Site icon Vistara News

Motivational story | ಸಾಧುವಿನ ಬಳಿಗೆ ಹೋದ ಯುವ ರಾಜಕಾರಣಿ ಬಾಯಿಗೆ ಬಂದಂತೆ ಬೈದ: ಪ್ರತಿಯಾಗಿ ಸಾಧು ಮಾಡಿದ್ದೇನು?

buddha motivational story

ಕೃಷ್ಣ ಭಟ್‌ ಅಳದಂಗಡಿ- Motivational story
ಒಂದು ಬಾರಿ ಒಬ್ಬ ದೊಡ್ಡ ರಾಜಕೀಯ ನಾಯಕ ಒಬ್ಬ ಸಾಧುವಿನ ಸಣ್ಣ ಆಶ್ರಮಕ್ಕೆ ಹೋದ. ಆ ಸಾಧುವಿನ ಬಗ್ಗೆ ಅವನಿಗೆ ತುಂಬಾ ಜನ ಹೇಳಿದ್ದರು. ಹಾಗಿರುವಾಗ ತಾನೂ ಒಂದು ಸಾರಿ ಹೋಗಿ ಬಂದರೆ ಹೇಗೆ ಎಂದು ಅನಿಸಿ ಅವನು ಅಲ್ಲಿಗೆ ಹೋಗಿದ್ದ. ತನಗೂ ಅವರಿಂದ ಏನಾದರೂ ಒಳ್ಳೆಯದು ಆದೀತು ಎನ್ನುವ ಆಲೋಚನೆ ಅವನಿಗಿತ್ತು.

ಅವನು ಆಶ್ರಮಕ್ಕೆ ಹೋದ. ಆಶ್ರಮವೆಂದರೆ ದೊಡ್ಡದೇನಲ್ಲ. ಸಣ್ಣದೊಂದು ಕುಟೀರದಂಥ ಮನೆ. ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಸಾಧು ಕುಳಿತಿದ್ದರು. ಅವರ ಮುಂದೆ ಒಂದಷ್ಟು ಜನರು. ಅಲ್ಲಿ ಸ್ವಾಮೀಜಿ ಭಕ್ತರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಅಂದ ಹಾಗೆ ರಾಜಕೀಯ ನಾಯಕ ಒಬ್ಬನೇ ಹೋಗಿರಲಿಲ್ಲ. ನಾಲ್ಕು ಮಂದಿ ಬಾಡಿ ಗಾರ್ಡ್‌ಗಳು ಕೂಡಾ ಇದ್ದರು.

ಇವರನ್ನೆಲ್ಲ ಕಟ್ಟಿಕೊಂಡು ರಾಜಕೀಯ ನಾಯಕ ಸಾಧುವಿನ ಕೋಣೆಯನ್ನು ಪ್ರವೇಶ ಮಾಡಿದ. ಸಾಧು ಇವರನ್ನು ಗಮನಿಸಿದರೂ ಗಮನಿಸದಂತೆ ಪ್ರಶ್ನೋತ್ತರ ಕಲಾಪ ಮುಂದುವರಿಸಿದರು. ಸಾಮಾನ್ಯವಾಗಿ ರಾಜಕೀಯ ನಾಯಕ ಎಲ್ಲೇ ಹೋದರೂ ಜನರು ಎದ್ದು ನಿಂತು ಗೌರವಿಸುವುದು, ತಲೆ ತಗ್ಗಿಸಿ ನಮಸ್ಕಾರ ಮಾಡುವುದು ವಾಡಿಕೆಯಾಗಿ ಹೋಗಿತ್ತು. ಆದರೆ, ಇಲ್ಲಿ ಸಾಧುವಾಗಲೀ, ಇತರರಾಗಲೀ ಎದ್ದು ನಿಲ್ಲದೆ ಇದ್ದುದು ಅವನಿಗೆ ಸಿಟ್ಟುಬಂತು.

