ಗುಜರಾತ್: ಪರೀಕ್ಷೆಯಲ್ಲಿ ಫೇಲಾದ ಎಷ್ಟೋ ವ್ಯಕ್ತಿಗಳು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಪಾಸಾದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಲ್ಲಿದೆ ಅಂತಹದೇ ಸಾಲಿಗೆ ಸೇರುವ ವ್ಯಕ್ತಿಯ ಕಥೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರ ಎರಡು ಟ್ವೀಟ್‌ಗಳು ಸದ್ಯ ಭಾರಿ ಪ್ರಶಂಸೆಗೆ ಒಳಗಾಗಿವೆ. ಒಂದು ತುಷಾರ್ ಸುಮೇರಾ ಅವರ ಅಂಕಪಟ್ಟಿಯನ್ನು ತೋರಿಸಿದರೆ ಇನ್ನೊಂದು ಪೋಟೊದಲ್ಲಿ ಸುಮೇರಾ ತಮ್ಮ ಕಚೇರಿಯಲ್ಲಿ ಹೆಮ್ಮೆಯಿಂದ ಕುಳಿತಿರುವುದನ್ನು ತೋರಿಸಲಾಗಿದೆ. ಹಾಗಿದ್ದರೆ ಏನಿದು ವೈರಲ್ ಸುದ್ದಿ ? ನೋಡೋಣ ಬನ್ನಿ.
ತುಷಾರ್ ಸಮೇರಾ UPSC ಪ್ರಯಾಣ
ನಮ್ಮ ನಡುವೆಯೇ ಇರುವ ಹಲವಾರು ವ್ಯಕ್ತಿಗಳ ಯಶೋಗಾಥೆಗಳು ನಮಗೆ ಸ್ಫೂರ್ತಿ ಆಗಬಲ್ಲವು. ಗುಜರಾತ್‌ನ ಅಧಿಕಾರಿ ತುಷಾರ್ ಸುಮೇರಾ ಕಥೆಯು ಅಂಥ ಪ್ರೇರಕ ಕಥೆಗಳಲ್ಲೊಂದು. ಗುಜರಾತಿನ ಭರೂಚ್ ಕಲೆಕ್ಟರ್ ಆಗಿರುವ ತುಷಾರ್ ಸುಮೇರಾ ತಮ್ಮ ಹೋರಾಟದ ಬದುಕಿನ ಕತೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು.
ತುಷಾರ್ ಸುಮೇರಾ ಹುಟ್ಟಿದ್ದು ಗುಜರಾತಿನಲ್ಲಿ. ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವ ತುಷಾರ್ ಆರಂಭದಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಶಾಲಾ ಮಕ್ಕಳಿಗೆ ಪಾಠ ಮಾಡುತ್ತಾ UPSC ಸಿವಿಲ್ ಪರೀಕ್ಷೆಗಳಿಗೆ ಅಭ್ಯಾಸ ಮಾಡುತ್ತಿದ್ದರಂತೆ. 2012ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಭರೂಚ್‌ಗೆ ಜಿಲ್ಲಾಧಿಕಾರಿಯಾಗಿ ಬಂದರು. ತಮ್ಮ ಸಮಾಜಮುಖಿ ಕೆಲಸಗಳಿಂದ ಸದಾ ಇವರ ಹೆಸರು ಗುಜರಾತಿನಲ್ಲಿ ಕೇಳಿ ಬರುತ್ತಿರುತ್ತದೆ.
ಸದ್ಯ ಅವರೀಗ ತಮ್ಮ 10ನೇ ತರಗತಿಯ ಅಂಕಗಳಿಂದಾಗಿ ಫೇಮಸ್ ಆಗಿದ್ದಾರೆ. ಅದರಲ್ಲಿ 3 ವಿಷಯದಲ್ಲಿ ಜಸ್ಟ್ ಪಾಸಾದ ಅವರು ಇಂಗ್ಲಿಷ್‌ನಲ್ಲಿ 35 ಅಂಕ, ಗಣಿತದಲ್ಲಿ 36 ಅಂಕ ಮತ್ತು ವಿಜ್ಞಾನದಲ್ಲಿ 38 ಅಂಕ ಪಡೆದಿದ್ದರು. ಆಗ ಅವರನ್ನು ನೋಡಿ ಊರ ಜನ ಅಪಹಾಸ್ಯ ಮಾಡಿದ್ದರು. ನೀನು ಜೀವನದಲ್ಲಿ ಉದ್ಧಾರ ಆಗೊಲ್ಲ. ಇಡೀ ಹಳ್ಳಿಯಲ್ಲಿ ನೀನು ವೇಸ್ಟ್ ಬಾಡಿ ಎಂದು ಹೀಯಾಳಿಸಿದ್ದರು. ಈ ಹೀಯಾಳಿಕೆಗಳನ್ನು ಅವರು ಅವಮಾನ ಎಂದು ಪರಿಗಣಿಸಲಿಲ್ಲ. ಸವಾಲಾಗಿ ಸ್ವೀಕರಿಸಿದರು. ಹಠ ಹಿಡಿದು ಓದಿದರು. ನಂತರ ಇವರು ಜಿಲ್ಲಾಧಿಕಾರಿ ಆಗಿ ಬಂದಾಗ, ಅಂದು ಹೀಯಾಳಿಸಿದವರೇ ಇವರ ಮುಂದೆ ಕೈಕಟ್ಟಿ ನಿಂತಾಗ, ತಾನು ಅನುಭವಿಸಿದ ಸಂತೃಪ್ತಿ ಮಾತಿನಲ್ಲಿ ಹೇಳಲಾಗದಂಥದ್ದು ಎನ್ನುತ್ತಾರೆ ಇವರು. ಇಂದು ಅವರ ಸಾಧನೆ 10ನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದ ಹಾಗೂ ಫೇಲಾದ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಿದೆ.
