Site icon Vistara News

Motivational story | ಒಬ್ಬ ಅಜ್ಜ, ಒಂದು ಸುಳ್ಳು ಮತ್ತು ಸಾವಿರ ಚೂರು, ನ್ಯಾಯಾಲಯದಲ್ಲಿ ನಡೆದಿದ್ದೇನು?

gossip

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದೂರಿನಲ್ಲಿ ಒಬ್ಬ ವೃದ್ಧ ವ್ಯಕ್ತಿ ಇದ್ದರು. ಅವರಿಗೆ ಯಾವುದೋ ಕಾರಣಕ್ಕೆ ಪಕ್ಕದ ಮನೆಯ ಯುವಕನ ಮೇಲೆ ಸಿಟ್ಟಿತ್ತು. ಅವನನ್ನು ನೋಡಿದರೆ ಆಗುತ್ತಿರಲಿಲ್ಲ. ಅವರು ಸಂಜೆಯ ಹೊತ್ತು ಅಂಗಡಿ ಕಡೆಗೆ ಹೋದಾಗ ಸಣ್ಣಗೆ ಒಂದು ಸುದ್ದಿ ಹಬ್ಬಿಸಿದರು.

ʻಆ ಹುಡುಗ ಇದ್ದಾನಲ್ಲಾ.. ಅವನು ದೊಡ್ಡ ಕಳ್ಳ. ಮೊನ್ನೆ ಮೊನ್ನೆ ನಮ್ಮ ಮನೆಯಿಂದಲೇ ಕದ್ದಿದ್ದ. ನಾವು ಪಕ್ಕದ ಮನೆಯವನಲ್ವಾ ಅಂತ ಬಿಟ್ಟು ಬಿಟ್ಟು ಬಿಟ್ಟೆವು. ಜತೆಗೆ ಬುದ್ಧಿ ಒಳ್ಳೆದಿಲ್ಲ. ಹೆಣ್ಮಕ್ಕಳಿಗೆಲ್ಲ ಉಪದ್ರವ ಕೊಡ್ತಾನೆ’ ಎಂದು ಮೆಲ್ಲನೆ ಯಾರಿಗೂ ಕೇಳಿಸದಂತೆ ಒಬ್ಬೊಬ್ಬರಲ್ಲೇ ಹೇಳುತ್ತಿದ್ದರು. ಈ ಸುದ್ದಿ ಗಾಳಿ ಸುದ್ದಿಯಾಗಿ ಎಲ್ಲೆಡೆ ಹರಡಿತು.

ಅದೊಂದು ಸಾರಿ ಆ ಪ್ರದೇಶದಲ್ಲಿ ಕಳ್ಳತನ ನಡೆಯಿತು. ಆಕ್ಕಪಕ್ಕದವರಿಗೆ ಮೊದಲು ನೆನಪಾಗಿದ್ದೇ ಈ ಯುವಕ. ಅವನ ಮೇಲೆಯೇ ಸಂಶಯಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಬಂದು ಅವನನ್ನು ಕರೆದುಕೊಂಡು ಹೋದರು. ಯುವಕ ಹೇಗೆ ಹೇಗೆ ವಿವರಿಸಿದರೂ ಪೊಲೀಸರು ಕೇಳಲಿಲ್ಲ. ಠಾಣೆಯಲ್ಲಿ ಬಂದು ಹೇಳಿ ಎಂದರು. ಠಾಣೆಯಲ್ಲಿ ಹೇಳಿದಾಗ, ʻನಿಮ್ಮ ಬಗ್ಗೆ ಊರಿನಲ್ಲೇ ಸಾಕಷ್ಟು ಸುದ್ದಿ ಹಬ್ಬಿದೆ. ಬೆಂಕಿ ಇಲ್ಲದೆ ಹೊಗೆ ಬರುತ್ತದಾ’ ಎಂದು ಪ್ರಶ್ನಿಸಿದರು. ಏನು ಹೇಳುವುದಿದ್ದರೂ ಕೋರ್ಟ್‍ನಲ್ಲಿ ಹೇಳಿ ಎಂದು ಸಾಗ ಹಾಕಿದರು.

ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಕೊನೆಗೂ ಆ ನಿರ್ದಿಷ್ಟ ಪ್ರಕರಣದಲ್ಲಿ ಈತನ ವಿರುದ್ಧ ಯಾವುದೇ ಪುರಾವೆ ಸಿಗಲಿಲ್ಲ. ಹೀಗಾಗಿ ನ್ಯಾಯಾಧೀಶರು ಅವನನ್ನು ಬಿಡುಗಡೆ ಮಾಡಿದರು. ಆದರೆ, ಅಷ್ಟು ಹೊತ್ತಿಗೆ ಯುವಕನಿಗೆ ಸಿಕ್ಕಾಪಟ್ಟೆ ಬೇಜಾರಾಗಿತ್ತು. ಸಿಟ್ಟೂ ಬಂದಿತ್ತು. ಮಾನ ಕಳೆದ ವೃದ್ಧನಿಗೆ ಪಾಠ ಕಲಿಸಬೇಕು ಎಂದು ಯುವಕ ನಿರ್ಧರಿಸಿದ.

ತನ್ನ ವಿರುದ್ದ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆಪಾದಿಸಿ ಪೊಲೀಸರಿಗೆ ದೂರು ನೀಡಿದ. ಈ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆಗೆ ಬಂತು.

ವೃದ್ಧರು ಹೇಳಿದರು: ನಾನು ಅವನ ವರ್ತನೆಯ ಬಗ್ಗೆ ಆಕ್ಷೇಪ ಮಾಡಿದ್ದು ನಿಜ. ಆದರೆ, ಅದು ಕೇವಲ ನನ್ನ ಅಭಿಪ್ರಾಯವಾಗಿತ್ತು. ನಾವು ಹಲವಾರು ವಿಚಾರಗಳ ಬಗ್ಗೆ ಅಭಿಪ್ರಾಯ ಹೇಳುತ್ತೇವೆ. ಅದು ಅಪರಾಧ ಹೇಗಾಗುತ್ತದೆ? ಎಂದು ಕೇಳಿದರು.

ವೃದ್ಧರ ಮಾತನ್ನು ಕೇಳಿದ ನ್ಯಾಯಾಧೀಶರು: ಆಯಿತು ಸರಿ. ನಾನು ಈ ಪ್ರಕರಣಕ್ಕೆ ಸಂಬಂಧಿಸಿ ನಾಳೆ ತೀರ್ಪು ಕೊಡುತ್ತೇನೆ. ನೀವೊಂದು ಕೆಲಸ ಮಾಡಬೇಕು. ಈ ಕಾಗದದಲ್ಲಿ ನೀವು ಹುಡುಗನ ಬಗ್ಗೆ ಏನೆಲ್ಲ ಆಪಾದನೆ ಮಾಡಿದ್ದೀರೋ ಅದನ್ನೆಲ್ಲ ಬರೆದು ಚೀಟಿಯನ್ನು ಹರಿದು ಚೂರು ಮಾಡಿ ಎಸೆಯಬೇಕು.

ಇದೇನು ಮಹಾ ಸಂಗತಿ ಎಂದು ವೃದ್ಧರು ಒಪ್ಪಿಕೊಂಡು ಚೀಟಿಯನ್ನು ಚೂರು ಚೂರು ಮಾಡಿ ನ್ಯಾಯಾಲಯದ ಹೊರಗೆ ಎಸೆದುಬಂದರು. ಆವತ್ತಿನ ವಿಚಾರಣೆ ಮುಗಿದು ಮರುದಿನಕ್ಕೆ ನಿಗದಿಯಾಯಿತು.