ಸಾಧುಗಳು ಅಲ್ಲಿ ನೆರೆದಿದ್ದವರ ಜತೆ ಮಾತನಾಡುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ರಾಜಕೀಯ ನಾಯಕ, ನನಗೆ ನಿಮ್ಮ ಬಳಿ ಸ್ವಲ್ಪ ಮಾತನಾಡಲಿಕ್ಕಿದೆ ಎಂದ. ಆಗ ಸಾಧು ಅವನತ್ತ ತಿರುಗಿ ಹೇಳಿದರು: ದಯವಿಟ್ಟು ಸ್ವಲ್ಪ ಹೊತ್ತು ಕಾಯಿರಿ. ನಾನು ಇವರ ಪ್ರಶ್ನೆಗಳಿಗೆ ಉತ್ತರಿಸಿ ನಂತರ ನಿಮ್ಮ ಬಳಿ ಮಾತನಾಡುತ್ತೇನೆ. ನೀವು ಅಷ್ಟು ಹೊತ್ತು ಕಾಯಲು ಸಿದ್ಧರಿದ್ದೀರಿ ಎಂದರೆ ಕಾಯಬಹುದು.

ಈ ಮಾತನ್ನು ಕೇಳುತ್ತಲೇ ರಾಜಕೀಯ ಮುಖಂಡನ ಸಿಟ್ಟು ನೆತ್ತಿಗೇರಿತು. ಅಲ್ಲಿವರೆಗೆ ಸಾಧುವನ್ನು ಬಹುವಚನದಿಂದ ಮಾತನಾಡಿಸುತ್ತಿದ್ದ ರಾಜಕೀಯ ನಾಯಕ, ವಿನಯದಿಂದ ನಡೆದುಕೊಳ್ಳುತ್ತಿದ್ದ ರಾಜಕೀಯ ಮುಖಂಡ ಒಮ್ಮಿಂದೊಮ್ಮೆಗೆ ಭಾಷೆ ಬದಲಿಸಿದ. ʻನಾನು ಯಾರೂಂತ ನಿನಗೆ ಗೊತ್ತಾ? ನೀನು ಯಾರ ಜತೆ ಮಾತನಾಡುತ್ತಿದ್ದಿ ಎಂದು ಗೊತ್ತಿದೆಯಾʼ ಎಂದು ಕೇಳಿದ.

ಆಗ ಸಾಧು ಅತ್ಯಂತ ಸಂಯಮದಿಂದ ಮುಗುಳ್ನಗೆಯೊಂದಿಗೆ ಹೇಳಿದರು: ನೀವು ಯಾರು ಎನ್ನುವುದು ನನ್ನ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನೀವು ಯಾರೇ ಆಗಿರಬಹುದು. ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಅಂತಿದ್ದರೆ, ನಿಮ್ಮ ಜತೆ ಮಾತನಾಡಲೇಬೇಕು ಅಂತಿದ್ದರೆ ನೀವು ಇನ್ನು ಸ್ವಲ್ಪ ಹೊತ್ತು ಕಾಯಲೇಬೇಕು.

ಆಗ ರಾಜಕೀಯ ಮುಖಂಡನ ಸಿಟ್ಟು ಇನ್ನೂ ಹೆಚ್ಚಾಯಿತು: ನಾನು ಯಾರು ಅಂತ ನಿನಗೆ ತೋರಿಸುತ್ತೇನೆ. ಜತೆಗೆ ನಿನ್ನ ಮುಖವಾಡವನ್ನೂ ಕಳಚುತ್ತೇನೆ. ನೀನು ನನ್ನನ್ನು ಎದುರು ಹಾಕಿಕೊಂಡು ತಪ್ಪು ಮಾಡಿದ್ದೀಯಾ ಸಾಧು.. ನೀನು ಒಬ್ಬ ಕಳ್ಳ ಸನ್ಯಾಸಿ. ಜನರಿಗೆ ಮೋಸ ಮಾಡ್ತಾ ಇದ್ದೀಯಾ.. ನೀನು ಢೋಂಗಿ.. ಇಲ್ಲಿ ಕುಳಿತವರಿಗೆಲ್ಲ ವಂಚನೆ ಮಾಡ್ತಾ ಇದೀಯಾ.. ನಿನ್ನ ಲಾಭಕ್ಕಾಗಿ ಇವರನ್ನೆಲ್ಲ ಬಳಸಿಕೊಳ್ತಾ ಇದ್ದೀಯಾ.. ನಾನು ನಿನ್ನನ್ನು ಬಿಡಲ್ಲ.. ನಿನ್ನ ಎಲ್ಲ ಮೋಸದ ಮುಖವಾಡಗಳನ್ನು ಬಿಚ್ಚುತ್ತೇನೆ- ಎಂದು ಹೇಳಿದ.

