Site icon Vistara News

Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ

Govinda Poojari

ಬೆಂಗಳೂರು: ಇಡೀ ರಾಜ್ಯದಲ್ಲಿ ಈಗ ಅತಿ ಹೆಚ್ಚು ಸುದ್ದಿಯಲ್ಲಿರುವುದು ಬೆಂಕಿ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಎಂಡ್‌ ಟೀಮ್‌ ಮಾಡಿದ ಅತಿದೊಡ್ಡ ವಂಚನೆಯ ಕಥೆ. ಈ ಕಥೆಯಲ್ಲಿ ವಂಚನೆಗೆ ಒಳಗಾದವರು ಉದ್ಯಮಿ ಗೋವಿಂದ ಪೂಜಾರಿ (Govinda poojari). ಗೋವಿಂದ ಪೂಜಾರಿ ಅವರ ಕಥೆ ಕೇಳಿದಾಗ ಒಮ್ಮೆ ಅಯ್ಯೋ ಅನಿಸುತ್ತದೆ, ಹೀಗೆ ವಂಚನೆಗೆ ಒಳಗಾಗುವ ಭೋಳೆ ಬಸವನಂಥವರು ಎಂಎಲ್‌ಎ ಆದರೆ ಹೇಗಿದ್ದೀತು ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಸಾಕಷ್ಟು ಜನ ಈ ನಿಟ್ಟಿನಲ್ಲಿ ತಮಾಷೆ ಮಾಡುತ್ತಿದ್ದಾರೆ.

ಒಂದು ಕ್ಷಣ ಚೈತ್ರಾ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ (Byndur MLA Ticket), ಅದಕ್ಕೆ ಸಂಬಂಧಿಸಿ ನಡೆದ ವಂಚನೆ, ಗೋವಿಂದ ಪೂಜಾರಿ ನೀಡಿದ ದೂರು.. ಈಗ ನಡೆಯುತ್ತಿರುವ ಅದಿಷ್ಟೂ ಬೆಳವಣಿಗೆಗಳನ್ನು ಮರೆತುಬಿಟ್ಟು ಒಂದು ಮೋಟಿವೇಷನಲ್‌ ಕಥೆ (Motivational story) ಕೇಳಿ.. ಕೊನೆಗೆ ಗೋವಿಂದ ಬಾಬು ಪೂಜಾರಿ ಅಂದ್ರೆ ಏನು ಎನ್ನುವುದು ನಿಮಗೇ ತಿಳಿಯುತ್ತದೆ.

ಇದು ಬಡತನದ ಬೇಗೆಯಲ್ಲಿ ಬೆಂದರೂ ದೊಡ್ಡದೇನೋ ಸಾಧನೆ ಮಾಡಲೇಬೇಕು ಎಂದು ಹಠ ತೊಟ್ಟು ಪರಿಶ್ರಮದಿಂದಲೇ ಮೇಲೆದ್ದು ನಿಂತ ವ್ಯಕ್ತಿಯೊಬ್ಬನ ಸಾಹಸದ ಕಥೆ. ಬೀದಿ ಬದಿಯಲ್ಲಿ ಕೆಲಸ ಮಾಡುವುದರಿಂದ ಆರಂಭಗೊಂಡು 5000 ಜನರಿಗೆ ಉದ್ಯೋಗ ನೀಡುತ್ತಿರುವ, ಕೋಟ್ಯಂತರ ರೂ. ದಾನ ಮಾಡುವವರೆಗೆ ಒಬ್ಬ ವ್ಯಕ್ತಿ ಹಂತ ಹಂತವಾಗಿ ಬೆಳೆದ ಯಶೋಗಾಥೆ. ಈ ಕಥೆಯನ್ನು ಅವರ ಬಾಲ್ಯದಿಂದಲೇ ಶುರು ಮಾಡೋಣ.

