ಕೃಷ್ಣ ಭಟ್ ಅಳದಂಗಡಿ- Motivational story
ಒಂದು ಸಾರಿ ಅಪ್ಪ ಮತ್ತು ಮಗಳಿಗೆ ಎಲ್ಲೋ ಹೋಗಬೇಕಿತ್ತು. ಕಾರಿನಲ್ಲೇ ಹೋಗೋಣ ಅಂತ ತೀರ್ಮಾನ ಮಾಡಿದ್ರು. ಅಪ್ಪ ತುಂಬ ಫಾರ್ವರ್ಡ್ ಮನುಷ್ಯ. ಹಾಗಾಗಿ ಮಗಳೇ ನೀನೇ ಕಾರು ಓಡಿಸು, ನಾನು ಪಕ್ಕದ ಸೀಟಲ್ಲಿ ಕೂತಿರ್ತೇನೆ ಅಂದ. ಕಾರು ಹೊರಟಿತು. ಅದು ವಿಶಾಲವಾದ ಬಯಲಿನ ನಡುವಿನ ರಸ್ತೆ. ಯುವತಿ ಕಾರನ್ನು ತುಂಬ ವೇಗವಾಗಿ ಓಡಿಸುತ್ತಿದ್ದಳು. ಪಕ್ಕದಲ್ಲಿ ಅಪ್ಪ ಕುಳಿತದ್ದರಿಂದ ಅವಳಿಗೆ ಧೈರ್ಯ ಬಂದಿತ್ತು.
ಹಾಗೇ ಒಂದಷ್ಟು ದೂರ ಹೋದಾಗ ದಾರಿಯಲ್ಲಿ ದೂರದಲ್ಲೊಂದು ಬಿರುಗಾಳಿ ಎದ್ದಿರುವುದು ಕಂಡಿತು. ಮಗಳು ಕೇಳಿದಳು: ಅಪ್ಪಾ ಏನ್ಮಾಡೋಣ. ಕಾರು ನಿಲ್ಲಿಸ್ಲಾ?
ಅಪ್ಪ ಹೇಳಿದರು: ಬೇಡ ಮಗಳೇ, ಮುಂದೆ ಓಡಿಸ್ತಾ ಇರು.
ಒಂದಷ್ಟು ಮೀಟರ್ ದೂರ ಹೋದರು. ಅಷ್ಟು ಹೊತ್ತಿಗೆ ಬೇರೆ ಕಾರಿನವರು ತಮ್ಮ ವಾಹನಗಳನ್ನೆಲ್ಲ ಪಕ್ಕಕ್ಕೆ ನಿಲ್ಲಿಸಿರುವುದು ಕಂಡಿತು. ಹುಡುಗಿಗೆ ಸ್ವಲ್ಪ ಅಧೈರ್ಯ.
ಕೇಳಿದಳು: ಅಪ್ಪಾ ನಾವು ಕೂಡಾ ಬದಿಗೆ ನಿಲ್ಲಿಸೋಣವಾ?
ಅಪ್ಪ ಹೇಳಿದರು: ಬೇಡ ಮಗಳೇ, ಮುಂದೆ ಓಡಿಸ್ತಾ ಇರು.
ಮುಂದೆ ಹೋಗ್ತಾ ಇದ್ದ ಹಾಗೆ ಇನ್ನಷ್ಟು ಕಾರುಗಳು ಬದಿಗೆ ಸರಿದು ನಿಂತಿದ್ದವು. ಯುವತಿ ಕಾರನ್ನು ನಿಧಾನಗೊಳಿಸುತ್ತಾ ಹೇಳಿದಳು: ಅಪ್ಪಾ.. ಕಾರನ್ನು ಬದಿಗೆ ನಿಲ್ಲಿಸೋಣ ಅಂತ ಅನಿಸ್ತಾ ಇದೆ. ಈಗಲೇ ನನಗೆ ದಾರಿ ಸರಿಯಾಗಿ ಕಾಣುತ್ತಿಲ್ಲ. ಮುಂದೆ ಇನ್ನೂ ಭಯಾನಕವಾಗಿರುವಂತಿದೆ. ಎಲ್ಲರೂ ಬದಿಗೆ ನಿಲ್ಲಿಸ್ತಿದ್ದಾರೆ. ನಾವು ರಿಸ್ಕ್ ತಗೊಳ್ಳುತ್ತಿದ್ದೇವೆ ಅನಿಸ್ತಾ ಇದೆ.
ಅಪ್ಪ ಮತ್ತೆ ಹೇಳಿದರು: ಇಲ್ಲ ಮಗಳೇ, ಕೀಪ್ ಡ್ರೈವಿಂಗ್.
