Site icon Vistara News

Motivational story I ಸಮಸ್ಯೆಗಳು ಒಂಟೆಗಳ ಹಾಗೆ, ಒಂದು ಮಲಗಿದರೆ ಇನ್ನೊಂದು ಏಳುತ್ತೆ, ಏನ್ಮಾಡೋದು?

camels

ಕೃಷ್ಣ ಭಟ್‌ ಅಳದಂಗಡಿ – motivational story
ವಿಶ್ವನಾಥ ಒಂದು ಸಣ್ಣ ವ್ಯಾಪಾರ ಮಾಡಿಕೊಂಡಿದ್ದ. ಒಳ್ಳೆಯ ಮನಸಿನ ಹೆಂಡತಿ ಮತ್ತು ಮುದ್ದಾದ ಮಗುವಿನ ಚಂದದ ಸಂಸಾರ ಅವನದು. ಆದರೆ, ಯಾಕೋ ಗೊತ್ತಿಲ್ಲ, ಬದುಕಿನಲ್ಲಿ ಒಂದಿಲ್ಲ ಒಂದು ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ವಿಶ್ವನಾಥನ ತಲೆಯಂತೂ ಸದಾ ಹಲವು ಸಮಸ್ಯೆಗಳ ಯೋಚನೆಯಲ್ಲೇ ಬ್ಯುಸಿ ಆಗಿರುತ್ತಿತ್ತು. ಇದರಿಂದ ಬದುಕನ್ನು ಖುಷಿಯಾಗಿ ಕಳೆಯುವ ಅವಕಾಶವೇ ಅವನಿಗೆ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಏನೂ ಸಮಸ್ಯೆ ಇಲ್ಲವೆಂದಾದರೂ ಅವನು ತನಗೇ ಯಾಕೆ ಈ ಥರ ತೊಂದರೆ ಬರುತ್ತಿದೆ, ಹೀಗೇ ಆದರೆ ಮುಂದೇನು ಎಂದು ಯೋಚಿಸಿಯೇ ಹೈರಾಣಾಗುತ್ತಿದ್ದ.

ಅದೊಂದು ಸಾರಿ ಸಂತರೊಬ್ಬರು ತಮ್ಮ ಶಿಷ್ಯರೊಂದಿಗೆ ಆ ಊರಿಗೆ ಬಂದರು. ಅದೊಂದು ಮರುಭೂಮಿ ಪಕ್ಕದ ಊರಾಗಿತ್ತು. ಮರುಭೂಮಿ ದಾಟಿ ಮತ್ತೊಂದು ಭಾಗಕ್ಕೆ ಅವರು ಹೋಗಬೇಕಿತ್ತು. ಹಾಗಾಗಿ ಸುಮಾರು 100 ಒಂಟೆಗಳೂ ಅವರ ಪರಿವಾರದಲ್ಲಿದ್ದವು.

ಈ ಸಂತರು ತಮ್ಮ ವಿವೇಕದಿಂದ, ಬುದ್ಧಿ ಹಾಗೂ ದೈವ ಬಲದಿಂದ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ಸುದ್ದಿ ಊರಲ್ಲೆಲ್ಲ ಹರಡಿತ್ತು. ನೂರಾರು ಜನ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದು ನಿರಾಳರಾದರು. ವಿಶ್ವನಾಥ ಕೂಡಾ ತನ್ನನ್ನು ಕಾಡುವ ಈ ತೊಂದರೆ ಪರಿಹಾರ ಪಡೆಯಲು ಮುಂದಾದ.

ಸಂತರನ್ನು ಕಾಣಲು ಹೋದಾಗ ದೊಡ್ಡ ಕ್ಯೂ ಇತ್ತು. ಅಯ್ಯೋ ದೇವರೇ ಇಲ್ಲೂ ಕಷ್ಟವೇ ಎದುರಾಯಿತಲ್ಲ ಎಂದು ಯೋಚಿಸಿದರೂ ತನ್ನ ಸರದಿ ಬರುವವರೆಗೆ ಹೇಗೋ ತಾಳ್ಮೆಯಿಂದ ಕಾದ. ಕೊನೆಗೆ ಸಂತರು ಎದುರಾದರು. ವಿಶ್ವನಾಥ ತನ್ನ ಸಮಸ್ಯೆ ಹೇಳಿಕೊಂಡ: ಸ್ವಾಮಿಗಳೇ ನನಗೆ ಜೀವನದಲ್ಲಿ ನೆಮ್ಮದಿ ಎಂಬುದೇ ಇಲ್ಲ. ಕೆಲವೊಮ್ಮೆ ಬಿಸ್ನೆನ್ ಕಿರಿಕಿರಿ, ಕೆಲವೊಮ್ಮೆ ಫ್ಯಾಮಿಲಿ ಪ್ರಾಬ್ಲಂ, ಕೆಲವೊಮ್ಮೆ ಆರೋಗ್ಯದ್ದು, ಇನ್ನು ಕೆಲವೊಮ್ಮೆ ವಿರೋಧಿಗಳು. ಒಟ್ಟಿನಲ್ಲಿ ಸಂತೋಷವೇ ಇಲ್ಲ. ಇದೆಲ್ಲ ಕೊನೆಯಾಗಿ ಯಾವಾಗ ನೆಮ್ಮದಿ ಸಿಗಬಹುದು ಹೇಳಿ..

ಸಂತರು ನಗುತ್ತಾ ಹೇಳಿದರು: ಮಗಾ, ಇವತ್ತು ಕತ್ತಲಾಗುತ್ತಾ ಬಂತು. ನಿನ್ನ ಸಮಸ್ಯೆಗೆ ನಾಳೆ ಉತ್ತರಿಸುತ್ತೇನೆ. ನನಗೊಂದು ಸಹಾಯ ಮಾಡ್ತೀಯಾ? ಎಂದು ಕೇಳಿದರು. ವಿಶ್ವನಾಥ ಒಪ್ಪಿಕೊಂಡ.

