Site icon Vistara News

Motivational story| ದೇವರು ಒಂದಿಡೀ ದಿನ ನಮ್ಮ ಜತೆಗೇ ಸುತ್ತಾಡಿದರೆ ಹೇಗಿರ್ತದೆ?

walking together

ಕೃಷ್ಣ ಭಟ್‌ ಅಳದಂಗಡಿ- motivational story

ಬೆಳಬೆಳಗ್ಗೆನೇ ಯಾರೋ ಬೆಲ್ ಮಾಡಿದ ಹಾಗಾಯ್ತು.. ವಿಶ್ವನಾಥ ಎದ್ದವನೇ ಬಂದು ಬಾಗಿಲು ತೆಗೆದ. ಎದುರಿಗೆ ಒಬ್ಬ ಆಕರ್ಷಕ ಯುವಕ ನಿಂತಿದ್ದ. ಮುಖದ ತುಂಬ ಮಂದಹಾಸ.
ವಿಶ್ವನಾಥ ಕೇಳಿದ: ಯಾರು ನೀವು?

ವ್ಯಕ್ತಿ ಹೇಳಿದ: ಏನು ವಿಶ್ವನಾಥ್, ನನ್ನ ಗುರುತು ಸಿಗಲಿಲ್ಲವೇ? ಪ್ರತಿ ದಿನ ಬೆಳಗ್ಗೆ ಪ್ರಾರ್ಥನೆ ಮಾಡುವಾಗ ನನ್ನನ್ನೇ ನೆನಪಿಸಿಕೊಳ್ತಿಯಾ? ಈಗ ಗೊತ್ತಿಲ್ಲ ಅಂತಿಯಾ- ಎನ್ನುತ್ತಾ ನಕ್ಕ.

ಗೊಂದಲಕ್ಕೊಳಗಾದ ವಿಶ್ವನಾಥ ಹೇಳಿದ: ಓ ಸ್ಸಾರಿ.. ನನಗೆ ಗೊತ್ತಾಗಲಿಲ್ಲ. ದಯವಿಟ್ಟು ಯಾರು ಅಂತ ಹೇಳಿದ್ರೆ ಒಳ್ಳೆಯದಿತ್ತು.

ಯುವಕ ನಗುತ್ತಾ ಹೇಳಿದ: ನಾನು ದೇವರು ಕಣಯ್ಯಾ.. ದೇವರೇ ನೀನು ಸದಾ ನನ್ನ ಕಣ್ಣಲ್ಲಿ ಇರ್ತೀಯಾ, ಹೃದಯದಲ್ಲೇ ಇದ್ದೀಯಾ ಅಂತೆಲ್ಲ ಹೇಳ್ತೀಯಾ.. ಈಗ ನನ್ನ ಗುರುತೇ ಹತ್ತಿಲ್ಲ ಅಂದರೆ ಹೇಗೆ? ಪರವಾಗಿಲ್ಲ ಬಿಡು, ತಮಾಷೆಗೆ ಹೇಳಿದೆ. ನಾನು ಬಂದಿದ್ದು ಯಾಕೆಂದರೆ, ಇವತ್ತೊಂದು ದಿನ ನಿನ್ನ ಜತೆಗೆ ಇದ್ದು ಹೋಗೋಣ ಅಂತ.

ವಿಶ್ವನಾಥನಿಗೆ ಸಿಟ್ಟೇ ಬಂದು ಹೋಯ್ತು. `ಯಾರೋ ನೀನು.. ಜನ ಈ ತರಾನೂ ಮೋಸ ಮಾಡ್ಲಿಕೆ ಶುರು ಮಾಡಿದ್ರು ಅಂತ ಆಯ್ತು. ಹೋಗ್ತೀಯೋ ಇಲ್ವೋ’ ಎಂದ.

ಆದಕ್ಕೆ ಆ ಯುವಕ ಹೇಳಿದ: ನಾನು ಮೋಸ ಮಾಡ್ತಿಲ್ಲ, ಜೋಕ್ ಕೂಡಾ ಮಾಡ್ತಿಲ್ಲ. ನಿಜ ಹೇಳ್ಳಾ ವಿಶ್ವನಾಥ್. ನಾನು ಬಂದಿರೋದು ನಿನಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗಲ್ಲ. ನಾನು-ನೀನು ಮಾಡೋ ಸಂಭಾಷಣೆಯೂ ಯಾರಿಗೂ ಕೇಳಿಸಲ್ಲ.

ವಿಶ್ವನಾಥ್ ಏನೋ ಹೇಳಲು ಹೊರಟಾಗ.. ಹಿಂದಿನಿಂದ ಅಮ್ಮ ಬಂದರು. ಯಾಕೋ ಇಲ್ಲಿ ಬಾಗಿಲು ತೆರೆದುಕೊಂಡು ಒಬ್ಬನೇ ನಿಂತಿದ್ದೀಯಾ? ಒಳಗೆ ಬಾ.. ಚಹಾ ಮಾಡಿದ್ದೇನೆ ಅಂದರು.

