ಕೃಷ್ಣ ಭಟ್ ಅಳದಂಗಡಿ- motivational story
ಅದೊಂದು ದೇಗುಲಗಳ ಪಟ್ಟಣ. ಅಲ್ಲಿ ನಿತ್ಯ ಒಂದಿಲ್ಲೊಂದು ದೇಗುಲಗಳಲ್ಲಿ ಸತ್ಸಂಗ, ಪ್ರವಚನಗಳು ನಡೆಯುತ್ತಿದ್ದವು. ಒಬ್ಬ ಪ್ರವಚನಕಾರರು ಬಂದರೆ ತಿಂಗಳುಗಳ ಕಾಲ ನಿರಂತರ ಸತ್ಸಂಗ ಇರುತ್ತಿತ್ತು.
ಹಾಗೇ ಒಬ್ಬ ಸಂತರು ಆ ಪಟ್ಟಣಕ್ಕೆ ಬಂದಿದ್ದರು. ವೃದ್ಧರೊಬ್ಬರು ಕೇಳುಗರಾಗಿ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ತುಂಬ ಉತ್ಸಾಹದಿಂದ ಭಾಗವಹಿಸುತ್ತಿದ್ದ ಅವರ ನಡವಳಿಕೆ ಕಂಡು ಸಂತರಿಗೂ ಖುಷಿ ಆಗುತ್ತಿತ್ತು.
ಒಂದೆರಡು ದಿನ ಕಳೆದ ಮೇಲೆ ಸಂತರಿಗೆ ಆ ವೃದ್ಧರ ಜತೆ ಮಾತನಾಡಬೇಕು ಅನಿಸಿತು. ತಮ್ಮ ಶಿಷ್ಯರಿಗೆ ಹೇಳಿ ಪ್ರವಚನದ ಬಳಿಕ ಕರೆತರುವಂತೆ ತಿಳಿಸಿದರು. ಹಾಗೆ ಮಾತನಾಡಲು ಹೋದ ಶಿಷ್ಯ ವಾಪಸ್ ಬರುತ್ತ ಕುತೂಹಲಕಾರಿ ಸಂಗತಿಯೊಂದನ್ನು ಹೊತ್ತು ತಂದ. ಅದೇನೆಂದರೆ, ಆ ವೃದ್ಧರಿಗೆ ಕಿವಿಯೇ ಕೇಳಿಸುತ್ತಿರಲಿಲ್ಲ!
ಕಿವಿ ಕೇಳದ ಈ ವ್ಯಕ್ತಿ ಸತ್ಸಂಗದಲ್ಲಿ ಏನು ಮಾಡ್ತಾರಪ್ಪ ಅಂತ ಶಿಷ್ಯ ಮನಸಿನಲ್ಲೇ ಅಂದುಕೊಳ್ಳುತ್ತಿದ್ದ. ಅಷ್ಟು ಹೊತ್ತಿಗೆ ಗುರುಗಳು ಚೀಟಿಯೊಂದನ್ನು ತೆಗೆದುಕೊಂಡು ಅದರಲ್ಲಿ ಬರೆದು ಕೇಳಿದರು: ಮಹಾಶಯರೇ ನಿಮಗೆ ಕಿವಿ ಕೇಳಿಸದಿದ್ದರೂ ಪ್ರತಿದಿನ ಸತ್ಸಂಗಕ್ಕೆ ಬರುತ್ತೀರಿ. ಕೊನೆಯವರೆಗೂ ಇರುತ್ತೀರಿ. ನಾನು ಹೇಳುವ ಯಾವ ಮಾತೂ ನಿಮಗೆ ಕೇಳುತ್ತಿಲ್ಲ. ಆದರೂ ಖುಷಿಯಿಂದ ಆಸ್ವಾದಿಸುತ್ತೀರಿ.. ಇದು ಹೇಗೆ ಸಾಧ್ಯ?
ಈ ಪ್ರಶ್ನೆಗೆ ಉತ್ತರಿಸೋಣ ಎಂದರೆ ಆ ವೃದ್ಧರಿಗೆ ಮಾತೂ ಬರುತ್ತಿರಲಿಲ್ಲ! ಅವರು ಒಂದು ಚೀಟಿಯಲ್ಲೇ ಉತ್ತರ ಬರೆದುಕೊಟ್ಟರು.