ಬಿಜೂರಿನ ಕಡುಬತನದ ಕುಟುಂಬದಲ್ಲಿ ಜನನ

ಗೋವಿಂದ ಪೂಜಾರಿ ಅವರು ಹುಟ್ಟಿದ್ದು ಕುಂದಾಪುರದ ಬಿಜೂರಿನ ಕಡುಬಡ ಕುಟುಂಬವೊಂದರಲ್ಲಿ. 1977ರಲ್ಲಿ ಹುಟ್ಟಿದ ಅವರಿಗೆ ಹೊಟ್ಟೆಗೆ ಸರಿಯಾಗಿ ಹಿಟ್ಟಿಲ್ಲದ ಸ್ಥಿತಿ. ತಂದೆ ಬಾಬು ಪೂಜಾರಿ ಸಾಮಾನ್ಯ ಸಣ್ಣ ಕೃಷಿಕರು. ಅದರಲ್ಲಿ ಬೆಳೆದದ್ದು ಅದಕ್ಕೇ ಎನ್ನುವ ಪರಿಸ್ಥಿತಿ.

ಇಂಥ ಕುಟುಂಬದಲ್ಲಿ ಹುಟ್ಟಿದ ಗೋವಿಂದ ಎಂಬ ಪುಟ್ಟ ಬಾಲಕನಿಗೆ ತಾನು ಕುಟುಂಬದ ಬಡತನವನ್ನು ನೀಗಬೇಕು, ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಆಸೆ. ಆಗೆಲ್ಲ ವಿದ್ಯೆ ತಲೆಗೆ ಹತ್ತದ ಹುಡುಗರಿಗೆ, ಊರು ಬಿಟ್ಟು ಓಡುವ ಹುಡುಗರಿಗೆ ಆಸರೆ ಕೊಡುತ್ತಿದ್ದುದು ಮುಂಬಯಿ ಮಹಾನಗರಿ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಕರಾವಳಿಯ ಮಕ್ಕಳೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದರೆ ಮುಂಬಯಿಗೆ ಹೋಗಿದ್ದಾರೆ ಎಂದೇ ಅರ್ಥ.

ಇಂಥ ಕಾಲದಲ್ಲಿ ತನ್ನ ಕುಟುಂಬಕ್ಕೆ ನೆರವಾಗಬೇಕು ಎಂಬ ದೊಡ್ಡದೊಂದು ಕನಸು ಕಟ್ಟಿಕೊಂಡು ಅಕ್ಷರಶಃ ಉಟ್ಟ ಬಟ್ಟೆಯಲ್ಲಿ ಮುಂಬಯಿ ಮಹಾನಗರವನ್ನು ತಲುಪಿದ್ದ ಆ ಗೋವಿಂದ. ಆಗ ಅವನಿಗೆ ಕೇವಲ ಕೇವಲ 13 ವರ್ಷ ಮಾತ್ರ. ಸರಿಯಾದ ಅಕ್ಷರಾಭ್ಯಾಸವಿಲ್ಲದ ಈ ಹುಡುಗ, ಕೈಯಲ್ಲಿ ಹಣವಿಲ್ಲದ ಹುಡುಗ ಅದು ಹೇಗೋ ಬಸ್‌ ಹತ್ತಿ ಮುಂಬಯಿ ತಲುಪಿದ್ದ.

ಅಲ್ಲಿ ಮಾರ್ಗದ ಬದಿಯಲ್ಲಿ ಒಂದು ಕ್ಯಾಂಟೀನ್‌ನಲ್ಲಿ ಚಹಾದ ಗ್ಲಾಸ್‌ ತೊಳೆಯುವ ಕೆಲಸ ಮಾಡಲು ಆರಂಭಿಸುತ್ತಾನೆ ಹುಡುಗ. ಗ್ಲಾಸ್‌ ತೊಳೆಯುವ ಜತೆಗೆ ಮೆಲ್ಲಮೆಲ್ಲನೆ ಚಹಾ ಮಾಡುವುದನ್ನು ಕಲಿತುಕೊಂಡ. ಆದರೆ ಗೋವಿಂದ ಪೂಜಾರಿಗೆ ಅದೊಂದೇ ಆಂತ್ಯಿಕ ಗುರಿಯಾಗಿರಲಿಲ್ಲ. ಏನೋ ಸಾಧನೆ ಮಾಡಬೇಕು ಎನ್ನುವ ತಹತಹ ಇತ್ತು. ಹೋಟೆಲ್‌ನಿಂದ ಹೋಟೆಲ್‌ಗೆ ಜಿಗಿದ. ಚಹಾದ ಜತೆಗೆ ಅಡುಗೆ ಮಾಡಲು ಕಲಿತ. ಹಾಗೆ ಸಾಗಿದ ಪಯಣ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗುವವರೆಗೆ ಕರೆದುಕೊಂಡು ಹೋಯಿತು.

