ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ ಒಂದು ಗೊಂಬೆ ಕಂಪನಿಯಲ್ಲಿ ಉದ್ಯೋಗಿ. ಹೆಸರಿಗೆ ಟೆಕ್ನೀಷಿಯನ್. ಆದರೆ, ಮಾಡುವ ಕೆಲಸ ಏನೆಂದರೆ, ಬಿಡಿಭಾಗಗಳನ್ನು ಸ್ಕ್ರೂ ಹಾಕಿ ಜೋಡಿಸುವುದು. ತುಂಬ ಸುಲಭದ ಕೆಲಸ. ಆರಂಭದಲ್ಲಿ ತುಂಬ ಖುಷಿಯಾಗಿತ್ತಾದರೂ ಇತ್ತೀಚೆಗೆ ಬೋರ್ ಆಗಲು ಆರಂಭಿಸಿತ್ತು. ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಲ್ವಾ ಅಂತ.
ಅವನು ಒಂದು ದಿನ ಮ್ಯಾನೇಜರ್ ಬಳಿಗೆ ಹೋಗಿ ʻಸರ್ ನಂಗೆ ಈ ಕೆಲಸ ತುಂಬ ಬೋರಾಗ್ತಿದೆ. ಮುಂದಿನ ತಿಂಗಳಿನಿಂದ ಕೆಲಸ ಬಿಡಬೇಕು ಅಂತ ಇದ್ದೇನೆ’ ಅಂದ. ಮ್ಯಾನೇಜರ್ ಕೇಳಿದರು: ಮುಂದೆ ಏನು ಮಾಡಬೇಕು ಅಂತಿದಿರಾ?
ಬೇರೆ ಕೆಲಸ ಹುಡುಕ್ತೇನೆ ಸರ್ ಅಂದ ವಿಶ್ವನಾಥ. `ಆ ಕೆಲಸಾನೂ ಸ್ವಲ್ಪ ದಿನದಲ್ಲಿ ಬೋರ್ ಆಗಬಹುದಲ್ವಾ?’ ಅಂದರು. ವಿಶ್ವನಾಥ ಯೋಚಿಸಿದ.
ʻಓಕೆ ಪರವಾಗಿಲ್ಲ. ಕೆಲಸ ಬಿಡುವ ಬಗ್ಗೆ ಆಮೇಲೆ ಯೋಚಿಸೋಣ. ಅದಕ್ಕಿಂತ ಮೊದಲು ಈಗ ನೀವು ಮಾಡುತ್ತಿರುವ ಕೆಲಸದ ಮುಖ್ಯ ಉದ್ದೇಶ ಏನು ಅಂತ ಹೇಳಬಹುದಾ’ ಅಂತ ಮ್ಯಾನೇಜರ್ ಹೇಳಿದರು.
ವಿಶ್ವನಾಥ: ಗೊಂಬೆಗಳ ಬಿಡಿ ಭಾಗಗಳನ್ನು ನಟ್, ಬೋಲ್ಟ್ ಹಾಕಿ ಜೋಡಿಸಿ ಮಾರಾಟಕ್ಕೆ ಸಿದ್ಧಪಡಿಸುವುದು.
ಮ್ಯಾನೇಜರ್: ಅದು ಸರಿ. ಅದಕ್ಕಿಂತಲೂ ಹೆಚ್ಚಿನ ಉದ್ದೇಶ?
ವಿಶ್ವನಾಥ: ಕಂಪನಿಗಾಗಿ ನಾನು ಬೊಂಬೆಗಳನ್ನು ರೆಡಿ ಮಾಡುವುದು.
ಮ್ಯಾನೇಜರ್: ಯೋಚನೆ ಮಾಡಿ ಹೇಳಿ, ಅದಕ್ಕಿಂತಲೂ ದೊಡ್ಡ ಉದ್ದೇಶ ಏನಾದರೂ ಇದ್ದೀತಾ?