ರಾಜಕೀಯ ಮುಖಂಡ ಅಷ್ಟು ಹೇಳಿದ ನಂತರವೂ ಸಾಧುವಿನ ಮುಖದಲ್ಲಿನ ಮುಗುಳ್ನಗೆ ಹಾಗೆಯೇ ಇತ್ತು. ಇದನ್ನು ನೋಡಿ ರಾಜಕೀಯ ಮುಖಂಡನಿಗೆ ಇನ್ನಷ್ಟು ಉರಿ ಹತ್ತಿತ್ತು. ʻʻನೋಡು ಸಾಧು.. ಇನ್ನು ಒಂದು ಕ್ಷಣವೂ ನಾನು ಇಲ್ಲಿ ಇರುವುದಿಲ್ಲ. ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನಿನಗೆ ಇನ್ನೂ ಟೈಮಿದೆ… ನನಗೆ ಗೌರವ ಕೊಟ್ಟು ಕ್ಷಮೆ ಕೇಳಬಹುದು. ನನ್ನ ಜತೆ ಏನಾದರೂ ಹೇಳಲು ಇದ್ದರೆ ಕಡೆಯ ಅವಕಾಶ ಕೊಡುತ್ತೇನೆ.. ತಿದ್ದಿಕೊಳ್ಳಲುʼʼ ಎಂದು ಹೇಳಿದ.

ಈಗಲೂ ಸಾಧುವಿನ ಮುಖದ ಮುಗುಳ್ನಗೆ ಬದಲಾಗಲಿಲ್ಲ. ಅವರು ಅದೇ ಮುಗ್ಧ ನಗುವಿನೊಂದಿಗೆ ಆ ರಾಜಕಾರಣಿಯ ಕಡೆಗೆ ತಿರುಗಿ ಕೈಮುಗಿದು ಹೇಳಿದರು: ನನಗೆ ನಿಮ್ಮ ಬಗ್ಗೆ ಯಾವುದೇ ತಪ್ಪು ಭಾವನೆಯೂ ಇಲ್ಲ. ನೀವೀಗ ನನ್ನ ಬಗ್ಗೆ ಹೇಳಿದಿರಲ್ಲ.. ಅದರ ಬಗ್ಗೆಯೂ ನನಗೆ ಯಾವುದೇ ತಕರಾರಿಲ್ಲ. ಯಾಕೆಂದರೆ ಅದು ನಿಮ್ಮ ಯೋಚನೆ. ನನ್ನ ಮಟ್ಟಿಗೆ ನೀವೊಬ್ಬ ದೊಡ್ಡ ವ್ಯಕ್ತಿ ಅಂತ ಅನಿಸುತ್ತೀರಿ. ಇನ್ನಷ್ಟು ದೊಡ್ಡ ಮನುಷ್ಯ ಆಗಬಲ್ಲಿರಿ.

ಇಷ್ಟು ಮಾತು ಕೇಳಿದ ರಾಜಕೀಯ ನಾಯಕನಿಗೆ ಸ್ವರ್ಗವೇ ಕೈ ಎಟುಕಿಗೆ ಬಂದ ಹಾಗಾಯಿತು. ಸಾಧು ಕ್ಷಮೆ ಕೇಳಿದ ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ಅವನೇ ನನ್ನನ್ನು ಹೊಗಳಿದನಲ್ಲಾ ಎನ್ನುವ ಖುಷಿ ಇನ್ನೊಂದು ಕಡೆ.

ರಾಜಕೀಯ ಮುಖಂಡ ಸಾಧುವನ್ನು ಮಣಿಸಿದ ಖುಷಿಯಲ್ಲಿ ಮನೆಗೆ ಬಂದ. ಮನೆಯಲ್ಲಿ ಅವನ ತಂದೆ ಇದ್ದರು. ಅವರೂ ಒಬ್ಬ ಹಿರಿಯ ರಾಜಕೀಯ ಮುಖಂಡರಾಗಿ ಈಗ ಸಕ್ರಿಯ ರಾಜಕೀಯದಿಂದ ದೂರವಿದ್ದವರು, ಒಳ್ಳೆಯ ಮನುಷ್ಯ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಿದವರು.

