ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಬಡ ಕುಟುಂಬ. ತಂದೆ, ತಾಯಿ ಮತ್ತು ಮಗಳು. ಅಪ್ಪ ದಿನಗೂಲಿ ಮಾಡಿ ಬರುತ್ತಿದ್ದ ಹಣದಲ್ಲಿ ಬದುಕು ಹೇಗೋ ಸಾಗುತ್ತಿತ್ತು. ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲ ಎಂಬ ಪರಿಸ್ಥಿತಿ ಇತ್ತು. ಅವರಿಗೆ ಬದುಕುವುದಕ್ಕೇ ಬೇಕಾದಷ್ಟು ಹಣವಿರಲಿಲ್ಲ. ಆದರೂ ಅಪ್ಪನಿಗೆ ತನ್ನ ಮಗಳನ್ನು ಒಬ್ಬ ದೊಡ್ಡ ಡಾಕ್ಟರ್ ಮಾಡಬೇಕು ಅಂತ ಆಸೆ. ಆಕೆಯ ಮೇಲೆ ಅಪಾರವಾದ ಪ್ರೀತಿ ಮತ್ತು ಭರವಸೆ ಅವನಿಗೆ.
ಮಗಳು ಕೂಡಾ ತುಂಬ ವಿಧೇಯ ಹುಡುಗಿ. ಅಪ್ಪನ ಆಸೆಯನ್ನು ಈಡೇರಿಸಬೇಕು ಅಂತ ಆಕೆ ಕಷ್ಟಪಟ್ಟು ಓದುತ್ತಿದ್ದಳು. ಆವತ್ತು ಅವಳ ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದಿತ್ತು. ಮಗಳು ಒಳ್ಳೆಯ ಮಾರ್ಕ್ಸ್ ಪಡೆದು ರಾಜ್ಯಕ್ಕೇ ಫಸ್ಟ್ ಬರಬೇಕು ಅಂತ ಅವಳ ಅಪ್ಪನಿಗೆ ಆಸೆ ಇತ್ತು. ಆಕೆ ಅದನ್ನು ಸಾಧಿಸಿ ಬಿಟ್ಟಿದ್ದಳು. 625ರಲ್ಲಿ 625 ಅಂಕ. ʻಬಡ ಕೂಲಿಕಾರನ ಮಗಳು ರಾಜ್ಯಕ್ಕೇ ಫಸ್ಟ್ʼ ಅಂತ ಪತ್ರಿಕೆಗಳಲ್ಲಿ ಫೋಟೊ ಸಹಿತ ಸುದ್ದಿ ಬಂದಿತ್ತು. ಅವನು ಅದನ್ನು ಮತ್ತು ಅವಳನ್ನು ಇಬ್ಬರನ್ನೂ ಎತ್ತಿ ಕುಣಿದಾಡಿದ.
ಅಪ್ಪನಿಗೆ ತುಂಬ ಸಂತೋಷದಿಂದ ಮಗಳನ್ನು ಕೇಳಿದ: ಮಗಳೇ… ನಿನ್ನ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ. ಏನು ಬೇಕಾದರೂ ಕೇಳು ಕೊಡಿಸ್ತೇನೆ- ಅಂದ.
ಮಗಳು ಹೇಳಿದ್ಳು: ಅಪ್ಪಾ ಅವತ್ತೊಂದು ದಿನ ಪೇಟೆಗೆ ಹೋದಾಗ ನಾನೊಂದು ಡ್ರೆಸ್ ತೋರಿಸಿದ್ದೆ. ಅದನ್ನು ತಂದು ಕೊಡ್ತೀಯಾ? ಆದರೆ ಅದಕ್ಕೆ 8000 ರೂ. ರೇಟ್ ಇತ್ತು ಆಗಲೇ.. ಈಗ ಜಾಸ್ತಿ ಆಗಿದೆಯೋ ಏನೋ..
