ನೀವು ವಿದೇಶ ಪ್ರವಾಸದಲ್ಲಿ ಇರುವಾಗ ಅಕಸ್ಮಾತ್ತಾಗಿ ನಿಮ್ಮ ಫೋನ್, ವ್ಯಾಲೆಟ್ ಅಥವಾ ಪಾಸ್‌ಪೋರ್ಟ್ ಕಳೆದು ಹೋದರೆ ಫಜೀತಿ ಉಂಟಾಗಬಹುದು. ಆದರೆ ಇಂಥ ಸಂದರ್ಭದಲ್ಲಿ ಏನು ಮಾಡಬಹುದು ಎಂದು ತಿಳಿಯುವುದು ಅವಶ್ಯಕ.
ವಿದೇಶ ಪ್ರಯಾಣದಲ್ಲಿ ಪಾಸ್‌ಪೋರ್ಟ್ ಮಹತ್ವದ ದಾಖಲೆ. ನೀವು ಭಾರತದ ನಾಗರಿಕ ಎಂದು ವಿದೇಶಿ ಅಧಿಕಾರಿಗಳಿಗೆ ದೃಢೀಕರಣಗೊಳಿಸಲು ಪಾಸ್‌ಪೋರ್ಟ್ ಬೇಕು. ಅಕಸ್ಮಾತ್ ಪಾಸ್‌ಪೋರ್ಟ್ ಕಳೆದು ಹೋದರೆ, ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಪಾಸ್‌ಪೋರ್ಟ್ ಕಚೇರಿ ಮತ್ತು ಭಾರತೀಯ ರಾಯಭಾರ ಕಚೇರಿಗೆ ತೆರಳಿ ತಿಳಿಸಬೇಕು. ಅಗತ್ಯ ಇದ್ದರೆ ಪಾಸ್‌ಪೋರ್ಟ್ Re-issue ಮಾಡಲು ಅರ್ಜಿ ಸಲ್ಲಿಸಬೇಕು.
೧. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ
ನಿಮ್ಮ ಪಾಸ್‌ಪೋರ್ಟ್ ಕಳೆದು ಹೋಗಿರುವುದು ಖಾತರಿಯಾದ ಬಳಿಕ ಸಮೀಪದ ಪೊಲೀಸ್ ಸ್ಟೇಶನ್‌ಗೆ ತೆರಳಿ ದೂರು ದಾಖಲಿಸಿ. ನಿಮ್ಮ ದೂರಿನ ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ. ನೀವು ಪಾಸ್ ಪೋರ್ಟ್ ಕಳೆದುಕೊಂಡಿದ್ದೀರಿ ಎಂಬುದಕ್ಕೆ ಅದುವೇ ಆಧಾರವಾಗಿರುತ್ತದೆ. ಮಾತ್ರವಲ್ಲದೆ ಹೊಸ ಪಾಸ್‌ಪೋರ್ಟ್ ಅಥವಾ ತುರ್ತು ಸರ್ಟಿಫಿಕೇಟ್ ಪಡೆಯಲು ಅದರಿಂದ ಸಹಾಯಕವಾಗುತ್ತದೆ.
೨. ರಾಯಭಾರ ಅಥವಾ ದೂತಾವಾಸ ಕಚೇರಿ ಸಂಪರ್ಕಿಸಿ
ಸಮೀಪದ ರಾಯಭಾರ ಅಥವಾ ದೂತಾವಾಸ ಕಚೇರಿಯನ್ನು ಸಂಪರ್ಕಿಸಿ. ಈ ಕಚೇರಿಗಳು ವಿದೇಶಗಳಲ್ಲಿ ಭಾರತೀಯರಿಗೆ ಇಂಥ ಸಂದರ್ಭಗಳಲ್ಲಿ ನೆರವು ನೀಡುತ್ತದೆ.
೩. ಹೊಸ ಪಾಸ್‌ಪೋರ್ಟ್ ಅಥವಾ ಎಮರ್ಜೆನ್ಸಿ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಿ
ನಿಮ್ಮ ಬಳಿ ಎರಡು ಆಯ್ಕೆ ಇರುತ್ತದೆ. ನೀವು ಹೊಸ ಪಾಸ್‌ಪೋರ್ಟ್ ಇಲ್ಲವೇ ಎಮರ್ಜೆನ್ಸಿ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಬೇಕು. ಹೊಸ ಪಾಸ್‌ಪೋರ್ಟ್‌ಗೆ ಕನಿಷ್ಠ ೧ ವಾರ ಕಾಯಬೇಕಾಗುತ್ತದೆ. ಡುಪ್ಲಿಕೇಟ್ ಪಾಸ್ ಪೋರ್ಟ್ ಬಿಡುಗಡೆ ಮಾಡುವುದಿಲ್ಲ.