ಮುಂದೆ ಗೋವಿಂದ ಪೂಜಾರಿ ವಯಸ್ಕನಾಗಿ ಬೆಳೆದು ನಿಲ್ಲುತ್ತಾರೆ. ಇರ್ಲಾದ ಸನ್ನಿ ಬಾರ್‌ನಲ್ಲಿ ಬಾಣಸಿಗನಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ, ಇದ್ಯಾವುದೂ ಅವರಿಗೆ ಅಷ್ಟೇನೂ ರುಚಿಸುವುದಿಲ್ಲ. ನಾನು ಏನೋ ಮಾಡಬೇಕು ಎನ್ನುವ ಉತ್ಸಾಹ… ಇದಲ್ಲ, ಇದಲ್ಲ ಎನ್ನುವ ನೇತಿ ಭಾವ. ಹೀಗಾಗಿ ಸ್ವ ಉದ್ಯೋಗದ ಮಾಡುವ ಕನಸಿನೊಂದಿಗೆ ಒಂದು ಜನರಲ್‌ ಸ್ಟೋರ್‌ ಓಪನ್‌ ಮಾಡ್ತಾರೆ. ಆದರೆ, ದುರದೃಷ್ಟ ಅದು ನಷ್ಟಕ್ಕೆ ಬಿತ್ತು.

ಆಗ ಅವರ ಕಣ್ಣಿಗೆ ಬಿದ್ದದ್ದು ಪಂಚತಾರಾ ಹೋಟೆಲ್‌. ಅಡುಗೆ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೂ ಪಂಚತಾರಾ ಹೋಟೆಲ್‌ನಲ್ಲಿ ಅಡುಗೆ ಕೆಲಸ ಸಿಗಲಿಲ್ಲ. ಆಗ ಅವರು ಹೋಟೆಲ್‌ನ ಕ್ಲೀನರ್‌ ಆಗಿ ಎಂಟ್ರಿ ಪಡೆಯುತ್ತಾರೆ! ಅಲ್ಲಿ ಅಡುಗೆ ಕೆಲಸವನ್ನೂ ಜತೆಯಾಗಿ ಮಾಡುತ್ತಾ ರುಚಿಕರ ತಿನಿಸುಗಳಿಗೆ ಹೆಸರಾದರು. ಅದೊಂದು ದಿನ ಹೋಟೆಲ್‌ ಆಡಳಿತ ಮಂಡಳಿ ಅವರನ್ನು ಷೆಫ್‌ ಸ್ಥಾನಕ್ಕೆ ಏರಿಸಿತು. ಬಿಜೂರಿನ ಪುಟ್ಟ ಹಳ್ಳಿಯ ಕಡುಬಡ ಕುಟುಂಬದ ಹುಡುಗ ಮುಂಬಯಿಯ ಪಂಚತಾರಾ ಹೋಟೆಲ್‌ನ ಷೆಫ್‌ ಆಗುವುದು ಆಗಿನ ಕಾಲಕ್ಕೆ ದೊಡ್ಡ ಸುದ್ದಿ!

ದೂರ ತೀರದಲ್ಲಿ ಕರೆಯುತ್ತಿತ್ತು ಮೋಹನ ಮುರಳಿ!

