ಕೃಷ್ಣ ಭಟ್ ಅಳದಂಗಡಿ-Motivational story
ಕಂಪನಿ ಒಂದರ ಮ್ಯಾನೇಜರ್ ವಿಶ್ವನಾಥ್ ವಿಮಾನದಿಂದ ಇಳಿಯುತ್ತಲೇ ಯೋಚಿಸಲಾರಂಭಿಸಿದರು. ನಾನು ಬುಕ್ ಮಾಡಿರುವ ಕ್ಯಾಬ್ ಬಂದಿರಬಹುದಾ? ನಾನು ಹೋಟೆಲ್ ರೂಂ ತಲುಪಿ, ಫ್ರೆಷಪ್ ಆಗಿ ಸರಿಯಾದ ಸಮಯಕ್ಕೆ ಕಾನ್ಫರೆನ್ಸ್ ಅಟೆಂಡ್‌ಮಾಡಲು ಸಾಧ್ಯವಾದೀತಾ? ಇನ್ನು ಡ್ರೈವರ್ ಹೇಗಿರುತ್ತಾನೋ? ಅಂತೆಲ್ಲ.
ಆದರೆ ಹೊರಗೆ ಬರುತ್ತಿದ್ದಂತೆಯೇ ಚಾಲಕ ಕಾರ್ಡ್ ಹಿಡಿದು ನಿಂತಿದ್ದ. ಕೂಡಲೇ ತನ್ನ ಕಾರಿನ ಕಡೆಗೆ ಕರೆದುಕೊಂಡು ಹೋದ. ಚಾಲಕ ಕಾರಿನ ಬಾಗಿಲು ತೆಗೆದು ಕುಳಿತುಕೊಳ್ಳಿ ಎಂದ. ʻನಾನು ನಿಮ್ಮ ಬ್ಯಾಗ್‌ಗಳನ್ನು ಡಿಕ್ಕಿಯಲ್ಲಿಡುತ್ತೇನೆ. ನೀವು ನಮ್ಮ ಮಿಷನ್ ಸ್ಟೇಟ್ಮೆಂಟ್ ಓದುತ್ತಾ ಇರಿʼ ಅಂತ. ವಿಶ್ವನಾಥ್‌ಗೆ ಆಶ್ಚರ್ಯ ಏನಪ್ಪಾ ಇದು ಅಂತ.
ವಿಶ್ವನಾಥ್ ಅದನ್ನು ಓದಿದರು: ನಮ್ಮ ವಾಹನದಲ್ಲಿ ಪ್ರಯಾಣಿಸುತ್ತಿರುವುದಕ್ಕೆ ವಂದನೆಗಳು. ನಿಮ್ಮನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ ಮತ್ತು ತ್ವರಿತವಾಗಿ ನಿಮ್ಮ ಜಾಗವನ್ನು ತಲುಪಿಸುವ ಹೊಣೆ ನಮ್ಮದು. ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಮ್ಮ ಪ್ರಯಾಣ ಸುಖಕರವಾಗಿರಲಿ- ಎಂದು ಬರೆದಿತ್ತು. ಅದನ್ನು ಓದಿ ಮುಗಿಸುವ ಹೊತ್ತಿಗೆ ಚಾಲಕ ಸೀಟಿನಲ್ಲಿ ಕುಳಿತಿದ್ದ. ಎಸಿ ಹಾಕಿದ್ದೇನೆ. ಸರಿ ಇದೆಯಾ ನೋಡಿ ಸರ್ ಅಂತ. ವಿಶ್ವನಾಥ್ ಓಕೆ ಇದೆ ಅಂದರು.
ಚಾಲಕ ವಾಹನ ಸ್ಟಾರ್ಟ್ ಮಾಡುತ್ತಲೇ, ಸರ್ ಕಾರಿನಲ್ಲಿ ರೇಡಿಯೊ ಲಿಂಕ್ ಇದೆ.. ನಿಮಗೆ ಬೇಕಾದ್ದನ್ನು ಪ್ಲೇ ಮಾಡಬಹುದು, ಪತ್ರಿಕೆಗಳಿವೆ ಓದಬಹುದು. ಚಹಾ, ಕಾಫಿ ಇದೆ. ಬೇಕಾದ್ದನ್ನು ತಗೊಬಹುದು ಎಂದ. ವಿಶ್ವನಾಥ್, ʻʻನನಗೆ ಜ್ಯೂಸ್ ಬೇಕಿತ್ತು, ಇದೆಯಾʼ ಎಂದು ಕೇಳಿದರು.
ಆಗ ಚಾಲಕ: ಹಾಂ ಸರ್‌ಖಂಡಿತಾ ಇದೆ. ನಾಲ್ಕು ರೀತಿಯ ಚಾಯ್ಸ್‌ಇದೆ. ನಿಮಗೆ ಬೇಕಾದ್ದನ್ನು ತೆಗೆದುಕೊಳ್ಳಿ.. ಕೋಲ್ಡ್ ಎಂಡ್ ವಾರ್ಮ್ ಎರಡೂ ಇದೆ ಎಂದ.
ವಿಶ್ವನಾಥ್ ಒಂದು ಪ್ಯಾಕ್ ಜ್ಯೂಸ್ ತೆಗೆದುಕೊಂಡರು. ಪೇಪರ್ ಓದಿದರು.
