ಕೃಷ್ಣ ಭಟ್ ಅಳದಂಗಡಿ- Motivational story
ಆ ವ್ಯಕ್ತಿಗೆ ವಯಸ್ಸು 75 ದಾಟಿತ್ತು. ರೈಲು ನಿಲ್ದಾಣದಲ್ಲಿ ಚಹಾ ಮಾರುವ ಕೆಲಸ ಮಾಡುತ್ತಿದ್ದರು. ದಿನಕ್ಕೆ ಐವತ್ತೋ, ಅರುವತ್ತೋ ಚಹಾ ಹೋದರೆ ಹೆಚ್ಚು. ಆವತ್ತು, ರಾತ್ರಿ 12 ಗಂಟೆಯ ಹೊತ್ತಿಗೆ ಒಂದು ಬಾರಿ ತಂದ ಚಹಾ ಮುಗಿಯಿತು. ಅವರು ಕೂಡಲೇ ಸ್ವಲ್ಪ ದೂರದಲ್ಲಿದ್ದ ಗುಡಿಸಲಿಗೆ ಧಾವಿಸಿದರು. ಅಲ್ಲಿ ಅರೆ ನಿದ್ರೆಯಲ್ಲಿ ಕಣ್ಣು ತೂಗುತ್ತಿದ್ದ ಹೆಚ್ಚು ಕಡಿಮೆ ಅವರದೇ ವಯಸ್ಸಿನ ಹೆಂಡತಿ ಇದ್ದರು.
ʻರಾತ್ರಿ ಒಂದು ಗಂಟೆ ರೈಲಿನಲ್ಲಿ ಯಾರಾದರೂ ಬಂದಾರು. ಒಂದು ಹತ್ತು ಚಹಾ ಮಾಡಿಕೊಡ್ತೀಯಾ’ ಎಂದು ಕೇಳಿದರು. ಹೆಂಡತಿ ಒಲೆಗೆ ಬೆಂಕಿ ಹಚ್ಚಿ ಚಹಾಕ್ಕಿಟ್ಟರು.
ʻʻಅಲ್ಲರಿ.. ನಮಗೆ ಒಬ್ಬ ಮಗ ಇದ್ದಿದ್ದರೆ ನಾವು ಈ ರೀತಿ ಈ ಮಧ್ಯರಾತ್ರಿ, ಈ ವಯಸ್ಸಿನಲ್ಲಿ ದುಡಿಯಬೇಕಿತ್ತಾ? ನೀವು ಒಂದೆರಡು ಚಹಾ ಹಿಡಿದುಕೊಂಡು ಗಂಟೆಗಟ್ಟಲೆ ರೈಲು ನಿಲ್ದಾಣದಲ್ಲಿ ಕಾಯಬೇಕಿತ್ತಾ? ದೇವರು ನಮಗೆ ತುಂಬ ಮೋಸ ಮಾಡಿದಾರಿ.. ಈಗ ಹೇಗೋ ನಡೆಯುತ್ತಿದೆ.. ಮುಂದೆ ಹೇಗೆ ಎನ್ನುವ ಆತಂಕ ನನ್ನದು” ಎಂದು ಚಹಾ ಕಾಯಿಸುತ್ತಲೇ ಹೆಂಡತಿ ಹೇಳಿದರು. ಇವರಿಗೂ ಹೌದು ಅನಿಸಿತು. `ʻಏನು ಮಾಡೋದು ಕಣೆ.. ನಾವು ಪಡೆದುಕೊಂಡು ಬಂದಿರುವ ಅದೃಷ್ಟ.. ಅನುಭವಿಸೋಣ’ ಎಂದರು.
ಸ್ವಲ್ಪ ಹೊತ್ತಿನಲ್ಲಿ ಚಹಾ ರೆಡಿಯಾಗಿ ರೈಲು ನಿಲ್ದಾಣಕ್ಕೆ ಬಂದರು. ಒಂದು ಗಂಟೆ ರೈಲು ಇನ್ನೂ ಬಂದಿರಲಿಲ್ಲ.
ʻಪ್ಲಾಟ್‍ಫಾರಂನ ಬೆಂಚಿನ ಮೇಲೆ ಇಬ್ಬರು ಕುಳಿತಿದ್ದರು. `ಇವರು ತುಂಬಾ ಹೊತ್ತಿನಿಂದ ಇಲ್ಲೇ ಕೂತಿದ್ದಾರಲ್ಲಾ’ ಅನಿಸಿ ಅವರ ಪಕ್ಕ ಹೋದರು. ʻತುಂಬ ಚಳಿ ಇದೆ. ಒಂದು ಚಹಾ ಕುಡಿಯಿರಿʼ ಎಂದರು. ಮೊದಲು ನಿರಾಕರಿಸಿದರೂ ಬಳಿಕ ಕುಡಿದರು.
ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದರು. ಆಗ ಅವರಲ್ಲಿ ಒಬ್ಬರುʻʻನಮ್ಮ ಸಣ್ಣ ಮಗ ನಮ್ಮನ್ನು ರೈಲಿನಲ್ಲಿ ಕೂರಿಸಿ ಬಿಟ್ಟ. ಈ ನಿಲ್ದಾಣದಲ್ಲಿ ಇಳಿಯುವಂತೆ ಹೇಳಿದ್ದಾನೆ. ನನ್ನ ದೊಡ್ಡ ಮಗ ಇಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋಗ್ತಾನಂತೆ. ಅದಕ್ಕೆ ಕಾಯ್ತಾ ಇದ್ದೇವೆ. ಇನ್ನೂ ಬಂದಿಲ್ಲ’ ಎಂದರು.
ಹೌದಾ? ಇನ್ನೂ ಯಾಕೆ ಬಂದಿಲ್ಲ ಎಂದು ಯೋಚಿಸಿದರು ಚಾಯ್‍ವಾಲಾ. ʻನಿಮ್ಮ ದೊಡ್ಡ ಮಗ ಏನು ಮಾಡ್ತಾರೆ ಇಲ್ಲಿ, ವಿಳಾಸವೇನಾದರೂ ಇದೆಯಾʼ ಎಂದು ಕೇಳಿದರು.
ರೈಲಲ್ಲಿ ಬಂದ ವ್ಯಕ್ತಿ, ಸಣ್ಣ ಮಗ ಈ ಚೀಟಿ ಒಂದು ಕೊಟ್ಟಿದ್ದಾನೆ. ನಮಗೆ ಓದಲಿಕ್ಕೆ ಬರುವುದಿಲ್ಲ. ಇದು ವಿಳಾಸ ಇರಬಹುದು ಅನಿಸುತ್ತದೆ, ಎಂದು ಚೀಟಿಯನ್ನು ಕೊಟ್ಟರು.
ಚೀಟಿಯನ್ನು ಓದಿದ ಚಾಯ್‍ವಾಲಾಗೆ ನಿಜಕ್ಕೂ ದಿಗಿಲಾಯಿತು. ಅದರಲ್ಲಿ ʻʻಈ ಚೀಟಿಯನ್ನು ಓದಿದವರು ದಯವಿಟ್ಟು ಇವರನ್ನು ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ’ʼ ಎಂದು ಬರೆದಿತ್ತು!
ಇದನ್ನೂ ಓದಿ | Motivational story | ಇದು ಒಂದೇ ವಠಾರದಲ್ಲಿದ್ದ ಇಬ್ಬರು ಅಮ್ಮಂದಿರು, ಅವರ ಇಬ್ಬರು ಮಕ್ಕಳ ಕಥೆ