ಅಪ್ಪನ ಬಳಿ ಅಷ್ಟೊಂದು ಹಣ ಇರಲಿಲ್ಲ. ಆದರೂ ಮಗಳಿಗೆ ನಿರಾಸೆ ಮಾಡಬಾರದು ಎಂದು ಇದ್ದೆಲ್ಲ ಹಣವನ್ನು ಜೋಡಿಸಿ ಪೇಟೆಗೆ ಹೋಗಿ ಆ ಡ್ರೆಸ್ ತಂದು ಮಗಳ ಮುಂದಿಟ್ಟ. ಆಗ ಹೆಂಡತಿಗೆ ಅನುಮಾನ. ʻʻಅಲ್ಲಾರಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತುʼʼ- ಕೇಳಿದಳು.
ಆಗ ಅವನಂದ: ಅಲ್ಲಿಂದ ಇಲ್ಲಿಂದ ಸ್ವಲ್ಪ ಎಜಸ್ಟ್ ಆಯಿತು. ಕೊನೆಗೂ ಕಡಿಮೆ ಬಿತ್ತು. ಆಗ ಯಾರಿಗೋ ರಕ್ತ ಬೇಕು ಅನ್ನುವ ಸುದ್ದಿ ಸಿಕ್ಕಿತು. ನಂದು ಅಪರೂಪದ ರಕ್ತವಂತೆ. 4000 ರೂ. ಕೊಟ್ರು. ತೊಂದ್ರೆ ಇಲ್ಲ.. ಮಗಳಿಗೆ ಖುಷಿ ಆದ್ರೆ ಸಾಕು.
ಇದಾಗಿ ಎರಡು ವರ್ಷದ ಬಳಿಕ ಮಗಳು ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದಳು. ಮೆಡಿಕಲ್ ಸೀಟು ಕೂಡಾ ಸಿಕ್ಕಿತು. ಎಸ್ಸೆಸ್ಸೆಲ್ಸಿಯಲ್ಲಿ ರ‍್ಯಾಂಕ್ ಬಂದಾಗ, ಪಿಯುಸಿಯಲ್ಲಿ ಒಳ್ಳೆಯ ಮಾರ್ಕ್ಸ್ ಸಿಕ್ಕಾಗ ಕೆಲವರು ನೆರವು ನೀಡಿದ್ದರು. ಅದನ್ನೆಲ್ಲ ಬಳಸಿಕೊಂಡು ಕಾಲೇಜಿಗೆ ಸೇರಿಸಿದರು. ಆದರೆ, ವರ್ಷಗಳು ಕಳೆಯುತ್ತಿದ್ದಂತೆಯೇ ಫೀಸ್ ತುಂಬುವುದೆಲ್ಲ ಕಷ್ಟವಾಗತೊಡಗಿತು. ಆದರೂ ಕಷ್ಟಪಟ್ಟು ದುಡಿದು, ಸಾಲ ಮಾಡಿ ಹೇಗೋ ಅದನ್ನು ಭರಿಸುತ್ತಿದ್ದ ತಂದೆ.
ಅದು ಎಂಬಿಬಿಎಸ್‌ನ ಕೊನೆಯ ವರ್ಷ. ಕೊನೆಯ ಫೀಸು 80000 ರೂಪಾಯಿ ಕಟ್ಟಬೇಕಂತೆ.. ಕಳುಹಿಸಿಕೊಡ್ತೀಯಾ ಅಪ್ಪ ಅಂತ ಮಗಳು ಕರೆ ಮಾಡಿದ್ದಳು. ನಿಜ ಅಂದರೆ ಅಪ್ಪನ ಬಳಿ ಹಣವೇ ಇರಲಿಲ್ಲ. ಆದರೂ ಹೇಗೋ ಹಣ ಹೊಂದಿಸಿ ಮಗಳಿಗೆ ಕಳುಹಿಸಿದ.
ಮನೆಗೆ ಬಂದ ಕೂಡಲೇ ಹೆಂಡತಿ ಕೇಳಿದಳು: ದುಡ್ಡಿಗೆ ಏನು ಮಾಡಿದ್ರಿ? ನಿಮ್ಮ ಹತ್ರ ನಯಾಪೈಸೆಯೂ ಇರಲಿಲ್ಲವಲ್ಲ.. ಎಂದಳು.