ಆದರೆ, ಗೋವಿಂದ ಪೂಜಾರಿ ಅವರಿಗೆ ನನ್ನ ಗುರಿ ಇದಿಷ್ಟೇ ಅಲ್ಲ ಅಲ್ಲ ಅಂತ ಅನಿಸುತ್ತಲೇ ಇತ್ತು. ಅವರಿಗೆ ಪಂಚ ತಾರಾ ಹೋಟೆಲ್‌ನ ಷೆಫ್‌ ಆಗುವುದಕ್ಕಿಂತಲೂ ಸ್ವಂತ ಉದ್ಯಮ ಮಾಡಿ ತಲೆ ಎತ್ತಿ ನಿಲ್ಲಬೇಕು ಎನ್ನುವ ಅತಿ ದೊಡ್ಡ ಆಸೆ ಇತ್ತು. ಹೀಗಾಗಿ ಅವರು ತಮ್ಮದೇ ಒಂದು ಕ್ಯಾಟರಿಂಗ್‌ ಸಂಸ್ಥೆಯನ್ನೇ ಕಟ್ಟಿಬಿಟ್ಟರು. 2007ರಲ್ಲಿ ಜನ್ಮ ತಳೆದ ಈ ಸಂಸ್ಥೆಯ ಹೆಸರು: ಶೆಫ್‌ ಟಾಕ್‌ ಕೇಟರಿಂಗ್‌ ಸರ್ವಿಸಸ್‌. ಮುಂದೆ ಇದೇ ಕಂಪನಿ ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ. (Cheftalk Food And Hospitality Services Pvt.Ltd) ಅಂತ ಚೇಂಜ್‌ ಆಯಿತು. ಇದು ಗೋವಿಂದ ಪೂಜಾರಿ ಮತ್ತು ಅವರ ಜತೆಗೆ ಏಳು ಮಂದಿ ಸೇರಿ ಕಟ್ಟಿದ ಸಂಸ್ಥೆ.

ಷೆಪ್‌ ಟಾಕ್‌ ಫುಟ್‌ ಎಂಡ್‌ ಹಾಸ್ಪಿಟಾಲಿಟಿ ಪ್ರೈವೆಟ್‌ ಲಿಮಿಟೆಡ್‌

ಈ ಸಂಸ್ಥೆ ಬೆಳೆದುನಿಂತ ರೀತಿಯನ್ನೊಮ್ಮೆ ನೋಡಿ

ಒಮ್ಮೆ ಗೂಗಲ್‌ ಮಾಡಿ ನೋಡಿ.. ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿಮಿಟೆಡ್‌ ಎಂಬ ಸಂಸ್ಥೆ ಎಷ್ಟು ಅಗಾಧವಾಗಿ ಬೆಳೆದಿದೆ ಎಂದು ಗೊತ್ತಾಗುತ್ತದೆ. ಈ ಸಂಸ್ಥೆಯಲ್ಲಿ ಈಗ ಇರುವ ಉದ್ಯೋಗಿಗಳ ಸಂಖ್ಯೆ 5000. ಮಹಾರಾಷ್ಟ್ರದಲ್ಲಿ ಹುಟ್ಟಿದ ಈ ಸಂಸ್ಥೆ ಈಗ ಕರ್ನಾಟಕ, ಜಾರ್ಖಂಡ್‌, ಗುಜರಾತ್‌ನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಅತ್ಯಾಧುನಿಕ ಕಿಚನ್‌ಗಳನ್ನು ನಿರ್ಮಿಸಿಕೊಂಡು ದೊಡ್ಡ ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಕೇಟರಿಂಗ್‌ ಸೇವೆಯನ್ನು ನೀಡುತ್ತಿದೆ. ಗೊತ್ತಿರಲಿ, ಇದೇ ಸಂಸ್ಥೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಕಿಚನನ್ನು ಹೊಂದಿದೆ. ಇದು ಐಎಸ್ಒ ಮಾನ್ಯತೆಯನ್ನೂ ಪಡೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದೆ.