ವಿಶ್ವನಾಥ: ಈ ಗೊಂಬೆಗಳನ್ನು ಮಾರುವುದರಿಂದ ಕಂಪನಿಗೆ ಹಣ ಬರ್ತದೆ. ನಂಗೆ ಸಂಬಳ ಸಿಗ್ತದೆ.
ಮ್ಯಾನೇಜರ್: ಇಷ್ಟೇನಾ? ಇನ್ನೂ ಏನೂ ಇರಲಿಕ್ಕಿಲ್ವಾ?
ವಿಶ್ವನಾಥ: ಮಕ್ಕಳಿಗೆ ತುಂಬ ಖುಷಿಯಾಗುವ ಗೊಂಬೆಗಳನ್ನು ನಾನು ಸಿದ್ಧ ಮಾಡುತ್ತಿದ್ದೇನೆ. ಅವರು ಅದರೊಂದಿಗೆ ಆಡಿ ಸಂಭ್ರಮಿಸುತ್ತಾರೆ.
ಮ್ಯಾನೇಜರ್: ಈಗ ಸರಿಯಾಗಿ ಹೇಳಿದ್ರಿ. ಯಾವುದೇ ಕೆಲಸ ಮಾಡುವಾಗ ಅದರ ಅಂತಿಮ ಫಲ ಯಾರಿಗೆ ಸಿಗುತ್ತದೆ ಎನ್ನುವುದರ ಬಗ್ಗೆ ನಮಗೆ ಗಮನವಿದ್ದಾಗ ನಮಗೆ ಸಾರ್ಥಕತೆಯ ಅರಿವಾಗುತ್ತದೆ. ಉದ್ದೇಶ ಒಳ್ಳೆಯದಾಗಿದ್ದರೆ ಮೆದುಳು, ಹೃದಯ, ಮನಸ್ಸು ಎಲ್ಲವನ್ನೂ ಇಟ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೆ ಮಾಡಿದರೆ ಬೋರ್ ಆಗಲು ಕಾರಣವುಂಟೇ? ನೀವು ತಯಾರಿಸಿದ ಒಂದು ಗೊಂಬೆಯಿಂದ ಮಗು ಕುಣಿಯುತ್ತದೆ ಎನ್ನುವುದನ್ನು ಕಲ್ಪಿಸಿಕೊಳ್ಳಿ.
ವಿಶ್ವನಾಥ; ಹೌದಲ್ವಾ? ಇದರ ಬಗ್ಗೆ ನಾನು ಯೋಚನೆಯನ್ನೇ ಮಾಡಿರಲಿಲ್ಲ. ಸುಮ್ನೆ ಇದೊಂದು ಹೊಟ್ಟೆಪಾಡಿನ ಚಾಕರಿ ಅಂದುಕೊಂಡಿದ್ದೆ. ಕಂಪನಿಗೆ ಲಾಭ ಮಾಡ್ತಾ ಇದ್ದೇನೆ ಅನಿಸ್ತಾ ಇತ್ತು ಅಷ್ಟೆ.
ಮ್ಯಾನೇಜರ್: ನಿಮಗೀಗ ನಿಮ್ಮ ಜವಾಬ್ದಾರಿಯ ಉದ್ದೇಶ ಗೊತ್ತಾಗಿದೆ. ಈ ಗೊಂಬೆಗಳೊಂದಿಗೆ ಮಕ್ಕಳು ಆಟವಾಡಿ ಖುಷಿಪಡುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಿ. ಇನ್ನೂ ಸ್ವಲ್ಪ ಯೋಚನೆ ಮಾಡಿ.. ಮಕ್ಕಳು ಇನ್ನಷ್ಟು ಖುಷಿಯಾಗುವಂತೆ ಈ ಗೊಂಬೆಗಳಲ್ಲಿ ಏನು ಬದಲಾವಣೆ ಮಾಡಬಹುದು? ಯೋಚನೆ ಮಾಡಿ ನನಗೆ ಹೇಳಿ.
ವಿಶ್ವನಾಥ ಒಪ್ಪಿಕೊಂಡ.
