ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ್ ಆವತ್ತು ಬದುಕಿನ ಕೊನೆಯ ದಿನ ಎಂಬ ಸ್ಥಿತಿಯಲ್ಲಿದ್ದ. ಅವನ ಉದ್ಯಮ ನೆಲ ಕಚ್ಚಿತ್ತು. ಸಾಲ ಪಡೆದವರು ಕೈ ಎತ್ತಿದ್ದರು. ಸಾಲ ಕೊಟ್ಟವರು ಬೆನ್ನುಹತ್ತಿದ್ದರು. ಅಪಮಾನ, ಸೋಲು, ಹತಾಶೆಗಳಿಂದ ಬದುಕೇ ಮುಗಿದು ಹೋಗಲಿ ಅನ್ನೋ ತೀರ್ಮಾನಕ್ಕೆ ಬಂದಿದ್ದ. ಹಾಗೆ ತೀರ್ಮಾನಿಸಿದವನು ಬೆಂಗಳೂರಿಗೆ ಬಂದು ಬದುಕನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದ. ಕೊನೆಯದಾಗಿ ಲಾಲ್ ಬಾಗ್ ಗೆ ಹೋಗಿ ಒಂದೆರಡು ಸುತ್ತು ಹೊಡೆಯೋಣ ಅನಿಸಿತು. ಹಾಗೆ ಹೋದವನೆ ಕಲ್ಲು ಬೆಂಚಿನ ಮೇಲೆ ತಲೆಗೆ ಕೈ ಇಟ್ಟು ಕುಳಿತುಕೊಂಡಿದ್ದ.
ಆಗ ಒಬ್ಬ ವಯಸ್ಸಾದ ವ್ಯಕ್ತಿ ವಾಕ್ ಹೋಗುತ್ತಿದ್ದವರು ಎದುರು ಬಂದು ನಿಂತರು. ಏನೋ ಸಮಸ್ಯೆಯಲ್ಲಿದ್ದಂತೆ ಕಾಣ್ತಾ ಇದೀರಿ.. ಎಂದು ಕೇಳಿದರು.
ವಿಶ್ವನಾಥ್ ತನ್ನ ಕಥೆ ಹೇಳಿದ. ಆಗ ಆ ವ್ಯಕ್ತಿ.. ನಾನು ನಿಮಗೆ ಸಹಾಯ ಮಾಡಬಲ್ಲೆ ಅಂತ ಹೇಳಿದರು. ಜೇಬಿನಿಂದ ಒಂದು ಚೆಕ್ ತೆಗೆದು ಹೆಸರು, ಬ್ಯಾಂಕ್ ಅಕೌಂಟ್ ಕೇಳಿ ಬರೆದು ವಿಶ್ವನಾಥ್‌ನ ಕೈಗಿಟ್ಟರು. ʻಈ ಹಣ ತೆಗೆದುಕೋ ನಿನಗೆ ಸಾಮರ್ಥ್ಯ ಇದೆ. ಗೆದ್ದೇ ಗೆಲ್ತೀಯಾ.. ಇನ್ನು ಒಂದು ವರ್ಷದ ನಂತ್ರ ಮತ್ತೆ ಭೇಟಿಯಾಗು. ಆಗ ನಾನು ಕೊಟ್ಟ ಹಣ ವಾಪಸ್ ಮಾಡುವಿಯಂತೆʼ ಎಂದರು.
ವಿಶ್ವನಾಥ ಚೆಕ್ ನೋಡಿದ. 25 ಲಕ್ಷ ರೂಪಾಯಿ! ಕೆಳಗಡೆ ಸಹಿ ನೋಡಿದ.. ಅಲ್ಲಿ ಬರೆದಿತ್ತು: ಎಂ.ಎಸ್. ಹರಿಪ್ರಸಾದ್.
ಅಬ್ಬಾ ಇವರು ದೊಡ್ಡ ಉದ್ಯಮಿಯಲ್ಲವೇ ಎಂದು ಅವರಿಗೆ ಕೈಮುಗಿಯಲು ಹೊರಟರೆ ಅವರಾಗಲೇ ದೂರ ಹೋಗಿ ಬಿಟ್ಟಿದ್ದರು.
ವಿಶ್ವನಾಥ್ ಊರಿಗೆ ಮರಳಿದ. ಜೇಬಿನಲ್ಲಿದ್ದ ಚೆಕ್ಕನ್ನು ಒಂದೆರಡು ದಿನ ಬಿಟ್ಟು ಬ್ಯಾಂಕ್‌ಗೆ ಹಾಕೋಣ ಎಂದು ತೀರ್ಮಾನಿಸಿದ. ತನಗೆ ಬರಬೇಕಾದ ಹಣದ ಲೆಕ್ಕಾಚಾರ ಹಾಕಿದ. ಅಲ್ಲಿವರೆಗೆ ಸಾಲಗಾರರ ಭಯದಿಂದ ತನಗೆ ಬರಬೇಕಾದ ಸಾಲ ವಸೂಲಿಯನ್ನೂ ಮಾಡಿರಲಿಲ್ಲ. ಕೆಲವರು ಒಂದಿಷ್ಟು ಹಣ ಕೊಟ್ಟರು. ಸಾಲಗಾರರೂ ಬಂದರು. ಅವರಿಗೆ ಚೆಕ್ ತೋರಿಸಿ ಭರವಸೆ ನೀಡಿದ.
