ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ ಒಂದು ಕಚೇರಿಯಲ್ಲಿ ಅಕೌಂಟೆಂಟ್. ಅವನ ಹೆಂಡತಿ ಗೃಹಿಣಿ. ಬುದ್ಧಿವಂತೆಯಾಗಿದ್ದ ಆಕೆ ನಿಧಾನಕ್ಕೆ ಖಿನ್ನತೆಗೆ ಜಾರತೊಡಗಿದ್ದಳು. ಯಾಕೆ ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ.
ಅದೊಂದು ದಿನ ವಿಶ್ವನಾಥ ಎಲ್ಲರ ಒತ್ತಾಯದ ಮೇರೆಗೆ ಮನಶಾಸ್ತ್ರಜ್ಞರ ಬಳಿ ಆಕೆಯನ್ನು ಕರೆದೊಯ್ದ. ʻನನ್ನ ಹೆಂಡತಿ ಕೆಲವು ಸಮಯದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ನಿಜವೆಂದರೆ ಆಕೆಗೆ ಯಾವುದೇ ಸಮಸ್ಯೆಗಳಿಲ್ಲ. ಮನೆಯಲ್ಲಿ ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಇತ್ಯಾದಿ ಬಿಟ್ಟರೆ ಬೇರೇನೂ ಕೆಲಸಗಳಿಲ್ಲ’ ಎಂದು ವಿವರಿಸಿದ. ಹೇಗಾದರೂ ಸರಿ ಮಾಡಿ ಡಾಕ್ಟ್ರೇ ಎಂದು ಮನವಿ ಮಾಡಿದ.
ʻಸರಿ ಪರೀಕ್ಷೆ ಮಾಡೋಣ. ಅವರು ಮನೆಯಲ್ಲಿ ಹೇಗಿರುತ್ತಾರೆ ಎನ್ನುವುದರ ಬಗ್ಗೆ ನೀವು ಮೊದಲು ವಿವರ ಕೊಡಿ. ಆಮೇಲೆ ಅವರನ್ನು ಮಾತನಾಡಿಸೋಣ’ ಎಂದರು ಡಾಕ್ಟರ್.
ಡಾಕ್ಟರ್: ವಿಶ್ವನಾಥ್ ನೀವು ಏನು ಕೆಲಸ ಮಾಡ್ತಾ ಇದ್ದೀರಿ..?
ವಿಶ್ವನಾಥ್: ನಾನು ಬ್ಯಾಂಕ್‍ನಲ್ಲಿ ಅಕೌಂಟೆಂಟ್.
ಡಾಕ್ಟರ್: ನಿಮ್ಮ ಹೆಂಡತಿ?
ವಿಶ್ವನಾಥ್: ಅವಳು ಕೆಲಸಕ್ಕೆ ಹೋಗೊಲ್ಲ. ಮನೆ ವಾರ್ತೆ ಅಷ್ಟೆ.
ಡಾಕ್ಟರ್: ನಿಮ್ಮ ಮನೆಯಲ್ಲಿ ಬೆಳಗ್ಗಿನ ತಿಂಡಿ ಮಾಡೋದ್ಯಾರು?
ವಿಶ್ವನಾಥ್: ಹೆಂಡತಿ ಮಾಡ್ತಾಳೆ.. ಅವಳು ಕೆಲಸಕ್ಕೇನೂ ಹೋಗೊಲ್ಲ.
ಡಾಕ್ಟರ್: ಮಕ್ಕಳನ್ನು ಶಾಲೆಗೆ ಹೊರಡಿಸೋದು ಯಾರು?
ವಿಶ್ವನಾಥ್: ಹೆಂಡತಿ ಸರ್ ಅವಳು ಕೆಲಸಕ್ಕೆ ಹೋಗೊಲ್ಲವಲ್ಲ.
ಡಾಕ್ಟರ್: ಅವನು ಬೆಳಗ್ಗೆ ಎಷ್ಟು ಹೊತ್ತಿಗೆ ಏಳ್ತಾರೆ?
