ಕೃಷ್ಣ ಭಟ್ ಅಳದಂಗಡಿ- motivational story
ಅವಳು ಪರಮ ಸುಂದರಿ. ಅವನೂ ಅಷ್ಟೆ ಸ್ಫುರದ್ರೂಪಿ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹುಡುಗಿ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಕೊನೆಗೆ ಯುವಕನೇ ಹುಡುಗಿ ಮನೆಗೆ ಬಂದು ಎಲ್ಲರ ಜತೆ ಮಾತನಾಡಿದ. ಅವನ ನಡವಳಿಕೆ, ಒಬ್ಬ ಸೈನಿಕನಾಗಿರುವ ಅವನ ಹೆಮ್ಮೆ ನೋಡಿ ಎಲ್ಲರಿಗೂ ಇಷ್ಟವಾಯಿತು. ಮದುವೆ ಮಾಡಿಕೊಡುವುದು ಎಂಬ ತೀರ್ಮಾನಕ್ಕೆ ಬಂದರು.
ಈ ನಡುವೆ ಬೇರೊಂದು ದೇಶದಲ್ಲಿ ಸಂಘರ್ಷ ಸ್ಥಿತಿ ನಿರ್ಮಾಣವಾಯಿತು. ಅಲ್ಲಿನ ಶಾಂತಿ ಪಾಲನಾ ಪಡೆಗೆ ಈ ಸೈನಿಕನನ್ನು ನಿಯೋಜಿಸಿ ಸೇನೆ ಆದೇಶ ಹೊರಡಿಸಿತು. ಅದು ಒಂದು ವರ್ಷದ ಪ್ರಾಜೆಕ್ಟ್.
ಯುವತಿಗೆ ಒಂದು ವರ್ಷ ಬಿಟ್ಟಿರುವುದು ಕಷ್ಟ ಅನಿಸಿದರೂ ಭಾರವಾದ ಹೃದಯದಿಂದ ಬೀಳ್ಕೊಟ್ಟಳು. ಅಲ್ಲಿಂದ ಮರಳಿದ ಕೂಡಲೇ ಮದುವೆ ಎಂದು ನಿಶ್ಚಯವಾಯಿತು.
ಈ ನಡುವೆ ಇತ್ತ ಯುವತಿಗೆ ಒಂದು ಅಪಘಾತ ನಡೆದುಹೋಯಿತು. ಅದರಲ್ಲಿ ಆಕೆಯ ಮುಖ ಸಂಪೂರ್ಣ ವಿಕಾರಗೊಂಡಿದ್ದಲ್ಲದೆ, ಮೆದುಳಿಗಾದ ಗಾಯದಿಂದ ದೇಹದ ಅರ್ಧ ಭಾಗ ಸ್ವಾಧೀನ ಕಳೆದುಕೊಂಡಿತ್ತು. ಒಂದು ದಿನ ಆಕೆ ಪ್ರಜ್ಞೆ ಬಂದುನೋಡಿದಾಗ ಹಾಸಿಗೆ ಬಿಟ್ಟೇಳದ ಸ್ಥಿತಿಯಲ್ಲಿ ಇದ್ದಳು. ಕನ್ನಡಿಯಲ್ಲಿ ಮುಖ ಕಂಡು ಬೆಚ್ಚಿ ಬಿದ್ದಳು.
ಇಂಥಾ ಸ್ಥಿತಿಯಲ್ಲಿ ಆ ಹುಡುಗ ತನ್ನನ್ನು ಒಪ್ಪಲಿಕ್ಕಿಲ್ಲ ಎಂದು ತೀರ್ಮಾನಿಸಿದ ಆಕೆ, ಅವನಿಂದ ದೂರವಾಗಲು ನಿರ್ಧರಿಸಿದಳು. ಅವನ ಕರೆಗಳಿಗೆ ಉತ್ತರಿಸಲಿಲ್ಲ. ವಾಟ್ಸ್ ಆ್ಯಪ್ ಗಳಿಗೆ ಸ್ಪಂದಿಸಲಿಲ್ಲ. ಹೀಗೆ ವರ್ಷ ಕಳೆಯಿತು.
ಅದೊಂದು ದಿನ ಅವನು ಬಂದೇ ಬಿಟ್ಟ. ಅಮ್ಮ ಬಂದು ಹೇಳಿದಳು: ಅವನು ಬಂದಿದಾನೆ ಕಣೆ.
*ಅಮ್ಮ ಪ್ಲೀಸಮ್ಮ ಅವನನ್ನು ಹೋಗಲು ಹೇಳು. ನನ್ನನ್ನು ನೋಡಿ ಅವನು ರಿಜೆಕ್ಟ್ ಮಾಡೋದನ್ನು ಸಹಿಸಲಾರೆ… ಪ್ಲೀಸ್* ಅಂದಳು.
