Site icon Vistara News

Motivational story | ಖುಷಿಪಡಲು ಕೂಡಾ ಸಮಯ ಇಲ್ಲದಿದ್ದರೆ ಯಾವ ಸಾಧನೆ ಮಾಡಿ ಏನು ಪ್ರಯೋಜನ?

life

ಕೃಷ್ಣ ಭಟ್‌ ಅಳದಂಗಡಿ-motivational story
ವಿಶ್ವನಾಥ ರಾವ್ ತುಂಬ ಪರಿಶ್ರಮಿ. ತನ್ನ ಕುಟುಂಬ ಖುಷಿಯಾಗಿರಬೇಕು ಎನ್ನುವ ಕಾರಣಕ್ಕಾಗಿ ಹಗಲಿರುಳು ಕಷ್ಟಪಟ್ಟು ದುಡಿಯೋ ಮನುಷ್ಯ. ಹೆಂಡತಿ ಮತ್ತು ಮೂರು ಜನ ಮಕ್ಕಳು ಚೆನ್ನಾಗಿರಬೇಕು, ಹಾಗಾಗಿ ಒಳ್ಳೆಯ ಸಂಪಾದನೆ ಮಾಡಬೇಕು ಎನ್ನುವುದು ಅವರ ಮಹದಾಸೆ.

ಅವರು ಆರಂಭದಲ್ಲಿ ಒಂದು ಸಣ್ಣ ಉದ್ಯೋಗದಲ್ಲಿದ್ದರು. ಉನ್ನತ ಅಧ್ಯಯನ ನಡೆಸಿದರೆ ದೊಡ್ಡ ವೇತನದ ದೊಡ್ಡ ಕೆಲಸ ಸಿಕ್ಕೀತು ಎಂದು ಅಧ್ಯಯನಕ್ಕೆ ತೊಡಗಿದರು. ಅವರ ನಿರೀಕ್ಷೆ ತಪ್ಪಾಗಲಿಲ್ಲ. ಮೊದಲಿನದಕ್ಕಿಂತ ಸ್ವಲ್ಪ ಒಳ್ಳೆಯ ಕೆಲಸ ಸಿಕ್ಕಿತು. ಆದರೆ, ರಾಯರಿಗೆ ಇನ್ನೂ ಸ್ವಲ್ಪ ಹೆಚ್ಚು ವೇತನದ ಕೆಲಸ ಬೇಕು ಎನ್ನುವ ಆಸೆ.

ರಾಯರ ಓದು ಮತ್ತು ಕೆಲಸದ ಆಸೆಗಳಿಂದಾಗಿ ಅವರು ವಾರವಿಡೀ ಹೆಂಡತಿಗಾಗಲೀ, ಮಕ್ಕಳಿಗಾಗಲಿ ಸಿಗುತ್ತಲೇ ಇರಲಿಲ್ಲ. ಸಂಜೆ ಬಂದು ಓದಲಿಕ್ಕೆ ಕುಳಿತುಕೊಳ್ಳುತ್ತಿದ್ದರು. ಭಾನುವಾರವೂ ಏನಾದರೂ ಕೆಲಸ ಹಿಡಿದುಕೊಂಡು ಕುಳಿತುಕೊಳ್ಳುತ್ತಿದ್ದರು.

ಹೆಂಡತಿ ಕೆಲವೊಮ್ಮೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನೀವು ನಮಗೆ ಸಿಗುವುದೇ ಇಲ್ಲ, ಮಕ್ಕಳೂ ಬೇಜಾರು ಮಾಡ್ತಾರೆ ಅಂತ ಹೇಳುತ್ತಿದ್ದರು. ಆದರೆ, `ಇದೆಲ್ಲ ನಿಮಗಾಗಿಯೇ ಕಣೆ. ಒಳ್ಳೆಯ ಉದ್ಯೋಗ ಸಿಗಲಿ, ಒಳ್ಳೆಯ ವೇತನ ಬರಲಿ. ಆಮೇಲೆ ನಾನು ನಿಮಗೆ ಫುಲ್ ಟೈಮ್ ಕೊಡ್ತೇನೆ. ಸಾಧನೆಗೆ ಒಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ ಅಂತ ಹೇಳುವುದನ್ನು ನೀನೂ ಕೇಳಿದ್ದೀಯಲ್ವಾ’ ಎಂದು ಅವರನ್ನು ಒಪ್ಪಿಸುತ್ತಿದ್ದರು.

ಪರೀಕ್ಷೆಗಳು ನಡೆದು ಡಿಸ್ಟಿಂಕ್ಷನ್ ಅಂಕ ಸಿಕ್ಕಿ ಒಳ್ಳೆಯ ಉದ್ಯೋಗವೂ ದೊರೆಯಿತು ರಾಯರಿಗೆ. ರಾಯರು ಹೆಂಡತಿ, ಮಕ್ಕಳಿಗೆ ಒಳ್ಳೆಯ ಡ್ರೆಸ್ ಕೊಡಿಸಿದರು. ವಿದೇಶ ಪ್ರವಾಸಕ್ಕೆ ಬೇಕಾದರೂ ಹೋಗುವಷ್ಟು ಅವಕಾಶವಿತ್ತು. ಆದರೆ, ರಾಯರಿಗೆ ಇನ್ನೊಂದು ಪ್ರಮೋಷನ್ ಪಡೆದು ಮ್ಯಾನೇಜರ್ ಆಗುವ ಆಸೆ. ಹಾಗಾಗಿ ಅವರು ರಾತ್ರಿ ಹಗಲು ದುಡಿದರು. ಅವರ ವರ್ಕ್‍ಹಾಲಿಕ್ ಗುಣಕ್ಕೆ ಕಂಪನಿಯೂ ತಲೆದೂಗಿತು.