ʻʻನೋಡು ನಮ್ಮಲ್ಲಿ ಒಂದು ನೂರು ಒಂಟೆಗಳಿವೆ. ಅದನ್ನು ನೋಡಿಕೊಳ್ಳುವ ವ್ಯಕ್ತಿಗೆ ಇವತ್ತು ಅನಾರೋಗ್ಯ. ಒಂದು ಕೆಲಸ ಮಾಡು. ಈ ಎಲ್ಲ ಒಂಟೆಗಳನ್ನು ಮಲಗಿಸಿ ನೀನು ನಿದ್ದೆ ಮಾಡು.” ಎಂದು ಹೇಳಿ ಹೊರಟುಹೋದರು.

ಮರುದಿನ ಮುಂಜಾನೆ ಸಂತರು ಮತ್ತೆ ಬಂದರು. ವಿಶ್ವನಾಥನೇ ಮೊದಲಿಗ. ʻಮಗಾ.. ನಿನ್ನೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದೆಯಾ” ಅಂತ ಕೇಳಿದರು.

ವಿಶ್ವನಾಥ ಹೇಳಿದ: ʻಏನು ನಿದ್ದೆ ಸ್ವಾಮೀಜಿ, ನಂಗೆ ಒಂದು ಕ್ಷಣವೂ ಕಣ್ಣುಮುಚ್ಚಲು ಆಗಲಿಲ್ಲ. ಎಲ್ಲ ಒಂಟೆಗಳನ್ನು ಮಲಗಿಸಲು ನಂಗೆ ಸಾಧ್ಯವಾಗಲೇ ಇಲ್ಲ. ಒಂದು ಮಲಗಿದರೆ ಇನ್ನೊಂದು ಏಳುತ್ತಿತ್ತು. ಕೆಲವು ಮಲಗಲಿಕ್ಕೇ ಕೇಳುತ್ತಿರಲಿಲ್ಲʼ- ಎಂದ.

ಸ್ವಾಮೀಜಿ ಸಾವಧಾನದಿಂದ ಉತ್ತರಿಸಿದರು: ಅದು ಹಾಗೆನೇ ವಿಶ್ವನಾಥ.. ನಿನ್ನ ಸಮಸ್ಯೆಗಳ ಹಾಗೆನೇ ಒಂಟೆಗಳ ಕಥೆ ಕೂಡಾ. ಒಂದು ಮುಗಿದಾಗ ಇನ್ನೊಂದು ಬರುತ್ತದೆ. ಕೆಲವೊಮ್ಮೆ ಏಕಕಾಲದಲ್ಲಿ ಹತ್ತಾರು ಸಮಸ್ಯೆಗಳು ಎದ್ದು ನಿಲ್ಲುತ್ತವೆ ಅಲ್ವಾ?- ಅಂದರು.

ಹೌದು ಎಂದ ವಿಶ್ವನಾಥ, ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಪ್ರಶ್ನಿಸಿದ.

ಸಂತರು ಹೇಳಿದರು: ಖಂಡಿತಾ ಇದೆ ಮಗಾ.. ಏನೆಲ್ಲ ಸಮಸ್ಯೆಗಳಿದ್ದರೂ ಅವುಗಳ ನಡುವೆಯೇ ಬದುಕನ್ನು ಆನಂದಿಸಲು ನಾವು ಕಲಿಯಬೇಕು. ನೀನೇ ಗಮನಿಸಿದೆಯಲ್ಲ.. ನಿನ್ನೆ ಕೆಲವೊಂದು ಒಂಟೆಗಳು ನೀನು ಎಷ್ಟೇ ಪ್ರಯತ್ನಿಸಿದರೂ ಮಲಗಲು ಕೇಳಲಿಲ್ಲ. ಅವುಗಳನ್ನು ಈಗ ಹೋಗಿ ನೋಡು, ಚಂದ ನಿದ್ದೆ ಮಾಡ್ತಾ ಇರ್ತವೆ. ಸಮಸ್ಯೆಗಳೂ ಹಾಗೆನೇ. ಕೆಲವೊಂದು ಸಮಸ್ಯೆಗಳನ್ನು ನಾವು ಸ್ವಲ್ಪ ಪ್ರಯತ್ನಪಟ್ಟರೆ ಪರಿಹರಿಸಿಕೊಳ್ಳಬಹುದು. ಆದರೆ ಕೆಲವೊಂದು ಎಷ್ಟು ಪ್ರಯತ್ನಿಸಿದರೂ ಆಗುವುದಿಲ್ಲ ಅದಕ್ಕೆ ಕಾಲವೇ ಉತ್ತರ ಹೇಳುತ್ತದೆ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಬೇಕು. ಸುಮ್ಮನೆ ಅದರ ಬಗ್ಗೆಯೇ ಯೋಚಿಸುತ್ತಾ ನಿದ್ದೆಗೆಡಬಾರದು, ನೆಮ್ಮದಿ ಹಾಳು ಮಾಡಿಕೊಳ್ಳಬಾರದು.

ಇದನ್ನೂ ಓದಿ | Motivational story |ನಿಮ್ಮ ಸಾಧನೆಗೆ ಅಡ್ಡಿಯಾಗಿದ್ದ ಆ ವ್ಯಕ್ತಿ ಅಲ್ಲಿ ಹೆಣವಾಗಿ ಮಲಗಿದ್ದಾನೆ ನೋಡಿ!

Exit mobile version