ಚಾಲಕ ಕೇಳಿದ: ನೀವು ಈ ಸಿಟಿಗೆ ಹೊಸಬರೋ ಗೊತ್ತಿಲ್ಲ. ಸಿಟಿಯ ಸಂಪೂರ್ಣ ಪರಿಚಯ ಇರುವ ಅಪ್ಲಿಕೇಶನ್ ಇದೆ. ನೀವು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿಕೊಂಡರೆ ಸಾಕು ಎಂದ. ಇದು ಬಿಟ್ಟು ಬೇರೇನಾದರೂ ಕೇಳುವುದಿದ್ದರೂ ಕೇಳಬಹುದು ಅಂದ.
ವಿಶ್ವನಾಥ್ ಹೇಳಿದರು: ಕೇಳುವುದಕ್ಕೆ ಏನೂ ಉಳಿದಿಲ್ಲ. ಈ ರೀತಿ ಸೇವೆ ನೀಡುವ ಯೋಚನೆ ನಿಮಗೆ ಹೇಗೆ ಬಂತು. ಅದನ್ನು ಹೇಳಿದರೆ ಸಾಕು.
ಚಾಲಕ ಹೇಳಿದ: ನಾನು ಕ್ಯಾಬ್ ಡ್ರೈವರ್ ಕೆಲಸ ಶುರು ಮಾಡಿ ಐದು ವರ್ಷ ಆಯಿತು. ಆದರೆ, ಇದೆಲ್ಲ ಶುರು ಆಗಿದ್ದು ಒಂದು ವರ್ಷದಿಂದ. ಆವತ್ತು ನಾನು ಎಫ್‌ಎಂ ಸ್ಟೇಷನ್ ಕೇಳ್ತಾ ಇದ್ದೆ. ಆರ್‌ಜೆ ಒಬ್ಬರು ಕೊಕ್ಕರೆ ಮತ್ತು ಹದ್ದಿನ ಕಥೆ ಹೇಳುತ್ತಾ ಇದ್ದರು. ಕೊಕ್ಕರೆ ಯಾವತ್ತೂ ತಾನಿರುವ ಸ್ಥಿತಿಯ ಬೇಜಾರಿನಲ್ಲೇ ಇತ್ತು. ಹದ್ದು ಮಾತ್ರ ಆಕಾಶದಲ್ಲಿ ಹಾರುತ್ತಾ ಇತ್ತು.
ಕಥೆ ಕೇಳಿದ ಮೇಲೆ ನನಗೆ ಅನಿಸಿತು. ನಾನು ಕೂಡಾ ನನ್ನ ಉದ್ಯೋಗದ ಬಗ್ಗೆ ಉಳಿದ ಚಾಲಕರ ಜತೆ ದೂರುತ್ತಾ, ಕಾಲ ಕಳೆಯುತ್ತಿದ್ದೇನೆ ಅನಿಸಿತು. ಹಾಗಾಗಿ ಇದನ್ನೇ ಬೇರೆ ರೀತಿಯಲ್ಲಿ ಮಾಡಬೇಕು ಅಂತ ತೀರ್ಮಾನ ಮಾಡಿ ಬದಲಾವಣೆಗಳನ್ನು ತಂದುಕೊಂಡೆ. ಈಗ ಹಲವಾರು ಮಂದಿ ನಾನೇ ಬೇಕು ಅಂತ ಬುಕ್ ಮಾಡ್ತಾರೆ. ಅವರ ಖುಷಿಯೇ ನನ್ನ ಖುಷಿ ಎಂದ.
ಅಷ್ಟು ಹೊತ್ತಿಗೆ ವಿಶ್ವನಾಥ್ ತಲುಪಬೇಕಾದ ಜಾಗ ಬಂತು. ಅವರು ಇಳಿಯುತ್ತಿದ್ದಂತೆಯೇ ಚಾಲಕ ಒಂದು ಕಾರ್ಡ್ ನೀಡಿ, ನೀವು ಯಾವಾಗ ಬೇಕಾದರೂ ನನಗೆ ಕಾಲ್ ಮಾಡಬಹುದು ಅಂದ.
ವಿಶ್ವನಾಥ್ ಅವನಿಗೆ ತ್ಯಾಂಕ್ಸ್ ಹೇಳಿ ಹೊರಟರು..
ಅವರು ಯೋಚಿಸುತ್ತಿದ್ದರು: ಇವತ್ತು ತಾನು ಮಾಡಬೇಕಾಗಿರುವ ಸೆಷನ್ ಡಿಫರೆಂಟ್ ಥಿಂಕಿಂಗ್ ಇನ್ ಬಿಸಿನೆಸ್‌ಗೆ ಒಳ್ಳೆಯ ಉದಾಹರಣೆ ಕೊಡಬಹುದು ಅಂತ.
ಇದನ್ನೂ ಓದಿ | Motivational story | ಬೆಲೆಯೇ ಇಲ್ಲದ ಮುತ್ತಿನ ಹಾರ ಮತ್ತು ಬೆಲೆ ಕಟ್ಟಲಾಗದ ಗೆಳೆತನದ ಬೆಂಗಾವಲಿನ ಕಥೆ