ಆಗ ಅಪ್ಪ ಹೇಳಿದ: ದೇವರು ನಮ್ಮ ಕೈ ಬಿಡಲ್ಲ ಕಣೆ.. ಯಾರೋ ಪಾಪ.. ಕಿಡ್ನಿ ಫೈಲ್ಯೂರ್ ಆಗಿತ್ತಂತೆ.. ಕಿಡ್ನಿ ಬೇಕು ಅಂತಿದ್ದರು. ಕೊಟ್ಟು ಬಿಟ್ಟೆ.. ಹಣ ಬಂತು ಕಳುಹಿಸಿದೆ.. ಅಂತ ಹೊಟ್ಟೆಯ ಭಾಗದ ಬ್ಯಾಂಡೇಜ್ ತೋರಿಸುತ್ತಾ ಅತ್ಯಂತ ನಿರಾಯಾಸವಾಗಿ ಹೇಳಿದ.
ʻʻದಯವಿಟ್ಟು ಮಗಳಿಗೆ ಹೇಳಬೇಡ. ಅವಳಿಗೆ ಬೇಜಾರಾದೀತು. ಅವಳು ಒಮ್ಮೆ ಡಾಕ್ಟರ್ ಆಗಿಬಿಟ್ಟರೆ ಸಾಕು.. ನಂಗಷ್ಟೇ ಸಾಕುʼʼ ಎಂದ ಅಪ್ಪ. ಅಮ್ಮ ಕಣ್ಣೀರು ಒರೆಸಿಕೊಂಡಳು.
ಆವತ್ತು ಅವಳ ಮೆಡಿಕಲ್ ಕಾಲೇಜಿನಲ್ಲಿ ಗ್ಯಾಜುಯೇಷನ್ ಡೇ ಇತ್ತು. ತಮ್ಮ ಮಗಳು ಡಾಕ್ಟರ್ ಆಗಿ ಮನೆಗೆ ಬರುತ್ತಾಳೆ ಎಂದು ಅಪ್ಪ-ಅಮ್ಮ ಕಾತರದಿಂದ ಕಾಯುತ್ತಿದ್ದರು. ಅಪ್ಪ ಮಗಳಿಗೊಂದು ಮಲ್ಲಿಗೆ ಹಾರ ಕೂಡಾ ತಂದಿಟ್ಟಿದ್ದ.
ಅಷ್ಟು ಹೊತ್ತಿಗೆ ಒಂದು ಕಾರು ಬಂತು. ಮಗಳು ಕಾರಿನಲ್ಲಿ ಬಂದಿದ್ದಳು. ಅಪ್ಪ-ಅಮ್ಮ ಇಬ್ಬರೂ ಓಡಿಕೊಂಡು ಹೊರಗೆ ಬಂದರು. ನಾಲ್ಕು ಮಂದಿ ಸೇರಿ ಮಗಳನ್ನು ಎತ್ತಿಕೊಂಡು ಬಂದು ಅಪ್ಪನ ಮುಂದೆ ಮಲಗಿಸಿದರು. ಕೈಯಲ್ಲಿದ್ದ ಮಲ್ಲಿಗೆ ಮಾಲೆ ಅವಳ ಮೇಲೆ ಬಿತ್ತು.
ಬಂದವರಲ್ಲಿ ಒಬ್ಬ ಹೇಳಿದ: ಕ್ಷಮಿಸಿ ಸರ್, ನಾನು ತುಂಬ ಪ್ರೀತಿಸುತ್ತಿರುವ ಹುಡುಗ ಮೋಸ ಮಾಡಿದ್ದಾನೆ ಎಂದು ಚೀಟಿ ಬರೆದಿಟ್ಟು ಇವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!
ಇದನ್ನೂ ಓದಿ| Motivational story: ಸ್ಕೂಟರ್‌ನಡಿಗೆ ಸಿಲುಕಿದ ಪುಟಾಣಿ ನಾಯಿ ಮತ್ತು ಅವನು