ಕೃಷ್ಣ ಭಟ್ ಅಳದಂಗಡಿ – motivational story
ದೇವರ ಲೋಕದಲ್ಲಿ ಆವತ್ತು ಒಂದಿಷ್ಟು ಸಡಗರ, ಒಂದಿಷ್ಟು ಬೇಸರ. ದೇವರು ಪುಟ್ಟ ಮಗುವೊಂದನ್ನು ಭೂಮಿಗೆ ಕಳುಹಿಸಿಕೊಡಲು ಸಿದ್ಧತೆ ನಡೆಸುತ್ತಿದ್ದರು.
ಮಗು ಕೇಳಿತು: ದೇವರೇ, ನಾನು ಇಷ್ಟು ಸಣ್ಣ ಇದ್ದೇನೆ, ನಾನಾಗಿ ಏನೂ ಮಾಡಲು ಸಾಧ್ಯವಿಲ್ಲ. ಈ ಸ್ಥಿತಿಯಲ್ಲಿ ನಾನು ಅಲ್ಲಿ ಹೋಗಿ ಬದುಕುವುದಾದರೂ ಹೇಗೆ?
ದೇವರು ನಗುತ್ತಾ ಹೇಳಿದರು: ಡೋಂಟ್ ವರಿ ಮಗು, ನಾನು ಈಗಾಗಲೇ ಒಬ್ಬ ದೇವತೆಯನ್ನು ನಿನಗಾಗಿಯೇ ಅಲ್ಲಿಗೆ ಕಳುಹಿಸಿಕೊಟ್ಟಿದ್ದೇನೆ. ಅವಳು ನಿನಗಾಗಿ ಕಾತರದಿಂದ ಕಾಯುತ್ತಿದ್ದಾಳೆ, ನಿನ್ನ ಎಲ್ಲ ಯೋಗ ಕ್ಷೇಮ ಅವಳೇ ನೋಡಿಕೊಳ್ತಾಳೆ.
ಮಗು: ಇಲ್ಲಿ ದೇವರ ಲೋಕದಲ್ಲಿ ಏನೂ ಮಾಡಬೇಕಾಗಿರಲಿಲ್ಲ. ಹಾಡುತ್ತಾ, ಕುಣಿಯುತ್ತಾ, ನಗುತ್ತಾ ಖುಷಿಯಾಗಿ ಇದ್ದೆ. ಅಲ್ಲಿಗೆ ಹೋದರೆ ನನಗೆ ಹಾಡಲು ಆಗುತ್ತಾ?
ದೇವರು: ಹೋದ ಕೂಡಲೇ ನೀನೇನೂ ಹಾಡಬೇಕಾಗಿಲ್ಲ. ನಾನು ಕಳುಹಿಸಿರುವ ದೇವತೆಯೇ ನಿನಗಾಗಿ ಹಾಡುತ್ತಾಳೆ. ನೀನು ಅದನ್ನು ಕೇಳುತ್ತಾ ನಗುತ್ತಾ, ಒಳಗೊಳಗೆ ಕುಣಿಯುತ್ತಾ ಖುಷಿಯಾಗಿರುವಿಯಂತೆ.
ಮಗು: ಅಲ್ಲಿ ಹೋದಾಗ ಜನ ನನ್ನನ್ನು ಮಾತನಾಡಿಸಬಹುದು. ಅವರು ಮಾತನಾಡಿದ್ದು ನಂಗೆ ಅರ್ಥ ಆಗೋದು ಹೇಗೆ? ಅವರ ಭಾಷೆ ನಂಗೆ ಬರುತ್ತಾ?
ದೇವರು: ಅದರ ಬಗ್ಗೆ ಯೋಚನೆನೆ ಮಾಡಬೇಡ. ಆ ದೇವತೆ ಇದ್ದಾಳಲ್ಲಾ.. ಅವಳು ನಿನಗಾಗಿ ಅತ್ಯಂತ ಸುಂದರವಾದ, ಮಧುರವಾದ ಪದಗಳನ್ನು ಹೆಕ್ಕಿ ಹೆಕ್ಕಿ ಹೇಳಲಿದ್ದಾಳೆ. ಅತ್ಯಂತ ಪ್ರೀತಿಯಿಂದ, ಹಿತವಾಗಿ, ತಾಳ್ಮೆಯಿಂದ ಹೇಗೆ ಮಾತನಾಡಬೇಕು ಅಂತ ಕಲಿಸಿಕೊಡಲಿದ್ದಾಳೆ.