ಎಷ್ಟೊಂದು ಬ್ಯುಸಿನೆಸ್‌ ಮಾಡುತ್ತಿದ್ದಾರೆ ನೋಡಿ…

ಗೋವಿಂದ ಪೂಜಾರಿ ಅವರು ಕಟ್ಟಿ ಬೆಳೆಸಿದ ಟೀಮ್‌

ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಾ 13ನೇ ವಯಸ್ಸಿಗೆ ಮುಂಬಯಿಯ ಬೀದಿಯಲ್ಲಿ ನಿಂತಿದ್ದ ಹುಡುಗ ತನ್ನ 40ರ ವಯಸ್ಸಿನ ಹೊತ್ತಿಗೆ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದರು. ಹಾಗಂತ ತಾವು ಬಂದ ದಾರಿಯನ್ನು ಮರೆಯಲಿಲ್ಲ. ತಾವೇ ಷೆಫ್‌ ಆಗಿ ನಿಂತು ಅಡುಗೆ ಮಾಡಲೂ ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಜತೆ ಕೆಲಸ ಮಾಡುವ ಹುಡುಗರನ್ನು ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವ ದೊಡ್ಡ ಗುಣ ತೋರಿದರು.

ಗೋವಿಂದ ಪೂಜಾರಿ ಅವರು ಕೇವಲ ಕ್ಯಾಟರಿಂಗ್‌ ಉದ್ಯಮಕ್ಕೂ ಸೀಮಿತವಾಗಲಿಲ್ಲ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್‌ ತಯಾರಿಸುವ ಕಂಪನಿ ಸ್ಥಾಪಿಸಿದರು.

ಪ್ರಜ್ಞಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿದರು. ಇವತ್ತು ಅವರದು ನೂರಾರು ಕೋಟಿ ವಹಿವಾಟು ನಡೆಸುವ ಚೈನ್‌ ಆಫ್‌ ಬ್ಯುಸಿನೆಸ್.‌

ನೆನಪಿರಲಿ, ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಕೆಲಸಗಾರರನ್ನು ಒದಗಿಸಿ ಕೊಡುವ ಕೆಲಸ ಮಾಡುತ್ತಿರುವುದು ಇದೇ ಗೋವಿಂದ ಪೂಜಾರಿ. ಅದರಲ್ಲೂ ತಮ್ಮೂರಿನ ಹುಡುಗರು ಎಂದು ಕುಂದಾಪುರ ಭಾಗದ ಹುಡುಗರನ್ನು ಬಸ್‌ಗಳಲ್ಲಿ ಹತ್ತಿಸಿ ಹತ್ತಿಸಿ ತರುತ್ತಿದ್ದಾರೆ.

ಸಂದಿರುವ ಪ್ರಶಸ್ತಿಗಳು ಹಲವಾರು

ಕೇವಲ ಪರಿಶ್ರಮದಿಂದ, ಹಠದಿಂದ ದೊಡ್ಡ ಉದ್ಯಮ ಸಂಸ್ಥೆಯನ್ನು ಆರಂಭ ಮಾಡಿರುವ ಗೋವಿಂದ ಪೂಜಾರಿ ಅವರಿಗೆ ಫಾಸ್ಟೆಸ್ಟ್ ಗ್ರೋವಿಂಗ್ ಪುಡ್ ಸರ್ವೀಸ್ ಕಂಪನಿ – ಎಐಎಫ್ 2017, ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್‌ಸಿ 2018, ಫಾಸ್ಟೆಸ್ಟ್ ಗ್ರೋವಿಂಗ್ ಎಂಟರ್‌ಪ್ರೈಸ್ – ಬಿಸಿಸಿಐ ಆ್ಯಂಡ್ ಎಚ್‌ಡಿಎಫ್‌ಸಿ ಬ್ಯಾಂಕ್ 2019 ಮತ್ತು ಆಹಾರೋದ್ಯಮ ಸಾಧನಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸಿಕ್ಕಿವೆ.

ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕುಂದಾಪುರ ದೇಶಮಂ!

ಊರಿನ ಮಹಿಳೆಯರಿಗೆ ಬಾಗಿನ

ಇಷ್ಟೆಲ್ಲ ಸಾಧನೆ ಮಾಡಿದ ಬಳಿಕವೂ ಅವರಿಗೆ ನೆಮ್ಮದಿ ಇಲ್ಲ. ಹಾಗಂತ ಇನ್ನಷ್ಟು ದುಡ್ಡು ಮಾಡಬೇಕು ಎನ್ನುವ ಆಸೆಯಲ್ಲ. ಬದಲಾಗಿ ನಾನು ಸಮಾಜಕ್ಕೆ, ನನ್ನ ಊರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವ ತವಕ. ತನ್ನ ಕೈಗೆ ದುಡ್ಡು ಬರಲಾರಂಭಿಸಿದ ದಿನದಿಂದಲೇ ಊರಿನ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅವರು ದಾನ ನೀಡಲು ಶುರು ಮಾಡಿದ್ದರು.

ಈಗ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಉಪ್ಪುಂದದಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಹತ್ತಾರು ಸಂಘ ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ ಹುಟ್ಟೂರಲ್ಲಿ ಶಾಲೆ ಕಟ್ಟಬೇಕು, ಉದ್ದಿಮೆಯನ್ನು ವಿಸ್ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು ಎನ್ನುವ ದೊಡ್ಡ ಕನಸಿಗ ಇವರು.

ಅದ್ಯಾಕೋ ಹುಟ್ಟಿತು ಶಾಸಕನಾಗುವ ಕನಸು

ಇಷ್ಟೊಂದು ಸಾಧನೆ, ಸಾಮಾಜಿಕ ಕಳಕಳಿ ಮತ್ತು ಸಮಾಜಸೇವೆ ನಡೆಸುವ ಉಮೇದಿ ಹೊಂದಿದ್ದ ಅವರ ಕಿವಿಯೊಳಗೆ ಯಾರೋ ನೀವು ಶಾಸಕರಾದರೆ ಇನ್ನಷ್ಟು ಕೆಲಸ ಮಾಡಬಹುದು ಎಂಬ ಮಾತನ್ನು ಉಸುರಿದ್ದರು. ಹೌದಲ್ಲ ಎಂದು ಅನಿಸಿದ ಗೋವಿಂದ ಪೂಜಾರಿ ಅವರು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಾಗ ಸಿಕ್ಕಿದ್ದೇ ಚೈತ್ರಾ ಕುಂದಾಪುರ. ಮುಂದಿನ ಕಥೆ ಎಲ್ಲವೂ ಎಲ್ಲರಿಗೂ ಗೊತ್ತಿದೆ.

ಇದನ್ನೂ ಓದಿ : Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಹಾಗಂತ, ಐದು ಕೋಟಿ ರೂ. ಕಳೆದುಕೊಂಡೆ ಎಂದು ಬೇಜಾರು ಮಾಡಿಕೊಂಡು ಕುಳಿತುಕೊಳ್ಳುವ ಜಾಯಮಾನ ಗೋವಿಂದ ಪೂಜಾರಿ ಅಲ್ಲ ಅನಿಸುತ್ತದೆ. ಬದುಕಿನುದ್ದಕ್ಕೂ ಹಲವು ಏಳುಬೀಳು, ಅಪಮಾನಗಳನ್ನು ಕಂಡೇ ಎದ್ದುನಿಂತವರು ಈ ಗೋವಿಂದ ಪೂಜಾರಿ. ಒಂದು ವಂಚನೆಯ ಕಥೆಯೊಳಗೆ ಹುದುಗಿದ್ದ ಸ್ಫೂರ್ತಿದಾಯಕ ಬದುಕು ಎಲ್ಲರಿಗೂ ಖಂಡಿತ ಇಷ್ಟವಾಗಲೇಬೇಕು.

ಇದನ್ನೂ ಓದಿ; Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

Exit mobile version