ಮರುದಿನ ನ್ಯಾಯಾಧೀಶರು ಬಂದು ಆಸೀನರಾದವರೇ ಕಡತ ಕೈಗೆತ್ತಿಕೊಂಡು ವೃದ್ಧ ಮತ್ತು ಯುವಕನನ್ನು ಕಟಕಟೆಗೆ ಆಹ್ವಾನಿಸಿದರು. ವೃದ್ಧರನ್ನು ಉದ್ದೇಶಿಸಿ ಹೇಳಿದರು: ಯಜಮಾನ್ರೇ ನೀವೊಂದು ಕೆಲಸ ಮಾಡಿ.. ನಿನ್ನೆ ನೀವು ಚೀಟಿಯನ್ನು ಹರಿದು ಎಸೆದಿರಲ್ವಾ? ಅದನ್ನೆಲ್ಲ ಹೆಕ್ಕಿಕೊಂಡು ಬನ್ನಿ.

ಅದಕ್ಕೆ ವೃದ್ಧರು ಹೇಳಿದರು: ಅದು ಹೇಗಾಗುತ್ತದೆ? ಅದೆಲ್ಲ ಗಾಳಿಗೆ ಹೋಗಿರಬಹುದು. ಮಳೆ ಬೇರೆ ಬಂದಿತ್ತು, ಒದ್ದೆಯಾಗಿರಬಹುದು, ಅಂಗಳ ಬೇರೆ ಗುಡಿಸಿರ್ತಾರೆ, ಕಸದ ಬುಟ್ಟಿ ಸೇರಿಸಬಹುದು. ಎಲ್ಲೆಲ್ಲೋ ಹೋಗಿದ್ದರೆ ನಾನು ಹುಡುಕುವುದು ಹೇಗೆ?

ಆಗ ನ್ಯಾಯಾಧೀಶರು ಹೇಳಿದರು: ಇಷ್ಟೊಂದು ವಯಸ್ಸಾಗಿದೆ ನಿಮಗೆ, ಏನು ಮಾಡಿದ್ರೆ ಏನಾಗುತ್ತದೆ ಎನ್ನುವ ಪರಿಜ್ಞಾನ ಇರಬೇಕಿತ್ತು ನಿಮಗೆ. ಈಗ ಚೀಟಿಯನ್ನೇ ಹುಡುಕಿ ತಂದು ಜೋಡಿಸಲಾಗದು ಅಂತೀರಿ. ನಿಮ್ಮ ದುಷ್ಟ ಬುದ್ಧಿಯಿಂದ ನೀವು ಯುವಕನ ಬಗ್ಗೆ ಸುಳ್ಳು ವದಂತಿ ಹರಡಿದ್ರಿ.. ಅದರಿಂದ ಆತನ ಗೌರವಕ್ಕೇ ಚ್ಯುತಿ ಆಗಿದೆ. ಅದನ್ನು ಹೇಗೆ ಸರಿಪಡಿಸುತ್ತೀರಿ. ಎಲ್ಲೆಲ್ಲೋ ಹರಡಿರುವ ಅರೆಬರೆ ಸುದ್ದಿಗಳನ್ನು ಮತ್ತೆ ಹೇಗೆ ಸರಿ ಮಾಡುತ್ತೀರಿ?

ವೃದ್ಧರಿಗೆ ತಾವು ಮಾಡಿದ ತಪ್ಪು ಅರಿವಾಗಿ ಯುವಕನಲ್ಲಿ ಕ್ಷಮೆ ಕೋರಿದರು. ಯುವಕ ಈ ಪ್ರಕರಣವನ್ನು ಇಲ್ಲಿಗೇ ಮುಗಿಸೋಣ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ.

ಇದನ್ನೂ ಓದಿ | Motivational story | ಆವತ್ತು ನನ್ನ ಕೈಯಲ್ಲಿ ಒಂದು ಬೈಕ್ ಇಲ್ಲದ್ದೇ ಹೋಗಿದ್ದೇ ಒಳ್ಳೆದಾಯ್ತು!

Exit mobile version