ಆಗ ವಿಶ್ವನಾಥ್‍ಗೆ ಈ ಯುವಕ ಹೇಳಿದ್ದರಲ್ಲಿ ಏನೋ ಸತ್ಯವಿದೆ ಅನಿಸಿತು. ಅಮ್ಮನಿಗೆ ಅವನು ಕಂಡಿಲ್ಲ, ಮಾತೂ ಕೇಳಿಸಿಲ್ಲ ಎಂದರೆ ಸತ್ಯವೇ ಇರಬೇಕಲ್ವಾ? ಅಂದುಕೊಂಡ.

ವಿಶ್ವನಾಥ ಒಳಗೆ ಹೋಗಿ ಸೋಫಾದ ಮೇಲೆ ಕುಳಿತ. ಯುವಕನೂ ಹಿಂಬಾಲಿಸಿದ. ಅಮ್ಮ ಚಹಾ ತಂದುಕೊಟ್ಟರು. ಚಹಾವನ್ನು ತುಟಿಗಿಡುತ್ತಿದ್ದಂತೆಯೇ ಸಿಟ್ಟುಬಂತು. `ಅಮ್ಮಾ ಏನಿದು.. ಇಷ್ಟೊಂದು ಸಕ್ಕರೆ ಹಾಕಿದ್ದಿ’ ಎಂದು ಬೈಬೇಕು ಅಂತ ಅನಿಸುವಾಗಲೇ ಪಕ್ಕದಲ್ಲಿ ದೇವರು ಕುಳಿತಿರುವುದು ನೆನಪಾಯಿತು. ಅಮ್ಮನ ಜತೆಗೆ ಇವನು ಈ ತರ ಎಲ್ಲ ವರ್ತಿಸುತ್ತಾನಲ್ಲಾ ಎಂದು ತಪ್ಪು ತಿಳಿದುಕೊಂಡರೆ ಅಂತ ಕೋಪವನ್ನು ನಿಯಂತ್ರಿಸಿಕೊಂಡ. ಮಾತ್ರವಲ್ಲ, ಅಮ್ಮನನ್ನು ಕರೆದು ಹೇಳಿದ: ಅಮ್ಮಾ.. ಇವತ್ತು ಚಹಾ ಭಾರಿ ಒಳ್ಳೆದಾಗಿದೆ!

ವಿಶ್ವನಾಥ ಸ್ನಾನ ಮಾಡಿ ದೇವರ ಮುಂದೆ ನಿಂತ. ಪ್ರತಿ ದಿನ ಕಾಟಾಚಾರಕ್ಕೆ ಪ್ರಾರ್ಥನೆ ಮಾಡುತ್ತಿದ್ದವನಿಗೆ ಇವತ್ತು ದೇವರ ಸಾಕ್ಷಿಯಲ್ಲೇ ಪ್ರಾರ್ಥನೆ ಮಾಡುವ ಅನಿವಾರ್ಯತೆ. ಭಕ್ತಿಯಿಂದ ನಡೆದುಕೊಂಡ.. ಜತೆಗೆ ಅಮ್ಮನ ಕಾಲಿಗೂ ಬಿದ್ದು ಆಶೀರ್ವಾದ ಕೇಳಿದ. ಅಮ್ಮನಿಗೆ ಆಶ್ಚರ್ಯ ಆಯಿತಾದರೂ ಮಗನಿಗೆ ಒಳ್ಳೆಯ ಬುದ್ಧಿಬಂದಿದೆ ಅಂದುಕೊಂಡರು!

ನಂತರ ಆಫೀಸಿಗೆ ಹೊರಟು ಕಾರು ಹತ್ತಿದರೆ ಪಕ್ಕದ ಸೀಟಿನಲ್ಲಿ ಆ `ದೇವರು’ ಹಾಜರ್! ಆಗ ಮೊಬೈಲ್‍ಗೆ ಒಂದು ಕಾಲ್ ಬಂತು. ಸಾಮಾನ್ಯವಾಗಿ ಈ ತರ ಕಾಲ್ ಬಂದು, `ಸರ್ ದಯವಿಟ್ಟು ಈ ಕೆಲಸ ಒಂದು ಆಗಬೇಕಿತ್ತು’ ಎಂದು ಕೇಳಿದರೆ `ಇಷ್ಟು ದುಡ್ಡಾಗ್ತದೆ, ಕೊಟ್ಟರೆ ಮಾತ್ರ ಕೆಲಸ ನಡೆಯುತ್ತದೆ’ ಎಂದು ಖಡಕ್ಕಾಗಿ ಹೇಳುತ್ತಿದ್ದ ವಿಶ್ವನಾಥ ಇವತ್ಯಾಕೋ `ಬನ್ನಿ.. ಮಾಡಿ ಕೊಡುವ’ ಎಂದು ಹೇಳಿದ.

