Site icon Vistara News

Motivational story | ಹಸಿರು ಹುಲ್ಲನ್ನು ನೀಲಿ ಎಂದ ಕತ್ತೆಯೇ ಸರಿ ಎಂದು ಹುಲಿಗೆ ಶಿಕ್ಷೆ ಕೊಟ್ಟಿದ್ಯಾಕೆ?

donkey

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ಕಾಡು. ಒಂದು ಸಲ ಒಂದು ಕತ್ತೆ ದೂರದಲ್ಲಿ ಹೋಗುತ್ತಿದ್ದ ಹುಲಿಯನ್ನು ಕರೆದು ಹೇಳಿತು: ನೋಡು ಈ ಹುಲ್ಲು ನೀಲಿಯಾಗಿದೆ.
ಹುಲಿ ಅದನ್ನು ಅಲ್ಲಗಳೆಯಿತು. ʻಇಲ್ಲ ಮಾರಾಯ ಅದು ಹಸಿರು ಹುಲ್ಲು. ಎಲ್ಲಾದ್ರೂ ನೀಲಿ ಹುಲ್ಲು ಇರುವುದುಂಟಾ?ʼ ಎಂದಿತು. ಆದರೆ ಏನೇ ಹೇಳಿದರೂ ಕತ್ತೆ ಒಪ್ಪಲಿಲ್ಲ.

ತಾನು ಬಗೆ ಬಗೆಯಾಗಿ ಹೇಳಿದರೂ ಒಪ್ಪದೆ ಇದ್ದಾಗ ಹುಲಿಗೆ ಒಮ್ಮೆ ಕತ್ತೆಯನ್ನು ಹಿಡಿದು ತಿಂದು ಬಿಡುವಷ್ಟು ಸಿಟ್ಟುಬಂತು. ಆದರೆ ಆಗಷ್ಟೇ ಹೊಟ್ಟೆ ತುಂಬಿತ್ತಾದ್ದರಿಂದ ಸುಮ್ಮನೆ ಉಳಿಯಿತು. ಆದರೂ ತುಂಬ ಹಠ ಮಾಡ್ತಾ ಇರುವ ಕತ್ತೆಗೆ ಒಂದು ಪಾಠ ಕಲಿಸಬೇಕೆಂದು ಕಾಡಿನ ರಾಜನಾದ ಸಿಂಹದ ಬಳಿಗೆ ದೂರನ್ನು ಒಯ್ದಿತು.

ಯಾವ ಜಾಗದಲ್ಲಿ ಕತ್ತೆ ನೀಲಿ ಹುಲ್ಲಿದೆ ಎಂದು ಹೇಳಿತ್ತೋ ಅದೇ ಜಾಗದಲ್ಲಿ ನ್ಯಾಯ‌ಪಂಚಾಯಿತಿ ವ್ಯವಸ್ಥೆ ಆಗಿತ್ತು.
ಕತ್ತೆ ಜೋರಾಗಿ ಕಿರುಚುತ್ತಲೇ ತನ್ನ ವಾದವನ್ನು ಮುಂದಿಟ್ಟಿತು.

ʻನೋಡಿ ಸಿಂಹ ರಾಯರೇ. ಅಲ್ಲಿ ಕಾಣುತ್ತಿರುವ ಹುಲ್ಲು ನೀಲಿ ಎಂದು ಹೇಳಿದರೆ ಈ ಹುಲಿ ಅಲ್ಲ ಎನ್ನುತ್ತದೆ. ಮೊಂಡು ಹಠ ಮಾಡ್ತದೆ. ನೀವಾದರೂ ಹೇಳಿ.. ಹುಲ್ಲಿನ ಬಣ್ಣ ನೀಲಿ ಅಲ್ಲವೇʼ ಎಂದು ಕೇಳಿತು.

ಸಿಂಹ ಹುಲಿಯ ವಾದವನ್ನು ಕೇಳಲೂ ಹೋಗದೆ ʻಹೌದು.. ನಿನ್ನ ಜತೆಗೆ ಇಷ್ಟೊಂದು ವಾದ ಮಾಡಿದ ಹುಲಿಗೆ ಐದು ವರ್ಷ ಮೌನ ವೃತದ ಶಿಕ್ಷೆಯನ್ನು ವಿಧಿಸಿದ್ದೇನೆʼ ಎಂದಿತು.

ಕತ್ತೆ ಇನ್ನಷ್ಟು ಜೋರಾಗಿ ಕಿರುಚುತ್ತಾ ʻನೋಡಿ ಸಿಂಹ ರಾಜರೂ ನನ್ನ ವಾದವನ್ನು ಒಪ್ಪಿದರು. ಹುಲಿಗೆ ತಕ್ಕ ಶಿಕ್ಷೆ ವಿಧಿಸಿದರುʼ ಎಂದು ಕುಣಿದಾಡಿತು.