ಹೊಸ ಪಾಸ್ ಪೋರ್ಟ್‌ಗೆ ಬೇಕಾಗುವ ದಾಖಲೆಗಳು
- ಹಾಲಿ ವಿಳಾಸದ ದಾಖಲೆ
- ಜನ್ಮ ದಿನಾಂಕದ ದಾಖಲೆ
- ಪಾಸ್ ಪೋರ್ಟ್ ಕಳವಾಗಿರುವುದಕ್ಕೆ ದೃಢೀಕರಣ
- ಪೊಲೀಸ್ ರಿಪೋರ್ಟ್
- ಭಾವಚಿತ್ರ, ಹಳೆಯ ಪಾಸ್‌ಪೋರ್ಟ್‌ನ ಇಸಿಆರ್/ನಾನ್ -ಇಸಿಆರ್ ಪುಟದ ಫೋಟೊ ಕಾಪಿ (ಲಭ್ಯವಿದ್ದರೆ)
ಹಳೆಯ ಪಾಸ್‌ಪೋರ್ಟ್ ಸಂಖ್ಯೆ, ಪಾಸ್‌ಪೋರ್ಟ್ ಬಿಡುಗಡೆಯ ದಿನಾಂಕ, ಅವಧಿ, ಬಿಡುಗಡೆಯಾದ ಸ್ಥಳದ ವಿವರವನ್ನು ಸಲ್ಲಿಸಬೇಕಾಗುತ್ತದೆ. ನೀವು ಒಂದು ವಾರ ಕಾಯಲು ಸಿದ್ಧರಿರದಿದ್ದರೆ, ಎಮರ್ಜೆನ್ಸಿ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಬಹುದು. ಇದನ್ನು ಪಡೆದು ಭಾರತಕ್ಕೆ ಹಿಂತಿರುಗಬಹುದು. ಇದಕ್ಕೆ ಬೇಕಾಗುವ ದಾಖಲೆಗಳು ಇಂತಿವೆ-
ಕಳೆದು ಹೋಗಿರುವ ಪಾಸ್‌ಪೋರ್ಟ್‌ನ ಎರಡೂ ಬದಿಯ ಫೋಟೊ ಕಾಪಿ
ಪೊಲೀಸ್ ರಿಪೋರ್ಟ್ ಪ್ರತಿ
ಪಾಸ್‌ಪೋರ್ಟ್ ಆಕಾರದ ಭಾವಚಿತ್ರ
೪. ವೀಸಾ ಮರು ಬಿಡುಗಡೆಗೆ ಅರ್ಜಿ ಸಲ್ಲಿಸಿ
ವಿದೇಶದಲ್ಲಿ ವೀಸಾವನ್ನು ಮತ್ತೆ ಗಳಿಸಿಕೊಳ್ಳಲು ಆಯಾ ರಾಷ್ಟ್ರದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಹಳೆಯ ವೀಸಾದ ಫೊಟೊ ಕಾಪಿ ಮತ್ತು ಪೊಲೀಸ್ ರಿಪೋರ್ಟ್ ಅನ್ನು ಸಲ್ಲಿಸಬೇಕಾಗುತ್ತದೆ.
೫. ಟ್ರಾವೆಲ್ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಿ
ಒಂದು ವೇಳೆ ಮೇಲಿನ ಕ್ರಮಗಳನ್ನು ಕೈಗೊಳ್ಳಲು ಕೂಡ ಸಮಯದ ಅಭಾವ ಇದ್ದರೆ ನಿಮ್ಮ ವಿಮಾನ ಪ್ರಯಾಣಕ್ಕೆ ಅಡಚಣೆ ಆಗಬಹುದು. ಅಂಥ ಸಂದರ್ಭದಲ್ಲಿ ಏರ್‌ಲೈನ್ ಸಂಪರ್ಕಿಸಿ ಪರ್ಯಾಯ ವ್ಯವಸ್ಥೆಗೆ ವಿಚಾರಿಸಬಹುದು. ಎಲ್ಲ ವೀಸಾಗಳಿಗೆ ಟ್ರಾವೆಲ್ ವಿಮೆ ಅಗತ್ಯ ಇರುವುದಿಲ್ಲ. ಹೀಗಿದ್ದರೂ, ವಿದೇಶಿ ಪ್ರವಾಸಕ್ಕೆ ಟ್ರಾವೆಲ್ ವಿಮೆ ಇದ್ದರೆ ಸೂಕ್ತ. ಪಾಸ್ ಪೋರ್ಟ್ ನಷ್ಟವಾದರೆ ಅಥವಾ ಕಳೆದು ಹೋದರೆ ನಿಮ್ಮ ಟ್ರಾವೆಲ್ ವಿಮೆ ವಿತರಕರನ್ನು ತಕ್ಷಣ ಸಂಪರ್ಕಿಸಿ. ವಿಮೆ ಪರಿಹಾರ ಕ್ಲೇಮ್ ಮಾಡಿಕೊಳ್ಳಬಹುದು.