ಕೈಯಲ್ಲಿ ಸ್ವಲ್ಪ ಹಣ ಸೇರುತ್ತಲೇ ಬ್ಯುಸಿನೆಸ್ ಮತ್ತೆ ಆರಂಭವಾಯಿತು. ಕೆಲಸಗಾರರೂ ಬಂದರು. ಹಣ ಓಡಾಟ ಶುರುವಾಯಿತು. ಸಾಲಗಾರರಿಗೆ ಹಣ ಪಾವತಿ ಆರಂಭಿಸಿದ. ವ್ಯವಹಾರ ನಿಧಾನಕ್ಕೆ ಲಾಭದ ಗತಿಗೆ ಮರಳಿತು. ಈ ನಡುವೆ ಚೆಕ್ಕನ್ನು ಬ್ಯಾಂಕ್‌ಗೆ ಹಾಕುವುದನ್ನು ಮರೆತೇ ಬಿಟ್ಟ.
ಬಹು ಬೇಗನೆ ಒಂದು ವರ್ಷವೇ ಕಳೆಯಿತು. ಆಗ ಚೆಕ್ ಕೊಟ್ಟ ವೃದ್ಧ ನೆನಪಾದರು. ಬೆಂಗಳೂರಿಗೆ ಧಾವಿಸಿದವನೇ ಲಾಲ್ ಬಾಗ್ ಗೆ ಹೋದ. ಅಲ್ಲಿ ಆ ವೃದ್ಧ ನಡೆದು ಹೋಗುತ್ತಿರುವುದನ್ನು ನೋಡಿ, ಓಡಿ ಹೋಗಿ ಕೈ ಹಿಡಿದುಕೊಂಡ. ತನ್ನ ಯಶಸ್ಸಿನ ಕಥೆ ಹೇಳಬೇಕು ಅನ್ನುವಷ್ಟರಲ್ಲಿ ಒಬ್ಬಳು ನರ್ಸ್ ಓಡಿ ಬಂದಳು.
ʻʻತುಂಬ ತ್ಯಾಂಕ್ಸ್ ಸರ್.. ಇವರನ್ನು ಹಿಡಿದುಕೊಂಡಿದ್ದಕ್ಕೆ. ನಿಮಗೇನೂ ತೊಂದರೆ ಮಾಡಿಲ್ವಲ್ಲ. ಇವರು ಹೀಗೇನೆ. ನಮ್ಮ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬರ್ತಾರೆ.. ಇಲ್ಲಿ ಕಂಡವರಿಗೆಲ್ಲ ನಾನು ಎಂ.ಎಸ್. ಹರಿಪ್ರಸಾದ್ ಅಂತ ಪರಿಚಯ ಮಾಡಿಕೊಳ್ಳೋದು. ಇವರನ್ನು ಕಟ್ಟಿ ಹಾಕೋದೇ ಕಷ್ಟವಾಗಿದೆʼ ಎಂದು ಒಂದೇ ಉಸಿರಲ್ಲಿ ಹೇಳಿದರು.
ನರ್ಸ್ ಆ ವ್ಯಕ್ತಿಯನ್ನು ಎಳೆದುಕೊಂಡೇ ಹೋದಳು. ಆಕೆಯ ಡ್ರೆಸ್‌ನಲ್ಲಿರುವ ಹೆಸರು ಓದಿದ.. ನಿಮ್ಹಾನ್ಸ್! ವಿಶ್ವನಾಥ್‌ಗೆ ಆಶ್ಚರ್ಯ, ಏನಪ್ಪಾ ಇದೆಲ್ಲ ಅಂತ.
ತಕ್ಷಣ ಅವನಿಗೆ ಅರ್ಥವಾಯಿತು. ಈ ವ್ಯಕ್ತಿ ದೇವರಂತೆ ಬಂದರು. ಅವರು ನನಗೆ ಕೊಟ್ಟಿದ್ದು ಚೆಕ್ ಅಲ್ಲ, ಆತ್ಮವಿಶ್ವಾಸ. ಹಣ ಇರಲೇ ಇಲ್ಲ. ಆದರೆ ಇದೆ ಎಂಬ ವಿಶ್ವಾಸದಿಂದ ಮುನ್ನುಗ್ಗಿದ್ದೇ ನಾನು ಮತ್ತೆ ಚೇತರಿಸಿಕೊಳ್ಳಲು ಕಾರಣ ಅಂದುಕೊಂಡ.
ಇದನ್ನೂ ಓದಿ | Motivational story | ಮಗನ ಮದುವೆಯ ದಿನ ಅಪ್ಪ ಹೇಳಿದ ಆ ಮಾತು ನೀವೂ ಕೇಳಿಸಿಕೊಳ್ಳಬೇಕು!