ವಿಶ್ವನಾಥ್: ಬೆಳಗ್ಗೆ ಐದು ಗಂಟೆಗೆ ಏಳ್ತಾಳೆ ಡಾಕ್ಟರ್.. ಆದರೂ ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ತಿಂಡಿ ರೆಡಿ ಆಗೊಲ್ಲ.
ಡಾಕ್ಟರ್: ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರೇನು ಮಾಡ್ತಾರೆ ವಿಶ್ವನಾಥ್?
ವಿಶ್ವನಾಥ್: ಮಾರ್ಕೆಟ್‍ಗೆ ಹೋಗ್ತಾಳೆ. ಅಗತ್ಯವಿರುವ ದಿನಸಿ, ತರಕಾರಿ ತರ್ತಾಳೆ. ಅಡುಗೆ ಮಾಡ್ತಾಳೆ. ಬಟ್ಟೆ ಒಗೆಯೋದು, ಇಸ್ತ್ರಿ ಹಾಕೋದೆಲ್ಲ ಇರ್ತದೆ. ಬೇರೇನೂ ಕೆಲಸ ಇಲ್ವಲ್ಲ ಅವಳಿಗೆ.
ಡಾಕ್ಟರ್: ನೀವು ಸಂಜೆ ಎಷ್ಟು ಹೊತ್ತಿಗೆ ಆಫೀಸಿಂದ ಬರ್ತೀರಿ?
ವಿಶ್ವನಾಥ್: ಆರು ಗಂಟೆಗೆ ಸರ್
ಡಾಕ್ಟರ್: ಅಷ್ಟು ಹೊತ್ತಿಗೆ ನಿಮ್ಮ ಪತ್ನಿ ಏನು ಮಾಡ್ತಾ ಇರ್ತಾರೆ?
ವಿಶ್ವನಾಥ್: ಮಕ್ಕಳನ್ನು ಹೋಮ್ ವರ್ಕ್ ಮಾಡಿಸ್ತಾ ಇರ್ತಾಳೆ. ಸಂಜೆ ಭಜನೆ, ರಾತ್ರಿ ಊಟದ ಸಿದ್ಧತೆ, ಮರುದಿನ ಬೆಳಗ್ಗೆಗೆ ರೆಡಿ ಮಾಡೋದು, ಮಕ್ಕಳಿಗೆ ಮರುದಿನದ ಬುಕ್ಸ್ ರೆಡಿ ಮಾಡೋದು.. ಸಣ್ಣಪುಟ್ಟದೆಲ್ಲ ಇರ್ತದೆ ಸರ್.
ಡಾಕ್ಟರ್: ನೀವು ಮನೆಯಲ್ಲಿ ಏನೇನು ಕೆಲಸ ಮಾಡ್ತೀರಿ ವಿಶ್ವನಾಥ್?
ವಿಶ್ವನಾಥ್: ನಾನು ಆಫೀಸಿಗೆ ಹೋಗ್ತೀನಲ್ಲ ಸರ್.. ಮನೆಯಲ್ಲಿ ಏನೂ ಮಾಡಲ್ಲ ಸರ್.
ಡಾಕ್ಟರ್: ಇಷ್ಟೆಲ್ಲ ಮಾಡಿದ ಮೇಲೆ ಈಗ ಹೇಳಿ.. ಒಟ್ಟಾರೆಯಾಗಿ ನಿಮ್ಮಲ್ಲಿ ಯಾರು ಹೆಚ್ಚು ಕೆಲಸ ಮಾಡ್ತಾರೆ ಅನಿಸುತ್ತದೆ ನಿಮಗೆ?
ವಿಶ್ವನಾಥ್ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: ನನ್ನ ಹೆಂಡ್ತಿ ಡಾಕ್ಟರ್.
