ಕೃಷ್ಣ ಭಟ್ ಅಳದಂಗಡಿ-motivational story
ಚಾಮರಾಜ ಪೇಟೆಯ ಶಂಕರ ಮಠದ ಎದುರು ಮೂರು ರಸ್ತೆ ಸೇರುವಲ್ಲಿ ಒಬ್ಬ ಅಜ್ಜಿ ಕಿತ್ತಳೆ ಹಣ್ಣು ಮಾರ್ತಾಳೆ. ಆಕೆ ನೆಲದಲ್ಲೇ ಕೂತು ಎದುರಿಗೆ ಕಿತ್ತಳೆ ಹರವಿಕೊಂಡಿರ್ತಾಳೆ. ಬೆನ್ನು ಸ್ವಲ್ಪ ಬಾಗಿದೆ.
ಅಲ್ಲಿಗೆ ಆಗಾಗ ಒಬ್ಬ ಸ್ವಲ್ಪ ವಯಸ್ಸಾದ ವ್ಯಕ್ತಿ ಬರ್ತಾರೆ. ಒಂದರ್ಧ ಕೆಜಿ ಒಳ್ಳೆ ಕಿತ್ತಳೆ ಕೊಡಿ ಅಂತಾರೆ. ಅಜ್ಜಿ ತೂಕ ಮಾಡಿ ಕೊಡ್ತಾಳೆ.
ಕಿತ್ತಳೆ ಪಡೆದುಕೊಂಡ ಆ ಹಿರಿಯ ವ್ಯಕ್ತಿ ಒಂದು ಕಿತ್ತಳೆ ಓಪನ್ ಮಾಡಿ ಒಂದು ಪೀಸ್ ತಿಂದು, -ಏನಿದು ಇಷ್ಟು ಹುಳಿ ಆಗಿದೆ? ಒಳ್ಳೆದು ಕೊಡಿ ಅಂದಿದ್ದಲ್ವಾ?- ಅಂತಾರೆ. ಓಪನ್ ಮಾಡಿದ ಕಿತ್ತಳೆಯನ್ನು ನೀವೇ ತಿನ್ನಿ ಅಂತ ಅಜ್ಜಿಗೇ ಕೊಟ್ಟು ಹೋಗ್ತಾರೆ.
ಕೆಲವು ಸಾರಿ ಇದೇ ಕಥೆ ನೋಡಿದ ವ್ಯಕ್ತಿಯ ಹೆಂಡತಿ, *ಏನ್ರಿ ನೀವು ಕಿತ್ತಳೆ ಚೆನ್ನಾಗೇ ಇರ್ತದಲ್ವಾ? ಯಾಕೆ ಪಾಪ ಆ ಅಜ್ಜಿಗೆ ಬಯ್ಯೋದು* ಅಂತ ಕೇಳಿದ್ರು.
ಅದಕ್ಕೆ *ಇದು ಸುಮ್ನೆ ಕಣೆ. ಆ ಅಜ್ಜಿ ತಾನು ಅಷ್ಟು ಕಿತ್ತಳೆ ಮಾರಿದ್ರೂ ಒಂದನ್ನೂ ತಾನು ತಿಂದಿರಲ್ಲ. ಪಾಪ ತಿಂದ್ರೆ ನಷ್ಟ ಆದೀತು ಅನ್ನೊ ಭಯ. ಹಾಗಾಗಿ ಅವಳು ತಿನ್ಲಿ ಅಂತ ನಾನು ಓಪನ್ ಮಾಡಿ ಕೊಡೋದು. ಸುಮ್ನೆ ತಿನ್ನು ಅಂತ ಕೊಟ್ರೆ ತಿನ್ಲಿಕ್ಕಿಲ್ಲ ಆಕೆ* ಅಂದರು. ಹೋ ಹಾಗೊ ವಿಷಯ- ಎಂದರು ಹೆಂಡತಿ.
ಇನ್ನೊಂದು ಕಡೆ ಅಜ್ಜಿಗೆ ಪ್ರತಿ ಸಾರಿ ಏನೋ ಗೊಣಗುವುದನ್ನು ಕಂಡ ಪಕ್ಕದ ತರಕಾರಿ ಅಂಗಡಿ ಹುಡುಗ ಕೇಳಿದ: ಏನಜ್ಜಿ.. ಆ ಮನುಷ್ಯ ಯಾವಾಗ್ಲೂ ನಿಂಗೆ ಬೈತಾನೆ. ಆದರೆ ನೀನು ಮಾತ್ರ ಅವನಿಗೆ ಒಂದು ಕಿತ್ತಳೆ ಜಾಸ್ತಿನೆ ಹಾಕ್ತೀ.. ಯಾಕೆ?..
ಅಜ್ಜಿ ಹೇಳಿದಳು: ಅದು ಬಯ್ಯೋದಲ್ಲ ಮಗ. ನನ್ನ ಮೇಲೆ ಪ್ರೀತಿ, ಕಾಳಜಿ ಅವರಿಗೆ. ನಾನು ಕೂಡಾ ಕಿತ್ತಳೆ ತಿನ್ಲಿ ಅಂತ ಈ ತರ ಕೊಡ್ತಾರೆ. ನಂಗೆ ಗೊತ್ತಾಗಲ್ಲ ಅಂದ್ಕೊಂಡಿದಾರೆ. ಅದಕೆ ನಾನೂ ಒಂದು ಜಾಸ್ತಿ ಹಾಕಿಬಿಡ್ತೇನೆ. ನಾನು ಹಾಕೋದು ಅಂತಲ್ಲ.. ಕೈ ಹಾಗೇ ಕೊಟ್ಟು ಬಿಡ್ತದೆ- ಅಂದಳು.
ಹುಡುಗನಿಗೆ ಬದುಕು ಹೀಗೂ ಇರ್ತದಾ ಅಂತ ಅಚ್ಚರಿ ಆಯಿತು.
ಇದನ್ನೂ ಓದಿ | Motivational story | ಪ್ರೊಫೆಸರ್ ಹೇಳಿದ ಚಂದದ ಕಪ್‌ಗಳ ಕಥೆ: ಇದಕ್ಕೂ ನಮಗೂ ಏನು ಸಂಬಂಧ?