ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಊರು. ವಯಸ್ಸಾದ ಪೋಸ್ಟ್ ಮ್ಯಾನ್ ಒಬ್ಬರು ಹೊಸದಾಗಿ ಆ ಊರಿಗೆ ಬಂದಿದ್ದರು. ಸೈಕಲ್ ತುಳಿಯುತ್ತಾ ಬಂದು ಒಂದು ಮನೆಯ ಮುಂದೆ ನಿಲ್ಲಿಸಿ ಬಾಗಿಲು ತಟ್ಟಿ ಹೇಳಿದರು: ಪೋಸ್ಟ್.. ಪೋಸ್ಟ್.
ಆಗ ಒಳಗಿನಿಂದ ಬಾಲಕಿಯ ಸ್ವರ ಕೇಳಿಬಂತು: ದಯವಿಟ್ಟು ಕಾಯಿರಿ, ಈಗ ಬರ್ತೇನೆ..
ಆದರೆ ಎರಡು ನಿಮಿಷ ಕಳೆದರೂ ಯಾರೂ ಬಾಗಿಲು ತೆರೆಯುವುದು ಕಾಣಲಿಲ್ಲ. ಪೋಸ್ಟ್ ಮ್ಯಾನ್ ಮತ್ತೆ ಹೇಳಿದರು: ಯಾರಾದರೂ ಪತ್ರ ತಗೊಳ್ಳಿಕೆ ಬರ್ತೀರಾ, ನಂಗಿನ್ನೂ ತುಂಬಾ ಕಡೆಗಳಿಗೆ ಪೋಸ್ಟ್ ಹಂಚಲಿಕ್ಕಿದೆ.
ಬಾಲಕಿ ಮತ್ತೆ ಹೇಳಿದಳು: ಅಂಕಲ್ ಬರ್ತೇನೆ ಇದೇನೆ. ಲೇಟ್ ಆಗೋದಾದರೆ ಪತ್ರ ಅಲ್ಲೇ ಇಟ್ಟು ಹೋಗಿ.. ಪ್ಲೀಸ್..
ಪೋಸ್ಟ್ ಮ್ಯಾನ್ ಹೇಳಿದರು: ಇಲ್ಲ.. ಕಾಯ್ತೇನೆ.. ಇದು ರಿಜಿಸ್ಟರ್ಡ್ ಲೆಟರ್. ಇದಕ್ಕೆ ಯಾರಾದರೂ ಸಹಿ ಹಾಕಲೇಬೇಕು.
ಸುಮಾರು ನಾಲ್ಕು ನಿಮಿಷ ಕಳೆದ ಮೇಲೆ ಬಾಗಿಲು ತೆರೆದುಕೊಂಡಿತು. ಪೋಸ್ಟ್ ಮ್ಯಾನ್‍ಗೆ ಸಿಟ್ಟುಬಂದಿತ್ತು. ಬಯ್ಯೋಣ ಎಂದು ಯೋಚಿಸಿ ಬಾಯಿ ತೆರೆದಾಗ ಅವಾಕ್ಕಾಗಿ ಹೋದರು. ಬಾಗಿಲು ತೆರೆದ ಬಾಲಕಿಯ ಕಾಲು ಊನವಾಗಿತ್ತು. ಪೋಸ್ಟ್ ಮ್ಯಾನ್ ಅವಳಿಗೇ ಸಾಂತ್ವನ ಹೇಳಿ ಪತ್ರ ಕೊಟ್ಟು ಸಹಿ ಪಡೆದು ಭಾರವಾದ ಹೃದಯದೊಂದಿಗೆ ತೆರಳಿದರು.
ಆ ಬಾಲಕಿಗೆ ಅಮ್ಮ ಇರಲಿಲ್ಲ. ಅಪ್ಪ ಎಲ್ಲೋ ದೂರದೂರಿನಲ್ಲಿ ಕೂಲಿ ಮಾಡುತ್ತಿದ್ದ. ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಬೆಳಗ್ಗೆ ಮತ್ತು ಸಂಜೆ ಪರಿಚಯದ ಮಹಿಳೆಯೊಬ್ಬರು ಬಂದು ಸಹಾಯ ಮಾಡಿ ಹೋಗುತ್ತಿದ್ದರು.
ಮುಂದೆ ಕೆಲವು ಬಾರಿ ಪೋಸ್ಟ್ ಮ್ಯಾನ್ ಮತ್ತು ಬಾಲಕಿಯ ಮುಖಾಮುಖಿ ನಡೆಯಿತು. ಪೋಸ್ಟ್ ಮ್ಯಾನ್ ಯಾವ ಅವಸರವನ್ನೂ ಮಾಡದೆ ಕಾದು ನಿಂತು ಒಂದಿಷ್ಟು ಮಾತನಾಡಿಸಿ ಹೋಗುತ್ತಿದ್ದರು.
ಹೀಗೆ ಸಾಗುತ್ತಿದ್ದಾಗ ದೀಪಾವಳಿ ಬಂತು. ಸಾಮಾನ್ಯವಾಗಿ ಪೋಸ್ಟ್ ಮ್ಯಾನ್ ತಾನು ಪತ್ರ ಕೊಡುವ ಮನೆಗಳಿಂದ ದೀಪಾವಳಿ ಗಿಫ್ಟ್ ಕೇಳುತ್ತಿದ್ದರು. ಈ ಬಾಲಕಿಯಿಂದ ನಾನು ಕೇಳಬಾರದು. ನಾನೇ ಏನಾದರೂ ಗಿಫ್ಟ್ ಕೊಡಬೇಕು ಎಂದು ನಿರ್ಧರಿಸಿದರು.