ಅದಕ್ಕೆ ಅವಳಮ್ಮ ಹೇಳಿದರು: ಅವನು ಅವನ ಮದುವೆಗೆ ಕರೆಯಲು ಬಂದಿದ್ದಾನೆ ಕಣೆ ಅಂತ.
ಅಷ್ಟು ಹೊತ್ತಿಗೆ ಹುಡುಗನೇ ಒಳಬಂದ. ಇವಳು ಮುಸುಕಿನ ಒಳಗಿಂದಲೇ ಆಮಂತ್ರಣ ತೆಗೆದುಕೊಂಡಳು. ತೆರೆದು ನೋಡಿದರೆ ಹುಡುಗಿಯ ಜಾಗದಲ್ಲಿ ಅವಳದೇ ಹೆಸರು: ಲಾವಣ್ಯ. ತಂದೆ-ತಾಯಿ ಹೆಸರೂ ಅವರದೇ.
ಲಾವಣ್ಯ ಸಿಟ್ಟಿನಿಂದ ಬಟ್ಟೆಯನ್ನು ಕೊಡವಿದಳು… *ತಲೆ ಕೆಟ್ಟಿದಿಯಾ ನಿಂಗೆ… ಎಷ್ಟು ಅವಾಯ್ಡ್ ಮಾಡಿದ್ರೂ ಮತ್ತೆ ಬಂದಿದಿಯಲ್ಲಾ… ನೋಡು ಆಗ್ತೀಯಾ ಮದುವೆ* ಅಂದಳು.
ಹುಡುಗ ನಗುತ್ತಾ ಹೇಳಿದ: ನಿನ್ನ ಸ್ಥಿತಿಯನ್ನು ನಾನು ನೋಡುತ್ತಿರುವುದು ಇದು ಮೊದಲಲ್ಲ. ಅಮ್ಮನೇ ನಿನ್ನ ಈಗಿನ ಸ್ಥಿತಿಯ ಫೋಟೊ ಕಳುಹಿಸಿದ್ರು.. ಮರೆತುಬಿಡು ಅಂತನೂ ಬರೆದಿದ್ರು. ಆದರೆ ನಂಗೆ ಮರೀಬೇಕು ಅನಿಸಲಿಲ್ಲ. ನಾನು ನಿನ್ನ ಚಂದವನ್ನು, ಮುಖವನ್ನು ಪ್ರೀತಿಸಿದ್ದಲ್ಲ. ದೇಹವನ್ನಂತೂ ಅಲ್ಲವೇ ಅಲ್ಲ. ನಿನ್ನ ಹೃದಯ, ಒಳ್ಳೆತನವನ್ನು. ಈಗಲಾದರೂ ಸರಿ, ನಿನ್ನ ಹೃದಯ, ಒಳ್ಳೆತನ ಹಾಳಾಗಿದೆ ಎಂದು ಹೇಳುತ್ತಿ ಎಂದಾದರೆ ನಾನೀಗಲೇ ಹೊರಡುತ್ತೇನೆ. ಆದರೆ ಹೊರಡೋದಕ್ಕಿಂತ ಮೊದಲು ಒಂದು ಮಾತು, ಒಂದು ವೇಳೆ ನಿನ್ನ ಸ್ಥಿತಿಯಲ್ಲಿ ನಾನಿದ್ದರೆ ನನ್ನನ್ನು ನೀನು ತಿರಸ್ಕರಿಸುತ್ತಿದ್ದೆಯಾ? ಅಥವಾ ಒಂದು ವೇಳೆ ಮದುವೆ ಆಗಿ ಕೆಲವೇ ದಿನದಲ್ಲಿ ಹೀಗಾಗ್ತಾ ಇದ್ರೆ ನೀನು ನನ್ನ ಬಿಟ್ಟು ಹೋಗ್ತಾ ಇದ್ಯಾ?
ಹುಡುಗಿ ಬಳಿ ಉತ್ತರವಿರಲಿಲ್ಲ.
ಹುಡುಗ ಅವಳ ಬಳಿಗೆ ಹೋಗಿ ಎತ್ತಿ ನಿಲ್ಲಿಸಿ ಒಂದು ಭುಜ ತಾನಾಗಿ ನಡೆಸಿಕೊಂಡು ಹೊರಟ….
ಇದನ್ನೂ ಓದಿ | Motivational story | ಮಧ್ಯರಾತ್ರಿ ಅಜ್ಜಿ ತೋರಿಸಿದ ಹೊಸ ಜಗತ್ತು! ಯಾರು ಆ ಹೆಣ್ಮಗಳು?