ನನಗೆ ಕಿವಿ ಕೇಳಿಸುತ್ತಿಲ್ಲ ನಿಜ. ಆದರೆ ಒಳ್ಳೆಯ ಸಂಗತಿಗಳನ್ನೇ ಹೇಳುತ್ತೀರಿ ಎಂದು ನನಗೆ ಅರ್ಥ ಆಗ್ತದೆ. ಉಳಿದವರ ಮುಖದಲ್ಲಿ ಕಾಣುವ ಖುಷಿ, ಅವರು ಪ್ರತಿಕ್ರಿಯಿಸುವ ರೀತಿಗೆ ನಾನು ಸ್ಪಂದಿಸುತ್ತಿದ್ದೇನೆ. ಅಂತಿಮವಾಗಿ ನನಗೆ ಖುಷಿ ಸಿಗುತ್ತಿದೆ.. ಸಾಕಲ್ವಾ?
ನೀವು ಕೇಳಿದಿರಿ ಅಂತ ಹೇಳುತ್ತೇನೆ. ಆರಂಭದಲ್ಲಿ ನಾನೊಬ್ಬನೇ ಬರುತ್ತಿದ್ದೆ. ಕೆಲವು ದಿನಗಳ ನಂತರ ಮಗನನ್ನು ಜತೆಗೆ ಕರೆದುಕೊಂಡು ಬರಲು ಆರಂಭಿಸಿದೆ. ಮುಂದೆ ಅವನಿಗೆ ಮದುವೆ ಆಯಿತು. ಅವನ ಹೆಂಡತಿಯೂ ಬರಲು ಆರಂಭಿಸಿದಳು. ಇಬ್ಬರು ಮಕ್ಕಳಾದರು. ಈಗ ಅವರೂ ಬರುತ್ತಿದ್ದಾರೆ… ಅಂತ ಬರೆದು ಎದುರು ಸೀಟಲ್ಲಿ ಕುಳಿತ ಕಂದಮ್ಮರ ಕಡೆಗೆ ಕೈ ತೋರಿಸಿದರು
ಇವತ್ತು ನಮ್ಮ ಮನೆ ನಂದನವನವಾಗಿದೆ. ಮಗ- ಸೊಸೆ ಚೆನ್ನಾಗಿದ್ದಾರೆ. ನನ್ನನ್ನೂ ಚೆನ್ನಾಗಿ ನೋಡಿಕೊಳ್ತಾ ಇದಾರೆ. ಇದಕ್ಕೆಲ್ಲ ಕಾರಣ ಸತ್ಸಂಗದ ಪ್ರಭಾವ. ಆವತ್ತು ನನಗೆ ಕಿವಿ ಕೇಳಿಸಲ್ಲ ಅಂತ ಬಾರದೆ ಇರುತ್ತಿದ್ದರೆ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಈ ಸಂಸ್ಕಾರ ಸಿಗುತ್ತಿತ್ತಾ?
– ಎಂದು ಬರೆಯುತ್ತಲೇ ತನ್ನನ್ನು ತಾನು ಪ್ರಶ್ನಿಸಿಕೊಂಡರು.
ಆ ಮಾತು ಕೇಳಿ ಸಂತರಲ್ಲಿ ಸಾರ್ಥಕ ಭಾವ ಮೂಡಿತು. ಸತ್ಸಂಗವೆಂದರೆ ಬರಿ ಮಾತಲ್ಲ.. ಅದರಾಚೆಗೂ ಏನೋ ನಡೆಯುತ್ತಿರುತ್ತದೆ ಅಲ್ವೇ ಅಂದುಕೊಂಡರು ಸಂತರು.
ಇದನ್ನೂ ಓದಿ| Motivational story | ಬೀಜ ಒಂದೇ ಇರಬಹುದು, ಅದಕ್ಕೆ ಲಕ್ಷಾಂತರ ಬೀಜ ಸೃಷ್ಟಿಸುವ ತಾಕತ್ತಿದೆ!