ಮಗು ದೇವರತ್ತ ನೋಡಿ ಅತ್ಯಂತ ಬೇಸರದಿಂದ ಹೇಳಿತು: ಇದೆಲ್ಲ ಸರಿ, ಈಗ ನಿನ್ನನ್ನು ಬಿಟ್ಟು ಹೋಗ್ತೇನೆ. ಅಲ್ಲಿಗೆ ಹೋದ ಮೇಲೆ ನಾನು ನಿನ್ನ ಹತ್ರ ಮಾತನಾಡೋದು ಹೇಗೆ?
ದೇವರು ಮಗುವಿನ ಮುಖವನ್ನೇ ನೋಡುತ್ತಾ ನಗುತ್ತಾ ಹೇಳಿದರು: ಓ ಅದಾ.. ಅದಕ್ಕೂ ಡೋಂಟ್ ವರಿ ಮಗು, ಅವಳು ನಿನಗೆ ಪುಟ್ಟ ಭಾಷೆಯಲ್ಲಿ ಪ್ರಾರ್ಥನೆ ಮಾಡುವುದನ್ನು ಕಲಿಸಿ ಕೊಡ್ತಾಳೆ. ನೀನು ಯಾವಾಗ ಬೇಕೆಂದರೂ ನನ್ನ ಜತೆ ಮಾತನಾಡಬಹುದು.
ಮಗು ಭಯದಿಂದ ಕೇಳಿತು: ಅಲ್ಲ ದೇವರೇ, ನಾನೀಗ ಹೋಗಬೇಕಾಗಿರುವ ಜಾಗದಲ್ಲಿ ಕೆಟ್ಟವರೂ ಇದ್ದಾರಂತೆ. ಇಷ್ಟು ಸಣ್ಣ ಸಣ್ಣ ಇರುವ ನಾನು ಅವರ ಮಧ್ಯೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ದೇವರು ಹೇಳಿದರು: ಕಂದಾ, ಏನೇ ಕಷ್ಟ ಬಂದರೂ, ಯಾವುದೇ ಅಪಾಯ ಎದುರಾದರೂ ನಿನ್ನ ರಕ್ಷಣೆಗೆ ಅವಳಿದ್ದಾಳೆ ಮಗು. ಒಂದು ವೇಳೆ ತಾನೇ ಅಪಾಯಕ್ಕೆ ಸಿಲುಕಿದರೂ ಅದನ್ನು ಲೆಕ್ಕಿಸದೆ ನಿನ್ನ ರಕ್ಷಣೆಗೆ ಬರುತ್ತಾಳೆ. ಜಗತ್ತೇ ತಿರುಗಿಬಿದ್ದರೂ ಅವಳೊಬ್ಬಳು ನಿನ್ನ ಬೆನ್ನಿಗೆ ನಿಲ್ಲುತ್ತಾಳೆ.. ಯಾವ ಭಯವೂ ಬೇಡ ಕಂದಾ..
ಮಗು ಭೂಮಿಗಿಳಿಯುವ ಮುಹೂರ್ತಕ್ಕೆ ಕೌಂಟ್ ಡೌನ್ ಶುರುವಾಯಿತು. ದೇವರ ಲೋಕದಲ್ಲಿ ಮೌನ. ಭೂಮಿಯಲ್ಲಿ ಒಂದಿಷ್ಟು ಸದ್ದು.
ಮಗು ಕೇಳಿತು: ಕೊನೆಯದಾಗಿ ಒಂದು ಪ್ರಶ್ನೆ ದೇವರೇ.. ನನಗಾಗಿ, ನನ್ನ ರಕ್ಷಣೆಗಾಗಿ ಅಲ್ಲಿಗೆ ಕಳುಹಿಸಿಕೊಟ್ಟಿರುವ ಆ ದೇವತೆಯ ಹೆಸರೇನೆಂದು ಕೇಳಬಹುದಾ?
ದೇವರು ಹೇಳಿದರು: ಆ ದೇವತೆಯ ಹೆಸರು ಏನು ಎನ್ನುವುದು ಮುಖ್ಯವಲ್ಲ ಮಗು.. ಸುಮ್ಮನೆ ಹಾಗೇ ಕರೆದು ಬಿಡು: ಅಮ್ಮಾ!
ಇದನ್ನೂ ಓದಿ| Motivational story | ದೇವರ ಮುಂದೆ ಕುಳಿತ ಕಂದನ ಪ್ರಾರ್ಥನೆಯಲ್ಲಿ ದೇವರೇ ಬಂದಿದ್ದ!