ಧ್ಯಾನದಲ್ಲಿದ್ದ ಅವರು ಪಕ್ಕದಲ್ಲಿ ಮಗ ಬಂದು ಕುಳಿತದ್ದು ನೋಡಿ ಖುಷಿಯಾದರು. ಯಾಕೋ ಮಗ ಇವತ್ತು ತುಂಬಾ ಖುಷಿಯಾಗಿದ್ದ ಹಾಗೆ ಕಂಡಿತು. ಏನು ವಿಷಯ ಎಂದು ಕೇಳಿದರು. ಮಗ ಬೆಳಗ್ಗೆ ನಡೆದ ಅಷ್ಟೂ ಘಟನೆಗಳನ್ನು ವಿವರಿಸಿದ. ಸಾಧುವನ್ನು ತಾನು ಹೇಗೆ ಮಟ್ಟ ಹಾಕಿದೆ, ಕೊನೆಗೆ ಆತನೇ ತನ್ನನ್ನು ಹೊಗಳುವ ಪರಿಸ್ಥಿತಿ ಬಂದಿದ್ದನ್ನೆಲ್ಲ ವಿವರಿಸಿದ.

ಆಗ ಅವನ ಅಪ್ಪ ನಗುತ್ತಾ ಹೇಳಿದರು: ಮಗಾ.. ಅವರು ನಿನ್ನನ್ನು ಹೊಗಳಿದ್ದೇನೂ ಅಲ್ಲ. ಅವರು ನೀನೇನೂ ಅಂತ ಹೇಳಲೂ ಇಲ್ಲ. ಅವರು ಹೇಳಿದ್ದು ಅವರಿಗೆ ನೀನು ಹೇಗೆ ಕಾಣಿಸುತ್ತಿದ್ದಿ ಎನ್ನುವುದನ್ನಷ್ಟೇ. ಅದು ಅವರ ದೃಷ್ಟಿ. ನೀನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗಲೂ ಅವರು ಏನೂ ಮಾತನಾಡಿಲ್ಲ. ಯಾಕೆಂದರೆ, ಅವರಿಗೆ ಚೆನ್ನಾಗಿ ಗೊತ್ತಿತ್ತು… ಅದು ಅವರಲ್ಲ.. ನಿನ್ನ ಯೋಚನೆ ಅಷ್ಟೇ ಅಂತ. ನೀನು ಅಷ್ಟು ಹೇಳಿದ ಮೇಲೂ ಅವರು ನಿನ್ನನ್ನು ಹೊಗಳಿದ್ದಾರೆ ಎಂದರೆ ಅವರು ಹೊಗಳಿದ್ದು ನಿನ್ನ ವ್ಯಕ್ತಿತ್ವವನ್ನಲ್ಲ.. ನಿನ್ನ ಶ್ರೇಷ್ಠತೆಯನ್ನಲ್ಲ.. ಬದಲಾಗಿ ಅವರ ದೃಷ್ಟಿಯನ್ನು. ಹೌದು, ಅವರ ದೃಷ್ಟಿ ಚೆನ್ನಾಗಿತ್ತು.. ನೀನು ಅವರಿಗೆ ಹಾಗೆ ಕಂಡಿದ್ದೀಯಾ.. ನಿನ್ನ ದೃಷ್ಟಿ ಹೇಗಿದೆ ಎನ್ನುವುದನ್ನು ನೀನೇ ನೋಡಿಕೋ..

ಯುವ ರಾಜಕಾರಣಿ ತಲೆ ತಗ್ಗಿಸಿ ಎಲ್ಲವೂ ಅರ್ಥವಾಯಿತು ಎನ್ನುವ ಹಾಗೆ ತಲೆಯಾಡಿಸಿದ.

ಇದನ್ನೂ ಓದಿ | Motivational Story: ಸೋಲಿನ ಭಯದಲ್ಲೇ ಇದ್ದ ಅವನಿಗೆ ಕೇಶವ ಮೂರ್ತಿ ಹೇಳಿದ ಗೆಲುವಿನ ಮಂತ್ರ

Exit mobile version