ಟ್ವೀಟ್ ಮಾಡಿದ ಅಧಿಕಾರಿ ಅವನೀಶ್ ಶರಣ್ ಯಾರು?
ಅವನೀಶ್ ಅವರು ಬಿಹಾರ ರಾಜ್ಯದವರು. ಅವರು ಕೂಡ IAS ಅಧಿಕಾರಿ. ತಮ್ಮ 9ನೇ ತರಗತಿಯನ್ನು 44.5% ಅಂಕಗಳೊಂದಿಗೆ ಪೂರ್ಣಗೊಳಿಸಿದರು. 10ನೇ ತರಗತಿಯಲ್ಲಿ ಸರಾಸರಿ 65% ಅಂಕಗಳೊಂದಿಗೆ ಮತ್ತು ನಂತರ ಅವರ ಪದವಿಯನ್ನು 60.7% ಅಂಕದೊಂದಿಗೆ ಪೂರ್ಣಗೊಳಿಸಿದರು.
ಒಮ್ಮೆ ಅವನೀಶ್ ತಮ್ಮ ಮನೆಯಲ್ಲಿ ಕುಳಿತು TVಯಲ್ಲಿ IAS ಲೋಕೇಶ್ ಕುಮಾರ್ ಸಿಂಗ್ ಅವರ ಸಂದರ್ಶನವನ್ನು ನೋಡುತ್ತಿದ್ದರಂತೆ. ಅವರ ಮಾತುಗಳಿಂದ ಸ್ಪೂರ್ತಿ ಪಡೆದು, ನಾನು ಕೂಡ IAS ಅಧಿಕಾರಿಯಾಗಬೇಕು ಅಂತ ನಿರ್ಧರಿಸಿದರು. ಇಲ್ಲಿಂದ ಅವರ ಓದುವ ಜರ್ನಿ ಆರಂಭವಾಯಿತು. ತಮ್ಮ ಮೊದಲ IAS ಪ್ರಯತ್ನವನ್ನು 2002ರಲ್ಲಿ ಮಾಡಿದರು. UPSC ಪರೀಕ್ಷೆಯಲ್ಲಿ 10ನೇ ಶ್ರೇಣಿ ಪಡೆದರು. ಸಹೋದರ ಅರ್ಜುನ್ ಶರಣ್ ಕೂಡ ಅವರ ಜತೆ UPSC ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದರು.
ನಂತರ ಅವನೀಶ್ ಕೂಡ IAS ಪರೀಕ್ಷೆಗೆ ಓದಲು ಪ್ರಾರಂಭಿಸಿದಾಗ, ಸಹೋದರನಿಂದ ಸಾಕಷ್ಟು ಸಹಾಯ ಹಾಗೂ ಮಾರ್ಗದರ್ಶನವನ್ನು ಸಹ ಪಡೆದರು. ಸಧ್ಯ ಛತ್ತೀಸ್‌ಗಢ ರಾಜ್ಯದ ಬಲರಾಮಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು UPSC ತೇರ್ಗಡೆಯಾದಾಗ ಇವರ ವಯಸ್ಸು ಜಸ್ಟ್ 22. ಇವರಿಗೆ ಈಗ 40 ವರ್ಷ. ಅವನೀಶ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದೇಶದಲ್ಲಿ ಇರುವ ಸಮಸ್ಯೆಗಳ ಕುರಿತು ಅವರು ಅಪ್‌ಲೋಡ್ ಮಾಡುವ ಪೋಸ್ಟ್‌ಗಳು ಮತ್ತು ಚಿತ್ರಗಳು ಜನರಿಗೆ ತುಂಬ ಇಷ್ಟ. “ನಾನು ದಿನದ 24 ಗಂಟೆ ನಿಮಗಾಗಿ ಲಭ್ಯ ಇರುತ್ತೇನೆ. ನೀವು ಯಾವಾಗ ಬೇಕಾದರೂ ಕರೆ ಮಾಡಬಹುದು ಮತ್ತು ಸಂದೇಶ ಕಳುಹಿಸಬಹುದು” ಅನ್ನುತ್ತಾರೆ. ಈ ಪೋಸ್ಟ್ 17.4 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.