ಆವತ್ತು ಮನೆಗೆ ಬೇಗ ಬಂದ. ಬಹುಕಾಲದ ಬಳಿಕ ಮಕ್ಕಳನ್ನು ಹತ್ತಿರ ಕರೆಸಿಕೊಂಡ. ಅವರ ಗೊಂಬೆಯಾಟಗಳನ್ನೆಲ್ಲ ಗಮನಿಸಿದ. ಇನ್ನೂ ಕೆಲವು ದಿನ ಅವರೊಂದಿಗೆ ಕಳೆದ. ಪಕ್ಕದ್ಮನೆ ಮಕ್ಕಳನ್ನೂ ಕರೆಸಿಕೊಂಡ. ಈಗ ಅಪ್ಪನೂ ಆಟ ಆಡ್ಲಿಕೆ ಬರ್ತಾರೆ ಅಂತ ಮಕ್ಕಳಿಗೂ ಖುಷಿ. ಮಕ್ಕಳಿಗೆ ಯಾವ ಬಣ್ಣ ಇಷ್ಟ, ಯಾವ ಶೇಪ್, ಯಾವ ಡಿಸೈನ್ ಖುಷಿ ಆಗ್ತದೆ ಅಂತ ತಾನೇ ಗಮನಿಸಿ ಗುರುತು ಮಾಡಿಕೊಂಡ. ಇನ್ನೂ ಏನೇನು ಸಾಧ್ಯತೆಗಳಿವೆ ಅಂತ ಯೋಚಿಸಿದ.
ಕೆಲವು ದಿನ ಬಿಟ್ಟು ತಾನು ಕಂಡದ್ದು, ಅನುಭವಿಸಿದ ವಿಚಾರಗಳನ್ನೆಲ್ಲ ವಿಶ್ವನಾಥ ಮ್ಯಾನೇಜರ್ ಗೆ ಹೇಳಿದ. `ಈಗಲೂ ಈ ಕೆಲಸ ತುಂಬ ಬೋರ್ ಅನಿಸ್ತಾ ಇದ್ಯಾ’ ಅಂತ ನಗುತ್ತಾ ಕೇಳಿದರು ಮ್ಯಾನೇಜರ್. ವಿಶ್ವನಾಥ ʻಚಾನ್ಸೇ ಇಲ್ಲ ಸರ್.. ನೋ ವೇ’ ಅಂದರು.
ಮ್ಯಾನೇಜರ್ ಹೇಳಿದರು: ನೀವು ಇದುವರೆಗೆ ಬರೀ ಕೂಲಿ ತರ ದುಡೀತಾ ಇದ್ರಿ. ಈಗ ಒಬ್ಬ ವಿನ್ಯಾಸಕನಂತೆ ಯೋಚನೆ ಮಾಡ್ತಾ ಇದೀರ.. ನಿಮ್ಮನ್ನು ಡಿಸೈನಿಂಗ್ ಪ್ಲಾನರ್ ಆಗಿ ಪ್ರಮೋಟ್ ಮಾಡ್ತೇನೆ” ಅಂದರು. ವಿಶ್ವನಾಥ ಥ್ರಿಲ್ಲಾದ. ಮೊದಲು ಹೆಂಡತಿ ಮತ್ತು ಮಕ್ಕಳಿಗೆ ಹೇಳಬೇಕು ಅಂದುಕೊಂಡ. ನಡುವೆ ನಗುತ್ತಿರುವ ಆ ಒಂದು ಗೊಂಬೆಗೂ!
ಇದನ್ನೂ ಓದಿ | Motivational story | ಆ ಹುಡುಗ ಅಂಗಡಿ ಬಳಿ ನಿಂತು ತನ್ನ ಕೆಲಸದ ಬಗ್ಗೆ ಸೆಲ್ಫ್ ಅಪ್ರೈಸಲ್ ಮಾಡಿಕೊಳ್ಳುತ್ತಿದ್ದ!