ಎಲ್ಲರೂ ಹೊರಟು ಹೋದ ಬಳಿಕ ಹುಲಿ ಸಿಂಹ ಬಳಿ ಹೋಗಿ ಕೇಳಿತು. ʻನಿಮ್ಮ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತೇನೆ. ಆದರೂ ಒಂದು ಪ್ರಶ್ನೆ ನನ್ನದು. ಅಲ್ಲಿರುವುದು ಹಸಿರು ಹುಲ್ಲು ಅಂತ ನಿಮಗೂ ಕಾಣಿಸಿರಬೇಕು. ಆದರೆ ನ್ಯಾಯ ತೀರ್ಮಾನ ಮಾಡಬೇಕಾದ ನೀವೇ ನನ್ನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಶಿಕ್ಷೆ ಕೊಟ್ಟಿದ್ದೀರಿ. ಕತ್ತೆಯ ಸುಳ್ಳಿಗೇ ಮಾನ್ಯತೆ ಕೊಟ್ಟಿರಿ. ಯಾಕೆ ಹೀಗೆʼ ಎಂದು ಕೇಳಿತು.

ಆಗ ಸಿಂಹ ಹೇಳಿತು: ಹೌದು, ಹುಲ್ಲು ಹಸಿರಾಗಿಯೇ ಇದೆ. ಆದರೂ ಯಾಕೆ ಶಿಕ್ಷೆ ಕೊಟ್ಟೆ ಅನ್ನುವುದು ನಿನ್ನ ಪ್ರಶ್ನೆಯಲ್ಲವೇ? ನಿಜವೆಂದರೆ ಇಲ್ಲಿ ಹುಲ್ಲು ಹಸಿರೋ ನೀಲಿಯೋ ಅನ್ನುವುದು ವಿಷಯವೇ ಅಲ್ಲ. ನಿನ್ನಂಥ ಬಲಿಷ್ಠ, ಬುದ್ಧಿವಂತ ಶಕ್ತಿಶಾಲಿ ಪ್ರಾಣಿ ಅಂಥ ಪರಮಮೂರ್ಖ ಕತ್ತೆಯ ಜತೆ ವಾದಕ್ಕಿಳಿದೆಯಲ್ಲ.. ಅದು ತಪ್ಪು ಎನ್ನುವುದು ನನ್ನ ತೀರ್ಪಿನ ಮುಖ್ಯಾಂಶ. ಅದಕ್ಕಿಂತಲೂ ಹೆಚ್ಚಾಗಿ ಈ ವಾದ ಹಿಡಿದುಕೊಂಡು ನನ್ನಲ್ಲಿಗೆ ಬರುವಷ್ಟು ತಾಳ್ಮೆ ವಹಿಸಿದ್ದು ಕೂಡಾ ನಿನ್ನದೇ ತಪ್ಪು- ಎಂದಿತು.

ಸಿಂಹ ಮುಂದುವರಿಸಿತು: ಶತಮೂರ್ಖರು ಮತ್ತು ಗೊತ್ತಿದ್ದೂ ತಮ್ಮ ಕುದುರೆಗೆ ಮೂರೇ ಕಾಲು ಎಂದು ವಾದಿಸುವವರು, ಸತ್ಯ ಕಣ್ಣೆದುರಿಗೇ ಇದ್ದರೂ ಬೇರೆ ಬೇರೆ ಕಾರಣ ಕೊಟ್ಟು ಅದು ಹಾಗಲ್ಲ ಎಂದು ಮೊಂಡು ವಾದ ಮಾಡುವವರ ಜತೆ ವಾದ ಮಾಡಿ ಸಮಯ ಹಾಳು ಮಾಡಿಕೊಳ್ಳುವುದು ಬುದ್ಧಿವಂತರಿಗೆ ಶೋಭೆಯಲ್ಲ. ಅವರು ನೀವೆಷ್ಟೇ ಹೇಳಿದರೂ ಸತ್ಯವನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಾಗಿ ಯಾಕೆ ಸಮಯ ವ್ಯರ್ಥ ಮಾಡಬೇಕು? ಬುದ್ಧಿವಂತರಿಗೆ, ಬಲಶಾಲಿಗಳಿಗೆ ಜಗತ್ತಿನಲ್ಲಿ ನಾನಾ ಕೆಲಸಗಳು ಇರ್ತವೆ. ಇವರೆಲ್ಲ ಮೊಂಡುವಾದದ ಮೂಲಕ ತಮ್ಮ ಸಮಯ ಹಾಳು ಮಾಡುವುದರ ಜತೆಗೆ ನಿಮ್ಮ ಸಮಯ ಕೂಡಾ ಹಾಳು ಮಾಡ್ತಾರೆ. ಹಾಗೆ ಮಾಡಬಾರದು ಅಂತಲೇ ನಿನಗೆ ಶಿಕ್ಷೆ ಕೊಟ್ಟೆ- ಎಂದಿತು.

ಇದನ್ನೂ ಓದಿ| Motivational story | ಒಂದು ಹುಳಿಯಾದ ಕಿತ್ತಳೆ ಹಣ್ಣು ಮತ್ತು ಅವರಿಬ್ಬರ ಸಿಹಿಯಾದ ಪ್ರೀತಿ!

Exit mobile version