆ ಮಾರಿದರೆ 1000 ರೂ. ಗಳಿಸಬಹುದು.

Exit mobile version