ವಿಶ್ವನಾಥ ಮುಗುಳ್ನಗುತ್ತಾ ಕಚೇರಿಯನ್ನು ಪ್ರವೇಶಿಸಿದ. ಸಿಬ್ಬಂದಿಗಳಿಗೆಲ್ಲ ಆಶ್ಚರ್ಯ. ಯಾವತ್ತೂ ಮಹಾ ದೂರ್ವಾಸ ಮುನಿ, ಇವತ್ತೇನಪ್ಪಾ ನಗ್ತಾ ಬರ್ತಿದ್ದಾರೆ ಅಂತ. ಯಾರಿಗೂ ಬೈದೇ ಇಲ್ವಲ್ಲ ಅಂತ ಅಚ್ಚರಿ. ವಿಶ್ವನಾಥ ಆವತ್ತು ತನ್ನೆಲ್ಲ ಸಿಟ್ಟು, ಅಹಂಕಾರ, ಸುಳ್ಳು, ಬೇರೆಯವರನ್ನು ಅಪಮಾನಿಸುವುದು, ಬೈಯುವುದು ಮೊದಲಾದ ದುರಭ್ಯಾಸಗಳನ್ನು ಬಿಟ್ಟಿದ್ದ. ದೇವರಿಗೆ ತಾನು ಒಳ್ಳೆಯವನು ಎಂದು ತೋರಿಸಿಕೊಳ್ಳಬೇಕಲ್ಲ!

ಕಚೇರಿ ಸಮಯ ಮುಗಿಯಿತು. ಮನೆಗೆ ಹೊರಟು ಕಾರು ಹತ್ತಿದ ವಿಶ್ವನಾಥ. ಪಕ್ಕದ ಸೀಟಿನಲ್ಲಿ `ದೇವರು’! ರಾತ್ರಿ ಊಟದ ಹೊತ್ತಾಯಿತು. ಅಮ್ಮ ಎಲ್ಲವನ್ನೂ ಜೋಡಿಸಿ ಊಟಕ್ಕೆ ಕರೆದರು. ಆ ವ್ಯಕ್ತಿ ಕೂಡಾ ಜತೆಗೇ ಬಂದು ಕುಳಿತ. ಮೊದಲ ಬಾರಿಗೆ ವಿಶ್ವನಾಥ `ಅಮ್ಮ.. ನೀನೂ ಬಾರಮ್ಮಾ.. ಒಟ್ಟಿಗೆ ಊಟ ಮಾಡೋಣ’ ಎಂದ. ಪಕ್ಕದಲ್ಲಿದ್ದ ದೇವರ ಬಳಿ ಮೆಲ್ಲಗೆ ಹೇಳಿದ: ನೀನು ಮೊದಲು ಸ್ವೀಕಾರ ಮಾಡು. ದೇವರು ಒಂದು ತುತ್ತು ತೆಗೆದು ಬಾಯಿಗಿಟ್ಟುಕೊಂಡ.

ಎಲ್ಲ ಮುಗಿದು ಮಲಗುವ ಹೊತ್ತು. ಅಮ್ಮ ವಿಶ್ವನಾಥನ ಬಳಿಗೆ ಬಂದು ಕೇಳಿದಳು: ಏನಾಗಿದ್ಯಪ್ಪಾ ನಿನಗೆ, ಎಷ್ಟೊಂದು ಬದಲಾಗಿ ಹೋಗಿದ್ದಿ ಒಂದೇ ದಿನದಲ್ಲಿ? ನನ್ನ ಮಗ ಹೇಗಿರಬೇಕು ಅಂತ ಕನಸು ಕಂಡಿದ್ದೆನೋ.. ಹಾಗೇ ಆಗಿದ್ದಿ. ಖುಷಿ ಆಯಿತು ನಂಗೆ ಅಂತ ತಲೆ ಮೇಲೆ ಕೈ ಇಟ್ಟರು.

++++++++++++++++++++++++++++++++

ಆಗ ವಿಶ್ವನಾಥನಿಗೆ ಎಚ್ಚರವಾಯಿತು. ಎದುರು ನಿಂತಿದ್ದ ಅಮ್ಮ ಹೇಳಿದರು: ಏನೋ ಇದು ಮೈ ಸುಡುತ್ತಿದೆಯಲ್ಲಾ, ಇನ್ನೂ ಯಾಕೆ ನೀನು ಎದ್ದಿಲ್ಲ ಅಂತ ನೋಡಲು ಬಂದೆ. ಇವತ್ತು ರಜೆ ಹಾಕು- ಅಂದಳು.

ವಿಶ್ವನಾಥ ಅತ್ತಿತ್ತ ನೋಡಿದ.. ಎಲ್ಲೂ ಆ ವ್ಯಕ್ತಿ ಕಾಣಿಸಲಿಲ್ಲ. ಅಲ್ಲಿದ್ದದ್ದು ಅಮ್ಮ ಮಾತ್ರ!

ಇದನ್ನೂ ಓದಿ| Motivational story | ಹೆಂಡ್ತಿಗೇನೂ ಕೆಲಸ ಇಲ್ಲ ಅಂತ ಪದೇಪದೆ ಹೇಳ್ತಿದ್ದ ಗಂಡ ಡಾಕ್ಟರ್‌ ಪ್ರಶ್ನೆಗಳಿಗೆ ಕಂಪಿಸಿದ!

Exit mobile version