ಡಾಕ್ಟರ್ ಹೇಳಿದರು: ವಿಶ್ವನಾಥ್ ನೀವು ಪದೇಪದೆ ನಿಮ್ಮ ಹೆಂಡತಿಗೆ ಏನೂ ಕೆಲಸವಿಲ್ಲ. ಆಕೆ ಮನೆಯಲ್ಲಿ ಬಿದ್ದಿರ್ತಾಳೆ, ವೇಸ್ಟ್ ಬಾಡಿ ಅನ್ನೋ ತರ ಹೇಳ್ತಾ ಇದೀರಿ.. ನಿಮ್ಮ ಮಾತಿನಲ್ಲಿ ಅವಳಿಗೆ ಉದ್ಯೋಗವಿಲ್ಲ ಎನ್ನುವುದು ಕೇಳಿಬರ್ತಾ ಇತ್ತು. ಬಹುಶಃ ನೀವು ಇದೇ ಮಾತನ್ನು ತುಂಬ ಜನರ ಮುಂದೆ ಹೇಳುತ್ತಿದ್ದೀರಿ ಅನಿಸ್ತದೆ… ಅಲ್ವಾ?
ವಿಶ್ವನಾಥ್: ಹೌದು ಸರ್.. ನಾನು ಮಾತ್ರ ಕೆಲಸ ಮಾಡೋದು, ದುಡಿಯೋದು. ಅವಳಿಗೆ ಯಾವುದೇ ಕೆಲಸವಿಲ್ಲ ಅಂತ ನನಗೆ ಅನಿಸ್ತಾ ಇತ್ತು. ಇವತ್ತು ನೀವು ಕೇಳಿದಾಗಲೇ ಅವಳಿಗೆ ಇಷ್ಟೊಂದು ಕೆಲಸವಿದೆ ಅನ್ನೋದು ಗೊತ್ತಾಗಿದ್ದು.
ಡಾಕ್ಟರ್: ಓಕೆ ಓಕೆ ಪರ್ವಾಗಿಲ್ಲ. ನೀವು ಅಂತ ಅಲ್ಲ. ತುಂಬ ಜನರಿಗೆ ಇಂಥ ಅಭ್ಯಾಸ ಇರ್ತದೆ. ನೋ ಪ್ರಾಬ್ಲೆಂ.. ಈಗ ಗೊತ್ತಾಯ್ತಲ್ಲ ಸಾಕು. ಇನ್ನು ಹೊರಡಿ ಎಲ್ಲ ಸರಿ ಆಗ್ತದೆ.
ವಿಶ್ವನಾಥ್: ಡಾಕ್ಟ್ರೇ.. ಅವಳ ಖಿನ್ನತೆಗೆ ನೀವು ಯಾವ ಮದ್ದೂ ಕೊಟ್ಟಿಲ್ಲ.
ಡಾಕ್ಟರ್: ಅವರಿಗ್ಯಾಕೆ ಮದ್ದು.. ಶೀ ಈಸ್ ಆಲ್‍ರೈಟ್. ನೀವು ಆಗಾಗ ನೀವೇ ಹೇಳಿದ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ.. ಅವರು ಸರಿ ಹೋಗ್ತಾರೆ.
ವಿಶ್ವನಾಥ ಹೆಂಡತಿಯ ಕೈಹಿಡಿದುಕೊಂಡು ಹೊರಬಂದ.. ಏನಾಯಿತೋ ಏನೋ ಹಾಗೇ ಮೆತ್ತಗೆ ಗಟ್ಟಿಯಾಗಿ ಹಿಡಿದುಕೊಂಡ. ಆಕೆ ನಡೆಯುತ್ತಲೇ ಭುಜವನ್ನು ಅವನ ಕೈಗಳಿಗಾನಿಸಿದಳು.
ಇದನ್ನೂ ಓದಿ| Motivational story | ಅಪ್ಪಾ… ಒಂದು ಮುತ್ತು ಕೊಡದೆ ಹೋದೆ ಯಾಕಪ್ಪ?