ಆಕೆ ಕಾರನ್ನು ಮುಂದೆ ಓಡಿಸಿದಳು. ಅವಳ ನಿರೀಕ್ಷೆಯಂತೆ ಬಿರುಗಾಳಿ ಇನ್ನಷ್ಟು ಜೋರಾಯಿತು. ಮುಂದೆ ಸಾಗುವುದೇ ಕಷ್ಟವಾಯಿತು. ಕೆಲವೊಮ್ಮೆ ಅಪ್ಪನ ಮಾತು ಮೀರಿ ನಿಲ್ಲಿಸೋಣ ಅನಿಸ್ತಾ ಇತ್ತು. ಆದರೂ ಆಕೆ ಅಪ್ಪ ಜತೆಗಿದ್ದಾರೆ ಎಂಬ ಧೈರ್ಯದಲ್ಲಿ ಕಾರು ಓಡಿಸುತ್ತಲೇ ಇದ್ದಳು.
ಮುಂದೆ ಕೆಲವು ಮೀಟರ್ ಹೋಗ್ತಾ ಬಿರುಗಾಳಿಯ ಅಬ್ಬರ ಕಡಿಮೆಯಾಯಿತು. ದಾರಿ ಕ್ಲಿಯರ್ ಆಯಿತು. ಎಲ್ಲ ಮುಗಿಯುತ್ತಿದೆ ಎನ್ನುವಾಗ ಅಪ್ಪ ಹೇಳಿದ್ರು: ಮಗಳೇ ಈಗ ನೀನು ಕಾರನ್ನು ಬದಿಗೆ ನಿಲ್ಲಿಸಬಹುದಮ್ಮ..…
ಮಗಳಿಗೆ ಆಶ್ಚರ್ಯ: “ಅಪ್ಪಾ.. ಈಗ ಯಾಕೆ, ನಾವು ಬಿರುಗಾಳಿಯನ್ನು ದಾಟಿ ಬಂದಿದ್ದೇವೆ. ನಾವು ಈಗ ಸೇಫ್ ಆಗಿದ್ದೇವೆ,” ಎಂದು ಹೇಳಿದಳು.
ಅಪ್ಪ ನಗುತ್ತಾ ಹೇಳಿದರು: ಒಮ್ಮೆ ಕೆಳಗಿಳಿದು ಹಿಂದೆ ನೋಡು ಮಗಳೇ.. ಬಿರುಗಾಳಿ ಬರ್ತಿದೆ ಎಂದು ಹೆದರಿ ಕಾರು ಬದಿಗೆ ಇಟ್ಟವರು ಈಗ ಎಷ್ಟೊಂದು ಕಷ್ಟಪಡ್ತಾ ಇದ್ದಾರೆ ನೋಡು. ನೀನು ಸ್ವಲ್ಪವೂ ಹೆದರಲಿಲ್ಲ. ಬಿರುಗಾಳಿಯನ್ನೇ ಸೀಳುತ್ತಾ ಮುಂದೆ ಬಂದುಬಿಟ್ಟೆ. ಅದು ನಿಲ್ಲುವವರೆಗೂ ವಿರಮಿಸಲಿಲ್ಲ. ಹಠ ಬಿಡದೆ ಓಡಿಸಿದೆ ನೀನು.
ಅಪ್ಪ ಮುಂದುವರಿಸಿದರು: ಬದುಕಿನಲ್ಲೂ ಅಷ್ಟೇ ಮಗಳೆ. ಕಷ್ಟ ಬಂದಿತೆಂದು ಕೈಚೆಲ್ಲಬಾರದು. ಕಷ್ಟಗಳನ್ನು ಎದುರಿಸುತ್ತಾ ಮುನ್ನುಗುವುದನ್ನು ಕಲಿಯಬೇಕು. ಆಗಲೇ ಗೆಲುವು ನಮ್ಮದಾಗೋದು.
ಮಗಳು ಅಪ್ಪನ ಕಡೆಗೆ ಹೆಮ್ಮೆಯಿಂದ ನೋಡಿ ಹೇಳಿದಳು: ಐ ಲವ್ ಯೂ ಪಾ!
ಇದನ್ನೂ ಓದಿ | Motivational story | ಆ ಕೊನೆಯ ಕ್ಷಣದಲ್ಲಿ ವೃದ್ಧ ಜೀವಕ್ಕೊಬ್ಬ ಮಗ ಬೇಕಿತ್ತು.. ಇವನೇ ಮಗನಾದ!