ಅವರ ನಿರೀಕ್ಷೆಯಂತೆ ಪ್ರಮೋಷನ್ ಕೂಡಾ ಸಿಕ್ಕಿತು. ಅವರೀಗ ಮ್ಯಾನೇಜರ್. ಮೊದಲೇ ಒಳ್ಳೆಯ ಮನೆ ಮಾಡಿದ್ದರು. ಹೆಂಡತಿ ಬೇಡ ಎಂದು ಹೇಳಿದರೂ ಮನೆ ಕೆಲಸಕ್ಕೆ ಜನ ಮಾಡಿದರು. ಹೆಂಡತಿಗೆ ಯಾವ ರೀತಿಯಲ್ಲೂ ತೊಂದರೆ ಆಗಬಾರದು ಎಂಬ ಕಾಳಜಿ ಅವರದ್ದು. ಮಕ್ಕಳಿಗೂ ಕೂಡಾ ಬೇಕಾದ್ದನ್ನು ಕೊಡಿಸಿದರು. ಈ ನಡುವೆ, ಮ್ಯಾನೇಜರ್ ಆಗಿದ್ದರಿಂದ ಕ್ಲೈಂಟ್ ಮೀಟ್ ಸೇರಿದಂತೆ ಹಲವು ಕಾರಣಕ್ಕೆ ಭಾನುವಾರವೂ ಮನೆಯಲ್ಲಿ ಇರಲು ಆಗುತ್ತಿರಲಿಲ್ಲ.

ಹೆಂಡತಿ ಮತ್ತು ಮಕ್ಕಳು ತುಂಬ ಒತ್ತಾಯ ಮಾಡಿದ ಬಳಿಕ ವಿಶ್ವನಾಥ ರಾಯರು ಇನ್ನು ಕೆಲಸ ಮಾಡಿದ್ದು ಸಾಕು ಎಂಬ ತೀರ್ಮಾನಕ್ಕೆ ಬಂದರು. ಅವರಿಗೆ ಅವರ ಸಾಧನೆಯ ಬಗ್ಗೆ ಹೆಮ್ಮೆ ಇತ್ತು. ರಾತ್ರಿ ಹಗಲು ದುಡಿದೆ, ವಿದ್ಯಾಭ್ಯಾಸ ಮಾಡಿದೆ, ಒಳ್ಳೆಯ ಉದ್ಯೋಗ ಮಾಡಿ ಫ್ಲ್ಯಾಟ್, ಭೂಮಿ ಎಲ್ಲ ಖರೀದಿಸಿದೆ. ಇನ್ನು ಸಾಕು, ಮನೆ ಮಂದಿಯೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು ಎಂದು ತೀರ್ಮಾನಿಸಿದರು.

ಆವತ್ತು ಮನೆ ಮಂದಿಯನ್ನೆಲ್ಲ ಕರೆದರು. ಸ್ನೇಹಿತರಿಗೂ ಆಹ್ವಾನ ನೀಡಿ ತನ್ನ ಕನಸಿನ ಬದುಕನ್ನು ತೋರಿಸಿದರು. ಎಲ್ಲರೂ ಚೆನ್ನಾಗಿ ಊಟ ಮಾಡಿ ಶುಭ ಹಾರೈಸಿದರು. ರಾತ್ರಿ ತುಂಬ ಹೊತ್ತು ಪಾರ್ಟಿ ನಡೆದು ಎಲ್ಲರೂ ತಮ್ಮ ಮನೆಗೆ ತೆರಳಿದರು. ವಿಶ್ವನಾಥ ರಾಯರು ತಮ್ಮ ಸಾರ್ಥಕ ಬದುಕಿನ ಸಂಭ್ರಮದಲ್ಲಿ ಹಾಗೇ ನಿರಾಳವಾಗಿ ನಿದ್ದೆ ಹೋದರು.

ಬೆಳಗ್ಗೆ ತುಂಬ ಹೊತ್ತಾದರೂ ವಿಶ್ವನಾಥ ರಾಯರು ಏಳಲೇ ಇಲ್ಲ. ಹೆಂಡತಿ ಹಲವು ಬಾರಿ ಎಬ್ಬಿಸಿದರೂ ಸುದ್ದಿ ಇಲ್ಲ.

ಇದನ್ನೂ ಓದಿ | Motivational story | ಅವನು ದೋಣಿಗೆ ಬಣ್ಣ ಹಚ್ಚಿದ್ದಷ್ಟೇ ಅಲ್ಲ ಎಷ್ಟೋ ಪ್ರಾಣಗಳನ್ನೂ ಉಳಿಸಿದ್ದ, ಹೇಗೆ?

Exit mobile version