ಆವತ್ತು ಪತ್ರ ಇರಲಿಲ್ಲ. ಆದರೂ ಸುಮ್ಮನೆ ಹೋಗಿ ಬಾಗಿಲು ತಟ್ಟಿ ಕೂಗಿ ಕರೆದರು.. ಮಗಳೇ ಬಾ ಇಲ್ಲಿ..
ಬಾಲಕಿ ನಿಧಾನವಾಗಿ ಬಂದು ಬಾಗಿಲು ತೆರೆದಳು. `ಮಗಳೇ ದೀಪಾವಳಿ ಅಲ್ವಾ? ನಿನಗಾಗಿ ಒಂದು ಗಿಫ್ಟ್ ತಂದಿದ್ದೇನೆ’ ಎಂದು ಚಾಕೊಲೇಟ್ ಪ್ಯಾಕೇಟ್ ಕೈಗಿತ್ತರು. ಬಾಲಕಿಗೆ ಖುಷಿಯೋ ಖುಷಿ.
ಅಂಕಲ್ ಸ್ವಲ್ಪ ನಿಲ್ಲಿ ಎಂದು ಬಾಲಕಿ ನಿಧಾನಕ್ಕೆ ಒಳಗೆ ಹೋಗಿ ಹೊರಬಂದಳು. ತೆವಳಿಕೊಂಡು ಬಂದವಳ ಕೈಯಲ್ಲಿ ಒಂದು ಬಾಕ್ಸಿತ್ತು. ಅದನ್ನು ನೀಡಿ, ಇದು ನಿಮಗೆ ನಾನು ಕೊಡುವ ಗಿಫ್ಟ್ ಅಂಕಲ್ ಅಂದಳು.
ಪೋಸ್ಟ್ ಮ್ಯಾನ್, ʻʻನೀನು ನನ್ನ ಮಗಳ ಹಾಗೆ ಕಂದಾ.. ನಿನ್ನ ಕೈಯಿಂದ ಗಿಫ್ಟ್ ತಗೊಳೋದು ತಪ್ಪಾಗುತ್ತದೆ’ ಅಂದರು. ಆಗ ಅವಳು, ಅಂಕಲ್ ನೀವು ತೆಗೆದುಕೊಳ್ಳದಿದ್ದರೆ ನಂಗೆ ಬೇಜಾರಾಗ್ತದೆ ಅಂತ ಮಾತಿನಲ್ಲಿ ಕಟ್ಟಿಹಾಕಿದಳು.
ಬಿಚ್ಚಿ ನೋಡಿ ಅಂಕಲ್ ಎಂದಳು ಬಾಲಕಿ. ಪೋಸ್ಟ್ ಮ್ಯಾನ್ ಮೆಲ್ಲಗೆ ಬಿಚ್ಚಿ ನೋಡಿದರೆ ಅಚ್ಚರಿ. ಅದರಲ್ಲಿ ಇದ್ದುದು ಒಂದು ಜೋಡಿ ಚಪ್ಪಲಿ. ಪೋಸ್ಟ್ ಮ್ಯಾನ್ ತನ್ನ ಖಾಲಿ ಪಾದಗಳನ್ನೊಮ್ಮೆ, ಬಾಲಕಿಯ ಮುಖವನ್ನೊಮ್ಮೆ ನೋಡಿದರು!
ʻʻಅಯ್ಯೋ ದೇವರೇ.. ಇದ್ಯಾಕಮ್ಮಾ ನಂಗೆ’ ಅಂದರು. “ಅಂಕಲ್ ಆವತ್ತು ಮೊದಲ ದಿನ ಬಂದಾಗಲೇ ನಿಮ್ಮ ಕಾಲುಗಳಲ್ಲಿ ಚಪ್ಪಲಿ ಇಲ್ಲದ್ದನ್ನು ನೋಡಿದ್ದೆ. ಬಿಸಿಲಲ್ಲಿ ಹೇಗೆ ಬರಿಗಾಲಲ್ಲಿ ನಡೆದುಹೋಗುತ್ತೀರೋ ಅಂತ ಬೇಜಾರಾಗಿತ್ತು. ಆವತ್ತೊಂದು ದಿನ ನೀವು ಬಂದಾಗ ಮಳೆ ಬಂದಿತ್ತು. ಮರಳಿ ಹೋದಾಗ ಮರಳಿನ ಮೇಲೆ ನಿಮ್ಮ ಹೆಜ್ಜೆ ಗುರುತಿತ್ತು. ನಾನೇ ತೆವಳಿಕೊಂಡು ಹೋಗಿ ಅದರ ಅಳತೆ ತೆಗೆದುಕೊಂಡು ಮನೆಗೆ ಬರ್ತಾರಲ್ಲ ಅಕ್ಕ, ಅವರ ಹತ್ರ ಹೇಳಿ ಈ ಚಪ್ಪಲಿ ತರಿಸಿಕೊಂಡೆ” ಅಂದಳು.
ಪೋಸ್ಟ್ ಮ್ಯಾನ್ ಕಣ್ಣೊರೆಸಿಕೊಳ್ಳುತ್ತಾ ಆ ಹುಡುಗಿಯ ಪಾದಗಳೇ ಇಲ್ಲದ ಕಾಲುಗಳನ್ನು ನೋಡಿದರು.
ಇದನ್ನೂ ಓದಿ| Motivational story | ಅಸಹಾಯಕ ಅಪ್ಪನ ತಾಕತ್ತು ಅವಳಿಗೆ ತಿಳಿದಾಗ ತುಂಬ ತಡವಾಗಿತ್ತು!